ಮುಂಗಾರು ಮಳೆ; ಅಡಿಕೆ ಎಲೆಚುಕ್ಕಿ ರೋಗದ ನಿರ್ವಹಣಾ ಕ್ರಮಗಳು
ಬೆಂಗಳೂರು, ಜುಲೈ 11; ಜುಲೈ ತಿಂಗಳಿನಲ್ಲಿ ನೈಋತ್ಯ ಮುಂಗಾರು ಚುರುಕಾಗಿದ್ದು, ನಿರಂತರವಾಗಿ ಮಳೆಯಾಗುತ್ತಿದೆ. ಸುರಿಯುತ್ತಿರುವ ಮಳೆಯಿಂದಾಗಿ ಕರಾವಳಿ, ಪಶ್ಚಿಮ ಘಟ್ಟ ಪ್ರದೇಶದ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಕೊಳೆ ರೋಗ ಹಾಗೂ ಎಲೆಚುಕ್ಕೆ ರೋಗಗಳು ಬಾಧಿಸುವ ಸಾಧ್ಯತೆಯಿದೆ. ಮುಂಜಾಗೃತಾ ಕ್ರಮವಾಗಿ ರೋಗಗಳ ನಿರ್ವಹಣೆಗೆ ಕ್ರಮಗಳನ್ನು ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆ ಹೇಳಿದೆ.
ಎಲೆಚುಕ್ಕಿ ರೋಗ ಹೆಚ್ಚು ಭಾದಿತ ಎಲೆಗಳನ್ನು ಕತ್ತರಿಸಿ ಸುಡುವುದರಿಂದ ಅಡಿಕೆ ಎಲೆಚುಕ್ಕಿ ರೋಗದ ಸೋಂಕಿನ ತೀವ್ರತೆಯನ್ನು ಕಡಿಮೆಗೊಳಿಸಬಹುದು. ಮುಂಜಾಗ್ರತಾ ಕ್ರಮವಾಗಿ ಅಡಿಕೆ ಗೊನೆಗಳಿಗೆ ಮೈಲುತುತ್ತು/ ಬೋರ್ಡೋ ಮಿಶ್ರಣ ಸಿಂಪಡಿಸುವಾಗ ಎಲೆಗಳಿಗೂ ಸಿಂಪಡಿಸಬೇಕು.

ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ, ಮಳೆಯಿಲ್ಲದ ಸಮಯದಲ್ಲಿ ಪ್ರೊಪಿಕೊನಝೋಲ್ ಅಥವಾ ಟೆಬುಕೊನಝೋಲ್ ಅಥವಾ ಹೆಕ್ಸಾಕೊನಝೋಲ್ ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿ.ಲೀ. ಪ್ರಮಾಣದಲ್ಲಿ ಮರಗಳಿಗೆ ಸಿಂಪಡಿಸಬೇಕು.
ಮೂರರಿಂದ ನಾಲ್ಕು ವಾರಗಳ ನಂತರ, ಪ್ರೋಪಿನೆಬ್ 70WP ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿ. ಲೀ. ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು.
ಪೋಷಕಾಂಶ ನಿರ್ವಹಣೆ: ಈ ರೋಗವು ಪ್ರಮುಖವಾಗಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಕೊಟ್ಟಿಗೆ ಗೊಬ್ಬರ ನೀಡುವ ಹಾಗೂ ಅಗತ್ಯ ಪ್ರಮಾಣದಲ್ಲಿ ಪೊಟ್ಯಾಷ್ ಪೋಷಕಾಂಶ ನೀಡದ ತೋಟಗಳಲ್ಲಿ ಹೆಚ್ಚು ಕಂಡು ಬರುತ್ತಿದ್ದು, ಮಣ್ಣು ಪರೀಕ್ಷೆ ಹಾಗೂ ವಯಸ್ಸಿನ ಆಧಾರದಲ್ಲಿ ಸೂಕ್ತ ಪೋಷಕಾಂಶಗಳನ್ನು ನೀಡಬೇಕು. ಪ್ರಮುಖವಾಗಿ ಪೊಟ್ಯಾಷ್ ನೀಡಿಕೆ ಅತಿ ಮುಖ್ಯವಾಗಿದೆ.
ಹುಳಿ ಮಣ್ಣನ್ನು ಸಮತೋಲನಗೊಳಿಸಲು ಕೃಷಿ ಸುಣ್ಣವನ್ನು 250 ಗ್ರಾಂ.ಗಳಷ್ಟು ಪ್ರತಿ ಮರಕ್ಕೆ ನೀಡಬೇಕು. ಸುಣ್ಣ ನೀಡಿದ ಮೂರರಿಂದ ನಾಲ್ಕು ವಾರಗಳ ನಂತರ ಸಾಮಾನ್ಯವಾಗಿ ಪ್ರತಿ ಅಡಿಕೆ ಮರಕ್ಕೆ 12 ಕಿಲೋ ಗ್ರಾಂ.ನಷ್ಟು ಹಟ್ಟಿಗೊಬ್ಬರ ಮತ್ತು ಹಸಿರೆಲೆ ಗೊಬ್ಬರ, ಯೂರಿಯ (220 ಗ್ರಾಂ), ರಾಕ್ ಫಾಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240-350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಎರಡು ಕಂತುಗಳಲ್ಲಿ ನೀಡುವುದು ಒಳಿತು. ಜೊತೆಗೆ ಲಘುಪೋಷಕಾಂಶಗಳಾದ ಸತುವಿನ ಸಲ್ಫೇಟ್ (5 ಗ್ರಾಂ) ಮತ್ತು ಬೊರಾಕ್ಸ (5 ಗ್ರಾಂ) ಕೂಡ ನೀಡಬಹುದು.
ಬಸಿ ಕಾಲುವೆಗಳನ್ನು ಸ್ವಚ್ಛಗೊಳಿಸಿ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗ ಪೀಡಿತ ಪ್ರದೇಶಗಳಿಂದ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸಬಾರದು. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುವುದರಿಂದ ಸಮುದಾಯ ಮಟ್ಟದ ರೋಗ ನಿಯಂತ್ರಣಾ ಕ್ರಮಗಳು ಸಹ ಮುಖ್ಯವಾಗಿರುತ್ತವೆ.
ಈ ಎಲ್ಲಾ ಕ್ರಮಗಳನ್ನು ಅನುಸರಿಸುವುದರಿಂದ ಅಡಿಕೆ ಎಲೆಚುಕ್ಕಿ ರೋಗ ನಿರ್ವಹಣೆ ಮಾಡಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ತಿಳಿಸಿದ್ದಾರೆ.












Click it and Unblock the Notifications