ರಾಯಚೂರು ಜಿಲ್ಲೆಯಲ್ಲಿ ಗಗನಕ್ಕೇರಿದ ಕಲಬೆರಕೆ ಜೋಳದ ಬೆಲೆ: ಮಾರಾಟಗಾರರಿಗೆ ಸಂತಸ, ಕೊಳ್ಳುವವರಿಗೆ ಪ್ರಾಣಸಂಕಟ
ರಾಯಚೂರು, ಮಾರ್ಚ್, 30: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಚಿನ್ನದಗಣಿಯಲ್ಲಿ ಜೋಳದ ಬೆಲೆ ಏರಿಕೆಯಿಂದ ರೊಟ್ಟಿ ಪ್ರಿಯರಿಗೆ ಕೈಸುಡುತ್ತಿದೆ.
ಹಟ್ಟಿ ಪಟ್ಟಣದಲ್ಲಿ ಜೋಳದ ಮಾರಾಟ ಜೋರಾಗಿ ನಡೆಯುತ್ತಿದ್ದು, ವಾರದ ಸಂತೆಯಲ್ಲಿ ಜೋಳದ ಬೆಲೆ ಬಿಸಿಲಿನಂತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. 1 ಕ್ವಿಂಟಾಲ್ ಜೋಳಕ್ಕೆ 5,600 ರೂಪಾಯಿ ನಿಗದಿಪಡಿಸಿದ್ದಾರೆ. ಒಂದು 45 ಸೇರು ಜೋಳಕ್ಕೆ 9500ರಿಂದ 10 ಸಾವಿರ ರೂಪಾಯಿ ಕೊಡಬೇಕು. ಇದರಿಂದ ಗ್ರಾಹಕರು ಜೋಳವನ್ನು ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಗಗನಕ್ಕೇರಿದ ಜೋಳದ ಬೆಲೆ
ಒಂದು ಸೇರು ಜೋಳಕ್ಕೆ 65 ರಿಂದ 70 ರೂಪಾಯಿ ಆಗಿದೆ. ಜೋಳ ಬೆಳೆಯನ್ನು ಬೆಳೆದಿರುವ ರೈತರು ಖಷಿಯಲ್ಲಿ ಇದ್ದರೆ, ಕೊಂಡುಕೊಳ್ಳುವವರು ತೆಗೆದುಕೊಳ್ಳಬೇಕೊ ಬೆಡೋವೊ ಎಂದು ಯೋಚನೆ ಮಾಡುವಂತಾಗಿದೆ.
ಇನ್ನು ಗುರುಗುಂಟಾ ಹೋಬಳಿ ವ್ಯಾಪ್ತಿಯಲ್ಲಿ ಈ ಬಾರಿ ರೈತರು ಅತಿ ಹೆಚ್ಚಾಗಿ ತೊಗರಿ, ಸಜ್ಜೆ, ಕಡಲೆ ಬೆಳೆಗಳನ್ನು ಬೆಳದಿದ್ದಾರೆ. ಇದರಿಂದ ಜೋಳದ ಕೊರತೆ ಇರುವುರಿಂದ ಬೆಲೆ ಏರಿಕೆಯಾಗಿದೆ ಎಂದು ವ್ಯಾಪಾರಿ ನಿಂಗಪ್ಪ ಹಟ್ಟಿ ಹೇಳಿದ್ದಾರೆ.
ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಇತರೆ ಜಿಲ್ಲೆಗಳಿಂದ ಜೋಳವನ್ನು ಮಾರಾಟ ಮಾಡಲು ವ್ಯಾಪಾರಿಗಳು ಹಟ್ಟಿ ಪಟ್ಟಣಕ್ಕೆ ಆಗಮಿಸುತ್ತಿದ್ದು, ನಿತ್ಯ 70 ರಿಂದ 100 ಕ್ವಿಂಟಾಲ್ ಜೋಳವನ್ನು ಮಾರಾಟ ಮಾಡಿ ಹೋಗುತ್ತಿದ್ದರು. ಇನ್ನು ಕೆಲ ವ್ಯಾಪಾರಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕಲಬೆರಕೆ ಜೋಳವನ್ನು ತಂದು ಮಾರಾಟ ಮಾಡುತ್ತಿದ್ದಾರೆ ಎಂದು ಇಲ್ಲಿನ ಜನ ಆರೋಪ ಮಾಡುತ್ತಿದ್ದಾರೆ.

