ರೈತರ ಹೋರಾಟಕ್ಕೆ ಸಿಕ್ಕ ಜಯ : ಕೊನೆಗೂ ವಡ್ಡಗೆರೆ ಕೆರೆಗೆ ನೀರು ಹರಿದು ಬಂತು

ಚಾಮರಾಜನಗರ, ಜೂನ್ 24 : ಕೊನೆಗೂ ರೈತರ ಹೋರಾಟಕ್ಕೆ ಜಯ ಸಿಕ್ಕಿದೆ. ಕಳೆದ ಕೆಲವು ದಿನಗಳಿಂದ ವಡ್ಡಗೆರೆ ಕೆರೆಗೆ ನೀರು ಹರಿಸುವಂತೆ ಆಗ್ರಹಿಸಿ ರೈತರು ಆಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದ ಸರ್ಕಾರ ಇದೀಗ ನೀರು ಹರಿಸಿದ್ದರಿಂದ ರೈತರು ನೆಮ್ಮದಿಯುಸಿರು ಬಿಟ್ಟಿದ್ದಾರೆ.

ಜೂನ್ 23ರ ಭಾನುವಾರ ಮಧ್ಯಾಹ್ನ 4 ಗಂಟೆ ವೇಳೆಗೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ವಡ್ಡಗೆರೆ ಕೆರೆಗೆ ನೀರು ಹರಿದು ಬಂದಿದ್ದು, ಸುತ್ತಮುತ್ತಲಿನ ಗ್ರಾಮದ ಜನರು ಸೇರಿದಂತೆ ರೈತರು ಇದರಿಂದ ಖುಷಿಯಾಗಿ ವಿಜಯೋತ್ಸವ ಆಚರಿಸಿದ್ದಾರೆ.

ಜೂನ್ 22ರ ರಾತ್ರಿ ಸುಮಾರು 40 ನಿಮಿಷಗಳ ಕಾಲ ಹುತ್ತೂರು ಪಂಪ್ ಹೌಸ್‌ನಲ್ಲಿ ಮೋಟಾರುಗಳು ಚಾಲನೆಯಾಗಿದ್ದವು. ಇದರಿಂದ ಸ್ಥಳದಲ್ಲಿದ್ದ ರೈತರು ಸಿಹಿಹಂಚಿ ವಿಜಯೋತ್ಸವ ಆಚರಿಸಿ ಪ್ರತಿಭಟನೆ ಕೈಬಿಟ್ಟಿದ್ದರು. ಆದರೆ ಪೈಪುಗಳಲ್ಲಿ ಗಾಳಿಯು ತುಂಬಿಕೊಂಡಿದ್ದರಿಂದ ಕೆರೆಗೆ ಒಂದು ಹನಿ ನೀರು ಹರಿಯದೆ ಮತ್ತೆ ಪ್ರತಿಭಟನೆ ಮುಂದುವರೆಸುವ ನಿರ್ಧಾರ ಕೈಗೊಂಡರು.

Waddagere Lake in Gundlupet taluk at last gets water

ಮುಂಜಾನೆ ವಡ್ಡಗೆರೆಗೆ ನೀರು ಹರಿದು ಬರುವುದನ್ನು ನೋಡಲು ಬಂದ ಸುತ್ತಮುತ್ತಲಿನ ಗ್ರಾಮಗಳ ಜನರು ನಿರಾಶರಾದರು. ಜಿಲ್ಲಾಡಳಿತದ ಮೋಸದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರೈತರ ಪ್ರತಿಭಟನೆಗೆ ಬೆಂಬಲ ನೀಡಲು ನಿರ್ಧರಿಸಿದರು. ರೈತ ಸಂಘದ ಕರೆಯ ಮೇರೆಗೆ ಜಿಲ್ಲೆಯ ವಿವಿಧೆಡೆ ಸೇರಿದಂತೆ ಪಟ್ಟಣದ ತಾಲೂಕು ಕಚೇರಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ರಚಿಸಿ ಜಿಲ್ಲ್ಲಾಡಳಿತದ ವಿರುದ್ದ ಪ್ರತಿಭಟನೆ ನಡೆಸಿದರು.

