ಜೋರಾಗದ ಮುಂಗಾರು, ಕೊಡಗಿನಲ್ಲಿ ಆತಂಕ ಶುರು
ಮಡಿಕೇರಿ, ಜೂನ್ 23: ಕೊಡಗಿನಲ್ಲಿ ಮುಂಗಾರು ಮಳೆ ಬಿರುಸುಗೊಂಡಂತೆ ಕಾಣುತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಮಳೆ ಸುರಿಯುತ್ತಿದೆಯಾದರೂ ಅದರಿಂದ ಸದ್ಯಕ್ಕೆ ಯಾವುದೇ ಪ್ರಯೋಜನವಾದಂತೆ ಕಾಣುತ್ತಿಲ್ಲ. ಕೆಆರ್ ಎಸ್ ಜಲಾಶಯಕ್ಕೆ ನೀರು ಹರಿದು ಬರುವ ಲಕ್ಷಣವೂ ಗೋಚರಿಸುತ್ತಿಲ್ಲ.
ಜನವರಿಯಿಂದ ಇಲ್ಲಿಯವರೆಗೆ ಸುರಿದ ಮಳೆಯನ್ನು ಗಮನಿಸುವುದಾದರೆ ಈ ಬಾರಿ ಕಳೆದೆರಡು ವರ್ಷಕ್ಕಿಂತ ಹೆಚ್ಚಿನ ಮಳೆಯಾಗಿರುವುದು ಕಂಡು ಬರುತ್ತಿದೆ. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಇದು ಸಾಲದಾಗಿದ್ದು, ಇದೇ ರೀತಿ ಮಳೆ ಸುರಿದರೆ ಈ ಬಾರಿಯೂ ತೊಂದರೆ ತಪ್ಪಿದಲ್ಲ.
ಜೂನ್ ತಿಂಗಳ ಕೊನೆಯಾದರೂ ಮಳೆ ಬಿರುಸುಗೊಳ್ಳದಿರುವುದು ರೈತರನ್ನು ಆತಂಕಕ್ಕೆ ತಳ್ಳಿದೆ. ದಶಕದ ಹಿಂದೆ ಇಷ್ಟು ಹೊತ್ತಿಗೆ ಮಳೆ ಸುರಿದು ಅಂತರ್ಜಲ ಹೆಚ್ಚಾಗಿ, ಎಲ್ಲೆಂದರಲ್ಲಿ ಜಲಹುಟ್ಟಿ ಹರಿಯುತ್ತಿತ್ತು. ಈಗ ಅದ್ಯಾವುದೂ ಗೋಚರಿಸುತ್ತಿಲ್ಲ.
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿರುವುದನ್ನು ನೋಡಿದರೆ ಸರಾಸರಿ 506 ಮಿಲಿಮೀಟರ್ ಮಳೆಯಾಗಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಮಳೆಯಾಗದೆ ಜನ ಪರದಾಡುವಂತಾಗಿತ್ತು.
ಕಳೆದ ವರ್ಷ ಈ ಅವಧಿಗೆ 361 ಮಿ.ಮೀ. ಮಳೆಯಾಗಿತ್ತು. ಕಳೆದ ವರ್ಷ ಮತ್ತು ಈ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು 141 ಮಿ.ಮೀ.ನಷ್ಟು ಹೆಚ್ಚು ಮಳೆಯಾಗಿರುವುದನ್ನು ಕಾಣಬಹುದು.

ಭತ್ತದ ಕೃಷಿಗೆ ಮಳೆ ಆಧಾರ
ಕೊಡಗಿನಲ್ಲಿ ಭತ್ತದ ಕೃಷಿಯನ್ನು ಮಳೆಯನ್ನೇ ನಂಬಿ ಮಾಡುತ್ತಿದ್ದು, ಈಗಾಗಲೇ ಮಳೆ ಸುರಿದು ಹೊಳೆ, ತೋಡು ತುಂಬಿ ಹರಿಯಬೇಕಾಗಿತ್ತು. ಆದರೆ ಇನ್ನೂ ನೀರು ಹೆಚ್ಚಿನ ಪ್ರಮಾಣದಲ್ಲಿ ಕಾಣುತ್ತಿಲ್ಲ. ಕೆಲವರು ಹೊಳೆ, ತೋಡಿನಿಂದ ನೀರು ಬಳಸಿಕೊಂಡು ಭತ್ತದ ಸಸಿ ಮಡಿ ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಹಲವು ಕೃಷಿಕರು ಗದ್ದೆಯತ್ತ ಮುಖ ಮಾಡಿಲ್ಲ
ಕೊಡಗು ಜಿಲ್ಲೆಯಲ್ಲಿ ಹಲವು ಕೃಷಿಕರು ಗದ್ದೆಯತ್ತ ಮುಖ ಮಾಡಿಲ್ಲ. ಹಿಂದಿನ ದಿನಗಳಿಗೆ ಹೋಲಿಸಿದರೆ ಭತ್ತದ ಕೃಷಿಯತ್ತ ಎಲ್ಲರೂ ನಿರಾಸೆ ತಾಳುತ್ತಿದ್ದಾರೆ. ಅದರಲ್ಲೂ ಕಳೆದೆರಡು ವರ್ಷಗಳಿಂದ ಸಮರ್ಪಕವಾಗಿ ಮಳೆ ಬಾರದೆ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ.

ರೈತರಲ್ಲಿ ಭಯ ಆರಂಭ
ಇನ್ನು ಕೆಲವರು ಇತರೆ ಕೃಷಿಗೆ ಗದ್ದೆಯನ್ನು ಬಳಸಿಕೊಂಡಿದ್ದಾರೆ. ಈ ಬಾರಿ ಉತ್ತಮ ಮಳೆಯಾಗಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ. ಆದರೆ ಈಗಾಗಲೇ ಮುಂಗಾರು ಆರಂಭವಾಗಿದ್ದರೂ ಬಿರುಸು ಪಡೆದುಕೊಳ್ಳದ ಕಾರಣದಿಂದ ರೈತರಿಗೆ ಭಯ ಆರಂಭವಾಗಿದೆ.

ಕೊಡಗಿನಲ್ಲಿ ಮಳೆ ಕಡಿಮೆ
ಕಾವೇರಿ ಕಣಿವೆಯ ಜನ ಕೂಡ ಆತಂಕದಲ್ಲಿದ್ದಾರೆ. ಕೊಡಗಿನಲ್ಲಿ ಮಳೆಯಾದರೆ ಮಾತ್ರ ಕಾವೇರಿ ತುಂಬಿ ಹರಿಯಲು ಸಾಧ್ಯ. ಆದರೆ ಈಗಾಗಲೇ ತಳ ತಲುಪಿರುವ ಜಲಾಶಯದ ನೀರು ಮೇಲೆ ಬರಬೇಕಾದರೆ ಮಳೆ ಬರಲೇ ಬೇಕು. ಆದರೆ ಕೊಡಗಿನಲ್ಲಿ ಮಳೆ ತಾಲೂಕುವಾರು ನೋಡಿದರೆ ಸುರಿಯುತ್ತಿರುವುದು ಕಡಿಮೆಯೇ. ಮುಂದಿನ ದಿನಗಳಲ್ಲಿ ಮಳೆ ಬಿರುಸುಗೊಂಡು ವಾಡಿಕೆಯ ಮಳೆ ಸುರಿಯುತ್ತದೆಯಾ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications