Vocal for Local: ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ರೂಪಿಸಿ
ನವದೆಹಲಿ, ಮೇ 15: ಕೊರೊನಾವೈರಸ್ ಸೋಂಕು ಹರಡದಂತೆ ತಡೆಗಟ್ಟಲು ವಿಧಿಸಿರುವ ಲಾಕ್ಡೌನ್ ನಿಂದ ಕೃಷಿ ಕ್ಷೇತ್ರ ಚಟುವಟಿಕೆಗಳಿಗೂ ಭಾರಿ ನಷ್ಟ ಉಂಟಾಗಿದೆ. ನಾಲ್ಕನೇ ಅವಧಿಯ ಲಾಕ್ಡೌನ್ ಆರಂಭವಾಗುವುದಕ್ಕೂ ಮುನ್ನ ಕೇಂದ್ರ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.
ಪ್ರಧಾನಿ ಮೋದಿ ಘೋಷಿಸಿದ 20 ಲಕ್ಷ ಕೋಟಿ ರು ಆರ್ಥಿಕ ಪ್ಯಾಕೇಜ್ ನ ಮೂರನೇ ಭಾಗದ ವಿವರಗಳನ್ನು ಮೇ 15ರಸಂಜೆ 4 ಗಂಟೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್ ನೀಡಿದರು. ಆರ್ಥಿಕ ಪ್ಯಾಕೇಜ್ ನ ಮೂರನೇ ಕಂತಿನಲ್ಲಿ ಕೃಷಿ ಮತ್ತು ಕೃಷಿ ಸಂಬಂಧಿತ ವಿಷಯಗಳಿಗೆ ಆದ್ಯತೆ ನೀಡಲಾಗಿದ್ದು, 11 ಮಹತ್ವದ ಘೋಷಣೆಗಳನ್ನು ಒಳಗೊಂಡಿದೆ.
ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್:
ಸಾವಯವ ಪದ್ಧತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ ನೀಡುವ ಅಗತ್ಯ ಹೆಚ್ಚಾಗಿದೆ. ಕರ್ನಾಟಕದ ರಾಗಿ ಬೆಳೆಗೆ ಜಾಗತಿಕ ಬ್ರ್ಯಾಂಡಿಂಗ್ ಸ್ಪರ್ಶ ಸಿಗಲು ಬೇಕಾದ ಪ್ರೋತ್ಸಾಹವನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದರು. ಕೃಷಿ ಉತ್ಪನ್ನಗಳ ಬ್ರ್ಯಾಂಡಿಂಗ್ ಮತ್ತು ಮಾರ್ಕೆಟಿಂಗ್ ಗೆ ಆದ್ಯತೆ ನೀಡಲಾಗಿದೆ. ಬ್ರ್ಯಾಂಡಿಂಗ್ ಮೂಲಕ ಆಹಾರ ಉತ್ಪನ್ನಗಳ ಮಾರಾಟಕ್ಕೆ ಹೆಚ್ಚಿನ ಒತ್ತು ಸಿಗಲಿದೆ ಎಂದರು.

ವನ ಸಂಪದ ಯೋಜನೆಯಡಿಯಲ್ಲಿ ರಾಜ್ಯಗಳು ಕ್ಲಸ್ಟರ್ ಮೂಲಕ ಅನುಕೂಲ ಪಡೆದುಕೊಳ್ಳಬಹುದು. ಕಾಶ್ಮೀರದ ಕೇಸರಿ, ಬಿಹಾರದ ತಾವರೆ, ಕರ್ನಾಟಕದ ರಾಗಿ, ಆಂಧ್ರದ ಮೆಣಸಿನಕಾಯಿ ಕ್ಲಸ್ಟರ್ ಗಳಾಗುವ ಸಾಮರ್ಥ್ಯ ಹೊಂದಿವೆ. Vocal for Local ಅಭಿಯಾನದಡಿಯಲ್ಲಿ ರಾಗಿಗೆ ಜಾಗತಿಕ ಬ್ರ್ಯಾಂಡಿಂಗ್ ತಂದು ಕೊಡಬಹುದು ಎಂದು ಹೇಳಿದರು.
ಅತ್ಯುತ್ತಮ ಆಹಾರ ಧಾನ್ಯ:
ರಾಗಿಯಂಥ ಕಿರುಧಾನ್ಯ ಅತ್ಯುತ್ತಮ ಆಹಾರ ಧಾನ್ಯವಾಗಿದೆ. ಮಧುಮೇಹಿಗಳಿಗಂತೂ ರಾಗಿ ಅತ್ಯುತ್ತಮ ಪೌಷ್ಠಿಕ ಆಹಾರವಾಗಿದೆ. ರಾಗಿ ಪರಿಸರ ಸ್ನೇಹಿ ಬೆಳೆ. ಅದಕ್ಕೆ ಹೆಚ್ಚಿನ ನೀರು, ಗೊಬ್ಬರ, ಕೀಟನಾಶಕದ ಅಗತ್ಯವಿಲ್ಲ . ರಾಗಿಯ ಹುಲ್ಲಿನಲ್ಲೂ ಅಧಿಕ ಪೋಷಕಾಂಶಗಳಿವೆ. ಒಂದು ಟನ್ ರಾಗಿ ಹುಲ್ಲಿಗೆ ಸಾವಿರಾರು ರುಪಾಯಿ ಬೆಲೆಯಿದ್ದರೆ, ಭತ್ತದ ಹುಲ್ಲಿಗೆ ನೂರಾರು ರುಪಾಯಿ ಮಾತ್ರ ಬೆಲೆ. ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಗೆ ರಾಗಿಯಂಥ ಕಿರುಧಾನ್ಯಗಳೇ ಬೆನ್ನೆಲುಬು. ಕರಾವಳಿ ಭಾಗ ಇನ್ನಿತರೆ ಕೆಲವು ಪ್ರದೇಶಗಳನ್ನು ಹೊರತು ಪಡಿಸಿ, ಬೆಂಗಳೂರು, ಮೈಸೂರು, ಹಾಸನ ಭಾಗಗಳಲ್ಲಿ ರಾಗಿಯನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಅಪೌಷ್ಠಿಕತೆಯ ನಿವಾರಣೆ, ಸುಸ್ಥಿರ ಕೃಷಿಗೆ ಪ್ರೋತ್ಸಾಹ ಮತ್ತು ರೈತರಿಗೆ ನಿಯಮಿತ ಆದಾಯ ದೊರೆಯುಂತೆ ಮಾಡುವ ಪ್ರಯತ್ನದ ಭಾಗವಾಗಿ ರಾಗಿ ವಿತರಣೆಗೆ ಕರ್ನಾಟಕ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ರಾಗಿ ಬೆಳೆಗಾರರು ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications