Farmers Suicide: ಕರ್ನಾಟಕದಲ್ಲಿ ಕಳೆದ 3 ದಿನಗಳಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಕರ್ನಾಟಕದಲ್ಲಿ ಕಳೆದ ಮೂರು ದಿನಗಳಲ್ಲಿ ಮಂಗಳವಾರ (ಮೇ 23) ಒಂದೇ ದಿನ ಸಾಲಬಾಧೆಯಿಂದ ಮೈಸೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಉಡುವೆಪುರ ಗ್ರಾಮದ ರೈತ ಯಾಲಕ್ಕಿಗೌಡ (62) ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ಎರಡು ವರ್ಷದಿಂದ ಬೆಳೆ ಕೈಕೊಟ್ಟಿದ್ದು, ಬೆಳೆಹಾನಿಯಿಂದಾಗಿ ಮಾಡಿಕೊಂಡಿದ್ದ ಸಾಲ ಕಟ್ಟಲು ಆಗದೆ ತೀವ್ರ ಹತಾಶೆಗೊಳಗಾಗಿದ್ದರು.

ಇದೇ ವೇಳೆ ಸಾಲಗಾರರು ಮನೆ ಬಳಿ ಬಂದು ಸಾಲಕ್ಕಾಗಿ ಪೀಡಿಸುತ್ತಿದ್ದರು. ಇದರಿಂದ ಮನನೊಂದ ರೈತ ಯಾಲಕ್ಕಿಗೌಡ ಆತ್ಮಹತ್ಯೆ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಕೃಷಿಗೆ ಸಂಬಂಧಿಸಿದ ಕಾರ್ಯಗಳಿಗಾಗಿ ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿಯ ಐಓಬಿ ಬ್ಯಾಂಕ್‌ನಲ್ಲಿ 2 ಲಕ್ಷ ರೂ. ಮತ್ತು ತಮ್ಮದೇ ಗ್ರಾಮದಲ್ಲಿ 2 ಲಕ್ಷ ರೂ. ಕೈಗಡ ಸಾಲ ಪಡೆದಿದ್ದರು. ಇದೀಗ ಸಾಲದ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೈಕೊಟ್ಟ ಬೆಳೆಗಳು
ಹುಣಸೂರು ತಾಲ್ಲೂಕಿನ ಮೃತ ಯಾಲಕ್ಕಿಗೌಡ ತಮ್ಮ ಜಮೀನಿನಲ್ಲಿ ಹೊಗೆಸೊಪ್ಪು, ಶುಂಠಿ ಬೆಳೆ ಬೆಳೆದಿದ್ದರು. ಆದರೆ, ಬೆಳೆ ನಷ್ಟದಿಂದಾಗಿ ಸಾಲ ತೀರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸಾಲಬಾಧೆಯನ್ನು ತಾಳಲಾರದೆ ಮನೆಯಲ್ಲಿ ಯಾರೂ ಇಲ್ಲದಾಗ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾದಗಿರಿಯಲ್ಲಿ ರೈತ ಅಮರಣ್ಣ ಕುಂಬಾರ ಆತ್ಮಹತ್ಯೆ
ಇನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ ರೈತನೊಬ್ಬ ಸಾಲಬಾಧೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ರೈತನನ್ನು ಅಮರಣ್ಣ ಕುಂಬಾರ (60) ಎಂದು ಗುರುತಿಸಲಾಗಿದೆ.
ಬ್ಯಾಂಕ್ ಹಾಗೂ ಖಾಸಗಿ ಸೇರಿದಂತೆ ಹಲವು ಕಡೆ ಸುಮಾರು 10 ಲಕ್ಷ ರೂ. ಸಾಲ ಮಾಡಿದ್ದ ರೈತ ಅಮರಣ್ಣ ಕುಂಬಾರ, ಸಾಲ ತೀರಿಸಲಾಗದೇ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.
8 ಎಕರೆ ಖಾಸಗಿಯವರಿಗೆ ಬರೆದು ಕೊಟ್ಟಿದ್ದ
ರೈತ ಅಮರಣ್ಣ ಕುಂಬಾರ ಕಳೆದ ಎರಡು ವರ್ಷಗಳಿಂದ ಬೇಸಾಯ ಮಾಡಿದ್ದ ಯಾವುದೇ ಬೆಳೆಗಳು ಸರಿಯಾಗಿ ಕೈಗೆ ಸಿಗದ ಹಿನ್ನೆಲೆಯಲ್ಲಿ ಜಮೀನಿನ ಮೇಲೆ ಬ್ಯಾಂಕ್‌ಗಳಲ್ಲಿ ಮಾಡಿದ್ದ ಸಾಲ ತೀರಿಸಲು ಪರದಾಡುತ್ತಿದ್ದನು. ಬಳಿಕ ತನ್ನ 8 ಎಕರೆ ಜಮೀನನ್ನು ಖಾಸಗಿಯವರಿಗೆ ಸಾಲಕ್ಕೆ ಬರೆದು ಕೊಟ್ಟಿದ್ದಾನೆ.
ಈ ಬಗ್ಗೆ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿಗೂ ತಿಳಿಸಿರಲಿಲ್ಲ. ಆದರೆ, ಜಮೀನು ತನ್ನ ಕೈಬಿಟ್ಟು ಹೋಗುವ ಭಯದಲ್ಲಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಸುರಪುರ ಪಿಎಸ್ಐ ಕೃಷ್ಣ ಸುಬೇದಾರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಘಟನೆ ಕುರಿತು ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications