• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೋದಿ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ

|
Google Oneindia Kannada News

ಬೆಂಗಳೂರು, ಜೂನ್ 8: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇತ್ತೀಚೆಗೆ ಹೊರ ತಂದ ಎರಡು ಸುಗ್ರಿವಾಜ್ಞೆಗಳು ಮತ್ತು ಅಗತ್ಯ ವಸ್ತುಗಳ ಕಾಯ್ದೆಯ ತಿದ್ದುಪಡಿಗಳನ್ನು ಈ ಕೂಡಲೇ ರದ್ದುಪಡಿಸುವಂತೆ ಆಗ್ರಹಿಸಿ ಜೂನ್ 10, 2020 ರಂದು ರೈತ ಸಮೂಹ ಪ್ರತಿಭಟನೆಗಿಳಿಯಲಿವೆ.

   ಚಿರಂಜೀವಿಯನ್ನು ನೋಡಿ ಕಣ್ಣಿರಿಟ್ಟ ಅಭಿಮಾನಿಗಳು | Chiranjeevi Sarja|

   ಈ ರೈತ ವಿರೋಧಿ ಅಗತ್ಯ ವಸ್ತುಗಳ ಕಾಯ್ದೆ ಸುಗ್ರಿವಾಜ್ಞೆ ಹಾಗೂ ತಿದ್ದುಪಡಿ ಕಾಯ್ದೆಗಳ ಪ್ರತಿಗಳನ್ನು ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಲು ಕರ್ನಾಟಕ ಪ್ರಾಂತ ರೈತ ಸಂಘ ರಾಜ್ಯದ ರೈತರಿಗೆ ಕರೆ ನೀಡಿದೆ. ಅದೇ ದಿನ ದೇಶದಾದ್ಯಂತ ಅಖಿಲ ಭಾರತ ಕಿಸಾನ್ ಸಭಾದ ನೇತೃತ್ವದಲ್ಲಿ ಭಾರಿ ಪ್ರತಿಭಟನೆಗಳು ನಡೆಯಲಿವೆ.

   MSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘMSP ಹೆಸರಿನಲ್ಲಿ ರೈತರಿಗೆ ದ್ರೋಹವೆಸಗಿದ ಬಿಜೆಪಿ: ರೈತ ಸಂಘ

   ಕೇಂದ್ರ ಸರಕಾರದ ಈ ಕ್ರಮಗಳು ರೈತರು ಹಾಗೂ ಗ್ರಾಮೀಣ ಜನತೆ ಮತ್ತು ಒಟ್ಟಾರೆ ವ್ಯವಸಾಯ ಹಾಗೂ ದೇಶದ ಎಲ್ಲಾ ಗ್ರಾಹಕ ಸಮುದಾಯವನ್ನು ಅಶಕ್ತರನ್ನಾಗಿಸಿ ಹಾಗೂ ಕಾರ್ಪೊರೇಟ್ ಮರ್ಜಿಗೆ ದೂಡುವ ಹುನ್ನಾರ ಹೊಂದಿವೆ ಎಂದು ಕರ್ನಾಟಕ ಪ್ರಾಂತ ರೈತ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ. ಸರ್ಕಾರದ ಈ ನಿರ್ಧಾರಗಳು ಪಕ್ಕಾ, ರೈತರ ಮೇಲಿನ ತೀವ್ರ ಧಾಳಿಗಳಾಗಿವೆ. ಇವು ನವ ಉದಾರವಾದಿ ಆರ್ಥಿಕ ಧೋರಣೆಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುವ ಕಾರ್ಪೊರೇಟ್ ಕಂಪನಿಗಳ ಲೂಟಿಕೋರ ಕ್ರಮಗಳಾಗಿವೆ.

   ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?ಏನಿದು ಎಪಿಎಂಸಿ ಕಾಯಿದೆ ತಿದ್ದುಪಡಿ ಸುಗ್ರೀವಾಜ್ಞೆ? ಅದಕ್ಕೆ ಅಷ್ಟೊಂದು ವಿರೋಧ ಯಾಕೆ?

