Arecanut : ಬಿಸಿಲಿನಿಂದ ಅಡಿಕೆ ಸಸಿ ರಕ್ಷಣೆ: ಎಲೆ ಚುಕ್ಕಿ ರೋಗ ನಿರ್ವಹಣೆ ಕ್ರಮಗಳು
ಒಂದು ಕಾಲದಲ್ಲಿ ರಾಜ್ಯದ ಮಲೆನಾಡು ಮತ್ತು ಕರಾವಳಿಗೆ ಸೀಮಿತವಾಗಿದ್ದ ಅಡಿಕೆ ಕೃಷಿ ಈಗ ಬಯಲು ಸೀಮೆಯಲ್ಲಿ ಕೂಡ ಹೆಚ್ಚಾಗುತ್ತಿದೆ. ಎಲೆ ಚುಕ್ಕಿ ರೋಗ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರಿಗೆ ತಲೆನೋವು ತಂದಿದೆ, ಇತ್ತೀಚಿನ ದಿನಗಳಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಅಡಿಕೆ ಗಿಡಗಳ ರಕ್ಷಣೆ ಮಾಡುವುದು ಮುಖ್ಯವಾಗುತ್ತದೆ.
ಅಡಿಕೆಯಲ್ಲಿ ಬೇಸಿಗೆ ಬಿಸಿಲು ಹೆಚ್ಚಾದಂತೆ ಅಡಿಕೆ ಮರದ ಕಾಂಡಗಳು ಬೆಂದು ಹೋಗುತ್ತವೆ, ಒಣಗಿ ಟೊಳ್ಳಾದಂತೆ ಕಾಣುತ್ತವೆ. ಇದನ್ನು ತಪ್ಪಿಸದಿದ್ದರೆ ಅಡಿಕೆ ಮರಗಳು ಹೆಚ್ಚಿನ ಕಾಲ ಬದುಕುವುದಿಲ್ಲ.

ಇದನ್ನು ತಪ್ಪಿಸಲು ಹಲವು ಸಾಂಪ್ರದಾಯಿಕ ಮಾರ್ಗಗಳು ಇದೆ. ರೈತರು ಈ ಸಂದರ್ಭದಲ್ಲಿ ಅಡಿಕೆ ಗಿಡಗಳ ರಕ್ಷಣೆ ಮಾಡುವುದು ಮುಖ್ಯವಾಗುತ್ತದೆ. ಅಡಿಕೆ ಗಿಡಗಳಲ್ಲಿ ಗರಿಗಳು ತಾನಾಗೆ ಒಣಗಿ ಬೀಳುವವರೆಗೆ ತೆಗೆಯದದಿದ್ದರೆ ಬಿಸಿಲಿನಿಂದ ರಕ್ಷಣೆ ಪಡೆಯಬಹುದು.
ಅಡಿಕೆ ಸಸಿಗಳಿಗೆ ಒಣಗಿದ ಬಾಳೆಪಟ್ಟಿಗಳನ್ನು ಅಥವಾ ಬಾಳೆ ನಾರುಗಳನ್ನು ಬಿಸಿಲು ತಾಗದಂತೆ ಕಟ್ಟಬಹುದು. ಅಡಿಕೆ ಗರಿಗಳನ್ನು ಬಳಸಿ ಕೂಡ ಕಾಂಡಗಳಿಗೆ ರಕ್ಷಣೆ ನೀಡಬಹುದು.
10 ಲೀಟರ್ ನೀರಿಗೆ 3 ಕೆ.ಜಿ ಸುಣ್ಣ, ಅಂಟು ಬರುವಷ್ಟು ಮೈದಾ ಬೆರೆಸಿ ಕಾಂಡಗಳಿಗೆ ಬಳಿಯುವ ಮೂಲಕ ಕೂಡ ರಕ್ಷಣೆ ನೀಡಬಹುದು. (ಕೆಲವು ಕಡೆಗಳಲ್ಲಿ ಬೆಲ್ಲ ಕೂಡ ಬೆರೆಸಿಕೊಳ್ಳಲಾಗುತ್ತದೆ.)
ಅಡಿಕೆ ತೋಟದ ಮೊದಲ ಮತ್ತು ಕೊನೆಯ ಸಾಲುಗಳ ಪಕ್ಕ (ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ) ಚೊಗಚೆ (Sesbania) ಅಥವಾ ಗೊಬ್ಬರದ ಗಿಡ (ಗ್ಲಿರಿಸೀಡಿಯ) ಅಥವಾ ಅಗಸೆ ಗಿಡಗಳನ್ನು ಹಾಕುವ ಮೂಲಕ ಅಡಿಕೆ ಗಿಡಗಳಿಗೆ ನೇರವಾಗಿ ಬಿಸಿಲು ಬೀಳುವುದನ್ನು ತಪ್ಪಿಸಬಹುದು.
