ದಾವಣಗೆರೆ: ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ನೀರು ತೆಗೆಯಲು ಬಳಸುತ್ತಿದ್ದ ಪಂಪ್‍ಗಳ ವಶ
ದಾವಣಗೆರೆ, ನವೆಂಬರ್, 02: ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಬೆಳೆಗಳಿಗೆ ಕೊನೆಯ ಹಂತದ ನೀರು ಕೊಡಬೇಕಾಗಿರುವುದರಿಂದ ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಿ, ಅಂತಹ ಪಂಪ್‍ಸೆಟ್‍ಗಳಿಗೆ ಸರಬರಾಜಾಗುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ.
ದಾವಣಗೆರೆ ಹೊನ್ನಾಳಿ ರಸ್ತೆಯಲ್ಲಿರುವ ಅರಳೀಪುರ, ಯಲೋದಹಳ್ಳಿ ಹಾಗೂ ಇನ್ನಿತೆರೆ ಪ್ರದೇಶಗಳ ಕಾಲುವೆ, ನಾಲೆಗಳಲ್ಲಿ ಅಕ್ರಮವಾಗಿ ನೀರು ತೆಗೆಯಲು ಬಳಸುತ್ತಿದ್ದ ಪಂಪ್‍ಗಳನ್ನು ತೆರವುಗೊಳಿಸಲಾಗಿದೆ. ಈ ವೇಳೆ ನೀರಾವರಿ ಇಲಾಖೆ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಬೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

ಜಿಲ್ಲಾಡಳಿತದಿಂದ ಖಡಕ್ ಸೂಚನೆ
ನಾಲೆ ಮೂಲಕ ಅಚ್ಚುಕಟ್ಟುದಾರರ ಬೆಳೆಗಳಿಗೆ ನೀರು ಕೊಡಬೇಕಾಗಿರುವುದರಿಂದ ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್‌ಗಳನ್ನು ತೆರವುಗೊಳಿಸುವಂತೆ ದಾವಣಗೆರೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚನೆ ನೀಡಿದ ಬಳಿಕ ದಾಳಿ ನಡೆಸಿ ನೀರಿನ ಪಂಪ್‌ಸೆಟ್ ತೆರವುಗೊಳಿಸುವ ಕಾರ್ಯ ಚುರುಕು ಪಡೆದಿದೆ.
ಜಿಲ್ಲೆಯಲ್ಲಿ ಮಳೆ ಕೊರತೆಯಿಂದಾಗಿ ನೀರಿನ ಅಭಾವ ಉಂಟಾಗಲಿದ್ದು, ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಆನ್ ಅಂಡ್ ಆಫ್ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈಗಾಗಲೇ ಅಕ್ಟೋಬರ್ 26ರಿಂದ ಭದ್ರಾ ಎಡದಂಡೆಗೆ 380 ಕ್ಯೂಸೆಕ್ ಹಾಗೂ ಭದ್ರಾ ಬಲದಂಡೆಗೆ 3,100 ಕ್ಯೂಸೆಕ್ ನೀರನ್ನು ಹರಿಸಲಾಗಿದೆ. ಬೆಸ್ಕಾಂ ಅಧಿಕಾರಿಗಳು ಭದ್ರಾ ನಾಲೆಗಳಲ್ಲಿ ಅಕ್ರಮವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವುಗೊಳಿಸಬೇಕು. ಮತ್ತು ಅಂತಹ ಪಂಪ್‍ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿತ್ತು.
ಭದ್ರಾ ಬಲದಂಡೆಯ ಭಾಗದಲ್ಲಿ ರೈತರ ಜಮೀನುಗಳಲ್ಲಿ ಭತ್ತವು ಒಡೆ ಕೀಳುತ್ತಿದ್ದು, ಈ ಸಂದರ್ಭದಲ್ಲಿ ಭತ್ತಕ್ಕೆ ನೀರಿನ ಅವಶ್ಯಕತೆ ಮುಖ್ಯವಾಗಿರುತ್ತದೆ. ಹಾಗಾಗಿ ನೀರಾವರಿ ನಿಗಮದ ಇಂಜಿನಿಯರ್‌ಗಳು ಸಕಾಲದಲ್ಲಿ ರೈತರಿಗೆ ನೀರನ್ನು ಒದಗಿಸಿ ಉತ್ತಮ ಫಸಲಿಗೆ ಸಹಕರಿಸಬೇಕು ಎಂದು ಹೇಳಿತ್ತು.
