ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ರೂಪು-ರೇಷೆಗಳ ಪ್ರಕಟ: ಕುಮಾರಸ್ವಾಮಿ
ಬೆಂಗಳೂರು, ಜೂನ್ 25: ರೈತರ ಸಾಲ ಮನ್ನಾ ಕುರಿತು ರೂಪು-ರೇಷೆಗಳನ್ನು ಪ್ರಸ್ತುತ ಬಜೆಟ್‌ನಲ್ಲಿ ಪ್ರಕಟಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು. ಬಜೆಟ್ ಜುಲೈ 5 ರಂದು ಮಂಡನೆ ಮಾಡುವ ಸಾಧ್ಯತೆ ಇದೆ.
ಸಾಲ ಮನ್ನಾ ಯೋಜನೆಯ ಅನುಷ್ಠಾನ ಕುರಿತು ಸಹಕಾರ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಕೃಷಿ ಮತ್ತು ಸಹಕಾರ ಇಲಾಖೆಗಳ ಹಿರಿಯ ಅಧಿಕಾರಿಗಳ ಜೊತೆಯಲ್ಲಿ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಮಾಲೋಚನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಅಧಿಕಾರದಲ್ಲಿ ಎಷ್ಟು ದಿನ ಇರುತ್ತೇನೆ ? ಎಂಬುದು ತಮಗೆ ಮುಖ್ಯವಲ್ಲ. ಎಲ್ಲಿಯವರೆಗೆ ಇರುತ್ತೇನೋ ಅಲ್ಲಿಯವರೆಗೆ ಜನರಿಗಾಗಿ ಏನು ಮಾಡುತ್ತೇನೆ ? ಎಂಬುದು ಮುಖ್ಯ. ರಾಜ್ಯದ ರೈತ ಸಮುದಾಯಕ್ಕೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ಸಹಕಾರ ಸಂಸ್ಥೆಗಳ ಪದಾಧಿಕಾರಿಗಳ ಅನುಭವದ ಮಾಹಿತಿ ಸಂಗ್ರಹಿಸಿ ಹಾಗೂ ಸರ್ಕಾರದ ಸಾಲಮನ್ನಾ ಕ್ರಮದಿಂದ ಆ ಸಂಸ್ಥೆಗಳು ನಷ್ಟಕ್ಕೆ ಒಳಗಾಗದಂತೆ ಮಾರ್ಗೋಪಾಯಗಳನ್ನು ರೂಪಿಸಲು ಸಭೆಯಲ್ಲಿ ಹೊರಹೊಮ್ಮಿದ ಸಲಹೆಗಳು ಅನುಕೂಲವಾಗಿದೆ ಎಂದರು.

ಈ ಸಮ್ಮಿಶ್ರ ಸರ್ಕಾರವು ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೋ? ಎಂದು ಕೆಲವು ಅಧಿಕಾರಿಗಳು ಮಾತನಾಡಿಕೊಳ್ಳುತ್ತಿರುವ ಅಂಶ ತಮ್ಮ ಗಮನಕ್ಕೆ ಬಂದಿದೆ, ಆದೇಶವನ್ನು ಅನುಷ್ಠಾನಗೊಳಿಸುವ ಕರ್ತವ್ಯ ಮತ್ತು ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಸಮ್ಮಿಶ್ರ ಸರ್ಕಾರದ ಅಸ್ತಿತ್ವದ ಬಗ್ಗೆ ಅನಗತ್ಯ ಅನುಮಾನ ಹಾಗೂ ಎಲ್ಲಿಲ್ಲದ ಸಂದೇಹಗಳು ಬೇಡ ಎಂದು ಎಚ್ಚರಿಕೆ ನೀಡಿದರು.
ಎರಡು ಹಂತದಲ್ಲಿ ರೈತರ ಸಾಲಮನ್ನಾ ಮಾಡುವ ಸರ್ಕಾರ ಚಿಂತಿಸಿದೆ ಎನ್ನಲಾಗಿದ್ದು, ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಸಾಲ ಮನ್ನಾ ಮಾಡುತ್ತದೆ. ಹೆಚ್ಚು ಜಮೀನು ಹೊಂದಿದ, ಕಾರು ಹೊಂದಿದ ಸ್ಥಿತಿವಂತ ರೈತರ ಸಾಲಮನ್ನಾ ಮಾಡುವುದಿಲ್ಲ ಎಂದು ಹೇಳಲಾಗುತ್ತಿದೆ.












Click it and Unblock the Notifications