'ಕುಮಾರಣ್ಣನ ಚಕ್ಕಂದ ಯಾರಿಗೆ ಗೊತ್ತಿಲ್ಲ ಹೇಳಿ?'
ಮೈಸೂರು, ನ. 16: ಶಾಸಕ ಕೆಎಸ್ ಪುಟ್ಟಣ್ಣಯ್ಯ ಮತ್ತು ಎಚ್ ಡಿ ಕುಮಾರಸ್ವಾಮಿ ಚಕ್ಕಂದ ಆಡಿಕೊಂಡಿದ್ದಾರೆ. ಹಸಿರು ಟವೆಲ್ ಹೊದ್ದ ಶಾಸಕರೊಬ್ಬರು ಕಾಂಗ್ರೆಸ್ ಸರಕಾರದ ಜತೆ ಸೇರಿಕೊಂಡು ಚಕ್ಕಂದವಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಪುಟ್ಟಣ್ಣಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ವೈಯಕ್ತಿಕ ಚಕ್ಕಂದ ವಿಷಯವನ್ನು ಪ್ರಸ್ತಾಪಿಸುವುದಿಲ್ಲ ಎಂದು ಕುಮಾರಸ್ವಾಮಿಯವರನ್ನು ಪರೋಕ್ಷವಾಗಿ ಚುಚ್ಚಿದ ಪುಟ್ಟಣ್ಣಯ್ಯ, ಕುಮಾರಸ್ವಾಮಿ ಬಿಜೆಪಿ ಜತೆ ಚಕ್ಕಂದವಾಡಿ ಮುಖ್ಯಮಂತ್ರಿ ಆಗಿದ್ದು, ಕಾಂಗ್ರೆಸ್ ಜತೆ ಸೇರಿಕೊಂಡು ಸಂಸತ್ತಿಗೆ ಈ ಹಿಂದೆ ಗೆದ್ದಿದ್ದು ಎಲ್ಲರಿಗೂ ಗೊತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪುಟ್ಟಣ್ಣಯ್ಯ, ತಾವು ಯಾರೊಂದಿಗೂ ಚಕ್ಕಂದವಾಡುವ ಅವಶ್ಯಕತೆಯಿಲ್ಲ. ಅಂತಹ ಇರಾದೆ ಇದ್ದಿದ್ದರೆ ಕಾಂಗ್ರೆಸ್ ಜತೆ ಚಕ್ಕಂದವಾಡುವ ಬದಲು ನೇರ ಆ ಪಕ್ಷಕ್ಕೆ ಸೇರಿ ರಾಜಕಾರಣ ಮಾಡುತ್ತಿದ್ದೆ. ಮಾಜಿ ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಹೊಣೆಯರಿತು ಮಾತನಾಡಬೇಕು. ಅಧಿಕಾರ ಕಳೆದುಕೊಂಡು ಬುದ್ಧಿ ಭ್ರಮಣೆ ಆದವರಂತೆ ಮಾತನಾಡಬಾರದು ಎಂದು ಸಲಹೆ ನೀಡಿದರು.
ಕುಮಾರಸ್ವಾಮಿ ಆಡಳಿತಕ್ಕೊಂದು ಕಪ್ಪು ಚುಕ್ಕೆಯಾಗಿತ್ತು. 1100 ರೂ. ಇದ್ದ ಕಬ್ಬು ಬೆಲೆಯನ್ನು 811 ರೂ. ಗೆ ಇಳಿಸಿದ್ದರು. ಕುಮಾರಸ್ವಾಮಿ ಅವರಿಂದಾಗಿ ಅಂದು ಕಬ್ಬು ಬೆಳೆಗಾರರು ಬೀದಿಗೆ ಬಿದ್ದಿದ್ದರು. ಇದರಿಂದ 14 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದೀಗ ಬುದ್ಧನಿಗೆ ಜ್ಞಾನೋದಯವಾದಂತೆ ಏಕಾಏಕಿ ಕಬ್ಬು ಬೆಳೆಗಾರರ ಬಗ್ಗೆ ಮಾತನಾಡತೊಡಗಿದ್ದಾರೆ. ಇವರಿಂದಾಗಿ ಹಾಗೂ ಅಂದಿನ ಶಾಸಕ ಪುಟ್ಟರಾಜುವಿನಿಂದಾಗಿ ಪಾಂಡವಪುರ ಸಕ್ಕರೆ ಕಾರ್ಖಾನೆ 18 ಕೋಟಿ ರೂ. ನಷ್ಟ ಅನುಭವಿಸುವಂತಾಯಿತು.
ಕೊಠಾರಿ ಕಂಪನಿ ಕಟ್ಟಬೇಕಿದ್ದು 18 ಕೋಟಿ ರೂ.ಗಳನ್ನು ಕುಮಾರಸ್ವಾಮಿ ಸರಕಾರ ಮನ್ನಾ ಮಾಡಿತ್ತೆಂದು ವಿವರಿಸುವ ಮೂಲಕ ಇತ್ತೀಚೆಗೆ ಶ್ರೀರಾಮ ಸಕ್ಕರೆ ಕಾರ್ಖಾನೆ ಉಳಿಸುವಂತೆ ಜೆಡಿಎಸ್ ನಡೆಸಿದ್ದ ಹೋರಾಟದ ನೈಜತೆಯನ್ನು ಶಂಕಿಸಿದರು.
ಕಬ್ಬು ಬೆಳೆಗಾರರ ಅಭಿವೃದ್ಧಿ ಸಮಿತಿ ಸ್ಥಾಪಿಸುವಂತೆ ರೈತ ಸಂಘದ ಸಲಹೆ ಜಾರಿಯಾಗಿದ್ದರೆ ಇವತ್ತು 10 ಸಾವಿರ ಕೋಟಿ ರೂ. ಸಂಗ್ರಹವಾಗಿರುತ್ತಿತ್ತು. ಅದನ್ನು ಬೆಳೆಗಾರರ ಹಿತ ರಕ್ಷಿಸಲು ಬಳಸಬಹುದಾಗಿತ್ತು. ಉಪ ಉತ್ಪನ್ನಗಳ ಘಟಕವಿಲ್ಲದೆ ಯಾವುದೇ ಸಕ್ಕರೆ ಕಾರ್ಖಾನೆಗಳಿಗೆ ಹೊಸದಾಗಿ ಪರವಾನಗಿ ಕೊಡಬಾರದು ಎಂದರು.












Click it and Unblock the Notifications