ಮಂಡ್ಯ: ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆದ ಪ್ರಗತಿಪರ ರೈತ
ಮಂಡ್ಯ, ಅಕ್ಟೋಬರ್ 13: ಮಂಡ್ಯ ಜಿಲ್ಲೆಯಲ್ಲಿ ರೈತರು ಕಬ್ಬು ಮತ್ತು ಭತ್ತವನ್ನು ಬೆಳೆಯುತ್ತಾ ಬಂದಿದ್ದಾರೆ. ಇದೆರಡು ಬೆಳೆಯನ್ನು ಬೆಳೆಯ ಬೇಕಾದರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬೇಕಾಗುತ್ತದೆ. ಈ ಬಾರಿ ಮಳೆಯ ಕೊರೆತೆಯಿಂದಾಗಿ ಬೆಳೆ ಬೆಳೆಯುವುದು ಕಷ್ಟವಾಗಿದೆ.
ಇಂತಹ ಸಂದರ್ಭದಲ್ಲಿ ಬಹುತೇಕ ರೈತರು ನೀರಿಲ್ಲದ ಕಾರಣದಿಂದ ಬೆಳೆ ಬೆಳೆಯಲಾಗದೆ ಆಕಾಶ ನೋಡುವಂತಾಗಿದೆ. ಆದರೆ ಕೆ.ಆರ್.ಪೇಟೆ ತಾಲೂಕಿನ ವಿಠಲಾಪುರದ ಪ್ರಗತಿಪರ ರೈತ ಸುಬ್ಬೇಗೌಡರು ಮಾತ್ರ ಭಿನ್ನವಾಗಿದ್ದಾರೆ. ಇದಕ್ಕೆ ಕಾರಣವೂ ಇದೆ. ಅವರು ಕಬ್ಬು, ಭತ್ತಕ್ಕೆ ಜೋತು ಬೀಳದೆ ವಾಣಿಜ್ಯ ಬೆಳೆಗಳತ್ತ ಮುಖ ಮಾಡಿ ಯಶಸ್ವಿಯಾಗಿದ್ದಾರೆ.

ಸಾಮಾನ್ಯವಾಗಿ ವಾಣಿಜ್ಯ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ನೀರು ಕೇಳುವುದಿಲ್ಲ, ಹೀಗಾಗಿ ಬರದ ಸಂದರ್ಭದಲ್ಲಿ ನಿಭಾಯಿಸಬಹುದಾಗಿದೆ. ಅಷ್ಟೇ ಅಲ್ಲದೆ ಒಂದು ವರ್ಷ ಫಸಲು ಸಿಗದಿದ್ದರೂ ಮತ್ತೊಂದು ವರ್ಷಕ್ಕೆ ಫಸಲು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿಯೇ ಸುಬ್ಬೇಗೌಡರು ಮಲೆನಾಡಿನಲ್ಲಿ ಬೆಳೆಯುವ ಚಕ್ಕೆ. ಲವಂಗ, ಜಾಯಿಕಾಯಿ, ಏಲಕ್ಕಿ, ಕರಿಮೆಣಸು, ಜಾಪತ್ರೆ, ಕಾಫಿ ಸೇರಿದಂತೆ ಅಡಿಕೆ, ತೆಂಗು, ಸಪೋಟ, ಸೀಬೆ, ರೇಷ್ಮೆ, ನೇರಳೆ, ಪನ್ನೇರಳೆ, ಕೋಕೋ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಈ ಬೆಳೆಯನ್ನು ಕೂಡ ನೈಸರ್ಗಿಕವಾಗಿ ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುತ್ತಿರುವುದು ಖುಷಿಯ ವಿಚಾರವಾಗಿದೆ. ಇವರು ಮೇಲಿನ ಎಲ್ಲ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾ ಬಂದಿದ್ದು ಕೃಷಿಯಲ್ಲಿ ಲಾಭವನ್ನು ಪಡೆಯುತ್ತಿದ್ದಾರೆ. ಸಾಮಾನ್ಯವಾಗಿ ಈ ವ್ಯಾಪ್ತಿಯ ರೈತರು ಕಬ್ಬು, ಭತ್ತ, ಹೂವುಗಳನ್ನು ಬೆಳೆಯುತ್ತಾರೆ. ಈ ಬೆಳೆಗಳನ್ನು ಬೆಳೆಯಬೇಕಾದರೆ ನೀರು ಅಗತ್ಯವಾಗಿದೆ. ನೀರಿಲ್ಲಾಂದ್ರೆ ಆ ವರ್ಷ ಬೆಳೆಯನ್ನು ಬೆಳೆಯಲು ಸಾಧ್ಯವಾಗುವುದಿಲ್ಲ.
