ಕೈಕೊಟ್ಟ ಮುಂಗಾರು ಪೂರ್ವ ಮಳೆ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಬೇಸಿಗೆ ಬೆಳೆ ಉಳಿಸಿಕೊಳ್ಳಲು ರೈತರ ಹರಸಾಹಸ
ಮಂಡ್ಯ, ಜೂನ್, 09: ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ ಕೈಕೊಟ್ಟಿದ್ದು, ಬೇಸಿಗೆ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಮುಂಗಾರು ಮಳೆ ವಿಳಂಬ ಆದರೆ ಕೃಷಿ ಬೆಳೆಗಳು ಒಣಗಿ ಹೋಗಲಿದ್ದು, ಇದರಿಂದ ಜಿಲ್ಲೆಯ ಅನ್ನದಾತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಹ ಪರಿಸ್ಥಿತಿ ನಿರ್ಮಾಣ ಆದರೂ ಅಚ್ಚರಿಪಡಬೇಕಿಲ್ಲ.
ಜಿಲ್ಲೆಯಲ್ಲಿ 4,98,244 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವಿದ್ದು, 2,60,901 ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಏಪ್ರಿಲ್ ತಿಂಗಳು 46.6 ಮಿ.ಮೀ. ವಾಡಿಕೆ ಮಳೆಯಾಗಿದ್ದು, 26.2 ಮಿಲಿ ಮೀಟರ್ ವಾಸ್ತವ ಮಳೆಯಾಗಿದೆ. ಹೀಗೆ ಜಿಲ್ಲೆಯಲ್ಲಿ 43.8ರಷ್ಟು ಮಳೆ ಕೊರತೆ ಎದುರಾಗಿದೆ. ಮೇ ತಿಂಗಳಿನಲ್ಲಿ 99.9 ಮಿ.ಮೀ. ವಾಡಿಕೆ ಮಳೆಯಾಗಿದ್ದು, 137.3 ಮಿ.ಮೀಟರ್ ವಾಸ್ತವ ಮಳೆಯಾಗಿದೆ. ಆದರೆ ಈ ಮಳೆ ಒಂದೆರೆಡು ದಿನಗಳಲ್ಲಿ ಆಗಿರುವುದರಿಂದ ರೈತರ ಬೆಳೆಗೆ ಅಷ್ಟೇನೋ ಪ್ರಯೋಜನ ಆಗಿಲ್ಲ.

ಪ್ರಸ್ತುತ ಬೇಸಿಗೆ ಬೆಳೆಗಳಾದ ಭತ್ತ 17,848 ಹೆಕ್ಟೇರ್, 2,885 ಹೆಕ್ಟೇರ್ ರಾಗಿ, 872 ಹೆಕ್ಟೇರ್ ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳು ಸೇರಿ ಒಟ್ಟು 25,897 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದೆ. ಭತ್ತದ ಬೆಳೆಯು ಕಟಾವಿನ ಹಂತದಲ್ಲಿದೆ. ಇನ್ನು ವಿವಿಧ ಹಂತಗಳಲ್ಲಿ ಬೆಳೆದು ನಿಂತಿರುವ 43,495 ಹೆಕ್ಟೇರ್ ಕಬ್ಬಿನ ಬೆಳೆ ಕಟಾವಿಗೆ ಬಂದಿದ್ದು, ಇದಕ್ಕೆ 2 ರಿಂದ 3 ಬಾರಿ ಕಟ್ಟು ಪದ್ಧತಿಯಲ್ಲಿ ನೀರು ಹರಿಸಬೇಕಿದೆ.
17,600 ಹೆಕ್ಟೇರ್ ಪೂರ್ವ ಮುಂಗಾರು ಬೆಳೆಗಳ ಬಿತ್ತನೆ ಗುರಿ ಹೊಂದಿದ್ದು, 15,369 ಹೆಕ್ಟೇರ್‌ನಲ್ಲಿ ಬೆಳೆಗಳನ್ನು ಬೆಳೆಯಲಾಗಿದೆ. ಇದರೊಂದಿಗೆ ಶೇ.87.33ರಷ್ಟು ಗುರಿ ಸಾಧಿಸಲಾಗಿದೆ. ಬಿತ್ತನೆ ಆಗಿರುವ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ (8060 ಹೆಕ್ಟೇರ್), ಎಳ್ಳು (3213 ಹೆಕ್ಟೇರ್), ಮುಸಿಕನ ಜೋಳ (506 ಹೆಕ್ಟೇರ್) ಹಾಗೂ ಇತರೆ ದ್ವಿದಳ ಧಾನ್ಯಗಳು ಸೇರಿವೆ.
