ಹೆಚ್ಚಾಯಿತು ಮಳೆ: ಈರುಳ್ಳಿ ಬೆಳೆಯ ರೋಗ, ಕೀಟಗಳ ನಿರ್ವಹಣಾ ಕ್ರಮಗಳು
ಚಿತ್ರದುರ್ಗ, ಆಗಸ್ಟ್ 20: ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜುಲೈ ತಿಂಗಳಿನಲ್ಲಿ ಸುರಿದ ಮಳೆ ರೈತರಿಗೆ ಸಂತಸದ ಜೊತೆ ಸಂಕಷ್ಟ ತಂದಿದೆ. ಕೆಲವು ಬೆಳೆಗಳಿಗೆ ಮಳೆ ಅನುಕೂಲವಾಗಿದ್ದರೆ ಇನ್ನೂ ಕೆಲವು ಬೆಳಗಳಿಗೆ ರೋಗ, ಕೀಟದ ಬಾಧೆ ಕಾಡುತ್ತಿದೆ. ಕೆಲವು ಬೆಳೆಗಳು ಕೊಳೆತು ಹೋಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿ ಬೆಳೆಗೂ ರೋಗ ಬಾಧೆ ಕಂಡು ಬಂದಿದೆ.
ಚಿತ್ರದುರ್ಗ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ಜಿಲ್ಲೆಯಲ್ಲಿ ಈರುಳ್ಳಿ ಬೆಳೆಗಳಿಗೆ ರೋಗ, ಕೀಟ ಬಾಧೆ ಕಂಡುಬಂದ ಕುರಿತು ಮಾಹಿತಿ ಸಂಗ್ರಹ ಮಾಡಿದ್ದಾರೆ. ಈರುಳ್ಳಿ ಜಿಲ್ಲೆಯ ಪ್ರಮುಖ ಬೆಳೆಯಾಗಿರುತ್ತದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 9,461 ಹೆಕ್ಟೇರ್, ಚಳ್ಳಕೆರೆ 11,299 ಹೆಕ್ಟೇರ್, ಹೊಳಲ್ಕೆರೆ 1,777 ಹೆಕ್ಟೇರ್, ಹಿರಿಯೂರು 5,991 ಹೆಕ್ಟೇರ್, ಹೊಸದುರ್ಗ 3,300 ಹೆಕ್ಟೇರ್, ಮೊಳಕಾಲ್ಮೂರು 819 ಹೆಕ್ಟೇರ್ ಒಟ್ಟಾರೆ ಜಿಲ್ಲೆಯಲ್ಲಿ 32,646 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಿಟಿಜಿಟಿ ಮಳೆಯಿಂದಾಗಿ ಹೊಸದುರ್ಗ ತಾಲ್ಲೂಕಿನಲ್ಲಿ ಮಣ್ಣಿನ ತೇವಾಂಶ ಹೆಚ್ಚಾಗಿ ಈರುಳ್ಳಿ ಬೆಳೆಗಳಿಗೆ ಥ್ರಿಪ್ಸ್ ನುಶಿ ಕೀಟ ಮತ್ತು ನೇರಳೆ ಎಲೆ ಮಚ್ಚೆ ರೋಗ ಬಾಧೆ ಹೆಚ್ಚಾಗಿದ್ದು, ರೋಗ ಮತು ಕೀಟ ಬಾಧೆಯಿಂದ ಬೆಳೆಯನ್ನು ರಕ್ಷಿಸಲು, ರೋಗ ನಿರ್ವಹಣೆ ಮಾಡಲು ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.
ಈರುಳ್ಳಿ ಬೆಳೆ ರಕ್ಷಣೆ: ಈರುಳ್ಳಿ ಬೆಳೆಗೆ ಥ್ರಿಪ್ಸ್ ನುಶಿಗಳು ಎಲೆಯ ಮೇಲೆ ಹೆಚ್ಚಾಗಿ ಕಂಡುಬರುತ್ತದೆ. ಎಲೆಗಳ ಸುಳಿಯಲ್ಲಿ ಮತ್ತು ಎಲೆಗಳ ಕೆಳಗೆ ಕುಳಿತು ರಸ ಹೀರುತ್ತವೆ. ಎಲೆಗಳ ಮೇಲೆ ಬಿಳಿ ಬಿಳಿಯಾದ ಮಚ್ಚೆಗಳು ಕಾಣಿಸುತ್ತವೆ, ನಂತರ ಗಿಡ ತುದಿಯಿಂದ ಒಣಗುತ್ತವೆ.