ಎಲೆ ಚುಕ್ಕಿ ರೋಗ ನಿರ್ವಹಣೆ
ಬೇಸಿಗೆ ಮತ್ತು ಮಳೆಗಾಲದಲ್ಲಿ ಅಡಿಕೆಯಲ್ಲಿ ಎಲೆ ಚುಕ್ಕಿ ರೋಗ ಹೆಚ್ಚಾಗಿ ಕಾಡುತ್ತದೆ. ಇತ್ತೀಚೆಗೆ ಈ ರೋಗವು ಹಲವೆಡೆ ಗಂಭೀರ ಸ್ವರೂಪವನ್ನು ಪಡೆದಿದೆ. ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ಎಲೆಚುಕ್ಕೆ ರೋಗದ ಲಕ್ಷಣಗಳು ಇತ್ತೀಚೆಗೆ ಕಾಣಿಸಿಕೊಂಡಿವೆ. ಕೇರಳ ಮತ್ತು ತಮಿಳುನಾಡಿಗೂ ರೋಗ ಹರಡಿದೆ.
ಗಾಳಿ ಮುಖೇನ ಹರಡುವ ಕಾರಣ, ಪ್ರಾಥಮಿಕ ಹಂತದಲ್ಲೇ ನಿರ್ವಹಣೆ ಮಾಡದಿದ್ದರೆ ಈ ರೋಗವನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ.
ರೋಗಾಣು
ಕೊಲೆಟೋಟ್ರೈಕಮ್ ಸ್ಪಿಸಿಸ್ ಮತ್ತು ಫಿಲೋಸ್ಟಿಕ್ಟಾ ಅರೆಕೆ ಎನ್ನುವ ಶಿಲೀಂಧ್ರಗಳು ಅಡಿಕೆಯಲ್ಲಿ ಎಲೆಚುಕ್ಕೆ ರೋಗವನ್ನು ಉಂಟುಮಾಡುತ್ತವೆ. ಇತ್ತೀಚೆಗೆ ಗಂಭೀರ ಸ್ವರೂಪದಲ್ಲಿ ಕಾಣಿಸಿಕೊಂಡಿರುವ ಎಲೆಚುಕ್ಕೆ ರೋಗಕ್ಕೆ ಕೊಲೆಟೋಟ್ರೈಕಮ್ ಕಹಾವೆ ಸಬ್‌ಸಿಸ್ ಸಿಗ್ಗಾರೊ ಎನ್ನುವ ಶಿಲೀಂಧ್ರವು ಪ್ರಮುಖ ಕಾರಣವೆಂದು ತಿಳಿದುಬಂದಿದೆ.
ರೋಗ ಲಕ್ಷಣಗಳು
ಅಡಿಕೆ ಮರದ ಎಲೆಯಲ್ಲಿಹಳದಿ ಬಣ್ಣದಿಂದ ಆವೃತವಾಗಿರುವ ಕಂದು ಬಣ್ಣದ ಸಣ್ಣ ಚುಕ್ಕೆಗಳಿದ್ದರೆ, ಅದು ಎಲೆ ಚುಕ್ಕೆ ರೋಗವೆಂದರ್ಥ. ಕೆಲವೊಮ್ಮೆ, ಕಪ್ಪು ಬಣ್ಣದ ಅಂಚು ಇರುವ ಬೂದು ಬಣ್ಣದ ಸಣ್ಣ ಚುಕ್ಕೆಗಳನ್ನೂ ಕಾಣಬಹುದು.
ಎಲೆ ಚುಕ್ಕಿ ರೋಗ ನಿರ್ವಹಣೆ ಹೇಗೆ?
ವಿಟ್ಲದ ಕೇಂದ್ರೀಯ ತೋಟಗಳ ಬೆಳೆಗಳ ಸಂಶೋಧನಾ ಸಂಸ್ಥೆ ಎಲೆ ಚುಕ್ಕಿ ರೋಗ ನಿಯಂತ್ರಣಕ್ಕೆ ರೈತರಿಗೆ ಸಲಹೆಗಳನ್ನು ನೀಡಿದೆ.