   ರೈತರು, ಕೃಷಿ ಕೂಲಿಕಾರರು ಹಾಗೂ ಮೀನುಗಾರಿಕೆ, ರೇಷ್ಮೆ ಮುಂತಾದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವವರು, ಕೋವಿಡ್ -19 ಹಾಗೂ ಪೂರ್ವ ಯೋಜನೆ ಇಲ್ಲದ ಏಕಾಏಕಿಯಾಗಿ ಘೋಷಿಸಲಾದ ಲಾಕ್ ಡೌನ್ ಗಳಿಂದಾಗಿ ಅನುಭವಿಸಿರುವ ದೊಡ್ಡ ಆದಾಯ ನಷ್ಟ ದ ಕುರಿತು ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಂಪುಟ ಚಕಾರವೆತ್ತದೇ ಜಾಣ ಕುರುಡುತನ ತೋರುತ್ತಿದೆ. ಸಂಕಷ್ಟದಲ್ಲಿರುವ ರೈತ ಹಾಗೂ ಕೂಲಿಕಾರರು, ಮತ್ತಿತರೆ ವಿಭಾಗಗಳಿಗೆ ಯಾವುದೇ ಆದಾಯದ ಬೆಂಬಲ ನೀಡುವುದಾಗಲಿ ಹಾಗೂ ಅವರ ಸಾಲ ಮನ್ನಾವನ್ನಾಗಲಿ ಮಾಡಲಿಲ್ಲ. ಬದಲಿಗೆ, ಇವರನ್ನು ಮತ್ತಷ್ಟು ವ್ಯಾಪಕ ಲೂಟಿಗೊಳಪಡಿಸುವ ಕ್ರಮಗಳಿಗೆ ದೂಡಿದೆ.

   ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ ಸುಗ್ರಿವಾಜ್ಞೆ

   ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ ಸುಗ್ರಿವಾಜ್ಞೆ

   `ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರಿವಾಜ್ಞೆ 2020' ಹಾಗೂ `ಬೆಲೆ ಖಾತರಿ, ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಒಪ್ಪಂದದ ಸುಗ್ರಿವಾಜ್ಞೆ 2020' ಗಳಿಗೆ ವಿವೇಚನೆರಹಿತವಾಗಿ ಸಚಿವ ಸಂಪುಟ ಅನುಮೋದಿಸಿರುವುದು ಸಂವಿಧಾನದ ಒಕ್ಕೂಟ ತತ್ವಗಳ ಆಶಯಗಳಿಗೆ ವಿರುದ್ಧವಾಗಿದೆ.

   ಈ ಸುಗ್ರಿವಾಜ್ಞೆ ಗಳು ರೈತರನ್ನು, ಕೃಷಿ ವಾಣಿಜ್ಯ ಸಂಸ್ಥೆಗಳ, ದೊಡ್ಡ ವ್ಯಾಪಾರಸ್ಥರ ಮತ್ತು ರಪ್ತುದಾರರ ಮರ್ಜಿಗೀಡು ಮಾಡುತ್ತವೆ. ಅಗತ್ಯ ವಸ್ತುಗಳ ಕಾಯ್ದೆ (ECA) ಯ ತಿದ್ದುಪಡಿಗಳು, ಖಾಸಗಿ ವಹಿವಾಟುದಾರರ ಹಾಗೂ ಕೃಷಿ ವ್ಯವಹಾರ ಸಂಸ್ಥೆಗಳ ಮೇಲಿನ ಎಲ್ಲಾ ನಿರ್ಬಂದಗಳು ಹಾಗೂ ನಿಯಂತ್ರಣಗಳನ್ನು ತೆಗೆದು ಹಾಕಲಿದೆ. ಇದರಿಂದ ಗ್ರಾಹಕರು ಇವರ ಕಾಪೆರ್Çೀರೇಟ್ ಕಂಪನಿಗಳ ಕಾಳಸಂತೆಗೆ ತುತ್ತಾಗಿ ವ್ಯಾಪಕ ಲೂಟಿಗೊಳಗಾಗಲಿದ್ದಾರೆ.

   ರಾಜ್ಯಗಳಿಗೆ ನಿಯಂತ್ರಣವೇ ಇರುವುದಿಲ್ಲ

   ರಾಜ್ಯಗಳಿಗೆ ನಿಯಂತ್ರಣವೇ ಇರುವುದಿಲ್ಲ

   ಕೃಷಿಯು ಸಂವಿಧಾನದ ರಾಜ್ಯ ಪಟ್ಟಿಯ ವಿಷಯವಾಗಿದ್ದರೂ, ಭವಿಷ್ಯದಲ್ಲಿ ಈ ಚಟುವಟಿಕೆಗಳ ಮೇಲೆ ರಾಜ್ಯಗಳಿಗೆ ನಿಯಂತ್ರಣವೇ ಇರುವುದಿಲ್ಲ. ಇದು ದೇಶದ ಒಕ್ಕೂಟವಾದಿ ಸ್ವರೂಪದ ಮೇಲೆ ಮುಂದುವರೆದ ಧಾಳಿಯಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಅಕ್ರೋಶ ವ್ಯಕ್ತಪಡಿಸಿದೆ ಮತ್ತು ಕರ್ನಾಟಕ ಸರ್ಕಾರ ಕೂಡಲೇ ಈ ಕ್ರಮಗಳನ್ನು ಪ್ರತಿರೋಧಿಸುವಂತೆ ಒತ್ತಾಯಿಸಿದೆ.

