
ಕೋಡಿಹಳ್ಳಿ ಚಂದ್ರಶೇಖರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ತನಿಖೆ ಎದುರಿಸಲಿ
ಇತ್ತೀಚೆಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಖಾಸಗಿ ಸುದ್ದಿ ವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಅವರು ''ದಿಲ್ಲಿಯ ಐತಿಹಾಸಿಕ ರೈತ ಹೋರಾಟ''ವನ್ನು ಮೊಟಕುಗೊಳಿಸಲು ಡೀಲು ಕುದುರಿಸುವ ಮಾತುಗಳನ್ನಾಡಿರುವ ವಿಡಿಯೋ ಬಂದ ನಂತರ ರಾಜ್ಯ ರಾಷ್ಟ್ರದಾದ್ಯಂತ ರೈತ ಮುಖಂಡರನ್ನು ಕಂಗೆಡಿಸಿದೆ.
Recommended Video
ಹಾಗಾಗಿ ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ದಿಲ್ಲಿಯ ನಾಯಕರಾದ ರಾಕೇಶ್ ಟಿಕಾಯತ್, ಯುದುವೀರ್ ಸಿಂಗ್, ತಮಿಳುನಾಡಿನ ನಲ್ಲಗೌಂಡರ್ ರಾಜ್ಯದ ಪ್ರಮುಖ ರೈತ ಮುಖಂಡರಾದ ಸುರೇಶ್ ಬಾಬು ಪಾಟೀಲ್, ಕೆ.ಟಿ.ಗಂಗಾಧರ್, ಶ್ರೀಮತಿ ಅನುಸೂಯಮ್ಮ, ರಾಜೇಗೌಡ, ಚುಕ್ಕಿ ನಂಜುಂಡಸ್ವಾಮಿ, ಚಿಂತಕರಾದ ಪ್ರೊ ಹಿ.ಶಿ. ರಾಮಚಂದ್ರಗೌಡ, ಪ್ರೊ ರವಿವರ್ಮ ಕುಮಾರ್ ಸೇರಿದಂತೆ ಅನೇಕ ರೈತ ಹೋರಾಟಗಾರರು ಹಾಗೂ ರೈತಪರ ಕಾಳಜಿಯುಳ್ಳ ಮಹನೀಯರು ''ರೈತ ಚಳವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ'' ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆಯಿತು. ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿದ ರೈತ ಮುಖಂಡರು ಕೆಲವು ಆಗ್ರಹಗಳನ್ನು ಮಾಡಿದ್ದಾರೆ.
Breaking: ರೈತ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಕಪ್ಪು ಮಸಿ
ಗೋಷ್ಠಿಯ ಸಾರಾಂಶ
ನಾಡಿನ ರೈತ ಚಳುವಳಿಯ ಬಹುಕಾಲದ ರೈತ ಸತ್ಯಾಗ್ರಹಿಗಳು ನಾವು. ಇದೀಗ ರೈತ ರೈತ ಚಳುವಳಿಯ ಹೆಸರಿನಲ್ಲಿ ನಡೆಯುತ್ತಿರುವ/ನಡೆದಿರುವ ವಿದ್ಯಮಾನಗಳನ್ನು ಕಂಡು ತಲ್ಲಣಗೊಂಡಿದ್ದೇವೆ. ಅದರಲ್ಲೂ ಹಿಂದೆಲ್ಲಾ ನಮ್ಮೊಟ್ಟಿಗೆ ಇದ್ದು ಚಳುವಳಿಯಲ್ಲಿ ಸಕ್ರಿಯರಾಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಪ್ರತ್ಯೇಕ ರೈತ ಸಂಘ ಮಾಡಿಕೊಂಡ ಮೇಲೆ ಅವರ ಬಗ್ಗೆ ಕೆಲ ಆರೋಪಗಳು ಕೇಳಿಬಂದಿದ್ದವಾದರೂ ಯಾವುದಕ್ಕೂ ಸಾಕ್ಷಿ, ಪುರಾವೆಗಳಿಲ್ಲದೆ ಅವರ ಬಗ್ಗೆ ನಾವೇನೂ ಮಾತನಾಡಲಿಲ್ಲ.
ಇದೀಗ ಖಾಸಗಿ ಸುದ್ದಿ ಚಂದ್ರಶೇಖರ್ ಅವರ ಕೆಲವು ಚಟುವಟಿಕೆಗಳನ್ನು ಬಯಲುಮಾಡಿದೆ. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸೋಣವೆನ್ನುವಷ್ಟರಲ್ಲಿ ಸ್ವತಃ ಕೋಡಿಹಳ್ಳಿ ಚಂದ್ರಶೇಖರ್ ಆ ವಿಡಿಯೋದಲ್ಲಿ ಮಾತನಾಡಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆ. ಇದರಿಂದ ರೈತ ಚಳುವಳಿ ಭಾರಿ ಬೆಲೆ ತೆರಬೇಕಾಗುತ್ತದೆ. ಇದು ರೈತ ಕುಲಕ್ಕೆ ಮಾಡಿರುವ ದೊಡ್ಡ ಅಪಮಾನ. ಪ್ರಾಮಾಣಿಕವಾಗಿ ಬದುಕಿದ ನೇಗಿಲ ಯೋಗಿಯ ಅಂತಃಸಾಕ್ಷಿಯನ್ನು ಕಲಕಿದ ಘಟನೆಯಿದು. ಯಾವಕಾರಣಕ್ಕೂ ಯಾವ ಸನ್ನಿವೇಶದಲ್ಲೂ ಇಂಥಃ ಘಟನೆಗಳು ಸಂಭವಿಸಬಾರದೆಂಬುದು ನಮ್ಮೆಲ್ಲರ ಅಪೇಕ್ಷೆಯಾಗಿದೆ ಎಂದು ಹೇಳಿದರು.
