Mango Mela: ಮೇ 26 ರಿಂದ ಮೈಸೂರಿನಲ್ಲಿ ಮಾವು ಮೇಳ, ಸಿದ್ಧತೆ ಹೇಗಿದೆ? ಯಾವೆಲ್ಲ ನಿಯಮಗಳು ಅನ್ವಯ?-ಮಾಹಿತಿ
ಮೈಸೂರು, ಮೇ, 18: ಪ್ರತಿ ವರ್ಷವೂ ಅರಮನೆ ನಗರಿ ಮೈಸೂರಿನಲ್ಲಿ ಮಾವಿನ ಹಣ್ಣಿನ ಮೇಳವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಇದರಿಂದ ಎಲ್ಲಾ ಬಗೆಯ ಮಾವಿನ ಹಣ್ಣುಗಳು ರೈತರ ತೋಟದಿಂದ ನೇರವಾಗಿ ಮೇಳಕ್ಕೆ ಬರುವುದರಿಂದ ಗ್ರಾಹಕರಿಗೆ ನೈಸರ್ಗಿಕ, ಗುಣಮಟ್ಟದ, ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ಖರೀದಿಸಲು ಸಾಧ‍್ಯವಾಗುತ್ತಿದೆ. ಈ ಬಾರಿ ಮೇ 26ರಿಂದ ಮೂರು ದಿನಗಳ ಕಾಲ ಮಾವಿನ ಹಣ್ಣಿನ ಮೇಳ ನಡೆಯುತ್ತಿದ್ದು, ಇದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ಮಾವಿನ ಹಣ್ಣಿನ ಮೇಳ ನಡೆಯುತ್ತಿದ್ದು, ತಮಗೆ ಬೇಕಾದ ತರಾವರಿಯ ಮಾವಿನ ಹಣ್ಣುಗಳನ್ನು ಖರೀದಿಸಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಈ ಮೇಳದ ಬಹುಮುಖ್ಯ ವಿಶೇಷವೆಂದರೆ ನೈಸರ್ಗಿಕ ವಿಧಾನದಲ್ಲಿ ಮಾಗಿಸಿರುವ ಮಾವಿನಹಣ್ಣನ್ನು ಮಾರಾಟ ಮಾಡಲಾಗುತ್ತದೆ. ಜೊತೆಗೆ ಹಲವು ಬಗೆಯ ಮಾವಿನ ಹಣ್ಣುಗಳು ಇಲ್ಲಿ ದೊರೆಯಲಿವೆ.

ಹಾಗೆ ನೋಡಿದರೆ ಮಾವಿನ ಹಣ್ಣಿನ ಮೇಳವನ್ನು ತೋಟಗಾರಿಕಾ ಇಲಾಖೆ ಇಷ್ಟರಲ್ಲೇ ಆಯೋಜಿಸಬೇಕಾಗಿತ್ತು. ಆದರೆ ಚುನಾವಣೆಯ ಹಿನ್ನೆಲೆಯಲ್ಲಿ ತಡವಾಗಿ ಆಯೋಜಿಸಲಾಗುತ್ತಿದೆ. ಆದರೂ ಈ ಬಾರಿ ಮಾವಿನ ಮೇಳ ವಿಶೇಷತೆಗಳಿಂದ ಕೂಡಿರಲಿದ್ದು, ಮಾವಿನ ಹಣ್ಣು ಮಾತ್ರವಲ್ಲದೆ, ಗಿಡಗಳನ್ನು ನೆಟ್ಟು ಬೆಳೆಸುವ ಆಸಕ್ತಿ ಹೊಂದಿರುವವರಿಗೆ ಗಿಡಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ.
