ಬೆಳಗಾವಿ; ಮುಂಗಾರು ಮಳೆ, ರೈತರಿಗೆ ಬಿತ್ತನೆ ಬೀಜ ವಿತರಣೆಗೆ ಕ್ರಮ
ಬೆಳಗಾವಿ, ಜೂನ್ 02: ರಾಜ್ಯದಲ್ಲಿ ನೈಋತ್ಯ ಮುಂಗಾರು ಮಳೆಗೆ ದಿನಗಣನೆ ಆರಂಭವಾಗಿದೆ. ರೈತರು ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುಂದಾಗಿದ್ದಾರೆ. ರೈತರಿಗೆ ಬಿತ್ತನೆ ಬೀಜ ವಿತರಣೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗಿನ ವಿಡಿಯೋ ಸಂವಾದದ ಬಳಿಕ ಅಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿದರು. "ಯಾವುದೇ ಕಾರಣಕ್ಕೂ ರೈತರಿಗೆ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು" ಎಂದು ಸೂಚಿಸಿದರು.

"ಮುಂಗಾರು ಹಂಗಾಮಿಗೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ರೈತ ಸಂಪರ್ಕ ಕೇಂದ್ರಗಳು ಸೇರಿದಂತೆ ಒಟ್ಟು 170 ಕೇಂದ್ರಗಳ ಮೂಲಕ ಬಿತ್ತನೆ ಬೀಜ ವಿತರಣೆಯನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಬೀಜ, ಗೊಬ್ಬರ ದಾಸ್ತಾನು ಇದೆ; ಮುಂಗಾರು ಹಂಗಾಮಿನಲ್ಲಿ ಆಶಾದಾಯಕ ಮಳೆಯಾಗುವ ನೀರಿಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ಬೆಳಗಾವಿ ಜಿಲ್ಲೆಗೆ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಪೂರಕ ಪರಿಕರಗಳ ದಾಸ್ತಾನು ಮಾಡಲಾಗಿದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.

"ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಿಗೆ ಶಿಫಾರಸ್ಸು ಮಾಡಿದ ತಳಿಗಳನ್ನು ರಿಯಾಯತಿ ದರದಲ್ಲಿ ವಿತರಿಸಲು ಅಶ್ಯವಿರುವ ಪ್ರಮಾಣದಷ್ಟು ಬೀಜದ ದಾಸ್ತಾನು ಮಾಡಲಾಗಿದೆ. ಜಿಲ್ಲೆಯ 35 ರೈತ ಸಂಪರ್ಕ ಕೇಂದ್ರಗಳ ಮೂಲಕ ಹಾಗೂ 135 ಹೆಚ್ಚುವರಿ ವಿತರಣಾ ಕೇಂದ್ರಗಳ ಮೂಲಕ ಪ್ರಮುಖ ಬೆಳೆಗಳ ಬಿತ್ತನೆ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುವುದು" ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮುಂಗಾರು ಹಂಗಾಮಿಗೆ ಸದ್ಯ ಅವಶ್ಯವಿರುವ ಡಿ.ಎ.ಪಿ, ಯೂರಿಯಾ ಹಾಗು ಕಾಂಪ್ಲೆಕ್ಸ ರಸಗೊಬ್ಬರಗಳನ್ನು ದಸ್ತಾನು ಮಾಡಲಾಗಿದ್ದು ರೈತರು ವಿವೇಚನೆಯಿಂದ ಸಮತೋಲನ ರಸಗೊಬ್ಬರಗಳನ್ನು ಅಧಿಕೃತ ಮಾರಾಟಗಾರರಿಂದ ಪಿಓಎಸ್ ಮೂಲಕ ತಮ್ಮ ದಾಖಲೆಗಳನ್ನು ನೀಡಿ ಖರೀದಿಸಲು ಮನವಿ ಮಾಡಲಾಗಿದೆ. ರೈತ ಬಾಂಧವರು ಹೆಚ್ಚಿನ ತಾಂತ್ರಿಕ ಮಾಹಿತಿಯನ್ನು ಹತ್ತಿರದ ರೈತ ಸಂಪರ್ಕಕೇಂದ್ರ/ ಕೃಷಿ ವಿಜ್ಞಾನ ಕೇಂದ್ರ/ ಸಹಾಯಕ ಕೃಷಿ ನಿರ್ದೇಶಕರ ಕಛೇರಿಗೆ ಭೇಟಿ ನೀಡಿ ಪಡೆದುಕೊಳ್ಳಬೇಕು.
ಬೆಳೆ ಪರಿಹಾರ ವಿತರಣೆಗೆ ಕ್ರಮ: ಜಿಲ್ಲೆಯಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಬಿತ್ತನೆ ಬೀಜಗಳ ಸಮರ್ಪಕವಾಗಿ ವಿತರಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಇದಲ್ಲದೇ ಗೊಬ್ಬರ ಹಾಗೂ ಕೀಟನಾಶಕಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ರಾಜ್ಯ ಸರಕಾರವು ಶೀಘ್ರದಲ್ಲೇ 'ಪರಿಹಾರ ಪೋರ್ಟಲ್' ತೆರೆದು ಬೆಳೆಹಾನಿ ವಿವರ ಭರ್ತಿಗೆ ಅವಕಾಶ ಕಲ್ಪಿಸಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಇತ್ತೀಚಿನ ಮಳೆಯಿಂದ ಉಂಟಾಗಿರುವ ಬೆಳೆಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕಿದೆ. ಯಾವುದೇ ಜನ-ಜಾನುವಾರುಗಳ ಪ್ರಾಣಹಾನಿ ಸಂಭವಿಸಿದಲ್ಲಿ 24 ಗಂಟೆಗಳಲ್ಲಿ ನಿಯಮಾವಳಿ ಪ್ರಕಾರ ಪರಿಹಾರವನ್ನು ಒದಗಿಸಬೇಕು ಎಂದು ಉಪ ವಿಭಾಗಾಧಿಕಾರಿಗಳು ಮತ್ತು ತಹಶೀಲ್ದಾರ್‌ಗೆ ಡಿಸಿ ಸೂಚನೆ ನೀಡಿದರು.
ಮಳೆಗಾಲ ಆರಂಭವಾಗುತ್ತಿರುವ ಕಾರಣ ಶಿಥಿಲಗೊಂಡಿರುವ ಸೇತುವೆ, ರಸ್ತೆಗಳ ದುರಸ್ತಿ ಮಾಡಬೇಕು. ಯಾವುದೇ ರೀತಿಯ ಅನಾಹುತ ಆಗದಂತೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಪಾಯದ ಮಟ್ಟ ತಲುಪುವ ಕೆರೆಕಟ್ಟೆಗಳ ಮೇಲೆ ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಿಗೆ ಹೇಳಿದರು.












Click it and Unblock the Notifications