ಬೆಂಬಲ ಬೆಲೆಯಡಿ ಸೂರ್ಯಕಾಂತಿ ಖರೀದಿ, ದರ ಎಷ್ಟು?

ಬೆಂಗಳೂರು, ಆಗಸ್ಟ್ 25: ಸೂರ್ಯಕಾಂತಿ ಬೆಳೆದ ರೈತರಿಗೆ ಸಿಹಿಸುದ್ದಿ. ಕರ್ನಾಟಕ ಸರ್ಕಾರ 2024-25ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ, ಗುಣಮಟ್ಟದ ಸೂರ್ಯಕಾಂತಿ ಖರೀದಿಸಲು ಅನುಮತಿಯನ್ನು ನೀಡಿದೆ. ಷರತ್ತಿಗೆ ಒಳಪಟ್ಟು ರೈತರಿಂದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಮಾಡುವ ಕುರಿತು ಆದೇಶಿಸಲಾಗಿದೆ. ಯಾವ-ಯಾವ ಜಿಲ್ಲೆಗಳಲ್ಲಿ ಖರೀದಿ ಮಾಡಲಾಗುತ್ತದೆ ಮತ್ತು ಖರೀದಿ ಸಂಸ್ಥೆಯಾವುದು ಎಂದು ಸಹ ಮಾಹಿತಿ ನೀಡಲಾಗಿದೆ.

ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ, ಬೆಂಗಳೂರು ಇವರು 2024-25ನೇ ಸಾಲಿನ ಕೃಷಿ ಇಲಾಖೆಯ ಅಂಕಿ- ಅಂಶಗಳ ಪ್ರಕಾರ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಂದಾಜು 1.05 ಲಕ್ಷ ಮೆಟ್ರಿಕ್ ಟನ್ ಸೂರ್ಯಕಾಂತಿ ಉತ್ಪಾದನೆಯನ್ನು ನಿರೀಕ್ಷಿಸಲಾಗಿದ್ದು, ಪ್ರಸ್ತುತ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಗದಗ, ಕಲಬುರಗಿ, ಕೊಪ್ಪಳ, ಮೈಸೂರು, ರಾಯಚೂರು, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Karnataka To Purchase Sunflower Under MSP Price List For Farmers

ಕೇಂದ್ರ ಸರ್ಕಾರವು ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಗೆ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ ರೂ. 7,280 ರಂತೆ ಘೋಷಿಸಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯ ಅಧ್ಯಕ್ಷರು, ಚಾಮರಾಜನಗರ ಜಿಲ್ಲೆ ಪ್ರಸ್ತುತ ಮಾರುಕಟ್ಟೆ ಧಾರಣೆ ಪ್ರತಿ ಕ್ವಿಂಟಾಲ್ ಸೂರ್ಯಕಾಂತಿಗೆ ರೂ. 4,500 ರಿಂದ 5,000 ರವರೆಗೆ ಮಾರಾಟ ವಾಗುತ್ತಿರುವುದರಿಂದ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಹಾಗೂ ಮುಂದಿನ ಸಚಿವ ಸಂಪುಟ ಉಪ ಸಮಿತಿಯಲ್ಲಿ ಮಂಡಿಸುವಂತೆ ಕೋರಿದ್ದರು.

ಆದೇಶದ ವಿವರ: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್‌ಗೆ ರೂ. 7,280ರಂತೆ ಗರಿಷ್ಠ 13,210 ಮೆಟ್ರಿಕ್ ಟನ್ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಕೇಂದ್ರ ಸರ್ಕಾರದ ಬೆಂಬಲ ಬೆಲೆ ಮಾರ್ಗಸೂಚಿಗಳನ್ವಯ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಗದಗ, ಕಲಬುರಗಿ, ಕೊಪ್ಪಳ, ಮೈಸೂರು, ರಾಯಚೂರು, ವಿಜಯಪುರ, ವಿಜಯನಗರ ಮತ್ತು ಯಾದಗಿರಿ ಜಿಲ್ಲೆಗಳ ರೈತರಿಂದ ಖರೀದಿಸಲು ಷರತ್ತುಗಳಿಗೊಳಪಟ್ಟು ಅನುಮತಿ ನೀಡಲಾಗಿದೆ.

