ಭತ್ತ ಬೆಳೆಗಾರರ ಗಮನಕ್ಕೆ; ಭತ್ತದ ಬೆಳೆಯಲ್ಲಿ ರಾಸಾಯನಿಕ ಗೊಬ್ಬರಗಳ ನಿರ್ವಹಣೆ
ಕರ್ನಾಟಕ ರಾಜ್ಯ ಕೃಷಿ ಇಲಾಖೆ ಕಾಲಕಾಲಕ್ಕೆ ರೈತರಿಗೆ ಸಲಹೆ ನೀಡುತ್ತಿದೆ. ಅದರ ಭಾಗವಾಗಿಯೇ ಇಂದಿನಿಂದ ಮುಂದಿನ ಹದಿನೇಳು ದಿನಗಳ ಅವಧಿಯಲ್ಲಿ ಭತ್ತ ಬೆಳೆಗಾರರು ಏನೆಲ್ಲಾ ಮಾಡಬೇಕೆಂಬ ವೈಜ್ಞಾನಿಕ ಮಾಹಿತಿ ಇಲ್ಲಿ ನೀಡಲಾಗಿದೆ.
ಭತ್ತದಲ್ಲಿ ಹಲವಾರು ಹೆಚ್ಚು ಇಳುವರಿ ಕೊಡುವ ತಳಿಗಳು ಬಳಕೆಯಲ್ಲಿವೆ. ಇವು ರಾಸಾಯನಿಕ ಗೊಬ್ಬರಗಳನ್ನು ಹೆಚ್ಚು ಸಮರ್ಪಕವಾಗಿ ಉಪಯೋಗಿಸಿಕೊಂಡು ಯಾವುದೇ ಸ್ಥಳೀಯ ತಳಿಗಿಂತ ಅಧಿಕ ಇಳುವರಿ ನೀಡಬಲ್ಲವು. ಆದರೆ ಬೇಸಾಯ ಕ್ರಮಗಳನ್ನು ಸರಿಯಾದ ರೀತಿಯಲ್ಲಿ ಅನುಸರಿಸದೇ ಕೇವಲ ರಸಗೊಬ್ಬರಗಳಿಂದ ಮಾತ್ರವೇ ಇಳುವರಿಯನ್ನು ಹೆಚ್ಚಿಸಲು ಸಾಧ್ಯವಿರುವುದಿಲ್ಲ.
ಇದರ ಪ್ರಕಾರ ಒಂದು ಪ್ರದೇಶದಲ್ಲಿ ಬರುವ ಇಳುವರಿಯು ಹೆಚ್ಚಾಗಿ ಆ ಪ್ರದೇಶದಲ್ಲಿ ಇರುವ ತೆನೆಗಳ ಸಂಖ್ಯೆಯನ್ನೇ ಅವಲಂಬಿಸಿದೆ. ತೆನೆಗಳು ಸರಿಯಾದ ರೀತಿಯಲ್ಲಿ ಬರಬೇಕಾದಲ್ಲಿ ಸಾರಜನಕದ ಪೂರೈಕೆ ಅವಶ್ಯಕ. ಆದ್ದರಿಂದ ಭತ್ತದ ಬೆಳೆ ನಿರ್ವಹಣೆಯಲ್ಲಿ ಪ್ರತಿ ಪೈರಿನಲ್ಲೂ ಹೆಚ್ಚು ಇಲುಕುಗಳು ಬೆಳೆಯುವಂತೆ ಮಾಡುವುದು ಮುಖ್ಯವಾಗಿದೆ.

ಒಂದು ಎಕರೆಗೆ ನಾವು ನೀಡಬೇಕಾದ ಸಾರಜನಕದ ಪ್ರಮಾಣವು ಪೋಲಾಗದಂತೆ ಪೂರ್ಣವಾಗಿ ಬೆಳೆಗೆ ಲಭ್ಯವಾಗುವುದು ಅವಶ್ಯಕವಾದರೂ ಸಹ ಸಾರಜನಕದ ಅಂಶವು ಮುಖ್ಯವಾಗಿ 4 ಸಂದರ್ಭದಲ್ಲಿ ಪೋಲಾಗುತ್ತದೆ. ಅವುಗಳೆಂದರೆ..
1) ಹರಿದು ಹೋಗುವುದು.