ತೋಟಗಾರಿಕಾ ಬೆಳೆಗಳತ್ತ ಒಲವು
ತೋಟಗಾರಿಕಾ ಬೆಳೆಗಳು ಹಾಗಿಲ್ಲ. ಒಂದು ಬಾರಿ ಬಂಡವಾಳ ಹಾಕಿದರೆ ನಂತರ ಅವುಗಳ ನಿರ್ವಹಣೆ ಮಾಡಿದರೆ ಸಾಕು. ವರ್ಷಕ್ಕೊಮ್ಮೆ ಫಸಲು ನೀಡಿ ರೈತರಿಗೆ ಆಸರೆಯಾಗುತ್ತದೆ. ಇವತ್ತು ಸುಬ್ಬೇಗೌಡರು ಮಲೆನಾಡಿನಲ್ಲಿ ಬೆಳೆಯುವ ಬೆಳೆಗಳನ್ನು ತಮ್ಮ ಊರಿನಲ್ಲಿ ಬೆಳೆದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಸುಬ್ಬೇಗೌಡರು ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿಯಾಗಿದ್ದವರು. ಅವರಿಗೆ ಕೃಷಿಯಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಅದಮ್ಯ ಉತ್ಸಾಹವಿತ್ತು. ಅದರಲ್ಲೂ ಮಲೆನಾಡಿನಲ್ಲಿ ಬೆಳೆಯಬಹುದಾದ ಎಲ್ಲ ರೀತಿಯ ಬೆಳೆಗಳನ್ನು ತಮ್ಮ ಜಮೀನಿನಲ್ಲಿ ಬೆಳೆಯಲೇ ಬೇಕೆಂಬ ಹಠಕ್ಕೆ ಬಿದ್ದರು.
ಸಾವಯವ ಕೃಷಿಗೆ ಹೆಚ್ಚಿನ ಆದ್ಯತೆ
ನಿವೃತ್ತಿಯ ನಂತರ ತಾಯಿ ವೆಂಕಟಮ್ಮ ಅವರ ಸಹಾಯದಿಂದ ವಿಠಲಾಪುರದ ಬಳಿ 25 ಎಕರೆ ಕೃಷಿ ಭೂಮಿಯನ್ನು ಖರೀದಿಸಿದ ಸುಬ್ಬೇಗೌಡರು ಕಳೆದ 20 ವರ್ಷಗಳಿಂದ ತಮ್ಮ ಪುತ್ರ ವಿ.ಎಸ್.ಜಯತೀರ್ಥ ಹಾಗೂ ಸೊಸೆ ರಮ್ಯಾ ಅವರ ಸಹಕಾರ ಪಡೆದುಕೊಂಡು ಕೃಷಿ ಚಟುವಟಿಕೆಗಳನ್ನು ಮಾಡುತ್ತಾ ಬಂದಿದ್ದಾರೆ. ಇವರು ಖರೀದಿಸುವಾಗ ಈ ಭೂಮಿ ಬರಡಾಗಿತ್ತು. ಆದರೀಗ ಅವರು ಅದನ್ನು ಬಂಗಾರವಾಗಿಸಿದ್ದಾರೆ. ಇದೆಲ್ಲವೂ ಸುಲಭವಾಗಿ ಸಾಧ್ಯವಾಗಿಲ್ಲ. ಇದರ ಹಿಂದೆ ಕಠಿಣ ಪರಿಶ್ರಮವಿದೆ ಎನ್ನುವುದು ಅಷ್ಟೇ ಸತ್ಯ.
ಇವರು ಸಾವಯವ ಕೃಷಿಗೆ ಆದ್ಯತೆ ನೀಡಿದ್ದು, ಹನಿನೀರಾವರಿ ಅಳವಡಿಸಿಕೊಂಡು ಬೆಳೆಗಳಿಗೆ ನೀರುಣಿಸುತ್ತಾರೆ. ಜಮೀನಿನ ಮಧ್ಯದಲ್ಲಿ ಅಲ್ಲಲ್ಲೇ ಸಾಲು ಗುಂಡಿಯನ್ನು ತೆಗೆಸಿ ತೋಟದಲ್ಲಿ ಬೀಳುವ ಗುದಮೊಟ್ಟೆ, ರೆಂಬೆಕೊಂಬೆಗಳು, ಮರಗಿಡಗಳ ಎಲೆಗಳು ಹಾಗೂ ಮುಳ್ಳಿನ ಗಿಡಗಳನ್ನು ಗುಂಡಿಯೊಳಗೆ ಹಾಕಿ ಮಲ್ಚಿಂಗ್ ಮಾಡಿ ಭೂಮಿಯೊಳಗೆ ಕರಗುವಂತೆ ಮಾಡುತ್ತಾರೆ.