ಸೂರ್ಯಕಾಂತಿಯನ್ನು ಖರೀದಿಸಲು ನಾಫೆಡ್ ಹಾಗೂ ಎನ್.ಸಿ.ಸಿ.ಎಫ್.ಸಂಸ್ಥೆಯನ್ನು ಕೇಂದ್ರ ಸರ್ಕಾರದ ಖರೀದಿ ಸಂಸ್ಥೆಯನ್ನಾಗಿ ಹಾಗೂ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳಗಾರರ ಮಹಾ ಮಂಡಳಿ ನಿಯಮಿತ, ಬೆಂಗಳೂರು ಈ ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದೆ.

ಈ ಆದೇಶ ಹೊರಡಿಸಿದ ದಿನದಿಂದ ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗದಿಪಡಿಸಿದ್ದು, ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನೂ ಸಹ ಪ್ರಾರಂಭಿಸತಕ್ಕದ್ದು. ಪ್ರತಿ ಎಕರೆಗೆ 3 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 15 ಕ್ವಿಂಟಾಲ್ ಖರೀದಿ ಪ್ರಮಾಣ ನಿಗದಿಪಡಿಸಿ ಖರೀದಿಸಲಾಗುತ್ತದೆ.

ಖರೀದಿ ಕೇಂದ್ರಗಳಲ್ಲಿ ಸೂರ್ಯಕಾಂತಿಯನ್ನು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು NIC ಸಂಸ್ಥೆಯು ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನವನ್ನು ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತೀಕರಿಸಿ, ಬಯೋಮೆಟ್ರಿಕ್ ಮೂಲಕ ಸೂರ್ಯಕಾಂತಿಯನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಲು ಬಳಸತಕ್ಕದ್ದು ಹಾಗೂ NIC ಸಂಸ್ಥೆಯು ಅಭಿವೃದ್ಧಿಪಡಿಸಿರುವ ಸದರಿ ನೋಂದಣಿ ತಂತ್ರಾಂಶವು ಈಗಾಗಲೇ FRUITS ತಂತ್ರಾಂಶದೊಂದಿಗೆ ಸಂಯೋಜಿಸಲಾಗಿದೆ.

FRUITS ದತ್ತಾಂಶದಲ್ಲಿ ರೈತರಿಗೆ ಸಂಬಂಧಿಸಿದ ವಿವರಗಳನ್ನು ಭೂಮಿ, UIDAI ಮತ್ತು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ತಾಳೆ ಮಾಡಿ ವಿವರಗಳನ್ನು ಇಂದೀಕರಿಸಲಾಗಿದೆ. ಸದರಿ ವಿವರಗಳನ್ನು ಬೆಂಬಲ ಬೆಲೆ ಯೋಜನೆ ಯಡಿ ನೋಂದಣಿ ಮಾಡಲು ಸಿದ್ಧಪಡಿಸಿದ ತಂತ್ರಾಂಶಕ್ಕೆ ವಿದ್ಯುನ್ಮಾನ ರೀತಿಯಲ್ಲಿ ಒದಗಿಸಲಾಗುತ್ತದೆ. ಬೆಂಬಲ ಬೆಲೆ ಯೋಜನೆಯಡಿ ನೋಂದಣಿ ಮಾಡಿದ ನಂತರ NIC ತಂತ್ರಾಂಶದಿಂದ ನಾಫೆಡ್ ಹಾಗೂ ಎನ್.ಸಿ.ಸಿ.ಎಫ್, ಸಂಸ್ಥೆಯ ತಂತ್ರಾಂಶಕ್ಕೆ ರೈತರ ನೋಂದಣಿ ಮಾಹಿತಿಯನ್ನು ಒದಗಿಸಲಾಗುವುದು. ನಾಫೆಡ್ ಹಾಗೂ ಎನ್.ಸಿ.ಸಿ.ಎಫ್. ಸಂಸ್ಥೆಯು ತನ್ನ ತಂತ್ರಾಂಶದಲ್ಲಿ ಈ ಮಾಹಿತಿಯನ್ನು ಬಳಸಿ ರೈತರಿಂದ ಸೂರ್ಯಕಾಂತಿಯನ್ನು ಖರೀದಿ ಕೇಂದ್ರಗಳಿಂದ ಖರೀದಿಸತಕ್ಕದ್ದು.