2) ಮರಳು ಮಿಶ್ರಿತ ಮಣ್ಣುಗಳಲ್ಲಿ ಇಂಗಿ ಹೋಗುವುದು.
3) ಯೂರಿಯಾ ಗೊಬ್ಬರವನ್ನು ಮಣ್ಣಿನ ಮೇಲೆ ಉದುರಿಸಿದಾಗ ಅದರಲ್ಲಿ ಸ್ವಲ್ಪ ಭಾಗ ಅಮೋನಿಯಾ ಸಾರಜನಕವಾಗಿ ರೂಪಾಂತರ ಹೊಂದಿ ಆವಿಯಾಗುವುದು.
4) ನೈಟ್ರೇಟ್ ರಹಿತವಾಗುವುದು.
ಅದಕ್ಕಾಗಿ ಸಾರಜನಕವನ್ನು ಬೆಳೆಗೆ ನೀಡುವಾಗ ಅದರ ಪ್ರತಿ ಕೆ.ಜಿ. ಸಾರಜನಕದಿಂದಲೂ ಬರುವ ಉತ್ಪತ್ತಿಯ ಕಡೆಗೆ ಗಮನ ಹರಿಸಿ ಭತ್ತದ ಬೆಳೆಗೆ ಕೊಡಬೇಕಾದ ಸಾರಜನಕ ರಸಗೊಬ್ಬರವನ್ನು ಒಂದೇ ಬಾರಿ ಕೊಡುವುದರ ಬದಲಾಗಿ ಎರಡು ಮೂರು ಸಲ ಕೊಡುವುದರಿಂದ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಬೆಳೆಗೆ ಬೇಕಾದಷ್ಟು ಪ್ರಮಾಣದಲ್ಲಿ ಸಾರಜನಕಾಂಶವನ್ನು ಒದಗಿಸಿದಂತಾಗುವುದರ ಜೊತೆಗೆ ಪೋಲಾಗುವುದನ್ನೂ ಸಹ ಕಡಿಮೆ ಮಾಡಬಹುದು. ಈ ರೀತಿ ಎರಡು ಮೂರು ಬಾರಿ ಕೊಡುವುದರಿಂದ ಪೈರೆಲ್ಲವೂ ಒಂದೇ ಸಮನಾಗಿ ಏರು ಪೇರಿಲ್ಲದೇ ಬೆಳೆಯಲು ಸಾಧ್ಯವಾಗುತ್ತದೆ.
ಭತ್ತದ ಬೆಳೆಗೆ ಎರಡು ಬಾರಿ ಅಂದರೆ ಬೆಳವಣಿಗೆ ಕಾಲದಲ್ಲಿ ಮತ್ತು ತೆನೆ ಬರುವುದಕ್ಕೆ ಮುಂಚಿತವಾಗಿ ಸಾರಜನಕಾಂಶವು ಅತ್ಯಗತ್ಯವಾಗಿರಬೇಕು. ಜೊತೆಗೆ ಮಣ್ಣಿನ ಗುಣ ಮತ್ತು ತಳಿಗಳನ್ನು ಅವಲಂಬಿಸಿ ಕೊಡಬೇಕಾದ ಸಾರಜನಕದ ಪ್ರಮಾಣ ಮತ್ತು ಕಾಲವನ್ನು ನಿರ್ಧರಿಸಬೇಕಾಗುತ್ತದೆ.
ಭತ್ತದ ಇಳುವರಿ ಹೆಚ್ಚಿಸಬೇಕಾದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ತೆನೆಗಳ ಸಂಖ್ಯೆ, ಪ್ರತಿ ತೆನೆಯಲ್ಲಿನ ಕಾಳುಗಳ ಸಂಖ್ಯೆ ಮತ್ತು ಪ್ರತಿ ಕಾಳು ಜೊಳ್ಳಾಗದೆ ಗಟ್ಟಿ ಕಾಳಾಗಿರುವುದನ್ನು ಅವಲಂಭಿಸಿರುತ್ತದೆ. ಅದರಂತೆ ಒಂದು ಬೆಳೆಯಲ್ಲಿನ ಗರಿಷ್ಟ ತೆನೆಗಳ ಸಂಖ್ಯೆಯನ್ನು ವೃದ್ಧಿಸಲು ಆಧಾರವಾಗಿರುತ್ತದೆ. ಅದಕ್ಕಾಗಿ ಪ್ರತಿ ಪ್ರದೇಶದ ಅಥವಾ ತಾಕಿನಲ್ಲಿ ಇಲುಕುಗಳು ಬರುವ ಸಮಯದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾರಜನಕವನ್ನು ಒದಗಿಸುವುದು ಬಹುಮುಖ್ಯ.

ಭತ್ತದ ಬೆಳೆಗೆ ಸಾರಜನಕ ಒದಗಿಸುವ ಸಮಯ ಮತ್ತು ಪ್ರಮಾಣವನ್ನು ನಿರ್ಧರಿಸಲು ಗಮನಿಸಬೇಕಾದ ಅಂಶಗಳೆಂದರೆ...
1. ಪೈರಿನ ಬೆಳೆವಣಿಗೆಯ ಪ್ರಾರಂಭಿಕ ಹಂತದಲ್ಲಿ ಸಾರಜನಕವನ್ನು ಒದಗಿಸುವುದರಿಂದ ಇಲುಕುಗಳು ಚೆನ್ನಾಗಿ ಬರುತ್ತವೆ.
2. ತಡವಾಗಿ ಸಾರಜನಕವನ್ನು ಒದಗಿಸುವುದರಿಂದ ಇಲುಕಿನ ಬೆಳವಣಿಗೆಯಾಗುವುದಿಲ್ಲ. ಇದರಿಂದ ಬರುವ ತೆನೆಗಳಲ್ಲಿ ಮಾತ್ರ ಸರಿಯಾದ ಪ್ರಮಾಣದಲ್ಲಿ ಕಾಳು ಕಟ್ಟುತ್ತದೆ.
3. ತಡವಾಗಿ ಮತ್ತು ತೆನೆ ಬರುವುದಕ್ಕೆ ಮುಂಚಿತವಾಗಿ ಹೆಚ್ಚಿನ ಸಾರಜನಕ ಒದಗಿಸುವುದು ಸರಿಯಾದ ಪದ್ಧತಿ ಆಗುವುದಿಲ್ಲವಾದ್ದರಿಂದ ಬೆಳೆಯಲ್ಲಿ ಇಳುವರಿ ಹೆಚ್ಚಾಗಲಾರದು.
ಭತ್ತದ ಬೆಳೆಗೆ ಸಾರಜನಕದ ಮಹತ್ವ
ಬೆಳೆಯ ಬೆಳವಣಿಗೆಯ ಎಲ್ಲಾ ಹಂತಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಸಾರಜನಕ ಒದಗುವಂತೆ ಮಾಡುವುದು. ಒದಗಿಸಿದ ಸಾರಜನಕಾಂಶದಿಂದ ಗರಿಷ್ಟ ಪ್ರಮಾಣದಲ್ಲಿ ಉತ್ಪತ್ತಿ ಪಡೆಯುವುದು.
ಇಂತಹ ಅಂಶಗಳನ್ನಾಧರಿಸಿ ಸಂಶೋಧನಾ ಕ್ಷೇತ್ರಗಳಲ್ಲಿ ನಡೆಸಿದ ಪ್ರಯೋಗಗಳ ಆಧಾರದ ಮೇಲೆ ಬೆಳೆಗೆ ಕೊಡಬೇಕಾದ ಸಾರಜನಕದ ಪ್ರಮಾಣ ಮತ್ತು ವಿಧಾನಗಳನ್ನು ನಿರ್ಧರಿಸುವ ಅಂಶಗಳನ್ನು ರೈತ ಬಾಂಧವರು ಗಮನಿಸಬೇಕು.
ಮೇಲುಗೊಬ್ಬರ ನೀಡುವುದು: ನಾಟಿ ಮಾಡಿದ ಎರಡೂವರೆ ಮತ್ತು ಮೂರು ವಾರಗಳ ನಂತರ ಮತ್ತು ತೆನೆ ಬರುವುದಕ್ಕೆ ಒಂದು ವಾರ ಮೊದಲು ಮೇಲುಗೊಬ್ಬರವನ್ನು ನೀಡುವುದು.