ಥ್ರಿಪ್ಸ್ ನುಶಿ ನಿರ್ವಹಣೆಗೆ ಬಿತ್ತಿದ 3 ವಾರಗಳ ನಂತರ ಬೆಳೆಗೆ 0.25 ಮಿಲಿ ಇಮಿಡಾಕ್ಲೋಪ್ರಿಡ್ ಅಥವಾ 1.7 ಮಿ.ಲೀ ಡೈಮಿಥೋಯೇಟ್ 30 ಇ.ಸಿ ಅಥವಾ 0.5 ಮಿ.ಲೀ ಫಾಸ್ಪಾಮಿಡಾನ್ 85 ಡಬ್ಲ್ಯು ಎಸ್.ಸಿ ಅಥವಾ 1.3 ಮಿ.ಲೀ ಆಕ್ಸಿಡೆಮೆಟಾನ್ ಮಿಥೈಲ್ 1 ಲೀ. ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು.
ಬಿತ್ತನೆಯಾದ 6 ವಾರಗಳ ನಂತರ ಕ್ರಮಾಂಕ 1ರಲ್ಲಿ ಸೂಚಿಸಲಾದ ಸಿಂಪಡನೆಯನ್ನು ಮತ್ತೆ ಮಾಡಬೇಕು, ಪ್ರತಿ ಹೆಕ್ಟೇರಿಗೆ 360 ಲೀ.ಸಿಂಪಡಣಾ ದ್ರಾವಣ ಬಳಸಬೇಕು. ಬಿತ್ತನೆಯಾದ 9 ಮತ್ತು 11 ವಾರಗಳ ನಂತರ ಕ್ರಮಾಂಕ 1ರಲ್ಲಿ ಸೂಚಿಸಿಲಾದ ದ್ರಾವಣವನ್ನೇ ಪ್ರತಿ ಹೆಕ್ಟೇರಿಗೆ 450 ಲೀ. ಸಿಂಪಡಿಸಬೇಕು.
ನೇರಳೆ ಎಲೆ ಮಚ್ಚೆ ರೋಗವು ಮೊದಲಿಗೆ ಬಿಳಿ ಭಾಗದಿಂದ, ನೇರಳೆ ಭಾಗಕ್ಕೆ ಪರಿವರ್ತನೆಗೊಂಡು, ಆಮೇಲೆ ಎಲೆಗಳು ಒಣಗುತ್ತವೆ. ನೇರಳೆ ಎಲೆ ಮಚ್ಚೆ ರೋಗ ನಿರ್ವಹಣೆಗೆ ಬೀಜವನ್ನು ಪಾದರಸ ಸಂಯುಕ್ತ ವಸ್ತು ಅಥವಾ ಕ್ಯಾಪ್ಟಾನ್ (2 ಗ್ರಾಂ ಪ್ರತಿ ಕಿ.ಗ್ರಾಂ ಬೀಜಕ್ಕೆ)ದಿಂದ ಉಪಚರಿಸಬೇಕು.
ಹೊಸದುರ್ಗ ತಾಲ್ಲೂಕಿನಲ್ಲಿ ಕಪ್ಪು ಮಣ್ಣಿನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಜಿಟಿಜಿಟಿ ಮಳೆಯಿಂದಾಗಿ ಮಣ್ಣಿನಲ್ಲಿ ತೇವಾಂಶ ಹೆಚ್ಚಾಗಿ ನೇರಳೆ ಎಲೆ ಮಚ್ಚೆರೋಗ ಕಾಣಿಸಿಕೊಂಡಿದ್ದು ನೀರು ಇಂಗಲು ಸರಿಯಾದ ರೀತಿಯಲ್ಲಿ ಒಳಚರಂಡಿ ವ್ಯವಸ್ಥೆ ಮಾಡುವುದು. 2ರಿಂದ 3 ವರ್ಷಕ್ಕೊಮ್ಮೆ ಬೆಳೆ ಬದಲಾವಣೆ ಮಾಡುವುದು.
ಸಿಸ್ಟೆಮ್ಯಾಟಿಕ್ ಶಿಲೀಂದ್ರ ನಾಶಕಗಳಾದ ಪ್ರೋಪಿಕೋನೋಜೋಲ್ 25 ಇ.ಸಿ 1 ಮಿ.ಲೀ. ಅಥವಾ ಹೆಕ್ಸಕೋನೋಜೋಲ್ 1 ಮಿ.ಲೀ. ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಜೊತೆಗೆ ಅಂಟು ದ್ರಾವಣ 0.25 ಮಿ.ಲೀ ಪ್ರತಿ ಲೀಟರ್ ನೀರಿಗ ಬೆರೆಸಿ 10 ದಿನಗಳಿಗೊಮ್ಮೆಯಾದರು ಶಿಲೀಂಧ್ರ ನಾಶಕಗಳನ್ನು ಸಿಂಪಡಿಸಬೇಕು.
ಈರುಳ್ಳಿ ಬೆಳೆಯ ರೋಗ ನಿಯಂತ್ರಣಕ್ಕೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿರುವ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಬಹುದು ಎಂದು ಕರೆ ನೀಡಲಾಗಿದೆ.












Click it and Unblock the Notifications