ಖರೀದಿ ಸಂಸ್ಥೆಗಳು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗುವಂತೆ ನಾಫೆಡ್ ಹಾಗೂ ಎನ್.ಸಿ.ಸಿ.ಎಫ್. ಮಾರ್ಗಸೂಚಿಯನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸಧೃಡ ಸಂಸ್ಥೆಗಳ ಮುಖಾಂತರ ಹೊಂದಾಣಿಕೆ ಮಾಡಿಕೊಂಡು ಖರೀದಿಗೆ ಕ್ರಮವಹಿಸತಕ್ಕದ್ದು.

ಖರೀದಿ ಪ್ರಕ್ರಿಯೆಯಲ್ಲಿ ಎಫ್‌.ಎ.ಕ್ಯೂ, ಗುಣಮಟ್ಟದ ಪರಿಶೀಲನೆಗಾಗಿ ಜಿಲ್ಲಾಡಳಿತ ಮಟ್ಟದಲ್ಲಿ ಕೃಷಿ/ ತೋಟಗಾರಿಕೆ ಇಲಾಖೆಗಳಲ್ಲಿ ಲಭ್ಯವಿರುವ ಅಧಿಕಾರಿ/ ಸಿಬ್ಬಂದಿಗಳನ್ನು ಬಳಸಿಕೊಳ್ಳುವುದು, ತರಬೇತಿ ಅವಶ್ಯವಿದ್ದಲ್ಲಿ ಅಂತಹ ಸಿಬ್ಬಂದಿಗಳಿಗೆ ಸೂಕ್ತ ಎಫ್‌.ಎ.ಕ್ಯೂ ಗ್ರೇಡಿಂಗ್ ತರಬೇತಿ ನೀಡಲು ಸಂಬಂಧಪಟ್ಟ ಖರೀದಿ ಸಂಸ್ಥೆಗಳು ಕ್ರಮವಹಿಸತಕ್ಕದ್ದು. ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿಯು ಸಂಬಂಧಪಟ್ಟ ಜಿಲ್ಲೆಯಲ್ಲಿ ಅವಶ್ಯಕತೆಗನುಗುಣವಾಗಿ ಖರೀದಿ ಕೇಂದ್ರಗಳನ್ನು ತೆರೆಯಲು ನಾಫೆಡ್ ಸಂಸ್ಥೆ, ಎನ್.ಸಿ.ಸಿ.ಎಫ್. ಸಂಸ್ಥೆ ಹಾಗೂ ಖರೀದಿ ಏಜೆನ್ಸಿಯೊಂದಿಗೆ ಸಮಾಲೋಚಿಸಿ ನಿರ್ಧರಿಸಿಕೊಂಡು, ಈ ಆದೇಶ ಹೊರಡಿಸಿದ ದಿನಾಂಕದಿಂದ 3 ದಿನಗಳೊಳಗಾಗಿ ಖರೀದಿ ಕೇಂದ್ರಗಳನ್ನು ತೆರೆದು ನೋಂದಣಿ ಕಾರ್ಯ ಪ್ರಾರಂಭಿಸತಕ್ಕದ್ದು ಎಂದು ಹೇಳಿದೆ.

ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳಂತೆ ರೈತರಿಗೆ ನಿಗದಿತ ಅವಧಿಯೊಳಗೆ ಖರೀದಿ ಪ್ರಮಾಣದ ಮೌಲ್ಯವನ್ನು DBT ಮೂಲಕ ಜಮೆ ಆಗುವಂತ ಪಾವತಿ ಮಾಡತಕ್ಕದ್ದು ಹಾಗೂ ಆವರ್ತನಿಧಿ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಸೂರ್ಯಕಾಂತಿ ಖರೀದಿ ಕೇಂದ್ರಗಳಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಸೂರ್ಯಕಾಂತಿ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗ ಆಗದಂತೆ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸತಕ್ಕದ್ದು ಎಂದು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+