ಇನ್ನು ಜುಲೈ ಮಾಹೆಯಲ್ಲಿ ಮುಂಗಾರು ಬೆಳೆಗಳಾದ ಭತ್ತ, ರಾಗಿ, ಕಬ್ಬು, ದ್ವಿದಳಧಾನ್ಯ, ಎಣ್ಣೆಕಾಳು ಹಾಗೂ ಇತರೆ ಬೆಳೆಗಳನ್ನು ಬಿತ್ತನೆ ಮಾಡಲಾಗುತ್ತದೆ. ಪುಸ್ತುತ ಜಿಲ್ಲೆಯಾದ್ಯಂತ ವಾಡಿಕೆಯಂತೆ ಮಳೆಯಾಗದ ಹಿನ್ನೆಲೆ ತೇವಾಂಶದ ಕೊರತೆಯಿಂದ ಪೂರ್ವ ಹಂಗಾಮಿನಲ್ಲಿ ಮಳೆಯಾಶ್ರಿತದಲ್ಲಿ ಬಿತ್ತನೆಯಾಗಿರುವ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಆದರೆ ಇದೀಗ ಮಳೆ ನೀರಿನ ಅವಶ್ಯಕತೆ ಎದುರಾಗಿದೆ.
ಮುಂದಿನ ಎರಡ್ಮೂರು ದಿನಗಳಲ್ಲಿ ಮಳೆಯಾಗದಿದ್ದರೆ ಮಳೆಯಾಶ್ರಿತ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಪೂರ್ವ ಮುಂಗಾರು ಬೆಳೆಗಳು ಕೈ ಸೇರದೆ ಹೋಗಬಹುದು. ಒಂದು ವೇಳೆ ಇನ್ನೂ ಮಳೆ ಬಾರದೇ ಹೋದರೆ ರೈತರು ಸಾಲ-ಸೋಲ ಮಾಡಿ ಬೆಳೆದ ಬೆಳೆಗಳಿಂದ ಯಾವುದೇ ಪ್ರಯೋಜನ ಇಲ್ಲದಂತಾಗುತ್ತದೆ. ಹಾಗೆಯೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ.
2023-24ನೇ ಸಾಲಿಗೆ ಒಟ್ಟು 17,325 ಕ್ವಿಂಟಾಲ್ ವಿವಿಧ ಬೆಳೆಗಳ ಬಿತ್ತನೆ ಬೀಜ ಅಗತ್ಯವಿದ್ದು, ಪ್ರಸ್ತುತ ಪೂರ್ವ ಮುಂಗಾರು ಬೆಳೆಗಳಾದ ಅಲಸಂದೆ, ಉದ್ದು ಬೆಳೆಗಳ ಒಟ್ಟು 169 ಕ್ವಿಂಟಾಲ್ ಬಿತ್ತನೆ ಬೀಜ ಸರಬರಾಜು ಪಡೆಯಲಾಗಿದ್ದು, ಈವರೆಗೂ 150.80 ಕ್ವಿಂಟಾಲ್ ವಿತರಣೆಯಾಗಿದೆ.
ಜಿಲ್ಲೆಯ ಪ್ರಮುಖ ಬೆಳೆಗಳಾದ ಭತ್ತ, ರಾಗಿ ಮತ್ತು ಮುಸುಕಿನ ಜೋಳ ಬೆಳೆಗಳ ಬಿತ್ತನೆ ಬೀಜವನ್ನು ಕರ್ನಾಟಕ ರಾಜ್ಯ ಬೀಜ ನಿಮಗ (7950 ಕ್ವಿಂಟಾಲ್), ರಾಷ್ಟ್ರೀಯ ಬೀಜ ನಿಗಮ (2500 ಕ್ವಿಂಟಾಲ್), ವಿ.ಸಿ.ಫಾರಂ ಗೋದಾಮುಗಳಲ್ಲಿ 1940 ಕ್ವಿಂಟಾಲ್ ದಾಸ್ತಾನು ಇರಿಸಲಾಗಿದೆ. ರೈತರ ಬೇಡಿಕೆಗನುಗುಣವಾಗಿ ಜೂನ್, ಜುಲೈ ತಿಂಗಳಲ್ಲಿ ರೈತ ಸಂಪರ್ಕ ಕೇಂದ್ರ ಮತ್ತು ಹೆಚ್ಚುವರಿಯಾಗಿ ಪ್ಯಾಕ್ಸ್‌ಗಳಲ್ಲಿ ಸಹಾಯಧನ ವಿತರಿಸಲು ಕ್ರಮವಹಿಸಲಾಗುವುದು ಎಂದು ಜಂಟಿ ಕೃಷಿ ನಿರ್ದೇಶಕ ಅಶೋಕ್ ತಿಳಿಸಿದ್ದಾರೆ.