ದಾವಣಗೆರೆ ವಿಭಾಗದ ನಾಲೆಗಳಿಗೆ 7 ದಿನ ಹಾಗೂ ಮಲೆಬೆನ್ನೂರು ವಿಭಾಗದ ನಾಲೆಗಳಿಗೆ 6 ಮತ್ತು 3 ದಿನದಂತೆ ಆನ್ ಅಂಡ್ ಆಫ್ ಸಿಸ್ಟಮ್ ಅಳವಡಿಸಲಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶಗಳಲ್ಲಿನ 9ಬಿ ಹಾಗೂ 9ಸಿ ನಾಲೆಗಳಿಗೂ ಸಹ ನೀರು ಶೀಘ್ರವೇ ತಲುಪುವಂತೆ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಅಪಾರ ಪ್ರಮಾಣದ ನೀರು ಪೋಲು
ಒಂದೆಡೆ ಬರ, ಮತ್ತೊಂದೆಡೆ ಭದ್ರಾ ಅಚ್ಚುಕಟ್ಟು ಪ್ರದೇಶಗಳಿಗೆ ಭದ್ರಾ ನಾಲೆ ನೀರು ಸಿಗುತ್ತಿಲ್ಲ ಎಂಬ ಆಕ್ರೋಶದ ನಡುವೆ ಇದ್ದ ನೀರು ಉಳಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರು ಗ್ರಾಮದ ಗೋಮಾಳಕ್ಕೆ ಹೋಗುವ ರಸ್ತೆಯಲ್ಲಿ ಭದ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೂಪರ್ ಬ್ರಾಡ್ ಗೇಜ್ ಒಡೆದು ಹೋಗಿರುವುದು. ಇದರಿಂದ ಬಹಳಷ್ಟು ಪ್ರಮಾಣದಲ್ಲಿ ನೀರು ಹರಿದು ಪೋಲಾಗುತ್ತಿದೆ.
ಭದ್ರಾ ಕಾಲುವೆಗೆ ಅಡ್ಡಲಾಗಿ ಕಟ್ಟಲಾದ ಸೂಪರ್ ಬ್ರಾಡ್ ಗೇಜ್ ಹೊಡೆದು ಬಹಳ ದಿನಗಳಿಂದ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ನೀರು ಸಮೀಪದ ಹಿರೇಕೋಗಲೂರು ಕೆರೆಗೆ ಹರಿಯುತ್ತಿದೆ. ಕೆರೆಯಲ್ಲಿ ನೀರು ಸಂಗ್ರಹ ಹೆಚ್ಚಾಗಿ ಕೋಡಿ ಬಿದ್ದಿದೆ. ಇದರಿಂದ ಕೊನೇ ಭಾಗದ ಹಳ್ಳಿಗಳಾದ ಹೂವಿನಮಡು, ಮತ್ತಿ, ಗೋಣಿವಾಡ, ಹೊನ್ನಮರಡಿ, ಕುಕ್ಕುವಾಡ, ನಾಗರಸನಹಳ್ಳಿ ಮುಂತಾದ ಗ್ರಾಮಗಳಿಗೆ ನೀರು ತಲುಪುತ್ತಿಲ್ಲ.
ನೀರಾವರಿ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ನೀರು ನಿರ್ವಹಣೆ ಮಾಡುತ್ತಿಲ್ಲ. ಈಗ ಭತ್ತದ ಪೈರು ಕಾಳು ಕಟ್ಟುವ ಹಂತದಲ್ಲಿದೆ. ರೈತರು ನೀರು ನೀರು ಎಂದು ಗೊಗರೆಯುತ್ತಿದ್ದಾರೆ. ಇತ್ತ ಕೊನೆ ಭಾಗದ ರೈತರಿಗೆ ಸಿಗಬೇಕಾದ ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ರೈತರ ಕೂಗಿಗೆ ಸ್ಪಂದಿಸದ ಜಿಲ್ಲಾಡಳಿತ ದಿವ್ಯ ಮೌನಕ್ಕೆ ಶರಣಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಭಾಗದಲ್ಲಿ ಭದ್ರಾ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಅನೇಕ ಸೇತುವೆಗಳು ಹೊಡೆದು ಹೋಗಿ ಲೆಕ್ಕವಿಲ್ಲದಷ್ಟು ನೀರು ವ್ಯರ್ಥವಾಗಿ ಹರಿದು ಪೋಲಾಗುತ್ತಿದೆ. ನೀರಾವರಿ ಇಲಾಖೆ ಅಧಿಕಾರಿಗಳು ಕಾಮಗಾರಿಗಳ ಪರಿಶೀಲನೆ ನಡೆಸಿ ಪರ್ಸೆಂಟೇಜ್ ಪಡೆಸುವುದರಲ್ಲಿ ನಿರತರಾಗಿದ್ದಾರೆ. ಅವರಿಗೆ ಅಮೂಲ್ಯವಾದ ನೀರನ್ನು ಸಮರ್ಪಕವಾಗಿ ನಿರ್ವಹಿಸುವ ಇಚ್ಚಾಶಕ್ತಿ ಇಲ್ಲ ಎನ್ನುವ ಆಕ್ರೋಶಗಳು ಭುಗಿಲೆದ್ದಿವೆ.
ತಕ್ಷಣ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಗಮನಿಸಿ ಅಧಿಕಾರಿಗಳ ಕಿವಿ ಹಿಂಡಿ ನೀರು ವ್ಯರ್ಥವಾಗಿ ಹರಿಯುತ್ತಿರುವ ಇಂತಹ ಪ್ರಕರಣಗಳನ್ನು ಪತ್ತೆಹಚ್ಚಿ ನೀರು ನೀರು ಎಂದು ಗೊಗರೆಯುತ್ತಿರುವ ರೈತರ ಸಂಕಷ್ಟಕ್ಕೆ ಧಾವಿಸಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್ ಒತ್ತಾಯಿಸಿದ್ದಾರೆ.












Click it and Unblock the Notifications