ಮೇಲುಗೊಬ್ಬರ ಕೊಡುವಾಗ 24 ಘಂಟೆಗಳಿಗೆ ಮುಂಚೆ ಗದ್ದೆಯಲ್ಲಿರುವ ನೀರನ್ನೆಲ್ಲಾ ಬಸಿದು ಹೊರ ತೆಗೆದು, ಮೇಲುಗೊಬ್ಬರ ಕೊಟ್ಟ 24 ಘಂಟೆಗಳ ನಂತರ ಮತ್ತೆ ನೀರು ಕೊಡುವುದು.
ಮಣ್ಣಿನಲ್ಲಿ ಸಾರಜನಕ ಕಡಿಮೆಯಾಗಿದ್ದಾಗ: ನಾಟಿ ಮಾಡುವ ಸಮಯದಲ್ಲಿ ಹೆಚ್ಚು ಸಾರಜನಕವನ್ನು ಒದಗಿಸಬೇಕು.
ಮಣ್ಣಿನಲ್ಲಿ ಸಾಕಷ್ಟು ಸಾರಜನಕಾಂಶವಿರುವಾಗ: ನಾಟಿ ಮಾಡುವ ಸಮಯದಲ್ಲಿ ಕಡಿಮೆ ಪ್ರಮಾಣದಲ್ಲಿ ಒದಗಿಸಿ, ನಂತರ ಮೇಲುಗೊಬ್ಬರವಾಗಿ ಸಾರಜನಕವನ್ನು ಕೊಡುವುದು.
ಮರಳು ಮಿಶ್ರಿತ ಮಣ್ಣಾದಲ್ಲಿ: ಯಾವ ಸಮಯದಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಒದಗಿಸಬಾರದು.
ಕಡಿಮೆ ಇಲುಕುಗಳನ್ನು ಕೊಡುವ ತಳಿಗೆ ಹಾಗೂ ಅಲ್ಪಾವಧಿ ತಳಿಗಳಿಗೆ: ಬೆಳೆಯ ಪ್ರಾರಂಭದಲ್ಲಿ ಹೆಚ್ಚು ಪ್ರಮಾಣದಲ್ಲಿ ಸಾರಜನಕ ಒದಗಿಸುವುದು.
ದೀರ್ಘಾವಧಿ ತಳಿಗಳಿಗೆ: ಹೆಚ್ಚು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡುವುದು.
ಬೆಳೆ ಪ್ರಾರಂಭದಲ್ಲಿ ತಂಪಾದ ಹವಾಗುಣವಿದ್ದಲ್ಲಿ: ಹೆಚ್ಚು ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡುವುದು.
ಬೆಳೆಯಲ್ಲಿ ದುಂಡಾಣು ರೋಗದ ಸೂಚನೆ ಕಂಡು ಬಂದಾಗ: ಕಡಿಮೆ ಪ್ರಮಾಣದ ಹೆಚ್ಚು ಕಂತುಗಳಲ್ಲಿ ಸಾರಜನಕವನ್ನು ಮೇಲುಗೊಬ್ಬರವಾಗಿ ಕೊಡಬೇಕು.
ಹೆಚ್ಚು ವಯಸ್ಸಾದ ಪೈರನ್ನು ನಾಟಿ ಮಾಡಿದಾಗ: ಕಡಿಮೆ ಅಂತರದಲ್ಲಿ ನಾಟಿ ಮಾಡಿ, ನಾಟಿ ಸಮಯದಲ್ಲಿ ಹೆಚ್ಚು ಸಾರಜನಕ ಕೊಡುವುದು.
