ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ
ಕೊಡಗಿನಲ್ಲಿ ಕಿತ್ತಳೆ ಅವನತಿಯತ್ತ ಸಾಗುತ್ತಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸುತ್ತಿರುವಾಗಲೇ ಪೊನ್ನಚ್ಚೆಟ್ಟೀರ ಸುರೇಶ್ ಸುಬ್ಬಯ್ಯ ಅವರು ಕಿತ್ತಳೆ ಬೆಳೆದು ಇತರರಿಗೆ ಮಾದರಿಯಾಗಿದ್ದಾರೆ. ನಗರದ ಹೊರ ವಲಯದ ಇಬ್ನಿವಳವಾಡಿ ಗ್ರಾಮದ ವ್ಯಾಪ್ತಿಯಲ್ಲಿ ಸುಬ್ಬಯ್ಯ ಅವರ ತೋಟವಿದೆ.
ಸುಬ್ಬಯ್ಯ ಅವರ ತೋಟಕ್ಕೆ ಕಾಲಿಡುತ್ತಿದ್ದಂತೆ ಕಿತ್ತಳೆ ಘಮವನ್ನು ಆಸ್ವಾದಿಸಬಹುದು. ನೂರಾರು ಹಣ್ಣುಗಳನ್ನು ಹೊಂದಿರುವ ಗಿಡಗಳು ಕಣ್ಣಿಗೆ ತಂಪು ನೀಡುತ್ತವೆ. ಗಿಡದ ತುಂಬಾ ಇರುವ ಹಣ್ಣುಗಳನ್ನು ಕಿತ್ತು ತಿನ್ನಬೇಕೆನಿಸುತ್ತದೆ. ಸುಮಾರು 13 ಎಕರೆಯಲ್ಲಿ ಸುಬ್ಬಯ್ಯ ಅವರು ಕೊಡಗಿನ ಕಿತ್ತಳೆಯನ್ನು ಬೆಳೆದಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನ ಕಿತ್ತಳೆ ಅವನತಿಯತ್ತ ಸಾಗುತ್ತಿರುವ ಬಗ್ಗೆ ತೋಟಗಾರಿಕಾ ಬೆಳೆಗಾರರಲ್ಲಿ ಆತಂಕ ಉಂಟಾಗಿರುವ ಸಂದರ್ಭದಲ್ಲಿ ಪೊನ್ನಚ್ಚೆಟ್ಟೀರ ಸುರೇಶ್ ಸುಬ್ಬಯ್ಯ ಅವರು ಕೊಡಗಿನ ಕಿತ್ತಳೆಯ ಉತ್ತಮ ಫಸಲು ಪಡೆದು ಇತರರಿಗೆ ಮಾದರಿಯಾಗಿದ್ದಾರೆ.[ಕೊಪ್ಪಳ ರೈತರ ಬಾಯಲ್ಲಿ ಪಪ್ಪಾಯಿ ಜಪ!]
1,400 ಗಿಡಗಳಿವೆ : ಸುಬ್ಬಯ್ಯ ಅವರು ಸುಮಾರು 13 ಎಕರೆ ತೋಟದಲ್ಲಿ 1,400 ಕಿತ್ತಳೆ ಗಿಡಗಳನ್ನು ಬೆಳೆದಿದ್ದಾರೆ. ಒಂದು ಗಿಡದಲ್ಲಿ 700 ರಿಂದ 800 ಹಣ್ಣುಗಳಿವೆ. ವರ್ಷಕ್ಕೆ ಎರಡು ಬಾರಿ ಹಣ್ಣನ್ನು ಕೋಯ್ಲು ಮಾಡಲಾಗುತ್ತದೆ ಎಂದು ಮಾಹಿತಿ ನೀಡುತ್ತಾರೆ ಸುಬ್ಬಯ್ಯ ಅವರು.
