ತಮಿಳುನಾಡಿಗೆ ಹರಿದ ಕಾವೇರಿ ನೀರು: 102 ಅಡಿಗೆ ಕುಸಿತ, ಈ ಜಿಲ್ಲೆಯ ಅನ್ನದಾತರಿಗೆ ಆತಂಕ
ಮಂಡ್ಯ, ಆಗಸ್ಟ್, 25: ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿರುವ ಹಿನ್ನೆಲೆ ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಪ್ರಸ್ತುತ ಅಣೆಕಟ್ಟೆಯ ನೀರಿನ ಮಟ್ಟ 102 ಅಡಿಗೆ ಕುಸಿತ ಕಂಡಿದೆ. ಇದರ ನಡುವೆಯೂ ನೀರು ಸ್ಥಗಿತಗೊಳಿಸುವ ಬಗ್ಗೆ ರಾಜ್ಯ ಸರ್ಕಾರ ತುಟಿಬಿಚ್ಚದೆ ಮೌನ ವಹಿಸಿರುವುದು ರೈತರ ಆತಂಕವನ್ನು ಹೆಚ್ಚುಮಾಡಿದೆ.
ಕಳೆದ 10 ದಿನಗಳ ಹಿಂದೆ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ 113 ಅಡಿ ತಲುಪಿತ್ತು. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ನಿತ್ಯ 11 ಸಾವಿರ ಕ್ಯೂಸೆಕ್‌ನಿಂದ 15 ಸಾವಿರ ಕ್ಯೂಸೆಕ್‌ವರೆಗೆ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ ನೀರಿನ ಸಂಗ್ರಹ ಕುಸಿಯುತ್ತಿದೆ. ಹತ್ತು ದಿನದಲ್ಲಿ ಸುಮಾರು 11 ಅಡಿಯಷ್ಟು ನೀರು ಖಾಲಿಯಾಗಿದೆ. ಇದೇ ರೀತಿ ಇನ್ನಷ್ಟು ದಿನ ನೀರು ಹರಿಸಿದರೆ ಕುಡಿಯುವ ನೀರಿಗೂ ಸಮಸ್ಯೆಯಾದರೂ ಅಚ್ಚರಿಪಡಬೇಕಿಲ್ಲ.

ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿ ಇದ್ದು, ಪ್ರಸ್ತುತ ಅಣೆಕಟ್ಟೆಯಲ್ಲಿ 102 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇದೀಗ ಜಲಾಶಯಕ್ಕೆ 3491 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಜಲಾಶಯದಿಂದ 13,336 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಇದರಲ್ಲಿ ಕಾವೇರಿ ನದಿಗೆ 1,0720 ಕ್ಯೂಸೆಕ್ ನೀರನ್ನು ಹರಿಬಿಟ್ಟಿದ್ದರೆ, ವಿಶ್ವೇಶ್ವರಯ್ಯ ನಾಲೆಗೆ 2008, ಆರ್‌ಬಿಎಲ್‌ಎಲ್ ನಾಲೆಗೆ 58 ಕ್ಯೂಸೆಕ್, ದೇವರಾಜ ಅರಸು ನಾಲೆಗೆ 400, ಎಂಸಿಸಿಡಬ್ಲ್ಯು ನಾಲೆಗೆ 50 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಲಾಗಿದೆ.
ಪ್ರಸ್ತುತ ಜಲಾಶಯದಲ್ಲಿ 25.423 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಕೆಆರ್‌ಎಸ್‌ನಲ್ಲಿ 124.74 ಅಡಿ ನೀರು ದಾಖಲಾಗಿತ್ತು. ಅಂದು ಜಲಾಶಯಕ್ಕೆ 12,021 ಕ್ಯೂಸೆಕ್ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 6658 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿತ್ತು. ಆ ವೇಳೆ ಜಲಾಶಯದಲ್ಲಿ 49.368 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.
ಮುಂಗಾರು ಮಳೆ ವೈಫಲ್ಯಗೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲೆಯೊಳಗೆ ಕೃಷಿ ಚಟುವಟಿಕೆ ಕುಂಠಿತಗೊಂಡಿದೆ. ಮುಂಗಾರು ಹಂಗಾಮಿಗೆ ನೀರು ನೀಡುವುದಿಲ್ಲವೆಂದು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ನಮ್ಮ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯದ ಕಾವೇರಿ ನೀರು ತಮಿಳುನಾಡಿನತ್ತ ಹರಿಯುತ್ತಿರುವುದನ್ನು ಕಂಡು ಅನ್ನದಾತರು ಮೂಕರೋಧನ ಅನುಭವಿಸುತ್ತಿದ್ದಾರೆ.
ಮತ್ತೊಂದೆಡೆ ಕೆರೆ-ಕಟ್ಟೆಗಳು ನೀರಿಲ್ಲದೆ ಖಾಲಿಯಾಗಿವೆ, ಮಳೆಯೂ ಬರುತ್ತಿಲ್ಲ, ಅಣೆಕಟ್ಟೆಯಲ್ಲೂ ನೀರಿಲ್ಲ. ಇಂತಹ ಸಮಯದಲ್ಲಿ ಕೃಷಿ ಚಟುವಟಿಕೆಯನ್ನು ನಡೆಸಲಾಗದೆ ಅನ್ನದಾತರು ದಿಕ್ಕೆಟ್ಟಿದ್ದಾರೆ. ಕೊಳವೆ ಬಾವಿ ವ್ಯವಸ್ಥೆ ಇರುವವರು ಭತ್ತ, ಕಬ್ಬು ನಾಟಿ ಮಾಡಿದ್ದಾರೆ. ಇನ್ನು ಕೃಷಿ ಇಲಾಖೆಯಿಂದ ಬಿತ್ತನೆ ಬೀಜಗಳನ್ನು ವಿತರಿಸುತ್ತಿಲ್ಲದಿರುವುದರಿಂದ ಹಲವಾರು ರೈತರು ಖಾಸಗಿ ಅಂಗಡಿಗಳಿಂದ ಬಿತ್ತನೆ ಬೀಜಗಳನ್ನು ಖರೀದಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೃಷಿ ಚಟುವಟಿಕೆ ತೀವ್ರ ಹಿನ್ನೆಡೆಯಾಗಿದೆ.












Click it and Unblock the Notifications