ಸಿಎಂ ಕುಮಾರಸ್ವಾಮಿಯಿಂದ ರೈತರ ದುರ್ಬಳಕೆ: ಸಂಸದ ಪ್ರತಾಪ್ ಸಿಂಹ
Recommended Video

ಮೈಸೂರು, ನವೆಂಬರ್ 19 : ರೈತರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ, ರೈತರ ಹೆಸರಿನಲ್ಲಿಯೇ ಪ್ರಮಾಣವಚನ ತೆಗೆದುಕೊಂಡಿದ್ದು ಬೇಸರದ ಸಂಗತಿ ಎಂದು ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ರೈತರ ಹೆಸರು ಬಳಸಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೆ ರೈತರ ಕಷ್ಟಕ್ಕೆ ಸ್ಪಂದಿಸುವ ರೀತಿ ಗೊತ್ತಿಲ್ಲ ಎಂದರು.
ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ ಸಂಸದ ಪ್ರತಾಪ್ ಸಿಂಹ, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ಕೊಟ್ಟು, ರೈತರ ಸಮಸ್ಯೆಗಳನ್ನು ಪರಿಹರಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿಗಳ ದುರ್ವರ್ತನೆ ಸರಿಯಲ್ಲ. ಈ ರೀತಿ ಹೇಳಿಕೆಗಳು ಸಿಎಂ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ಹರಿಹಾಯ್ದರು.

ಇನ್ನು ಇದೇ ವೇಳೆ ಮಡಿಕೇರಿ ಜನರ ಬಹುದಿನದ ಬೇಡಿಕೆಯಾದ ರೈಲ್ವೆ ಕಾಮಗಾರಿಯ ಭೂ ಸ್ವಾಧೀನಕ್ಕೆ ಕೋಟ್ಯಂತರ ರುಪಾಯಿಗಳನ್ನು ಬಿಡುಗಡೆಗೊಳಿಸಿದೆ. 2022ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶಗಳ ಸಾಲಿಗೆ ಭಾರತ ಸೇರಲಿದೆ ಎಂದರು.
ನನ್ನ ಅವಧಿಯಲ್ಲಿ ಮೈಸೂರು ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅಭಿವೃದ್ಧಿಗೊಳಿಸಿದ್ದೇನೆ. ಹಿನಕಲ್ ಜಂಕ್ಷನ್ ಗೆ ಅಟಲ್ ಬಿಹಾರಿ ವಾಜಪೇಯಿ ಹೆಸರು ಇಡಲಾಗುವುದು. ದಿವಂಗತ ಕೇಂದ್ರ ಸಚಿವ ಅನಂತ್ ಕುಮಾರ್ ಅವರ ಕನಸಿನ ಕೂಸು ಪಾಸ್‌ಪೋರ್ಟ್ ಸೇವಾ ಕೇಂದ್ರ ಮೈಸೂರಿನ ಪಾಸ್‌ಪೋರ್ಟ್ ವೃತ್ತಕ್ಕೆ ಅವರ ಹೆಸರನ್ನು ನಾಮಕರಣ ಮಾಡಲು ಸ್ಥಳೀಯ ನಾಯಕರು ಸಹಕಾರ ನೀಡಬೇಕು ಎಂದು ಪ್ರತಾಪ್ ಸಿಂಹ ಮನವಿ ಮಾಡಿದರು.












Click it and Unblock the Notifications