ರಾಸಾಯನಿಕ ಬಳಕೆಯಿಂದ ದೂರ
ಸಂಪೂರ್ಣವಾಗಿ ಕರಗಿದ ಬಳಿಕ ಆ ಗೊಬ್ಬರದ ಜೊತೆಗೆ ಸಗಣಿ ಹಾಗೂ ಗಂಜಲದ ಮಿಶ್ರಣದಿಂದ ಜೀವಾಮೃತ ತಯಾರಿಸಿ ನೈಸರ್ಗಿಕವಾಗಿ ಬೇಸಾಯ ಮಾಡುತ್ತಾ ರಾಸಾಯನಿಕ ಬಳಕೆಯನ್ನು ದೂರ ಮಾಡಿ ಸಾವಯವ ಕೃಷಿ ಪದ್ಧತಿಗೆ ಒತ್ತು ನೀಡಿದ್ದು ಇದರಿಂದ ಇಳುವರಿಯನ್ನು ಪಡೆಯಲು ಸಾಧ್ಯವಾಗಿದ್ದು, ಲಾಭ ಮತ್ತು ಆರೋಗ್ಯಕರ ಬೆಳೆಯನ್ನು ಪಡೆಯಲು ಸಾಧ್ಯವಾಗಿದೆ.
ತಮ್ಮ ತೋಟದ ಸುತ್ತಲೂ ಬದುಗಳಲ್ಲಿ ತಡೆಗೋಡೆಯ ಮಾದರಿಯಲ್ಲಿ 2ಸಾವಿರಕ್ಕೂ ಹೆಚ್ಚು ತೇಗದ ಗಿಡಗಳನ್ನು ನೆಟ್ಟು ಬೆಳೆಸಿರುವ ಸುಬ್ಬೇಗೌಡರು ತೆಂಗು ಹಾಗೂ ಅಡಿಕೆ ಗಿಡಗಳನ್ನು ಬೆಳೆಸಿದ್ದಾರೆ. ಅಡಿಕೆ ಮರಗಳಿಗೆ ಕರಿಮೆಣಸಿನ ಬಳ್ಳಿಗಳನ್ನು ಹಬ್ಬಿಸಿದ್ದು ಅವುಗಳಿಂದ ಉತ್ತಮ ಫಸಲು ಪಡೆಯುತ್ತಿದ್ದಾರೆ.
ಸುಬ್ಬೇಗೌಡರನ್ನು ಅರಸಿ ಬಂದ ಪ್ರಶಸ್ತಿಗಳು
ಇದರ ಜೊತೆಗೆ ಏಲಕ್ಕಿ, ಜಾಯಿಕಾಯಿ, ಪತ್ರೆ, ಲವಂಗ, ಲವಂಗದ ಹೂವು, ಜಾಪತ್ರೆ, ಕೋಕೋ, ಸಪೋಟ, ಸೀಬೆ, ಮೋಸಂಬಿ, ಹಲಸು, ಜಂಬುನೇರಳೆ ಮರಗಳನ್ನು ಬೆಳೆದಿದ್ದಾರೆ. ಜಮೀನಿನಲ್ಲಿ ಮರಗಿಡಗಳನ್ನು ಬೆಳೆಸುವ ಮೂಲಕ ಮಲೆನಾಡಿನ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ವಿಠಲಾಪುರದ ಬಳಿ 25ಎಕೆರೆ ಭೂಮಿಯಲ್ಲಿ ಮಿಶ್ರಬೆಳೆ ಪದ್ಧತಿಯಲ್ಲಿ ತೋಟಗಾರಿಕೆ ಬೇಸಾಯ ಮಾಡುತ್ತಿದ್ದರೆ, ಚಿಕ್ಕಗಾಡಿಗನಹಳ್ಳಿಯ ಬಳಿ 4ಎಕರೆ ಭೂಮಿಯನ್ನು ಖರೀದಿಸಿ ಅಲ್ಲಿ ಕರಿಮೆಣಸು ಬೆಳೆಯುತ್ತಿದ್ದಾರೆ.

ಸಂಪೂರ್ಣ ವೈಜ್ಞಾನಿಕ ಪದ್ಧತಿಯಲ್ಲಿ ಬೇಸಾಯ ಮಾಡುತ್ತಿರುವ ಸುಬ್ಬೇಗೌಡರು ಕಳೆದ 20 ವರ್ಷಗಳಿಂದಲೂ ಯಾವುದೇ ಸಂದರ್ಭದಲ್ಲಿಯೂ ಕ್ರಿಮಿನಾಶಕಗಳು ಹಾಗೂ ರಸಗೊಬ್ಬರಗಳನ್ನು ಬಳಸಿ ಬೇಸಾಯ ಮಾಡಿಲ್ಲ ಎನ್ನುವುದೇ ವಿಶೇಷ. ಇವರ ಕೃಷಿ ಕಾರ್ಯವನ್ನು ನೋಡಿ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕೃಷಿ ಪಂಡಿತ, ತೋಟಗಾರಿಕಾ ರತ್ನ ಪ್ರಶಸ್ತಿ ಅರಸಿಕೊಂಡು ಬಂದಿವೆ. ಜೊತೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ, ತೋಟಗಾರಿಕಾ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಪ್ರಶಸ್ತಿ ಸೇರಿದಂತೆ ಹಲವು ತಾಲೂಕು ಮಟ್ಟದ ಪ್ರಶಸ್ತಿಗಳು ದೊರೆತಿವೆ.
