ಮೋದಿ ಸರ್ಕಾರದ ದೊಡ್ಡ ಹಗರಣ ರಫೆಲ್ ಅಲ್ಲ, ಬೆಳೆ ವಿಮೆ: ಆರೋಪ
ನವದೆಹಲಿ, ನವೆಂಬರ್ 13: ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ರಫೆಲ್ ಅಲ್ಲ, ಕೃಷಿ ಬೆಳೆ ವಿಮೆ ಎಂದು ಖ್ಯಾತ ಪರ್ತಕರ್ತ ಮತ್ತು ರೈತ ಪರ ಹೋರಾಟಗಾರ ಪಿ.ಸಾಯಿನಾಥ ಅವರು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಫೆಲ್ ಹಗರಣದಂತೆ ಇಲ್ಲೂ ಸಹ ಅನಿಲ್ ಅಂಬಾನಿ ಅವರಿಗೆ ಸಹಾಯ ಮಾಡುವ ಉದ್ದೇಶದಿಂದಲೇ ಕೇಂದ್ರ ಸರ್ಕಾರ ರೈತರಿಗೆ ಮೋಸ ಮಾಡಿದೆ ಎಂದು ಸಾಯಿನಾಥ ಅವರು ಆರೋಪಿಸಿದ್ದಾರೆ.
ಬೆಳೆ ವಿಮೆಗೆ ಅನಿಲ್ ಅಂಬಾನಿಯ ರಿಲಯನ್ಸ್ ಅನ್ನು ಸರ್ಕಾರ ಆಯ್ಕೆ ಮಾಡಿಕೊಂಡಿದೆ. ರೈತರು ಮತ್ತು ಸರ್ಕಾರ ಬೆಳೆ ವಿಮೆಗೆ ರಿಲಯನ್ಸ್‌ಗೆ ಕಂತಿನ ಹಣ ಪಾವತಿ ಮಾಡುತ್ತದೆ ಆದರೆ ಆ ಹಣ ರಿಲಯನ್ಸ್‌ನ ಪಾಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಅಂಕಿ-ಅಂಶದ ಸಹಿತ ಮಹಾರಾಷ್ಟ್ರದ ಒಂದು ಜಿಲ್ಲೆಯ ಉದಾಹರಣೆ ನೀಡಿರುವ ಸಾಯಿನಾಥ ಅವರು, ಜಿಲ್ಲೆಯಲ್ಲಿ 2.80 ಲಕ್ಷ ಜನ ರೈತರು ಸೋಯಾಬೀನ್ ಬೆಳೆಯುತ್ತಾರೆ. ಅವರು ಬೆಳೆ ವಿಮೆ ಕಂತಾಗಿ ಒಟ್ಟು 19.22 ಕೋಟಿ ಹಣ ಕಟ್ಟಿದ್ದಾರೆ. ಕೇಂದ್ರ ಸರ್ಕಾರವು ತನ್ನ ಭಾಗದ 77 ಕೋಟಿ ಕಂತಾಗಿ ನೀಡಿದೆ. ರಾಜ್ಯ ಸರ್ಕಾರ ಕೂಡ ಅಷ್ಟೆ ಹಣವನ್ನು ರಿಲಯನ್ಸ್‌ಗೆ ಬೆಳೆ ವಿಮೆಗಾಗಿ ನೀಡಿದೆ.

ವಿಮೆ ಸಿಕ್ಕಿದ್ದು 40 ರಿಂದ 507 ಮಾತ್ರ
ಇಡೀಯ ಜಿಲ್ಲೆಯ ಬೆಳೆ ನಾಶ ಆಯಿತು. ಆದರೆ 2.80 ಲಕ್ಷ ರೈತರಲ್ಲಿ ವಿಮಾ ಹಣ ಪಡೆದವರು ಕೇವಲ 48 ಸಾವಿರ ರೈತರು ಅದೂ 40 ರೂಪಾಯಿಯಿಂದ 507 ರೂಪಾಯಿ ಅಷ್ಟೆ ಬೆಳೆ ವಿಮೆ ಅವರಿಗೆ ಬಂದಿದೆ. ರಿಲಯನ್ಸ್‌ಗೆ ವಿಮೆಯ ಕಂತಾಗಿ ರೈತರು ಮತ್ತು ಸರ್ಕಾರ ಕಟ್ಟಿದ್ದು 173 ಕೋಟಿ ಆದರೆ ಅದು ರೈತರಿಗೆ ನೀಡಿದ್ದು ಕೇವಲ 30 ಕೋಟಿ ರೂಪಾಯಿ ಎಂದು ಅವರು ಲೆಕ್ಕ ನೀಡಿದರು.