ಮೇಳದಲ್ಲಿ ಗುಣಮಟ್ಟದ ಹಣ್ಣುಗಳಿಗೆ ಆದ್ಯತೆ
ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ವೇದಿಕೆ ಆಗಿರುವ ಮಾವಿನ ಮೇಳದಲ್ಲಿ 20 ಮಳಿಗೆಗಳಲ್ಲಿ ಮಾವಿನಹಣ್ಣು ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಇಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮೈಸೂರು ಜಿಲ್ಲೆಯ ಮಾವು ಬೆಳೆಗಾರರು ಈ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು ಮಾವಿನ ಹಣ್ಣಿನ ಮೇಳದಲ್ಲಿ ರತ್ನಗಿರಿ, ಅಲ್ಫಾನ್ಸೋ, ಬಾದಾಮಿ, ಬಂಗನಾಪಲ್ಲಿ, ರಸಪುರಿ, ಮಲಗೋವಾ, ತೋತಾಪುರಿ, ಮಲ್ಲಿಕಾ, ಸೆಂದುರ, ನೀಲಂ, ದಶೇರಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣುಗಳು ಇರಲಿವೆ. ಜೊತೆಗೆ ಇಲ್ಲಿ ಮಾರಾಟಕ್ಕಿಡುವ ಮಾವಿನ ಹಣ್ಣುಗಳಲ್ಲಿ ರಾಸಾಯನಿಕ ವಸ್ತು ಬಳಸಿ ಹಣ್ಣು ಮಾಡಲಾಗಿದೆಯೇ ಎಂದು ಪರಿಶೀಲನೆ ನಡೆಸಲಾಗುತ್ತದೆ.
ಮೇಳಕ್ಕೆ ಬರುವ ಎಲ್ಲ ರೈತರಿಗೂ ಮೊದಲೇ ಎಚ್ಚರಿಕೆ ನೀಡಲಾಗಿದ್ದು, ನೈಸರ್ಗಿಕ ಪದ್ಧತಿಯಲ್ಲಿ ಮಾಗಿಸಿದ ಹಣ್ಣುಗಳನ್ನಷ್ಟೇ ತರುವಂತೆ ಸೂಚನೆ ನೀಡಲಾಗಿದೆ. ರಾಸಾಯನಿಕ ವಸ್ತು ಬಳಸಿದ್ದರೆ ಅದನ್ನು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಪತ್ತೆಹಚ್ಚಲಿದ್ದಾರೆ.
ರಾಸಾಯನಿಕ ಮುಕ್ತ ಹಣ್ಣುಗಳ ಮಾರಾಟ
ಮಾವಿನ ಕಾಯಿಯನ್ನು ಬಹುಬೇಗ ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೆಟ್ ಬಳಸಲಾಗುತ್ತದೆ. ಇದು ಆರೋಗ್ಯದ ದೃಷ್ಟಿಯಿಂದ ಹಾನಿಕರವಾಗಿದ್ದು, ಇದನ್ನು ತಡೆಯುವ ಕೆಲಸವೂ ನಡೆಯುತ್ತಿದೆ. ಈ ಬಗ್ಗೆ ದೂರು ಕೇಳಿಬಂದಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಸಾಯನಿಕ ವಸ್ತು ಬಳಕೆ ಮಾಡಿದ ಹಣ್ಣುಗಳ ಮಾರಾಟವನ್ನು ಮಾವಿನ ಮೇಳದಲ್ಲಿ ನಿರ್ಬಂಧಿಸಲಾಗಿದೆ.
ರಾಸಾಯನಿಕ ಬಳಸಿ ಮಾಡಿರುವ ಹಣ್ಣುಗಳು ನೋಡಲು ಹೆಚ್ಚು ಆಕರ್ಷಕವಾಗಿ, ಗಾಢ ಬಣ್ಣದಿಂದ ಕೂಡಿರುತ್ತವೆ. ಹೀಗಾಗಿ ಅವುಗಳನ್ನು ಮೇಲ್ನೋಟದಿಂದಲೇ ಗುರುತಿಸಬಹುದಾಗಿದೆ. ಇಂತಹ ಹಣ್ಣುಗಳಿಗೆ ಅವಕಾಶವಿಲ್ಲ ಎಂದು ಸೂಚಿಸಲಾಗಿದೆ. ಹಾಗೆಯೆ ಮಾವಿನ ಮೇಳದಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುವುದನ್ನು ತಪ್ಪಿಸುವ ಸಲುವಾಗಿ ಹಾಪ್‌ಕಾಮ್ಸ್, ಎಪಿಎಂಸಿಯಲ್ಲಿರುವ ಬೆಲೆಗೆ ಅನುಗುಣವಾಗಿ ಹಣ್ಣುಗಳನ್ನು ಮಾರಾಟ ಮಾಡಲು ಹಣ್ಣುಗಳಬೆ ಲೆಯನ್ನು ನಿಗದಿಪಡಿಸಲಾಗಿದೆ.
ಪ್ರತಿದಿನ ಮಾವಿನ ಹಣ್ಣಿನ ಬೆಲೆ ನಿಗದಿ ಮಾಡಿ, ಮಳಿಗೆ ಮುಂದೆ ದರಗಳ ಫಲಕ ಹಾಕುವುದು ಕಡ್ಡಾಯವಾಗಿದೆ. ಮಾವಿನ ಮೇಳದ ಜೊತೆಗೆ ರೈತರಿಗೆ ಮತ್ತು ಗಿಡಗಳನ್ನು ನೆಟ್ಟು ಬೆಳೆಸುವ ಆಸಕ್ತಿ ಹೊಂದಿದವರಿಗಾಗಿ ಮಾವು ಮೇಳದಲ್ಲಿ ವಿವಿಧ ಸಸ್ಯಗಳ ಮಾರಾಟಕ್ಕೂ ವ್ಯವಸ್ಥೆ ಮಾಡಲಾಗಿದೆ. ತೋಟಗಾರಿಕಾ ಇಲಾಖೆಯ ನರ್ಸರಿಯಲ್ಲಿರುವ ತೆಂಗಿನಗಿಡ, ಮಾವು, ಹಲಸು, ಸೀಬೆ, ನೇರಳೆ, ಜಂಬುನೇರಳೆ, ನುಗ್ಗೆ ಸೇರಿದಂತೆ ವಿವಿಧ ಹಣ್ಣು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲಾಗುತ್ತದೆ.
ಮಾವಿನ ಮೇಳಕ್ಕೆ ಪ್ರತಿವರ್ಷವೂ ಸ್ಪಂದನೆ
ಮಾವಿನ ಮೇಳಕ್ಕೆ ಪ್ರತಿವರ್ಷವೂ ಉತ್ತಮ ರೀತಿಯ ಸ್ಪಂದನೆ ದೊರೆಯುತ್ತಿದ್ದು, ಈ ಬಾರಿಯೂ ಹೆಚ್ಚು ಗ್ರಾಹಕರನ್ನು ಸೆಳೆಯುವ ಸಾಧ್ಯತೆಯಿದೆ. ಮೇಳದಲ್ಲಿ ಮೈಸೂರು, ಚಾಮರಾಜನಗರ ಮಂಡ್ಯ ಹಾಗೂ ರಾಮನಗರ ಭಾಗದ ರೈತರು ಭಾಗವಹಿಸಲಿದ್ದು, ಟನ್‌ಗಟ್ಟಲೆ ಮಾವಿನ ಹಣ್ಣುಗಳು ಮಾರಾಟ ಆಗಲಿವೆ.
ಈ ಕುರಿತಂತೆ ಮಾಹಿತಿ ನೀಡಿರುವ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್ ಅವರು, ಹಾಪ್‌ಕಾಮ್ಸ್ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ರೈತರೊಂದಿಗೆ ಸಭೆ ನಡೆಸಿ ಆಹ್ವಾನಿಸಲಾಗಿದ್ದು, ರೈತರು ತಾವು ಬೆಳೆದಿರುವ ಮಾವಿನ ಹಣುಗಳನ್ನು ಮೇಳಕ್ಕೆ ತಂದು ಮಾರಾಟ ಮಾಡಬಹುದಾಗಿದೆ. ನೈಸರ್ಗಿಕ ಪದ್ಧತಿಯಲ್ಲೇ ಮಾಗಿಸಿರುವ ಹಣ್ಣುಗಳ ಮಾರಾಟಕ್ಕೆ ಕ್ರಮವಹಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications