ಕೊಬ್ಬರಿ ಬೆಲೆ ಕುಸಿತ; ಪ್ರೋತ್ಸಾಹಧನ ಘೋಷಿಸಿದ ಸರ್ಕಾರ
ಬೆಂಗಳೂರು, ಜುಲೈ 13; ಬೆಲೆ ಕುಸಿತದ ಹಿನ್ನಲೆಯಲ್ಲಿ ಕಂಗಾಲಾಗಿದ್ದ ಕೊಬ್ಬರಿ ಬೆಳೆಗಾರರ ನೆರವಿಗೆ ಕರ್ನಾಟಕ ಸರ್ಕಾರ ಧಾವಿಸಿದೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆಯ ಜೊತೆಗೆ ರಾಜ್ಯ ಸರ್ಕಾರವು ಪ್ರೋತ್ಸಾಹಧನವನ್ನು ಘೋಷಣೆ ಮಾಡಿದೆ.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯ ಕಲಾಪದಲ್ಲಿ ಈ ಕುರಿತು ಘೋಷಣೆ ಮಾಡಿದ್ದಾರೆ. ಬುಧವಾರದಿಂದಲೇ ಜಾರಿಗೆ ಬರುವಂತೆ ಕ್ವಿಂಟಾಲ್ ಕೊಬ್ಬರಿಗೆ 1,250 ರೂ. ಪ್ರೋತ್ಸಾಹಧನವನ್ನು ಘೋಷಣೆ ಮಾಡಲಾಗಿದೆ.

ಕೊಬ್ಬರಿ ಬೆಲೆ ಕುಸಿತದ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣ, ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಸೇರಿದಂತೆ ಅನೇಕರು ಬೆಳೆಗಾರರ ನೆರವಿಗೆ ಬರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು.
ಸಚಿವ ಶಿವಾನಂದ ಪಾಟೀಲ್ ಉತ್ತರ ನೀಡಿ, "ಬುಧವಾರದಿಂದ ಜಾರಿಗೆ ಬರುವಂತೆ ಉಂಡೆ ಕೊಬ್ಬರಿಗೆ ಕ್ವಿಂಟಾಲ್‌ಗೆ 1,250 ರೂ. ಪ್ರೋತ್ಸಾಹ ಧನವನ್ನು ರಾಜ್ಯ ಸರ್ಕಾರ ನೀಡಲಿದೆ. ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 11,750 ರೂ. ಜೊತೆಗೆ ಇದು ಸೇರಲಿದೆ" ಎಂದು ಹೇಳಿದರು.
ಕೇಂದ್ರಕ್ಕೆ ಕೋರಿಕೆ; ಸಚಿವರು ತಮ್ಮ ಉತ್ತರದಲ್ಲಿ, "ಕೇಂದ್ರ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿ ಮಾಡುವ ಪ್ರಮಾಣ ಹೆಚ್ಚಿಸಬೇಕು, ಖರೀದಿ ಅವಧಿ ವಿಸ್ತರಣೆ ಮಾಡುವಂತೆ ಕೋರಲಾಗಿದೆ. ಅವಧಿ ವಿಸ್ತರಣೆ ಮಾಡಿದ ನಂತರದ ಅವಧಿಯಲ್ಲಿ ನೋಂದಣಿಯಾಗುವ ರೈತರಿಗೂ ಸಹ ಘೋಷಿತ ಬೆಂಬಲ ಬೆಲೆ, ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ನೀಡಲಾಗುತ್ತದೆ" ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರ ಕೊಬ್ಬರಿಗೆ 11,750 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಕೊಬ್ಬರಿಗೆ ಘೋಷಣೆ ಮಾಡಿದೆ. ಇದರ ಜೊತೆಗೆ ರಾಜ್ಯ ಸರ್ಕಾರದ 1,250 ರೂ. ಪ್ರೋತ್ಸಾಹ ಧನ ಸಿಗಲಿದೆ. ಕೇಂದ್ರ ನಫೆಡ್ ಮೂಲಕ ರಾಜ್ಯದ ಏಜೆನ್ಸಿಯಾದ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ ಮಂಗಳವಾರದ ತನಕ 45,038 ಟನ್ ಕೊಬ್ಬರಿ ಖರೀದಿ ಮಾಡಿದೆ.
ರಾಜ್ಯದಲ್ಲಿ ಕಳೆದ ಆರ್ಥಿಕ ವರ್ಷದ ಮುಂಗಾರು ಹಂಗಾಮಿನಲ್ಲಿ ತುಮಕೂರು, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ, ಮಂಡ್ಯ, ಮೈಸೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 6.43 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 22.06 ಲಕ್ಷ ಟನ್ ತೆಂಗು, ಕೊಬ್ಬರಿ ಉತ್ಪಾದನೆಯಾಗಿದೆ ಎಂದು ಸದನಕ್ಕೆ ಸಚಿವರು ಮಾಹಿತಿ ನೀಡಿದ್ದಾರೆ.
ವಿಧಾನಸಭೆಯಲ್ಲಿ ಚರ್ಚೆ; ವಿಧಾನಸಭೆ ಕಲಾಪದಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸದಸ್ಯರು ಉಂಡೆ ಕೊಬ್ಬರಿ ದರ ಇಳಿಕೆ ಕುರಿತು ಸರ್ಕಾರದ ಗಮನ ಸೆಳೆದಿದ್ದರು. ದರ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಸರ್ಕಾರ ಬರಬೇಕು ಎಂದು ಒತ್ತಾಯಿಸಿದ್ದರು.
ಜೆಡಿಎಸ್ ಶಾಸಕರು ನಿಯಮ 69ರ ಅಡಿ ವಿಷಯವನ್ನು ಪ್ರಸ್ತಾಪಿಸಿದ್ದರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ. ಕುಮಾರಸ್ವಾಮಿ, "ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 11 ಸಾವಿರ ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಲಾಗಿದೆ. ರಾಷ್ಟ್ರೀಯ ಸಹಕಾರ ಮಾರುಕಟ್ಟೆ ಮಹಾಮಂಡಳ (ನಾಫೆಡ್) ಮೂಲಕ ಖರೀದಿಯೂ ನಡೆಯುತ್ತಿದೆ. ಆ ಬಳಿಕವೂ ದರ ಕುಸಿತವಾಗಿದೆ" ಎಂದು ಹೇಳಿದ್ದರು.
ಎಚ್. ಡಿ. ರೇವಣ್ಣ ಇದಕ್ಕೆ ಧ್ವನಿಗೂಡಿಸಿ,"13 ಜಿಲ್ಲೆಗಳಲ್ಲಿ ಕೊಬ್ಬರಿ ಬೆಳೆಗಾರರು ಇದ್ದಾರೆ. ರಾಜ್ಯ ಸರ್ಕಾರ ಬೆಂಬಲ ಬೆಲೆ ಹೆಚ್ಚಿಸದಿದ್ದರೆ ರೈತರೊಂದಿಗೆ ಅಹೋರಾತ್ರಿ ಧಣಿ ಮಾಡುತ್ತೇವೆ. ಕೊಬ್ಬರಿ ತಂದು ವಿಧಾನಸೌಧದ ಆವರಣದಲ್ಲಿ ಸುರಿಯುತ್ತೇವೆ" ಎಂದು ಎಚ್ಚರಿಕೆ ನೀಡಿದ್ದರು.












Click it and Unblock the Notifications