ಅಧಿಕ ರೋಗಬಾಧಿತ ಎಲೆಗಳನ್ನು ತುಂಡರಿಸಿ ತೆಗೆದು ನಾಶ ಮಾಡುವುದು ಸೋಂಕು ಕಡಿಮೆಗೊಳಿಸಲು ಪ್ರಯೋಜನಕಾರಿ, ಪ್ರಾಯೋಗಿಕವಾಗಿ ಇದು ಕಷ್ಟವಾದರು ತೀವ್ರ ಬಾಧೆಯಿರುವಲ್ಲಿ ಅನಿವಾರ್ಯವಾಗಿದೆ.
ರೋಗಬಾಧಿತ ತೋಟಗಳಲ್ಲಿ ಅಡಿಕೆ ಗೊನೆಗಳಿಗೆ ಬೋರ್ಡೋ ಮಿಶ್ರಣ ಸಿಂಪಡಣೆ ಮಾಡುವಾಗ, ಎಲೆಗಳಿಗೂ ಮಾಡಬೇಕು.
ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ, ಆಗಸ್ಟ್ - ಸೆಪ್ಟೆಂಬರ್ ಸಮಯದಲ್ಲಿ ಮಳೆ ಇಲ್ಲದಾಗ ಪೋಪಿಕೊನರೋಲ್ (Propiconazole 25EC) dosdores (Tebuconazole 38.9SC) are (Hexaconazole 5EC / 5SC) ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಎಲೆಗಳಿಗೆ ಸಿಂಪಡಿಸಬೇಕು.
ಮೂರರಿಂದ ನಾಲ್ಕು ವಾರಗಳ ನಂತರ, ಪೋಪಿನೆಬ್ 70WP ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂದ್ರ ನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿಲಿಲೀಟರ್ ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು.
ತೀವ್ರ ರೋಗಬಾಧೆ ಇರುವಲ್ಲಿ, ಜನವರಿ ತಿಂಗಳ ನಂತರ ಸಿಂಗಾರ ಒಣಗುವ ರೋಗಕ್ಕೆ ಪ್ರೋಪಿಕೊನರೋಲ್ ಶಿಲೀಂದ್ರನಾಶಕ ಸಿಂಪಡಿಸುವಾಗ ಎಲೆಚುಕ್ಕೆ ರೋಗವಿರುವ ಮರದ ಎಲೆಗಳಿಗೂ ಸಿಂಪಡಿಸಬಹುದು.
ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ನೀಡುವುದು ಮತ್ತು ಹುಳಿ ಮಣ್ಣಿಗೆ ಸುಣ್ಣ ಹಾಕುವುದು ಒಳಿತು. ಸಾಮಾನ್ಯವಾಗಿ, ಅಡಿಕೆ ಮರಕ್ಕೆ 12 ಕಿಲೋ ಗ್ರಾಂ ಹಟ್ಟಿಗೊಬ್ಬರ ಮತ್ತು ಹಸಿರೆಲೆ, ಯೂರಿಯ (220 ಗ್ರಾಂ), ರಾಕ್ ಫಾಸ್ಪೇಟ್ (200 ಗ್ರಾಂ) ಮತ್ತು ಪೊಟಾಷ್ (240 - 350 ಗ್ರಾಂ) ನೀಡಬೇಕು. ರಸಗೊಬ್ಬರಗಳನ್ನು ಕನಿಷ್ಠ ಎರಡು ಕಂತುಗಳಲ್ಲಿ ನೀಡಬೇಕು. ಜೊತೆಗೆ, ಲಘುಪೋಷಕಾಂಶಗಳಾದ ಸತುವಿನ ಸಲ್ವೇಟ್ (5 ಗ್ರಾಂ) ಮತ್ತು ಬೊರಾಕ್ಸ್ (5 ಗ್ರಾಂ) ಕೂಡ ನೀಡಬಹುದು.
ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುತ್ತದೆ. ಹಾಗಾಗಿ, ರೋಗ ಪೀಡಿತ ಅಡಿಕೆ ಸಸಿಗಳನ್ನು ರೋಗವಿಲ್ಲದ ಪ್ರದೇಶಕ್ಕೆ ಸಾಗಿಸದಿರುವುದು ಮತ್ತು ಸಮುದಾಯ ಮಟ್ಟದ ರೋಗ ನಿಯಂತ್ರಣ ಕ್ರಮಗಳು ಮುಖ್ಯವಾಗುತ್ತದೆ.












Click it and Unblock the Notifications