ಕೃಷಿ ಬಗ್ಗೆ ರೈತ ಸುಬ್ಬೇಗೌಡರು ಹೇಳುವುದೇನು..?
ಭೂಮಿತಾಯಿಯನ್ನು ನಂಬಿ ಶ್ರದ್ಧೆಯಿಂದ ಬೇಸಾಯ ಮಾಡಿದರೆ ಭೂಮಿತಾಯಿಯು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ.. ಎಲ್ಲರನ್ನೂ ಹೊತ್ತು ಹೆತ್ತು ಸಾಕುವ ಭೂಮಿತಾಯಿಗೆ ನಾವು ಶ್ರಮವನ್ನು ಹಾಕಿ ದುಡಿಮೆ ಮಾಡಬೇಕು. ಮಣ್ಣನ್ನು ಪ್ರೀತಿಸಬೇಕು, ಭೂಮಿಯ ರಸಸಾರಕ್ಕೆ ಹೊಂದುವ ಬೆಳೆಗಳನ್ನು ಬೆಳೆಯಬೇಕು ಎಂದು ಕೃಷಿ ಕೆಲಸದ ಬಗ್ಗೆ ಸುಬ್ಬೇಗೌಡರು ಹೇಳುತ್ತಾರೆ.
ಮಣ್ಣನ್ನು ಆಗಾಗ್ಗೆ ಪರೀಕ್ಷೆ ಮಾಡಿಸಿ ಮಣ್ಣಿನ ಫಲವತ್ತತೆಯು ಹೆಚ್ಚಾಗುವಂತೆ ನೋಡಿಕೊಳ್ಳಬೇಕು. ನಮ್ಮ ಭೂಮಿಯಲ್ಲಿ ಎರೆಹುಳುಗಳ ಸಂಖ್ಯೆಯು ಹೆಚ್ಚಾದರೆ ನಮ್ಮ ಭೂಮಿಯ ಫಲವತ್ತತೆಯು ಚೆನ್ನಾಗಿದೆಯೆಂದು ಅರ್ಥ, ನಮ್ಮ ಬೇಸಾಯಕ್ಕೆ ಪೂರಕವಾಗಿ ಸಹಾಯ ಮಾಡುವ ಎರೆಹುಳುಗಳ ಸಂರಕ್ಷಣೆಯ ಬಗ್ಗೆ ನಾವು ಎಚ್ಚರ ವಹಿಸಿ ಬೇಸಾಯ ಚಟುವಟಿಕೆ ನಡೆಸಿದರೆ ಯಾವುದೇ ಬೆಳೆಗಳನ್ನು ಬೆಳೆದರೂ ಅದರಿಂದ ಉತ್ತಮ ಆದಾಯ ಪಡೆಯಲು ಸಾಧ‍್ಯವಾಗುತ್ತದೆ ಎನ್ನುವ ಸಲಹೆಯನ್ನು ನೀಡಿದ್ದಾರೆ.
ಸುಬ್ಬೇಗೌಡರ ತೋಟಕ್ಕೆ ತೆರಳುವುದು ಹೇಗೆ?
ಇನ್ನು ಸುಬ್ಬೇಗೌಡರ ತೋಟವು ಕೆ.ಆರ್.ಪೇಟೆ ಪಟ್ಟಣದಿಂದ 12ಕಿ.ಮೀ ದೂರದಲ್ಲಿದೆ. ಅವರ ತೋಟಕ್ಕೆ ತೆರಳಬೇಕೆಂದರೆ ಕೆ.ಆರ್.ಪೇಟೆಯಿಂದ ಹೊಸಹೊಳಲು ಮಾರ್ಗವಾಗಿ ವಿಠಲಾಪುರ ರಸ್ತೆಯಲ್ಲಿ ತೆರಳಿ ಅಲ್ಲಿಂದ ದೊದ್ದನಕಟ್ಟೆಯ ಬಳಿ ಬಂದು ಅಲ್ಲಿಂದ 4ಕಿ.ಮೀ ತೆರಳಿದರೆ ತೋಟವನ್ನು ತಲುಪಬಹುದಾಗಿದೆ. ಮಾಹಿತಿಗೆ ಸುಬ್ಬೇಗೌಡರ: 9901010711ನ್ನು ಸಂಪರ್ಕಿಸಬಹುದಾಗಿದೆ.












Click it and Unblock the Notifications