BKUನಲ್ಲಿ ಒಡಕು: 'ವಿಭಜನೆ ಮಾಡುವುದು ಸರ್ಕಾರದ ಕೆಲಸ' ಟಿಕಾಯತ್
ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಾದ ಪರಿಸ್ಥಿತಿ ನಮ್ಮ ಮುಂದಿದೆ. ಹಾಗಾಗಿ ಇಂದು ಹಿರಿಯ ಕಿರಿಯ ರೈತ ಮುಖಂಡರು, ರೈತ ಸತ್ಯಾಗ್ರಹಿಗಳು, ರೈತಾಭಿಮಾನಿಗಳು ಮತ್ತು ರೈತರ ಶ್ರೇಯಸ್ಸನ್ನು ಬಯಸುವ ನಾವೆಲ್ಲರೂ ಕೂಡಿ ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಖಾಸಗಿ ವಾಹಿನಿ ಬಿತ್ತರಿಸಿದ ವಿಡಿಯೋ ತುಣುಕಿನಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ಚರ್ಚಿಸಿರುವ, ನಡೆಸಿರುವ ಸಂಭಾಷಣೆ ಬದ್ಧವೋ, ಅಬದ್ಧವೋ ಎಂಬುದು ಸಮಸ್ತ ನಾಡಿನ ಜನತೆಯ ಮುಂದೆ ಬರಬೇಕು. ಸ್ವತಃ ಕೋಡಿಹಳ್ಳಿ ಚಂದ್ರಶೇಖರ್ ಈ ಬಗೆಯ ಸಂಭಾಷಣೆ ನಡೆದಿರುವುದು ಸತ್ಯ ಎಂದು ಒಪ್ಪಿಕೊಂಡಿದ್ದು ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸೂಕ್ತವಾದ ತನಿಖೆ ನಡೆಸಿ ಸತ್ಯವನ್ನು ಬಯಲು ಮಾಡಬೇಕೆಂದು ಕೇಳಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವುಗಳು ಕೆಳಕಂಡ ಒತ್ತಾಯ ಮಾಡುತ್ತಿದ್ದೇವೆ ಎಂದು ಪ್ರಕಟಿಸಿದರು
1. ಕೋಡಿಹಳ್ಳಿ ಚಂದ್ರಶೇಖರ್ ಅವರ ಈ ಸಂಭಾಷಣೆಯಲ್ಲಿ ನಾಡಿನ ರೈತರಷ್ಟೇ ಅಲ್ಲದೆ ಎಲ್ಲರೂ ನೋಡಿದ್ದಾರೆ, ಕೇಳಿದ್ದಾರೆ. ಇದು ಎಲ್ಲರಿಗೂ ನೋವುಂಟುಮಾಡಿದೆ. ಆದ್ದರಿಂದ ಕೋಡಿಹಳ್ಳಿ ಚಂದ್ರಶೇಖರ್ ಅವರು ನಾಡಿನ ಜನತೆಯ ಹಾಗೂ ವಿಶೇಷವಾಗಿ ರೈತರ ಕ್ಷಮೆ ಕೋರಬೇಕು. ಅವರದ್ದೇ ಆದ ಪ್ರತ್ಯೇಕ ರೈತ ಸಂಘ ಮಾಡಿಕೊಂಡಿದ್ದರೂ ಆ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು.
2. ಮಾನ್ಯ ಮುಖ್ಯಮಂತ್ರಿಗಳು - ಕೋಡಿಹಳ್ಳಿ ಚಂದ್ರಶೇಖರ್ ಬರೆದಿರುವ ಪತ್ರವನ್ನು ತುರ್ತಾಗಿ ಪರಿಶೀಲನೆಗೊಳಪಡಿಸಿ ಸೂಕ್ತ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ನಾಡಿನ ಜನತೆಯ ಮುಂದೆ ತರಬೇಕೆಂದು ಒತ್ತಾಯಿಸುತ್ತೇವೆ.
