ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನ ಎಷ್ಟು ಉಪಯೋಗ ನೋಡಿ
ಬಳ್ಳಾರಿ, ಮಾರ್ಚ್ 01: ಐಸಿಎಆರ್ ಮೂರು ದಿನಗಳ ಕೃಷಿ ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ರೈತರಿಗಾಗಿ ಬಳ್ಳಾರಿಯಲ್ಲಿ ಆಯೋಜನೆ ಮಾಡಿತ್ತು. ನೂರಾರು ರೈತರು ಕೃಷಿ ಕಾರ್ಯದಲ್ಲಿ ಡ್ರೋನ್ ಹೇಗೆ ಸಹಾಯ ಮಾಡಲಿದೆ? ಎಂದು ಪ್ರಾತ್ಯಕ್ಷಿಕೆ ಮೂಲಕ ತಿಳಿದುಕೊಂಡರು.
ಬಳ್ಳಾರಿಯ ಐಸಿಎಆರ್ ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ ಸಂಶೋಧನಾ ಕೇಂದ್ರ ವತಿಯಿಂದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮ ಮತ್ತು ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ ಫೆಬ್ರವರಿ 26 ರಿಂದ 28 ರವರೆಗೆ ಮೂರು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮೊದಲು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಸೋಮಲಾಪುರ ಗ್ರಾಮದ 20 ಎಕರೆ ಪ್ರದೇಶದಲ್ಲಿ ಬೆಳೆದಿರುವ ತೆಂಗು ಮತ್ತು ಮಾವು ಬೆಳೆಗಳಿಗೆ ಡ್ರೋನ್ ಮೂಲ ಸಿಂಪಡಣೆಯನ್ನು ಮಾಡಲಾಯಿತು. ಮಹೋಗಾನಿ, ರೆಡ್-ಸ್ಯಾಂಡರ್ಸ್ ಮತ್ತು ಕ್ಯಾಸುರಿನಾ ಮರಗಳನ್ನು ಸಹ ಆ ಪ್ರದೇಶದಲ್ಲಿ ಬೆಳೆಯಲಾಗಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಕರಡಿಹಳ್ಳಿಯಲ್ಲಿ 5 ಎಕರೆ ಶೇಂಗಾ ಬೆಳೆಗೆ ಸಿಂಪಡಣೆಯನ್ನು ಮಾಡಲಾಯಿತು.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಮಸಾಗರ ಗ್ರಾಮದಲ್ಲಿ 22 ಎಕರೆ ಶೇಂಗಾ ಬೆಳೆಗೆ ಹಾಗೂ 3 ಎಕರೆ ಮೆಕ್ಕೆಜೋಳದ ಬೆಳೆಗೆ ಡ್ರೋನ್ ಮೂಲಕ ಸಿಂಪಡಣೆಯನ್ನು ಮಾಡಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಲಾಯಿತು.
ನಂತರದಲ್ಲಿ ಬಳ್ಳಾರಿ ತಾಲ್ಲೂಕಿನ ಬೆಳಗಲ್ ತಾಂಡಾ ಗ್ರಾಮದಲ್ಲಿ 6 ಎಕರೆ ಶೇಂಗಾ ಬೆಳೆಗೆ ಮತ್ತು 4 ಎಕರೆ ಕರಿಬೇವಿನ ಬೆಳೆಗೆ ಪ್ರಾತ್ಯಕ್ಷಿಕ ಸಿಂಪಡಣೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿಯ ಐಸಿಎಆರ್-ಭಾರತೀಯ ಮಣ್ಣು ಮತ್ತು ನೀರು ಸಂರಕ್ಷಣೆ, ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಬಿ. ಕೃಷ್ಣ ರಾವ್ ಪಾಲ್ಗೊಂಡಿದ್ದರು.
"ಕೃಷಿ-ಡ್ರೋನ್ ಸಿಂಪಡಣೆಯು ಬೆಳೆಗಳಿಗೆ ರಾಸಾಯನಿಕಗಳನ್ನು ಸಿಂಪಡಿಸಲು ಬೇಕಾಗುವ ಕಾರ್ಮಿಕರನ್ನು ಕಡಿಮೆ ಮಾಡುತ್ತದೆ. ಕೇಂದ್ರೀಕೃತ ರಾಸಾಯನಿಕವನ್ನು ನಿಖರವಾಗಿ ಸಿಂಪಡಿಸಲು ಸಹಾಯ ಮಾಡುತ್ತದೆ" ಎಂದು ಡಾ. ಬಿ. ಕೃಷ್ಣರಾವ್ ಹೇಳಿದರು.
ಈ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡಿದ್ದ ರೈತರು. ಈ ತಂತ್ರಜ್ಞಾನ ಉತ್ತಮವಾಗಿದೆ. ಹೆಚ್ಚಿನ ಪ್ರದೇಶದಲ್ಲಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡು ರೈತರಿಗೆ ಈ ಕುರಿತು ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಈ ಹಳ್ಳಿಗಳಲ್ಲಿ, ಡ್ರೋನ್ ಬಾಡಿಗೆಗೆ ಪಡೆದು, ಶೇಂಗಾ ಬೆಳೆಗೆ ಸೂಕ್ಷ್ಮ ಪೋಷಕಾಂಶಗಳನ್ನು ಹೆಚ್ಚಿನ ಪ್ರದೇಶಗಳಲ್ಲಿ ಸಿಂಪಡಿಸಲು ರೈತರು ಪ್ರೇರೇಪಣೆಗೊಂಡರು. ಭಾಗವಹಿಸಿದ ಅನೇಕ ರೈತರು ಡ್ರೋನ್‍ನ ಬೆಲೆಯನ್ನು ಕೇಳಿ ಮಾಹಿತಿ ಪಡೆದುಕೊಂಡರು.
ಕೆಲವು ರೈತರು ಮುಂಬರುವ ವರ್ಷಗಳಲ್ಲಿ ಡ್ರೋನ್ ಖರೀದಿಸಲು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸೋಮಲಾಪುರ, ಕರಡಿಹಳ್ಳಿ, ರಾಮಸಾಗರ, ರಾಂಪುರ, ಬೆಳಗಲ್ ತಾಂಡಾ, ಚೆಳ್ಳಗುರ್ಕಿ, ಚಾಗನೂರು ಗ್ರಾಮಗಳ ರೈತರು ಪಾಲ್ಗೊಂಡಿದ್ದರು.












Click it and Unblock the Notifications