ನಷ್ಟಕ್ಕೆ ಸಿಲುಕಿದ ಹತ್ತಿ ಬೆಳೆಗಾರರು
ಮತ್ತೊಂದೆಡೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಜಿಲ್ಲೆಯಾದ್ಯಾಂತ ಉತ್ತಮ ಮಳೆಯಾಗಿದೆ. ಆದರೆ ಹತ್ತಿ ಬೆಳೆಗೆ ಉತ್ತಮ ಬೆಂಬಲ ಬೆಲೆ ಹಾಗೂ ನಿರೀಕ್ಷಿತ ಇಳುವರಿ ಬಾರದ ರೈತರು ನಷ್ಟದ ಸುಳಿಗೆ ಸಿಲುಕಿದ್ದಾರೆ. ಸಾಲ ತೀರಿಸಲು ಆಗಂತಹ ಪರಿಸ್ಥಿತಿ ನಿರ್ಮಾಣ ಆಗಿದ್ದು, ರೈತರು ದೊಡ್ಡ ನಗರಗಳತ್ತ ಮುಖ ಮಾಡಿದ್ದಾರೆ.
ಜಿಲ್ಲೆಯಾದ್ಯಂತ ವಿಧಾನಸಭೆ ಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಜನರು ದುಡಿಮೆ ಅರಸಿ ನಗರಗಳೆಡೆಗೆ ಗುಳೆ ಹೋಗುತ್ತಿದ್ದಾರೆ. ಇನ್ನೊಂದೆಡೆ ತಮ್ಮ ಊರುಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇರುವುದರಿಂದ ಮಕ್ಕಳನ್ನೂ ಜೊತೆಯಲ್ಲೇ ಕರೆದೊಯ್ಯುವ ಅನಿವಾರ್ಯತೆ ಬಂದೊದಗಿದೆ. ಇದರಿಂದ ಮಕ್ಕಳ ಕಲಿಕೆಗೂ ತೊಂದರೆ ಆಗುತ್ತಿದೆ.
ಜಿಲ್ಲೆಯಲ್ಲಿನ ಹತ್ತಿ ಬೆಳೆಯ ವಿವರ
ಜಿಲ್ಲೆಯಾದ್ಯಂತ ಈ ವರ್ಷ 2,06,299 ಹೆಕ್ಟೇರ್ ಪ್ರದೇಶದಲ್ಲಿ ರೈತರು ಹತ್ತಿ ಬೆಳೆದಿದ್ದರು. ಪ್ರಾರಂಭದಲ್ಲಿ ಉತ್ತಮ ಇಳುವರಿ ಬಂದಿತ್ತು. ಆದರೆ ಕೊನೆ ಹಂತದಲ್ಲಿ ಬೂದು ರೋಗದಿಂದ ಇಳುವರಿ ಕುಂಠಿತಗೊಂಡಿತು. ಅಲ್ಲದೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದ ಕಾರಣ ಸಾಲ ತೀರಿಸುವ ದಾರಿ ಕಾಣದೆ ಕಂಗಾಲಾಗಿರುವ ರೈತರು ಗಂಟುಮೂಟೆ ಕಟ್ಟಿ ಮಹಾನಗರಗಳತ್ತ ತೆರಳುತ್ತಿದ್ದಾರೆ.
2023ರ ವಿಧಾನಸಭೆ ಚುನಾವಣೆ ಪ್ರಚಾರದ ಕಾವು ದಿನೇದಿನೇ ಹೆಚ್ಚುತ್ತಿದೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶದ ಜನರು ಕೂಲಿ ಕೆಲಸಕ್ಕಾಗಿ ಊರು ತೊರೆಯುತ್ತಿದ್ದಾರೆ. ನರೇಗಾ ಅಡಿ ಕೆಲಸ ನೀಡಿದರೂ ಸಂಬಳ ಮಾತ್ರ ಯಾವುದಕ್ಕೂ ಸಾಲುವುದಿಲ್ಲ. ಹೀಗಾಗಿ ಗುಳೆ ಅನಿವಾರ್ಯ ಎಂದು ಗ್ರಾಮೀಣ ಭಾಗದ ಜನರು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ ಗುಳೆ ಹೋಗುವುದರಿಂದ ಶೇಕಡವಾರು ಮತದಾನ ಪ್ರಮಾಣ ಕಡಿಮೆಯಾದರೆ ಹೇಗೆ ಎಂಬ ಆತಂಕ ಜಿಲ್ಲಾಡಳಿತವನ್ನು ಕಾಡುತ್ತಿದೆ. ಪ್ರತಿಯೊಬ್ಬರೂ ಸುಶಿಕ್ಷಿತರಾಬೇಕು ಎನ್ನುವ ದೃಷ್ಟಿಯಿಂದ 14 ವರ್ಷದವರೆಗಿನ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಕಡ್ಡಾಯಗೊಳಿಸಲಾಗಿದೆ. ಅಲ್ಲದೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿವೆ. ಆದಾಗ್ಯೂ ಸಾಲದ ಹೊರೆಗೆ ಸಿಲುಕಿರುವ ರೈತರು ಮಕ್ಕಳ ಶಿಕ್ಷಣದ ಬಗ್ಗೆ ಗಮನಹರಿಸದೆ ಗುಳೆ ಹೋಗುತ್ತಿದ್ದಾರೆ.












Click it and Unblock the Notifications