ಸಾಲಕ್ಕೆ ಸಾವು ಪರಿಹಾರವಲ್ಲ, ಯಾದಗಿರಿಯಲ್ಲೊಂದು ಅಭಿಯಾನ
ಯಾದಗಿರಿ, ಜುಲೈ 24 : ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಮುಂದುವರೆದಿವೆ. ಯಾದಗಿರಿಯಲ್ಲಿ ರೈತರಲ್ಲಿ ಆತ್ಮವಿಶ್ವಾಸ ಮೂಡಿಸಲು ನಿಸರ್ಗ ವಿವಿದೊದ್ಧೇಶ ಸೇವಾ ಸಂಸ್ಥೆ ಅಭಿಯಾನವೊಂದನ್ನು ಆರಂಭಿಸಿದೆ. ಸಾಲಕ್ಕೆ ಸಾವು ಒಂದೇ ಪರಿಹಾರವಲ್ಲ ಎಂದು ಜಾಗೃತಿ ಮೂಡಿಸುತ್ತಿದೆ.
ಆಟೋ ಮೂಲಕ ಗ್ರಾಮಗಳಿಗೆ ತೆರಳುವ ಸೇವಾ ಸಂಸ್ಥೆಯ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದು ರೈತರಿಗೆ ಕರೆ ನೀಡುತ್ತಿದ್ದಾರೆ. ಸಾಲಕ್ಕೆ ಹೆದರಿ ನೀವು ಆತ್ಮಹತ್ಯೆ ಮಾಡಿಕೊಂಡರೆ ನಿಮ್ಮನ್ನು ನಂಬಿದ ತಂದೆ-ತಾಯಿ, ಹೆಂಡತಿ ಮಕ್ಕಳ ಕಥೆ ಏನು? ನಿಮ್ಮ ಕುಟುಂಬಕ್ಕೆ ನೀವೇ ಆಸರೆ ಎಂದು ರೈತರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. [ಹವ್ಯಾಸಿ ಕೃಷಿಕರಿಗಾಗಿ ಫೇಸ್ ಬುಕ್ ವೇದಿಕೆಯಿಂದ ಕರೆ]

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆಘಾತಕಾರಿಯಾದ ವಿಷಯ. ಆದರೆ, ಸಾಲಕ್ಕೆ ಸಾವು ಒಂದೇ ಪರಿಹಾರವಲ್ಲ ಎಂದು ಸಮಿತಿಯ ಸದಸ್ಯರು ರೈತ ಬಾಂಧವರಿಗೆ ತಿಳಿಸುತ್ತಿದ್ದಾರೆ. ನೀವು ಸತ್ತರೆ ಸಾಲ ಕೊಟ್ಟವರು ನಿಮ್ಮ ಕುಟುಂಬದವರನ್ನು ಸುಮ್ಮನೆ ಬಿಡುತ್ತಾರೆಯೇ? ಎಂದು ರೈತರನ್ನು ಪ್ರಶ್ನಿಸುತ್ತಿದ್ದಾರೆ. [ರೈತರ ಆತ್ಮಹತ್ಯೆ ಕಾಯಿಲೆಗೆ ಸಿದ್ದು ಚುಚ್ಚುಮದ್ದು]
ಅತೀ ಶೀಘ್ರದಲ್ಲೇ ರೈತರ ಸಮಸ್ಯೆ ಪರಿಹಾರವಾಗಬೇಕು. ಅಧಿಕಾರಿಗಳು, ಬುದ್ಧಿಜೀವಿಗಳು, ಸಂಘ ಸಂಸ್ಥೆಗಳು, ಚಿಂತಕರು ರೈತರು ಏಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಎಂದು ಕಾರಣ ಹುಡುಕಿ, ಅದನ್ನು ಪರಿಹಾರ ಮಾಡಬೇಕು ಎಂದು ಸಂಸ್ಥೆ ಒತ್ತಾಯಿಸಿದೆ.

ಅಂದಹಾಗೆ ಜುಲೈ ತಿಂಗಳಿನಲ್ಲಿ 70ಕ್ಕೂ ಅಧಿಕ ರೈತರು ಕರ್ನಾಟಕದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೃಷಿ ಕ್ಷೇತ್ರದ ಸಮಸ್ಯೆ ಕುರಿತು ಅಧ್ಯಯನ ನಡೆಸಲು ಡಾ.ಎಸ್.ಸ್ವಾಮಿನಾಥನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.












Click it and Unblock the Notifications