   ರೈತ ವಿರೋಧಿ ಕಾಯ್ದೆ ಕೈಬಿಡುವಂತೆ ಹಸಿರು ಸೇನೆ ಆಗ್ರಹರೈತ ವಿರೋಧಿ ಕಾಯ್ದೆ ಕೈಬಿಡುವಂತೆ ಹಸಿರು ಸೇನೆ ಆಗ್ರಹ

   ಈ ಕ್ರಮಗಳ ಮೂಲಕ ರೈತರನ್ನು ದುರ್ಬಲ ಗೊಳಿಸಿರುವ ಬಿಜೆಪಿ ಸರ್ಕಾರ, ಭಾರತಕ್ಕೆ 1947 ರಲ್ಲೇ ಸ್ವಾತಂತ್ರ್ಯ ಬಂದರೂ, ರೈತರು ನೆನ್ನೆ ಮಾತ್ರ ವಿಮೋಚಿತರಾಗಿದ್ದಾರೆ ಎಂಬ ಉಡಾಫೆಯ ಹೇಳಿಕೆ ನೀಡಿ, ಸ್ವಾತಂತ್ರ್ಯ ಚಳುವಳಿಗೆ ಅಪಮಾನವೆಸಗಿದೆ. ಈ ಎರಡು ಸುಗ್ರಿವಾಜ್ಞೆ ಗಳನ್ನು ಹಾಗೂ ಅಗತ್ಯ ವಸ್ತುಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೂಡಲೇ ರದ್ದುಪಡಿಸುವಂತೆ ಪ್ರಧಾನ ಮಂತ್ರಿಗಳನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಆಗ್ರಹಿಸುತ್ತದೆ.

   ಎಪಿಎಂಸಿ ಕಾಯ್ದೆಗೆ ವಿರುದ್ಧವಾದ ನಡೆ

   ಎಪಿಎಂಸಿ ಕಾಯ್ದೆಗೆ ವಿರುದ್ಧವಾದ ನಡೆ

   `ಕೃಷಿ ಉತ್ಪನ್ನ ಮಾರಾಟ ಹಾಗೂ ವಾಣಿಜ್ಯ (ಉತ್ತೇಜನ ಮತ್ತು ಬೆಂಬಲ) ಸುಗ್ರಿವಾಜ್ಞೆ 2020, ರಾಜ್ಯ ಕೃಷಿ ಉತ್ಪನ್ನ ಮಾರುಕಟ್ಟೆ ಶಾಸನಗಳಲ್ಲಿ ಹೇಳಲಾದ ಮಾರುಕಟ್ಟೆಗಳ ಪ್ರಾಂಗಣದ ಹೊರಗೆ ರಾಜ್ಜ -ರಾಜ್ಯಗಳ ನಡುವೆ ಹಾಗೂ ರಾಜ್ಯಗಳೊಳಗೆ ಮುಕ್ತ ಮಾರಾಟ ಹಾಗೂ ವಾಣಿಜ್ಯವನ್ನು ಉತ್ತೇಜಿಸಲಿದೆ ಎಂದು ಬಿಜೆಪಿ ಸರ್ಕಾರ ವಾದಿಸುತ್ತಿದೆ. ವಾಸ್ತವವಾಗಿ, ತಮ್ಮ ಆರ್ಥಿಕ ಶಕ್ತಿ ಹಾಗೂ ಇತರ ಸಾಧನಗಳನ್ನು ದುರ್ಬಳಕೆ ಮಾಡಿ, ರೈತರಿಂದ ಕಡಿಮೆ ದರಕ್ಕೆ ಧಾನ್ಯ ಹಾಗೂ ಇತರೆ ಕೃಷಿ ಉತ್ಪನ್ನಗಳನ್ನು ಖರೀದಿಸಿ ಮುಕ್ತವಾಗಿ ಲೂಟಿ ಮಾಡುತ್ತಿದ್ದ ದೊಡ್ಡ ವ್ಯಾಪಾರಸ್ಥರು ಹಾಗೂ ದೊಡ್ಡ ಖರೀದಿದಾರರನ್ನು ನಿಯಂತ್ರಿಸಲು 1960 ಹಾಗೂ 1970 ರ ದಶಕದಲ್ಲಿ ಈ ಎಪಿಎಂಸಿ ಕಾಯ್ದೆಗಳನ್ನು ಪರಿಚಯಿಸಲಾಗಿತ್ತು.

