
ಬಾಗಲಕೋಟೆ: ಇನ್ನೆರಡು ದಿನಗಳಲ್ಲಿ ಕಬ್ಬು ಬೆಳೆಗೆ ಸರಕಾರದಿಂದ ಸೂಕ್ತ ಬೆಲೆ ನಿರ್ಧಾರ
ಬಾಗಲಕೋಟೆ, ಅಕ್ಟೋಬರ್ 19 : ಪ್ರಸಕ್ತ ಹಂಗಾಮಿಗೆ ಕಬ್ಬು ಬೆಳೆಗೆ ಸೂಕ್ತ ಬೆಲೆ ನಿರ್ಧರಿಸುವ ಕುರಿತಂತೆ ಸದ್ಯದಲ್ಲಿಯೇ ಸರಕಾರದಿಂದ ನಿರ್ಧಾರ ಹೊರಬೀಳಲಿದ್ದು, ರೈತರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‍ಕುಮಾರ ರೈತರಿಗೆ ಸಲಹೆ ನೀಡಿದರು.
ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಬುಧವಾರ ಜರುಗಿದ ಕಬ್ಬು ಬೆಳೆಗಾರ ರೈತರು ಹಾಗೂ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರೈತರು ಬೆಳೆದ ಕಬ್ಬಿಗೆ ಸೂಕ್ತ ಬೆಲೆ ನೀಡುವ ಕುರಿತು ರಾಜ್ಯ ಸರಕಾರದಿಂದ ಇನ್ನು ಎರಡು ದಿನಗಳಲ್ಲಿ ನಿರ್ಧಾರ ಹೊರಬೀಳಲಿದೆ. ನಂತರ ಅಕ್ಟೋಬರ್ 25 ರಂದು ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮತ್ತು ರೈತರ ಜೊತೆಗೆ ಸಭೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಸಲಹೆ ನೀಡಿದರು.
ಅಡಿಕೆ ಬೆಳೆಗೆ ಎಲೆ ಚುಕ್ಕಿ ರೋಗ: ರಾಜ್ಯ ಬಿಜೆಪಿ ನಾಯಕರಿಂದ ಕೇಂದ್ರ ಕೃಷಿ ಸಚಿವರ ಭೇಟಿ
ವಿವಿಧ ತಾಲೂಕಿನ ಕಬ್ಬು ಬೆಳೆಗಾರರು ಎಫ್‍ಆರ್‌ಟಿ ದರ ಹೇಳದೇ ಪ್ರತಿ ಕ್ವಿಂಟಾಲ್‍ಗೆ 3500 ರೂ.ಗಳನ್ನು ಘೋಷಿಸಬೇಕು. ಹಿಂದಿನ ಸಾಲಿನಲ್ಲಿ ಎಫ್‍ಆರ್‌ಟಿ ಹೊರತುಪಡಿಸಿ ಹೆಚ್ಚುವರಿಯಾಗಿ ಪ್ರತಿ ಕ್ವಿಂಟಾಲ್‍ಗೆ 300 ರೂ.ಗಳ ಘೋಷಣೆ ಮಾಡಬೇಕು. ಪ್ರಸಕ್ತ ಹಂಗಾಮಿಗೆ ಎಲ್ಲ ಸಕ್ಕರೆ ಕಾರ್ಖಾನೆಗಳು ಒಂದೇ ದರ ನೀಡಬೇಕು. ದರ ಘೋಷಣೆ ಹಾಗೂ ಹಳೆಯ ಬಾಕಿ ಪಾವತಿಸಿದ ನಂತರವೇ ಕಾರ್ಖಾನೆ ಪ್ರಾರಂಭಿಸುವಂತೆ ಜಿಲ್ಲಾಧಿಕಾರಿಗಳಲ್ಲಿ ಒಕ್ಕೊರಲಾಗಿ ಮನವಿ ಮಾಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕಳೆದ ಸಾಲಿನಲ್ಲಿ ಬಾಕಿ ಹಣ ಪಾವತಿಸುವ ಕುರಿತು ಕ್ರಮವಹಿಸಲಾಗುವುದು. ಸರಕಾರದಿಂದ ದರ ನಿಗದಿ ಬಗ್ಗೆ ನಿರ್ಧಾರ ಹೊರ ಬೀಳುವವರೆ ರೈತರು ಕಾಯಬೇಕು. ಯಾವುದೇ ರೀತಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರದಂತೆ ನಡೆದುಕೊಳ್ಳಬೇಕು. ನಿಮ್ಮ ನಿರ್ಧಾರವನ್ನು ಆಯುಕ್ತರ ಗಮನಕ್ಕೆ ತರಲಾಗುತ್ತದೆ. ಜಿಲ್ಲಾಡಳಿತ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕಾನೂನಿನಡಿ ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಆಹಾರ ಇಲಾಖೆಯ ಉಪನಿರ್ದೇಶಕ ಚನ್ನಬಸಪ್ಪ ಕೊಡ್ಲಿ, ಜಮಖಂಡಿ ಉಪವಿಭಾಗಾಧಿಕಾರಿ ಸಿದ್ದು ಹುಲ್ಲೊಳ್ಳಿ, ತಹಶೀಲ್ದಾರ ವಿನಯಕುಮಾರ ಪಾಟೀಲ ಸೇರಿದಂತೆ ರೈತ ಮುಖಂಡರಾದ ಬಸವಂತಪ್ಪ ಕಾಂಬಳೆ, ನಾಗೇಶ ಸೋರಗಾಂವಿ, ಮುತ್ತಣ್ಣ ಗೌಡರ, ಶಿವನಗೌಡ ಪಾಟೀಲ ಉಪಸ್ಥಿತರಿದ್ದರು.