ಕೊಪ್ಪಳ: ಬೇಸಿಗೆ, ಮಾವು ಬೆಳೆಯುವ ರೈತರಿಗೆ ಸಲಹೆಗಳು
ಕೊಪ್ಪಳ, ಮಾರ್ಚ್ 09: ಕೊಪ್ಪಳ ಜಿಲ್ಲೆಯ ಮಾವಿನ ಬೆಳೆಗೆ ದೇಶ, ವಿದೇಶದಲ್ಲಿ ಬೇಡಿಕೆ ಇದೆ. ಜಿಲ್ಲೆಯಲ್ಲು ಸುಮಾರು 4000 ಹೆಕ್ಟರ್‌ಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಈ ಬೆಳೆಯ ಬೇಸಾಯವನ್ನು ಕೈಗೊಂಡಿದ್ದಾರೆ. ಬೆನೆಶಾನ್, ದಶಹರಿ, ಸುವರ್ಣರೇಖಾ, ರಸಪುರಿ, ಮಲ್ಗೋವಾ, ಇಮಾಮ ಪಸಂದ ಅಲ್ಲದೇ ಸಂಕರಣ ತಳಿಯಾದ ಮಲ್ಲಿಕಾ ಮತ್ತು ಚಟ್ನಿಕಾಯಿಗಳಾದ ಪುನಾಸ್, ಆಮ್ಲೇಟ್ ಇತ್ಯಾದಿ 12ಕ್ಕೂ ಹೆಚ್ಚು ತಳಿಗಳನ್ನು ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ.
ಬೇಸಿಗೆ ಕಾಲ ಆರಂಭವಾಗಿದೆ. ಮಾವಿನ ಕಟಾವಿನ ಜೊತೆಗೆ ಗಿಡಗಳನ್ನು ಸಹ ಉಳಿಸಿಕೊಳ್ಳಬೇಕಿದೆ. ಆದ್ದರಿಂದ ಕೊಪ್ಪಳ ಜಿಲ್ಲೆಯ ಮಾವು ಬೆಳೆಗಾರರಿಗೆ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ. ಹಣ್ಣಿನ ಕಣಜ ಎಂದೇ ಖ್ಯಾತಿಯಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಮಾವು ಪ್ರಮುಖ ಬೆಳೆಯಾಗಿದೆ. 'ಕೇಸರ' ಮಾವು ಅತ್ಯಂತ ಜನಪ್ರಿಯವಾಗಿದ್ದು, 'ಕೊಪ್ಪಳ ಕೇಸರ ಮಾವು' ಎಂದೇ ಪ್ರಸಿದ್ದಿಯಾಗಿದೆ.

ಇತ್ತೀಚೆಗೆ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಜಿಲ್ಲೆಯ ಹಲವಾರು ಮಾವಿನ ತೋಟಗಳಿಗೆ ಭೇಟಿ ನೀಡಿ, ಮಾವು ಬೆಳೆಗಾರರಿಗೆ ಬೆಳೆ ನಿರ್ವಹಣೆ ಕುರಿತು ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಮಾವು ಬೆಳೆಯುವ ರೈತರು ಈ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಆದಾಯ ಪಡೆಯುವ ಜೊತೆಗೆ, ಮಾವಿನ ಗಿಡಗಳನ್ನು ರಕ್ಷಣೆ ಮಾಡಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ರೈತರಿಗೆ ಸಲಹೆಗಳು: ಈಗ ತಾಪಮಾನ ಜಾಸ್ತಿ ಯಾಗುತ್ತಿದ್ದು, ರೈತರು ತಮ್ಮ ಜಮೀನಿನ ಮಣ್ಣಿನ ಆಧಾರದ ಮೇಲೆ ನಿಯಮಿತವಾಗಿ ನೀರು ಕೊಡಬೇಕು. ಕೆಂಪು ಮಣ್ಣಿನಲ್ಲಿ 3 ರಿಂದ 4 ದಿನಗಳಿಗೊಮ್ಮೆ ಮತ್ತು ಕಪ್ಪು ಮಣ್ಣಿನಲ್ಲಿ 8 ರಿಂದ 10 ದಿನಗಳಿಗೊಮ್ಮೆ ನೀರು ಕೊಡುತ್ತಿರಬೇಕು.
ತೋಟವನ್ನು ಕಸಮುಕ್ತವಾಗಿ ಇಡಬೇಕಲ್ಲದೇ, ಗಿಡದ ಸುತ್ತಲೂ 5 ರಿಂದ 6 ಅಡಿ ಪಾತಿ (ಮಡಿ) ಮಾಡಿ ಅರ್ಧ ಅಡಿಯಷ್ಟು ಅಗೆದು ಮಣ್ಣನ್ನು ಸಡಿಲಗೊಳಿಸಬೇಕು. ಈ ಮಡಿಯಲ್ಲಿ ಸಾಧ್ಯವಾದರೆ ಅಲಸಂದಿ ಬೀಜಗಳನ್ನು ಚಲ್ಲಿದರೆ ಅದು ಬೆಳೆದಂತೆಲ್ಲಾ ಹೊದಿಕೆಯಾಗುವುದಲ್ಲದೇ ಸಾರಜನಕ ಸ್ಥಿರೀಕರಣಗೊಂಡು ಗೊಬ್ಬರ ಕೊಡುವ ಪ್ರಮಾಣವನ್ನು ಕಡಿಮೆ ಮಾಡಬಹುದು.