   ಇದೊಂದು ಚಾರಿತ್ರಿಕ ನಡೆಯಾಗಿತ್ತು. ಆದರೇ, ಯಾವಾಗಲೂ ಪರಿಣಾಮಕಾರಿಯಾಗಿ ಇವುಗಳನ್ನು ಜಾರಿಗೆ ತರಲಾಗದಿದ್ದಾಗ್ಯೂ, ಈ ಕಾಯ್ದೆಗಳು ಹರಾಜು ವ್ಯವಸ್ಥೆಯನ್ನು ಪರಿಚಯಿಸಿದ್ದರಿಂದ ಕೃಷಿ ಉತ್ಪನ್ನಗಳ ಖರೀದಿಯನ್ನು ಹೆಚ್ಚು ಸ್ಪರ್ಧಾತ್ಮಕ ಗೊಳಿಸಿದ್ದವು. ಇದೀಗ, ವ್ಯಾಪರಸ್ಥರು ಹಾಗೂ ದೊಡ್ಡ ಖರೀದಿದಾರರಿಗೆ ಮಂಡಿಗಳಾಚೆ ರೈತರಿಂದ ನಿಯಂತ್ರಣ ಮುಕ್ತವಾಗಿ, ನೇರ ಖರೀದಿಗೆ ಅವಕಾಶ ನೀಡುವುದೆಂದರೆ, ಹರಾಜಿಲ್ಲದೇ ಉತ್ಪನ್ನಗಳನ್ನು ದೊಡ್ಡ ವ್ಯಾಪಾರಿಗಳು, ಬಡ ರೈತರಿಂದ ಚೌಕಾಸಿಯಲ್ಲಿ ಲಪಟಾಯಿಸಲು ಬಿಡುವುದು ಎಂದರ್ಥ.

   ರೈತರಿಗೆ ಲಾಭದಾಯಕ ದರ ಮರೀಚಿಕೆ

   ರೈತರಿಗೆ ಲಾಭದಾಯಕ ದರ ಮರೀಚಿಕೆ

   ರೈತರಿಗೆ ಲಾಭದಾಯಕ ದರವೆಂಬುದು ಇನ್ನು ಮುಂದೆ ಬಹುತೇಕ ಮರೀಚಿಕೆಯಾಗಲಿದೆ. ಬೆಂಬಲ ಬೆಲೆ ಇನ್ನು ಮುಂದೆ ಅಸ್ತಿತ್ವ ಕಳೆದುಕೊಳ್ಳಲಿದೆ. ಜಾಗತಿಕ ಮಾರುಕಟ್ಟೆಯ ಏರಿಳಿತಗಳಿಗೆ ತುತ್ತಾಗಿ ಬೆಲೆ ಕುಸಿತದ ಭಾರವು ರೈತನ ಹೆಗಲಿಗೆ ಬೀಳಲಿದ್ದು, ಅದೇ ಉತ್ಪನ್ನಗಳ ಬೆಲೆ ಹೆಚ್ಚಳದ ಸಂದರ್ಭದಲ್ಲಿಯೂ, ಅದರ ಫಲ ಪಡೆಯಲು ಆತನು ವಿಫಲನಾಗುತ್ತಾನೆ. ರೈತರನ್ನು ಸಂಕಷ್ಟಕ್ಕೆ ಸಿಲುಕಿಸುವುದು ಮಾರುಕಟ್ಟೆಯಲ್ಲಿನ ನಿಬರ್ಂದಗಳಲ್ಲ; ಬದಲಾಗಿ ಲಾಭದಾಯಕ ಬೆಲೆಗಳೇ ಇಲ್ಲದೇ ಇರುವ ಕೊಲೆಗಡುಕ ದುಸ್ಥಿತಿ ಎಂಬುದಾಗಿದೆ. ಇದು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸುತ್ತದೆ.