3. ರೈತ ಚಳುವಳಿಯ ಕಾರ್ಯಕರ್ತರು ತಮ್ಮ ಜೀವನದುದ್ದಕ್ಕೂ ಕಷ್ಟಪಟ್ಟು ಪ್ರಾಮಾಣಿಕ ಸಂಪಾದನೆಯಿಂದ ಬದುಕಿದವರು. ಅದು ಕೋಡಿಹಳ್ಳಿ ಚಂದ್ರಶೇಖರ್ ಅವರಿಂದಲೂ ಸಾಧ್ಯವಾಗಿರಬಹುದೆಂದು ಭಾವಿಸಿದ್ದೆವು ಕೂಡಾ. ಖಾಸಗಿ ಟಿವಿ ಬಿತ್ತರಿಸಿದ ಸುದ್ಧಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿರುವುದರಿಂದ ಇಲ್ಲಿಯವರಿಗಿನ ಅವರ ಸಂಪಾದನೆಯ ಎಲ್ಲ ವಿವರಗಳು ಆಸ್ತಿ ಪಾಸ್ತಿಯ ಲೆಕ್ಕವನ್ನು ನಾಡಿನ ಜನರ ಮುಂದಿಡಬೇಕೆಂದು ಒತ್ತಾಯಿಸುತ್ತೇವೆ.
4. ಇದೇ ಸಂದರ್ಭದಲ್ಲಿ ಕೋಡಿಹಳ್ಳಿ ಚಂದ್ರಶೇಖರ್ ಅವರು ದೆಹಲಿಯಲ್ಲಿ ದೀರ್ಘಕಾಲ ನಡೆಯುತ್ತಿದ್ದ ಐತಿಹಾಸಿಕ ರೈತ ಚಳುವಳಿಯನ್ನು ಮುರಿಯಲು ಸಂಚುರೂಪಿಸಿದ್ದರೆಂಬುದು ಸಾಮಾನ್ಯ ಸಂಗತಿಯಲ್ಲ. ಅದೊಂದು ದೇಶದ್ರೋಹಕ್ಕೆ ಸಮನಾದ ಅಪರಾದವಾಗಿದೆ. ಅದು ಹೇಗೆ ಪೂರ್ಣಗೊಂಡಿತೆಂಬುದು ಬೇರೆಯ ವಿಷಯ. ಆದರೆ ಅಂಥದ್ದೊಂದು ವಿಷಯವೇ ಊಹೆಗೆ ನಿಲುಕದಂತದ್ದು. ಇದಕ್ಕಾಗಿ ಚಂದ್ರಶೇಖರ್ ಯಾವ ಬೆಲೆಯನ್ನು ತೆತ್ತರೂ ಅದು ಕಡಿಮೆಯೇ. ಆದರೂ ನಮ್ಮ ಸಲಹೆ ಇಂತಿದೆ. ಕೋಡಿಹಳ್ಳಿ ಅವರು ರೈತ ಚಳುವಳಿ, ರೈತ ಸಂಘ ಎಂದೆಲ್ಲಾ ಇನ್ನು ಮುಂದೆ ಓಡಾಡದೆ ಅವೆಲ್ಲದರಿಂದ ಹೊರಬಂದು ತಮಗೆ ತೋಚಿದ ವ್ಯಾಪಾರ ವ್ಯವಹಾರಗಳಲ್ಲಿ ತೊಡಗಬಹುದು.
5. ಯಾವುದೇ ಅಖಂಡ ಸಂಘಟನೆ ಸುಭದ್ರವಾಗಿಯೂ ನ್ಯಾಯಸಮ್ಮತವಾಗಿಯೂ ಇರುತ್ತದೆ. ಅದರೊಳಗೆ ಅವಕಾಶವಾದಿಗಳು ಸೇರಿಕೊಂಡಾಗ ಛಿದ್ರವಾಗುತ್ತದೆ ಮತ್ತು ಅದರೊಳಗೆ ದುಷ್ಟಶಕ್ತಿಗಳು ಬಂದು ಸೇರಿಕೊಳ್ಳುತ್ತವೆ. ಇದು ರೈತ ಚಳುವಳಿಯ ಇತಿಹಾಸಕ್ಕೂ ಸಂಬಂಧಪಟ್ಟ ವಿಷಯ. ಆದ್ದರಿಂದ ಇನ್ನು ಮುಂದೆ ನಾಡಿನ ಸಮಸ್ಥ ರೈತ ಚಳವಳಿಯ ಕಾರ್ಯಕರ್ತರು ವಿಚಿದ್ರಕಾರಿ ಶಕ್ತಿಗಳನ್ನು ಹೊರಗಟ್ಟಿಬಂದು ಅಖಂಡ ಕರ್ನಾಟಕ ರಾಜ್ಯದ ರೈತಚಳುವಳಿಯನ್ನು ರೂಪಿಸಬೇಕೆಂದು , ರೈತರ ಮೇಲೆ ಎರಗುತ್ತಿರುವ ಘಾತುಕ ಶಕ್ತಿಗಳಿಂದ ರೈತರನ್ನು ಉಳಿಸಿಕೊಡುವ/ಉಳಿಸಿಕೊಳ್ಳುವ ಕೆಲಸ ಮಾಡಬೇಕೆಂದು ಕಳಕಳಿಯ ಮನವಿ ಮಾಡುತ್ತೇವೆ ಎಂದು ಹೇಳಿದರು.