ತಾಪಮಾನ ಜಾಸ್ತಿಯಾಗಿ ಹಾನಿ ಆಗಬಹುದಾದ್ದರಿಂದ ಗಿಡದ ಕಾಂಡಕ್ಕೆ ಬಿರುಕುಗಳು ಮತ್ತು ರಂಧ್ರಗಳು ಮುಚ್ಚಿಕೊಳ್ಳುವಂತೆ ನೆಲದಿಂದ 3 ಅಡಿ ಎತ್ತರಕ್ಕೆ ಸಿ.ಓ.ಸಿ. 50 ಎಸ್.ಪಿ. ಎನ್ನುವ ಶಿಲೀಂದ್ರನಾಶಕವನ್ನು 100 ಗ್ರಾಂ. ಜೊತೆಗೆ ಕ್ಲೋರೊಪೈರಿಫಾಸ್ 50 ಇ.ಸಿ. 5 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರೆಸಿದ ದ್ರಾವಣವನ್ನು ಲೇಪನ ಮಾಡಬೇಕು ಹಾಗೂ ರೋಗಗ್ರಸ್ಥ, ಕೀಟಗಳ ಬಾಧೆಯಿಂದ ಒಣಗಿದ ರಂಬೆಗಳನ್ನು ಕತ್ತರಿಸಿ ತೆಗೆದು ಹಾಕಿ ಇದೇ ದ್ರಾವಣವನ್ನು ಲೇಪನ ಮಾಡಬೇಕು.
ಹೂ ಅಥವಾ ಹೀಚು ಉದುರುತ್ತಿದ್ದರೆ, ಎನ್.ಎ.ಎ. ಎನ್ನುವ ಸಸ್ಯ ಪ್ರಚೋದಕವನ್ನು (ಪ್ಲ್ಯಾನೊಫಿಕ್ಸ್) 0.4 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು. ಸಾವಯವ ಮತ್ತು ಜೈವಿಕ ಗೊಬ್ಬರಗಳಾದ ಜೀವಾಮೃತ, ಗೋಕೃಪಾಮೃತ ಅಲ್ಲದೇ ದ್ರವರೂಪದ ಗೊಬ್ಬರಗಳನ್ನು ಸಿಂಪಡಿಸುತ್ತಿರಬೇಕು. ಪೋಷಕಾಂಶಗಳ ನಿರ್ವಹಣೆಗಾಗಿ ಪೋಟ್ಯಾಷಿಯಂ ನೈಟ್ರೇಟ್ 5 ಗ್ರಾಂ. ಮತ್ತು ಮಾವು ಸ್ಪೇಷಲ್ ಎನ್ನುವ ಲಘು ಪೋಷಕಾಂಶಗಳ ಮಿಶ್ರಣವನ್ನು 5 ಗ್ರಾಂ. ಪ್ರತಿ ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎಕರೆಗೆ 8 ರಿಂದ 10 ಹಣ್ಣಿನ ನೊಣದ ಹತೋಟಿಗಾಗಿ ಮೋಹಕ ಬಲೆಗಳನ್ನು ಅಳವಡಿಸಬೇಕು. ಕೀಟ ಅಥವಾ ರೋಗಗಳ ಸೂಕ್ತ ಮಾಹಿತಿ ಮತ್ತು ಹತೋಟಿಗಾಗಿ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳನ್ನು ಸಂಪರ್ಕಿಸಿ ಸೂಕ್ತವಾದ ಪರಿಸರ ಸ್ನೇಹಿ ರಾಸಾಯನಿಕ ಅಥವಾ ಜೈವಿಕ ಪೀಡೆ ನಾಶಕಗಳನ್ನು ಬಳಸಬೇಕು.
ಆಸಕ್ತ ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಎಂ. ವಿ. ರವಿ ಅವರನ್ನು ಸಂಪರ್ಕಿಸಬಹುದು. ಮೊಬೈಲ್ ನಂಬರ್ 9480247745 ಮತ್ತು ತೋಟಗಾರಿಕೆ ತಜ್ಞ ವಾಮನಮೂರ್ತಿ ಅವರನ್ನು ಸಂಪರ್ಕಿಸಲು ಮೊಬೈಲ್ ನಂಬರ್ 8217696837.












Click it and Unblock the Notifications