ಮತ್ತೆ ಪ್ರತಿಭಟನೆ ಮುಂದುವರೆಸಲು ನಿರ್ಧಾರ ಕೈಗೊಂಡು ಮನೆಗೆ ತೆರಳಿದ್ದ ಎಲ್ಲಾ ಕಾರ್ಯಕರ್ತರನ್ನು ಮರಳುವಂತೆ ಮಾಡಿದರು. ಸ್ಥಳದಲ್ಲಿ ರೈತ ಸಂಘದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್, ಕಡಬೂರು ಮಂಜುನಾಥ್, ಮಾಡ್ರಹಳ್ಳಿ ಮಹದೇವಪ್ಪ ಪ್ರತಿಭಟನೆ ಪ್ರಾರಂಭಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದರು.

Waddagere Lake in Gundlupet taluk at last gets water

ಹುತ್ತೂರು ಕೆರೆಯಂಗಳದಲ್ಲಿ ಜಮಾಯಿಸುತ್ತಿದ್ದಂತೆಯೇ ಎಚ್ಚೆತ್ತ ಜಿಲ್ಲಾಡಳಿತ ಕೂಡಲೇ ನೀರು ಹರಿಸುವಂತೆ ಸಣ್ಣನೀರಾವರಿ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿತು. ಮಧ್ಯಾಹ್ನ ಸುಮಾರು ಒಂದು ಗಂಟೆ ಸಮಯಕ್ಕೆ ಸಿಬ್ಬಂದಿ ಮೋಟಾರುಗಳನ್ನು ಚಾಲನೆ ಮಾಡಿದರು. ಮಧ್ಯಾಹ್ನ ಸುಮಾರು 4 ಗಂಟೆಗೆ ವಡ್ಡಗೆರೆ ಕೆರೆಗೆ ನೀರು ಹರಿದುಬಂದಿತು. ಅಲ್ಲಿದ್ದ ಜನರು ಸಿಹಿಹಂಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಜೂ.18ರಂದು ಆರಂಭಿಸಿದ ರೈತರ ಪ್ರತಿಭಟನೆಗೆ ಭಾರೀ ಬೆಂಬಲ ವ್ಯಕ್ತವಾಗಿತ್ತು. ಇಬ್ಬರು ರೈತರು ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆದಿತ್ತು. ಅಲ್ಲದೆ, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ಮಾಡಿ ಪ್ರತಿಭಟನೆಯನ್ನು ಮುಂದುವರೆಸಿದ್ದರು.

Waddagere Lake in Gundlupet taluk at last gets water

ಪ್ರತಿಭಟನೆಯ ಕಾವು ಹೆಚ್ಚಾಗುತ್ತಾ ರಾಜಕೀಯ ತಿರುವು ಪಡೆಯುತ್ತಿದ್ದಂತೆಯೇ ಸರ್ಕಾರ ಮಣಿದಿದ್ದು ನೀರು ಹರಿಸಲು ಆರಂಭಿಸಿದೆ. ಇದರಿಂದ ರೈತರು ಖುಷಿಯಾಗಿ ಹರಿದು ಬರುತ್ತಿರುವ ನೀರನ್ನು ನೋಡಲು ಬರುತ್ತಿದ್ದಾರೆ. ಈಗಾಗಲೇ ವಡ್ಡಗೆರೆ ಕೆರೆ ವ್ಯಾಪ್ತಿಯಲ್ಲಿ ರೈತರು ಸಂಭ್ರಮ ಪಡುತ್ತಿದ್ದಾರೆ. ಈ ನಡುವೆ ನೀರಿಗಿಳಿದು ರೈತಸಂಘದ ಮುಖಂಡರು ಸಂಭ್ರಮಾಚರಣೆ ನಡೆಸಿದ್ದು, ರೈತಮುಖಂಡರನ್ನು ಗ್ರಾಮಸ್ಥರು ಅಭಿನಂದಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+