   ಅಗತ್ಯ ವಸ್ತುಗಳ ಕಾಯ್ದೆಗೆ ತಂದಿರುವ ತಿದ್ದುಪಡಿಯು ಏಕದಳ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಹಾಗೂ ಆಲೂಗೆಡ್ಡೆ ಇವುಗಳನ್ನು ಅಗತ್ಯ ಸರಕುಗಳ ಪಟ್ಟಿಯಿಂದ ಹೊರಗಿಡಲಾಗಿರುವುದು, ದೇಶದ ಆಹಾರ ಭದ್ರತೆಗೆ, ಸ್ವಾವಲಂಬನೆಗೆ ದೊಡ್ಡ ಅಪಾಯವನ್ನು ಉಂಟು ಮಾಡಲಿದೆ. ಈಗ ಉಂಟಾಗಿರುವಂತೆ ನಿರ್ದಿಷ್ಟ ಬಿಕ್ಕಟ್ಟಿನ ಸಮಯದಲ್ಲಿ ಈ ಅಗತ್ಯ ವಸ್ತುಗಳ ಕಾಯ್ದೆಯು, ಇಂತಹ ಅಗತ್ಯ ಸರಕುಗಳನ್ನು ವ್ಯಾಪಕವಾಗಿ ದಾಸ್ತಾನು ಮಾಡಿ, ಕಾಳ ಸಂತೆಯ ಮೂಲಕ ಲೂಟಿ ಹೊಡೆಯುವುದನ್ನು ತಡೆಯುವ ಏಕೈಕ ಬಹುಮುಖ್ಯ ಕಾಯ್ದೆಯಾಗಿತ್ತು.

   ದಾಸ್ತಾನು ಮಿತಿ ಹೇರಿಕೆಯಿಂದ ವಿನಾಯ್ತಿ

   ದಾಸ್ತಾನು ಮಿತಿ ಹೇರಿಕೆಯಿಂದ ವಿನಾಯ್ತಿ

   ಸಾಮಾನ್ಯ ಸಮಯದಲ್ಲೂ ಕೂಡ ದೊಡ್ಡ ವ್ಯಾಪಾರಸ್ಥರು ಒಟ್ಟಾಗಿ ಹೆಚ್ಚೆಚ್ಚು ದಾಸ್ತಾನು ಮಾಡುವಂತಹ ದುಷ್ಟ ಕ್ರಮಗಳನ್ನು ಬಳಸಿ ಚಿಲ್ಲರೆ ದರಗಳನ್ನು ಏರಿಕೆ ಮಾಡುತ್ತಿದ್ದದ್ದು ಅಪರೂಪವೇನಾಗಿಲ್ಲ. ಅಗತ್ಯ ವಸ್ತುಗಳ ಕಾಯ್ದೆ ಇಂತಹ ಅಕ್ರಮಗಳನ್ನು ತಡೆಯುವ ಪ್ರಧಾನ ಸಾಧನವಾಗಿತ್ತು. ಯುದ್ಧ, ಕ್ಷಾಮ, ಅಸಾಮಾನ್ಯ ಬೆಲೆ ಏರಿಕೆ ಹಾಗೂ ನೈಸರ್ಗಿಕ ವಿಕೋಪಗಳಂತಹ ಪರಿಸ್ಥಿತಿಯಲ್ಲಿ ಕೃಷಿ ಆಹಾರ ಪದಾರ್ಥಗಳನ್ನು ನಿರ್ಬಂಧಕ್ಕೆ ಒಳಪಡಿಸಬಹುದು ಎಂದು ಸೋಗಿನ ವಾದ ಮಂಡಿಸುವ ಬಿಜೆಪಿ ಸರ್ಕಾರ, ಅದೇ ಉಸಿರಿನಲ್ಲಿ ಇದಕ್ಕೆ ತದ್ವಿರುದ್ಧವಾಗಿ, ರಪ್ತುದಾರರ ರಪ್ತು ಬೇಡಿಕೆಗೆ ಸ್ಥಾಪಿಸಲಾದ ಸಾಮರ್ಥ್ಯಕ್ಕೆ ಯಾವುದೇ ಕುಂದುಂಟಾಗದಂತೆ ದಾಸ್ತಾನು ಮಿತಿ ಹೇರಿಕೆಯಿಂದ ವಿನಾಯ್ತಿ ಹೊಂದಿರುತ್ತದೆ ಎಂದು ಲೂಟಿಕೋರರ ಕಡೆ ತಿರುಗಿ ಕಣ್ಣು ಮಿಟುಕಿಸುತ್ತದೆ.

   ಕೋಲ್ಡ್ ಸ್ಟೋರೆಜ್, ಕೃಷಿ ಮೂಲಸೌಕರ್ಯ ಮತ್ತು ಸಂಸ್ಕರಣ ಕೈಗಾರಿಕೆಗಳಲ್ಲಿ ಬಂಡವಾಳ ಆಕರ್ಷಿಸಲು ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗುತ್ತಿದೆ ಎನ್ನುವ ಸರ್ಕಾರದ ವಾದವೇ ನಿಚ್ಚಳವಾಗಿ, ಇದು ಕೃಷಿ ವ್ಯಾಪಾರಿ ಸಂಸ್ಥೆಗಳು ಹಾಗೂ ಕಾಪೆರ್Çರೇಟ್ ಒಡೆತನಗಳು ದೇಶದ ಕೃಷಿಯನ್ನು ಕಬ್ಜಾ ಮಾಡಿಕೊಳ್ಳುವ ದುರುದ್ದೇಶ ಉಳ್ಳದ್ದು ಎಂಬುದನ್ನು ಎತ್ತಿ ತೋರುತ್ತದೆ. ಇದರ ಜೊತೆಗೆ ಮಾದರಿ ಒಪ್ಪಂದ ಕೃಷಿ ಕಾಯ್ದೆಯು, ಕೃಷಿ ವ್ಯಾಪಾರ ಸಂಸ್ಥೆಗಳ ಬೇಡಿಕೆ ಹಾಗೂ ಅಗತ್ಯಾನುಸಾರ ಉತ್ಪಾದಿಸುವಂತೆ ರೈತರನ್ನು ಒತ್ತಾಯಿಸಿ ಗುಲಾಮತನಕ್ಕೆ ತಳ್ಳಲಿದೆ

   ವೈಜ್ಞಾನಿಕ ಸ್ಟೋರೆಜ್ ಜಾಲದ ಸೌಕರ್ಯ

   ವೈಜ್ಞಾನಿಕ ಸ್ಟೋರೆಜ್ ಜಾಲದ ಸೌಕರ್ಯ

   ರೈತರಿಗೆ ಸುಲಭವಾಗಿ ದಕ್ಕಬಹುದಾದ ವೈಜ್ಞಾನಿಕ ಸ್ಟೋರೆಜ್ ಜಾಲದ ಸೌಕರ್ಯವನ್ನು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ನಿರ್ಮಿಸಿ, ಅವರನ್ನು ರಕ್ಷಿಸುವ ಬದಲು, ಕೇಂದ್ರ ಸರಕಾರ, ಕೋವಿಡ್ ಸಾಂಕ್ರಾಮಿಕ ಭೀತಿಯನ್ನು ಉಪಯೋಗಿಸಿಕೊಂಡು ರೈತರ ಲೂಟಿಗೆ ಅನುವು ಮಾಡುವ ಈ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುತ್ತದೆ.

   `ಬೆಲೆ ಭರವಸೆ, ಕೃಷಿ ಸೇವೆಗಳ ಕುರಿತ ರೈತರ (ಸಶಕ್ತೀಕರಣ ಮತ್ತು ರಕ್ಷಣೆ) ಸುಗ್ರಿವಾಜ್ಞೆ 2020' ಸಂಸ್ಕರಣಾಗಾರರ, ಶೇಖರಣಾದಾರರ, ಸಗಟುದಾರರ, ದೊಡ್ಡ ಚಿಲ್ಲರೆ ವ್ಯಾಪಾರಸ್ಥರ ಹಾಗೂ ರಪ್ತುದಾರರ ಜೊತೆ ಶೋಷಣೆಗೀಡಾಗುವ ಯಾವುದೇ ಭಯವಿಲ್ಲದೇ ವ್ಯವಹರಿಸಲು ರೈತರನ್ನು ಸಶಕ್ತಗೊಳಿಸುತ್ತದೆ ಎಂದು ಬೊಗಳೆ ಬಿಡುತ್ತದೆ.