ಸುರೇಶ್ ಸುಬ್ಬಯ್ಯ ಅವರ ತಂದೆ 70ರ ದಶಕದಲ್ಲಿ ಕೊಡಗಿನ ಕಿತ್ತಳೆ ಗಿಡಗಳನ್ನು ನಾಟಿ ಮಾಡಿದ್ದರು. ಬಳಿಕ 9 ವರ್ಷಗಳ ಹಿಂದೆ 1,400 ಗಿಡಗಳನ್ನು ನೆಟ್ಟು ತೋಟಗಾರಿಕಾ ಇಲಾಖೆಯ ಸಹಕಾರದಲ್ಲಿ ಒಳ್ಳೆಯ ಕಿತ್ತಳೆ ಬೆಳೆಯನ್ನು ಬೆಳೆಯುತ್ತಿದ್ದಾರೆ ಸುಬ್ಬಯ್ಯ.
ತೋಟಗಾರಿಕೆ ಇಲಾಖೆಯಿಂದ ಬೆಳೆಗಳ ಬಗ್ಗೆ ಕಾಲ-ಕಾಲಕ್ಕೆ ಮಾಹಿತಿ ಪಡೆಯುವುದರ ಜತೆಗೆ, ಉತ್ತಮ ಪೋಷಕಾಂಶ ಹಾಗೂ ಮಿತವಾಗಿ ರಾಸಾಯನಿಕ ಗೊಬ್ಬರವನ್ನು ಹಾಕಲಾಗುತ್ತಿದೆ. ಅಗತ್ಯ ಇದ್ದಾಗ ಔಷಧಿಯನ್ನು ಸಿಂಪರಣೆ ಮಾಡಲಾಗುತ್ತದೆ. 'ಅವರ ಭೂಮಿಗೆ ಅವರೇ ಅವರೇ ವೈದ್ಯರು' ಎನ್ನುತ್ತಾರೆ ಸುರೇಶ್ ಸುಬ್ಬಯ್ಯ.

ಒಂದು ಕೆಜಿ ಕಿತ್ತಳೆಯನ್ನು 25 ರಿಂದ 30 ರೂ.ಗೆ ಕೇಳುತ್ತಾರೆ. ಅದೇ ಮಾರುಕಟ್ಟೆಯಲ್ಲಿ 80 ರೂ.ಗೆ ಮಾರಾಟ ಮಾಡುತ್ತಾರೆ ಎಂದು ಸುಬ್ಬಯ್ಯ ಅತೃಪ್ತಿ ವ್ಯಕ್ತಪಡಿಸುತ್ತಾರೆ. ಕಾಫಿ ತೋಟದಲ್ಲಿ ಕಿತ್ತಳೆ ಮತ್ತು ಕರಿಮೆಣಸನ್ನು ಉಪ ಬೆಳೆಯಾಗಿ ಬೆಳೆಯುವುದರಿಂದ ರೈತರಿಗೆ ನಷ್ಟವಾಗುವುದಿಲ್ಲ ಎಂದು ಸುಬ್ಬಯ್ಯ ಸಲಹೆ ನೀಡುತ್ತಾರೆ.
ಕೊಡಗಿನ ಕಿತ್ತಳೆ ಬೆಳೆ ಅವನತಿಯತ್ತ ಸಾಗುತ್ತಿದೆ. ಇದನ್ನು ಪುನಶ್ಚೇತನಗೊಳಲು ತೋಟಗಾರಿಕೆ ಇಲಾಖೆ ಮುಂದಾಗಿದೆ. ಕೊಡಗಿನ ಕಿತ್ತಳೆ, ಮೈಸೂರಿನ ವೀಳ್ಯದೆಲೆ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿವೆ. ಹಾಗೆಯೇ ಭೌಗೋಳಿಕ ವಿಶೇಷತೆಗೆ ಸಂಬಂಧಿಸಿದಂತೆ ಕೊಡಗಿನ ಕಿತ್ತಳೆ ಮಾರಾಟಕ್ಕೆ ಅಗತ್ಯ 'ನೋಂದಣಿ ಪ್ರಮಾಣ ಪತ್ರ' ಪಡೆಯಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಬಿ.ಆರ್.ಗಿರೀಶ್ ಹೇಳಿದ್ದಾರೆ. [ಚಿತ್ರ ಮಾಹಿತಿ : ಕೊಡಗು ವಾರ್ತಾ ಸೌಧ]












Click it and Unblock the Notifications