ಸಾರಜನಕವನ್ನು ಉಪಯೋಗಿಸುವ ರೂಪ: ಅಮೋನಿಯಂ ಸಲ್ಫೇಟ್ ಅಥವಾ ಯೂರಿಯಾ ರೂಪದಲ್ಲಿ ಒದಗಿಸುವುದು. ಸಿಂಪರಣೆ ಮೂಲಕ ಸಾರಜನಕ ಒದಗಿಸುವುದು:
ಸಿಂಪರಣೆ ಮೂಲಕ ಸಾರಜನಕವನ್ನು ಬತ್ತದ ಬೆಳೆಗೆ ಒದಗಿಸುವುದು ಹೆಚ್ಚಿನ ವಿಸ್ತೀರ್ಣದಲ್ಲಿ ಕಷ್ಟ ಸಾಧ್ಯವಾದರೂ ಸಹ ಇದರಿಂದ ಹಲವು ಉಪಯೋಗಗಳಿವೆ. ಮರಳು ಮಿಶ್ರಿತ ಮಣ್ಣಿನ ಜಮೀನುಗಳಲ್ಲಿ ಸಾರಜನಕದ ಗೊಬ್ಬರಗಳು ಭೂಮಿಗೆ ಇಂಗಿ ಹೋಗುವುದೇ ಹೆಚ್ಚು. ಮತ್ತು ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೂ ಸಹ ಸಾರಜನಕದ ಗೊಬ್ಬರಗಳನ್ನು ಚೆಲ್ಲಿದಾಗ ಹೆಚ್ಚಿನ ಪ್ರಮಾಣದಲ್ಲಿ ಹರಿದು ಹೊರ ಹೋಗುತ್ತದೆ. ಇಂತಹ ಸಂದರ್ಭಗಳಲ್ಲಿ ಸಿಂಪರಣೆ ಮೂಲಕ ಸಾರಜನಕ ಒದಗಿಸುವುದು ಪರಿಣಾಮಕಾರಿಯಾಗುತ್ತದೆ.
ರಂಜಕ ಮತ್ತು ಪೊಟ್ಯಾಷ್‍ಗಳ ಬಳಕೆ:
ಇದುವರೆಗೂ ತಿಳಿಸಿದಂತೆ ಸಾರಜನಕವನ್ನು ಪೈರು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಲು ಮಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ರಂಜಕವೂ ಇರಲೇ ಬೇಕಾಗುತ್ತದೆ. ಅದರಂತೆ ರಂಜಕದ ಕೊರತೆ ಇರುವ ಕಡೆ ಸಾರಜನಕ ಮತ್ತು ಪೊಟ್ಯಾಷ್‍ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಿದರೂ ಸಹ ನಿರೀಕ್ಷಿಸಿದಷ್ಟು ಉಪಯೋಗ ಪಡೆದುಕೊಳ್ಳಲಾಗುವುದಿಲ್ಲ. ಭತ್ತದ ಪೈರು ಪ್ರಾರಂಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಂಜಕವನ್ನು ಬಳಸುತ್ತದೆ. ಪೈರು ಸಾರಜನಕ ಮತ್ತು ರಂಜಕಕ್ಕಿಂತಲೂ ಮರಳು ಮಣ್ಣಿನ ಪ್ರದೇಶಗಳಲ್ಲಿ ಹೆಚ್ಚು ಪೊಟ್ಯಾಷಿಯಂ ಬಳಸುತ್ತದೆ. ಇದನ್ನು ಬೆಳೆಯ ಪ್ರಾರಂಭದಲ್ಲಿಯೇ ರಂಜಕದ ಜೊತೆಯಲ್ಲಿ ಒದಗಿಸಬೇಕು.
Recommended Video
ಒಟ್ಟಿನಲ್ಲಿ ಬೆಳೆಗೆ ಕೊಡಬೇಕಾದ ರಂಜಕ ಮತ್ತು ಪೊಟ್ಯಾಷಿಯಂ ಪ್ರಮಾಣವನ್ನು ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ನಿರ್ಧರಿಸುವುದು ಉತ್ತಮ.
ಹೆಚ್ಚಿನ ಮಾಹಿತಿಗಾಗಿ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಅಥವಾ ಕೃಷಿ ಆಯುಕ್ತಾಲಯದಲ್ಲಿರುವ ಸಹಾಯವಾಣಿ ಕೇಂದ್ರದ ಬಿ.ಎಸ್.ಎನ್.ಎಲ್ ದೂರವಾಣಿ ಸಂಖ್ಯೆ: 1800 425 3553 ಅಥವಾ ಕಿಸಾನ್ ಕರೆ ಕೇಂದ್ರದ ದೂರವಾಣಿ ಸಂಖ್ಯೆ: 1800 180 1551ಗೆ ಉಚಿತ ಕರೆ ಮಾಡಬಹುದು.
(ಕರ್ನಾಟಕ ರಾಜ್ಯ ಕೃಷಿ ಇಲಾಖೆ)












Click it and Unblock the Notifications