   ಎಲ್ಲವೂ ಕೃಷಿ ವ್ಯಾಪಾರ ಸಂಸ್ಥೆಗಳ ಲಾಭಕ್ಕಾಗಿ

   ಎಲ್ಲವೂ ಕೃಷಿ ವ್ಯಾಪಾರ ಸಂಸ್ಥೆಗಳ ಲಾಭಕ್ಕಾಗಿ

   ಹಾಗಿದ್ದಾಗಲೂ, ಇದರ ಹಿಂದೆ ಇರುವ ಚಿಂತನೆಯು, ಭೂಮಿ ಕ್ರೋಢೀಕರಣ ಹಾಗೂ ಒಪ್ಪಂದ ಕೃಷಿಯ ಜೊತೆಗೆ ಕಾರ್ಪೊರೇಟ್ ಕಂಪನಿಗಳೇ ಭೂಮಿ ಗುತ್ತಿಗೆ ಪಡೆಯುವಂತೆ ಉತ್ತೇಜಿಸುವುದಾಗಿದೆ. ಮಾರುಕಟ್ಟೆ ಅಸ್ಥಿರತೆಯ ಹೊಣೆಯನ್ನು ರೈತರಿಂದ ಪ್ರಾಯೋಜಕ ಅಂಗಳಕ್ಕೆ ವರ್ಗಾಯಿಸಲಾಗುವುದು ಎಂಬುದು ಕೂಡಾ ಆಧಾರ ರಹಿತವಾಗಿದೆ. ರೈತರನ್ನು ಸಶಕ್ತಗೊಳಿಸುವ ಬದಲಾಗಿ ರೈತರನ್ನೇ ನಿರ್ಮೂಲನೆಗೊಳಿಸಿ ದೊಡ್ಡ ಭೂ ಮಾಲೀಕರ ಹಾಗೂ ಕೃಷಿ ವ್ಯಾಪಾರ ಸಂಸ್ಥೆಗಳ ಲಾಭಕ್ಕೆ ತೊತ್ತಾಗುವಂತೆ ಮಾಡಲಿದೆ.

   ಈ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸುವ ಎಲ್ಲಾ ಅಧಿಕಾರಗಳನ್ನು ಉಪ ವಿಭಾಗಾಧಿಕಾರಿಗಳಿಗೆ ನೀಡಿ ನ್ಯಾಯಾಲಯದ ಅಧಿಕಾರ ಸ್ಥಾನಮಾನಗಳನ್ನು ಒದಗಿಸಿದೆ.

   ರೈತರನ್ನು ಬೆದರಿಸಿ, ಒಕ್ಕಲೆಬ್ಬಿಸಲಾಗುತ್ತಿದೆ

   ರೈತರನ್ನು ಬೆದರಿಸಿ, ಒಕ್ಕಲೆಬ್ಬಿಸಲಾಗುತ್ತಿದೆ

   ದೊಡ್ಡ ಕಾರ್ಪೊರೇಟ್ ಕಂಪನಿಗಳ ಜೊತೆ ವಿವಾದ ಉಂಟಾದ ಬಡ ರೈತನನ್ನು ಆತನ ನ್ಯಾಯಕ್ಕಾಗಿ ಅಧಿಕಾರಿಶಾಹಿ ಮರ್ಜಿಗೆ ಒಳಪಡಿಸಿದೆ. ದೈತ್ಯ ಕಂಪನಿಗಳೆದುರು ಈ ಸಣಕಲು ರೈತ ಗೆಲುವು ಸಾಧಿಸಬಲ್ಲನೆಂಬುದೊಂದು ಅಪಹಾಸ್ಯವಾಗಿದೆ. ದೈತ್ಯ ಕೃಷಿ ವ್ಯಾಪಾರ ಸಂಸ್ಥೆಗಳು ಹಾಗೂ ಕಾರ್ಪೊರೇಟ್ ಶಕ್ತಿಗಳು ರೈತರನ್ನು ಬೆದರಿಸಿ, ಒಕ್ಕಲೆಬ್ಬಿಸಿ ಕಾರ್ಪೊರೇಟ್ ಬೇಸಾಯವನ್ನು ದೃಢವಾಗಿ ಖಾತರಿಪಡಿಸುವರು.