ರಸಗೊಬ್ಬರದ ಕೊರತೆ ಇಲ್ಲ
ಮುಂಗಾರು ಹಂಗಾಮಿಗೆ ಒಟ್ಟು 88,904 ಮೆಟಾ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ 41,642 ಮೆ.ಟನ್ ಗುರಿ ಇದ್ದು, ಈವರೆಗೆ 33,119 ಮೆ.ಟನ್ ಸರಬರಾಜು ಪಡೆಯಲಾಗಿದೆ. ಜೂನ್ ಮಾಹೆಯಲ್ಲಿ ನಿಗದಿಪಡಿಸಿರುವ ರಸಗೊಬ್ಬರವನ್ನು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸರಬರಾಜಾಗಲಿದೆ ಎಂದು ತಿಳಿಸಿದ್ದಾರೆ.
ಮಳೆಯನ್ನೇ ನಂಬಿ ಕುಳಿತಿರುವ ಅನ್ನದಾತ
ನಿಗದಿತ ಪ್ರಮಾಣದಲ್ಲಿ ಮಳೆಯಾದರೆ ಮಾತ್ರ ಮುಂಗಾರು ಬೆಳೆ ಬೆಳೆಯಲು ಸಾಧ್ಯವಾಗುತ್ತದೆ ಎಂಬುದು ಕೃಷಿ ಪಂಡಿತರ ಲೆಕ್ಕಚಾರವಾಗಿದೆ. ಕೆ.ಆರ್.ಎಸ್.ಜಲಾಶಯದಲ್ಲಿ ಸದ್ಯ 81 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಮಂಡ್ಯ, ಮೈಸೂರು ಹಾಗೂ ಬೆಂಗಳೂರಿಗರಿಗೆ ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ಆದ್ದರಿಂದ ಕಾವೇರಿ ನೀರಾವರಿ ಸಲಹಾ ಸಮಿತಿಯಲ್ಲಿ ಮುಂಗಾರು ಬೆಳೆಗಳಿಗೆ ಕಟ್ಟು ಪದ್ದತಿಯಲ್ಲಿ ನೀರು ಹರಿಸಬೇಕೆ ಅಥವಾ ಪೂರ್ಣಾವಧಿ ನಾಲೆಗಳಿಗೆ ನೀರು ಹರಿಸಬೇಕೆ ಎಂಬ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದ್ದಾರೆ.
ಇನ್ನು ಭಾರತೀಯ ಹಾವಮಾನ ಇಲಾಖೆ ಜೂನ್ 4 ರಂದು ಮುಂಗಾರು ಮಳೆ ಪ್ರವೇಶ ಆಗುವ ಸಾದ್ಯತೆಯಿದೆ ಎಂದು ಸೂಚಿಸಿತ್ತು. ಅದರಂತೆಯೇ ಎರಡ್ಮೂರು ದಿನಗಳ ಅಂತರದಲ್ಲಿ ಕೇರಳದಲ್ಲಿ ಮುಂಗಾರು ಮಳೆ ಪ್ರವೇಶವಾಗಿದ್ದು, ಇನ್ನೂ ಎರಡ್ಮೂರೂ ದಿನಗಳಲ್ಲಿ ಕರ್ನಾಟಕಕ್ಕೆ ಮುಂಗಾರು ಮಳೆ ಪ್ರವೇಶವಾಗುವ ಸಾಧ್ಯತೆಯಿದೆ ಎಂದು ಕೃಷಿ ತಜ್ಞರಾದ ಅರ್ಪಿತಾ ತಿಳಿಸಿದ್ಧಾರೆ.












Click it and Unblock the Notifications