ಇದು ಕೇವಲ ಒದು ಜಿಲ್ಲೆಯ ಕತೆ
ಇದು ಕೇವಲ ಒಂದು ಜಿಲ್ಲೆಯ ಒಂದು ಬೆಳೆಯ ಕತೆಯಷ್ಟೆ. ಆದರೆ ದೇಶದ ಎಲ್ಲೆಡೆ ಇದೇ ನಿಯಮಗಳಿವೆ. ದೇಶದ ಎಲ್ಲೆಡೆ ರಿಲಯನ್ಸ್ ಕೇಂದ್ರದ ಬೆಂಬಲದೊಂದಿಗೆ ರೈತರ ಹಣ ಹೊಡೆಯುತ್ತಿದೆ. ರಿಲಯನ್ಸ್‌ಗೆ ಸಹಾಯಕ ಆಗಲೆಂದು ಕೇಂದ್ರವು ನಿಯಮ ಸಹ ರೂಪಿಸಿದ್ದು ರೈತನಿಗೆ ಸಾಲ ಸಿಗಬೇಕೆಂದರೆ ಬೆಳೆ ವಿಮೆ ಮಾಡಿಸಲೇ ಬೇಕಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕೆಲವು ಜಿಲ್ಲೆಗಳಲ್ಲಿ ರೈತರಿಂದ ಭಾರಿ ಆಕ್ಷೇಪ
ಆದರೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಈ ಬಗ್ಗೆ ರೈತರು ಭಾರಿ ಆಕ್ಷೇಪ ಎತ್ತಿದರು ಆಗ ರಿಲಯನ್ಸ್ ಅನ್ನು ಅಲ್ಲಿಂದ ಹೊರಗಿಡಲಾಯಿತು. ಆದರೆ ಅವರಿಗೆ ಗುಜರಾತ್‌ನಲ್ಲಿ ಬೆಳೆ ವಿಮೆಗೆ ನೀಡಲಾಗಿದ್ದ ಜಿಲ್ಲೆಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ ನೀಡಲಾಯಿತು ಎಂದು ಸಾಯಿನಾಥ್ ಹೇಳಿದ್ದಾರೆ.

ರೈತರ ಹಣ ಲೂಟಿ ಹೊಡೆಯುತ್ತಿದೆ ರಿಲಯನ್ಸ್
ಸಾಯಿನಾಥ್ ಹೇಳುವ ಪ್ರಕಾರ ಇದು ಕೇವಲ ಮಹಾರಾಷ್ಟ್ರದ ಒಂದು ಜಿಲ್ಲೆಯ, ಒಂದು ಬೆಳೆಯ ವಿಮೆಯ ಕತೆ ಅಷ್ಟೆ. ಇಡೀಯ ದೇಶದಲ್ಲಿ ಇದೇ ನಿಯಮಗಳಿವೆ. ಒಂದು ಜಿಲ್ಲೆಯ ಒಂದು ಬೆಳೆಯಲ್ಲಿ ರಿಲಯನ್ಸ್ 140 ಕೋಟಿ ಹಣ ಮಾಡಬಹುದಾದರೆ ಇಡೀ ದೇಶದಲ್ಲಿ ಎಷ್ಟು ಮಾಡಬಹುದು. ರೈತರ ಹಣ ಎಷ್ಟು ಲೂಟಿ ಹೊಡೆಯಬಹುದು ಎಂದು ಸಾಯಿನಾಥ್ ಪ್ರಶ್ನಿಸಿದ್ದಾರೆ. ಹಾಗಾಗಿಯೇ ಅವರು ಬೆಳೆ ವಿಮೆ ರಫೆಲ್ ಡೀಲ್‌ಗಿಂತಲೂ ಅತಿ ದೊಡ್ಡ ಹಗರಣ ಎಂದು ಸಾಯಿನಾಥ್ ಅವರ ಆರೋಪ.












Click it and Unblock the Notifications