   ಸಶಕ್ತೀಕರಣ, ರಕ್ಷಣೆ, ಬೆಲೆ ಭರವಸೆ ಯು ನೈಜವಾಗಿ ರೈತರ ಹಿತಕ್ಕಾಗಿ ಎಂದಿದ್ದರೇ ಏಕೆ ಸುಗ್ರಿವಾಜ್ಞೆಗಳಲ್ಲಿ ಬೆಲೆ ಮತ್ತು ಕೂಲಿ ಕುರಿತಾಗಿ ನಿರ್ದಿಷ್ಟ ಪ್ರಸ್ತಾಪಗಳಿಲ್ಲ? ಖಾತರಿ ಖರೀದಿ ಹಾಗೂ ಎಲ್ಲಾ ಕೃಷಿ ಕೂಲಿಕಾರರಿಗೆ ದಿನಕ್ಕೆ 600 ರೂ. ಕೂಲಿ ಒಳಗೊಂಡ ಎಲ್ಲಾ ಬೆಳೆಗಳನ್ನು ಉತ್ಪಾದನಾ ವೆಚ್ಚ + ಶೇಕಡಾ 50 ರ ಆಧಾರಿತ ಲಾಭದಾಯಕ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಶಾಸನವನ್ನು ಅಂಗೀಕರಿಸಲು ಯಾಕೆ ತಯಾರಿಲ್ಲವೆಂದು ರೈತ ಸಂಘ ಪ್ರಶ್ನಿಸುತ್ತದೆ.

   ಬಡವರಿಗೆ ತಿಂಗಳಿಗೆ ಹತ್ತು ಸಾವಿರ ರೂ. ಆದಾಯ ಬೆಂಬಲ

   ಬಡವರಿಗೆ ತಿಂಗಳಿಗೆ ಹತ್ತು ಸಾವಿರ ರೂ. ಆದಾಯ ಬೆಂಬಲ

   ಎಲ್ಲಾ ಆದಾಯ ತೆರಿಗೆ ಪಾವತಿಸದ ಬಡವರಿಗೆ ತಿಂಗಳಿಗೆ ಹತ್ತು ಸಾವಿರ ರೂ. ಆದಾಯ ಬೆಂಬಲ ನೀಡಬೇಕೆಂದು, ನರೇಗಾ ಅಡಿಯಲ್ಲಿ 200 ದಿನಗಳ ಕೆಲಸ ಮತ್ತು ಕನಿಷ್ಠ ದಿನಕ್ಕೆ 600 ರೂ. ಆದರೂ ಕೂಲಿ ನೀಡಬೇಕು. ಪಿಎಂ ಕಿಸಾನ್ ಮೊತ್ತವನ್ನು ವಾರ್ಷಿಕ 18000 ರೂ. ಗೆ ಹೆಚ್ಚಿಸಿ, ಗೇಣಿ ರೈತರಿಗೂ ವಿಸ್ತರಿಸಬೇಕು. ಭೂ ಹೀನರ, ಗೇಣಿದಾರರ, ಸಣ್ಣ ಮತ್ತು ಮಧ್ಯಮ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕೆಂದು ರೈತ ಸಂಘ ಪುನರುಚ್ಚರಿಸುತ್ತದೆ.

   ಕಾರ್ಪೊರೇಟ್ ಲೂಟಿಯನ್ನು ಹಾಗೂ ವಿದೇಶಿ ನೇರ ಹೂಡಿಕೆ ಅವಲಂಬನೆಯ ಬದಲಾಗಿ, ಸರ್ಕಾರವು ರೈತರ ಹಾಗೂ ಕೃಷಿ ಕೂಲಿಕಾರರ ಸಹಕಾರವನ್ನು ಉತ್ತೇಜಿಸುವ ಮೂಲಕ ಸಹಕಾರಿ ಕೃಷಿ ಖಾತರಿಪಡಿಸುವ ಕಾನೂನನ್ನು ಅಂಗೀಕರಿಸಬೇಕು. ರೈತ ಸಂಘಟನೆಗಳು ಅಥವಾ ರಾಜ್ಯಗಳು ಇವ್ಯಾವುದರ ಜೊತೆ ಚರ್ಚಿಸದೇ ಸುಗ್ರಿವಾಜ್ಞೆಗಳ ಜಾರಿ ಮೂಲಕ ರೈತ ವಿರೋಧಿಯಾದಂತಹ ಇಂತಹ ಕ್ರಮಗಳ ಹುನ್ನಾರವನ್ನು ಎಲ್ಲಾ ಘಟಕಗಳು ಬಯಲುಗೊಳಿಸಿ, ವ್ಯಾಪಕವಾಗಿ ರೈತರನ್ನು ಅಣಿನೆರಸಿ, ಪ್ರತಿಭಟನೆಗಳನ್ನು ನಡೆಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಕರೆ ನೀಡುತ್ತದೆ.

   English summary
   Karnataka Pranta Raitha Sangha, Kisan Sabha to protest against Modi government's Agricultural policies and latest amendment to the Agro related laws.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   Desktop Bottom Promotion