ಮಾವಿನ ಕೊಯ್ಲು ಬಳಿಕ; ಗಿಡಗಳ ರಕ್ಷಣೆಗೆ ರೈತರಿಗೆ ಸಲಹೆಗಳು
ಬೆಂಗಳೂರು, ಆಗಸ್ಟ್ 04; ಮಳೆಗಾಲ ಆರಂಭವಾಗಿದ್ದು, ಮಾವಿನ ಹಣ್ಣಿನ ಕೊಯ್ಲು ಮುಗಿದಿದೆ. ಕೊಯ್ಲು ನಂತರದ ಹಂಗಾಮಿನಲ್ಲಿ ಮಾವಿನ ಬೆಳೆಗಾರರು ಗಿಡಗಳ ರಕ್ಷಣೆಗೆ ಕೈಗೊಳ್ಳಬೇಕಾಗಿರುವ ಕ್ರಮಗಳನ್ನು ತಿಳಿಸಲಾಗಿದೆ.
ಮಾವಿನ ತೋಟಗಳಲ್ಲಿ ಹಣ್ಣಿನ ನೊಣ ಅಥವಾ ಇತರೆ ಕಾರಣಗಳಿಂದ ಕೊಳೆತು ಬಿದ್ದಿರುವ ಮಾವಿನ ಹಣ್ಣುಗಳು ಮತ್ತು ಅವುಗಳ ಅವಶೇಷಗಳನ್ನು ಆಯ್ದು ಗುಂಡಿಯಲ್ಲಿ ಹಾಕಿ ಮುಚ್ಚಬೇಕು. ಈ ಕ್ರಮದಿಂದ ಹಣ್ಣಿನ ನೊಣಗಳ ಸಂತತಿಯು ಕಡಿಮೆಯಾಗುತ್ತದೆ. ಅಲ್ಲದೇ ತೋಟದ ನೈರ್ಮಲ್ಯ ಕಾಪಾಡಲು ಸಹಕಾರಿ.

ತೋಟದ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿಸಿ ಕಸ, ಕಡ್ಡಿ, ಹುಲ್ಲುಗಳನ್ನು ತೆಗೆದು ಸ್ವಚ್ಛವಾಗಿಡಬೇಕು. ಮಾವಿನ ಮರಗಳಿಗೆ ಅವುಗಳ ವಯಸ್ಸಿಗೆ ಅನುಗುಣವಾಗಿ ಸೂಕ್ತ ಅಳತೆಯ ಪಾತಿ ಮಾಡಿ, ಅಲ್ಲಿ ಉದುರಿ ಬಿದ್ದಿರುವ ಮಾವಿನ ಎಲೆಗಳನ್ನು ಮಣ್ಣಿನಲ್ಲಿ ಮಿಶ್ರಣಗೊಳಿಸಲು ಲಘು ಅಗೆತ ಮಾಡಬೇಕು.
ಮಾವಿಗೆ ಕ್ಯಾಲ್ಸಿಯಂ ಅವಶ್ಯಕತೆ ಹೆಚ್ಚಿರುವ ಕಾರಣ ಹಾಗೂ ಮಾವಿನ ಹಣ್ಣಿನಲ್ಲಿ ಗರ್ಭ (ಸ್ಪಾಜಿಟಿಶ್ಯೂ), ಕಾಂಡದ ಸಿಪ್ಪೆ ಬಿರುಕು ಬಿಡುವುದು, ಅಂಟು ಸೋರುವುದು, ರೆಂಬೆಗಳ ತುದಿ ಒಣಗುವಿಕೆ ಇತ್ಯಾದಿ ಸಮಸ್ಯಗಳು ಕ್ಯಾಲ್ಸಿಯಂ ಕೊರತೆಯಿಂದ ಉಂಟಾಗುವ ಕಾರಣ ಸುಣ್ಣವನ್ನು ಪ್ರಸಕ್ತ ಹಂಗಾಮಿನಲ್ಲಿ ನೀಡಬೇಕು. ಸುಣ್ಣವನ್ನು ಮೊದಲನೇ ಬಾರಿ ನೀಡಿದ ನಂತರ ಮತ್ತೆ ಪ್ರತಿ ವರ್ಷ ನೀಡುವ ಅಗತ್ಯವಿರುವುದಿಲ್ಲ. ಎರಡರಿಂದ ಮೂರು ವರ್ಷಕ್ಕೊಮ್ಮೆ ಸುಣ್ಣ ನೀಡುವುದನ್ನು ಪುನರಾವರ್ತನೆಗೊಳಿಸಬಹುದು.
ಬಾದಾಮಿ (ಅಲ್ಪಾನೋ) ತಳಿಯಲ್ಲಿ ಸುಣ್ಣವನ್ನು ತಪ್ಪದೇ ನೀಡುವುದು, ಏಕೆಂದರೆ ಈ ತಳಿಯು ಸುಣ್ಣವನ್ನು ಹೆಚ್ಚಿನ ಪ್ರಮಾಣದಲ್ಲಿ ಬಯಸುತ್ತದೆ. ಅಲ್ಲದೇ ಸುಣ್ಣದ ಕೊರತೆಯ ಲಕ್ಷಣಗಳು ಈ ತಳಿಯಲ್ಲಿ ಅತ್ಯಧಿಕವಾಗಿ ಕಾಣಿಸಿಕೊಳ್ಳುತ್ತವೆ.
ಮಾವಿಗೆ ಪೋಷಕಾಂಶ ನೀಡುವುದು; ಹಸಿರೆಲೆ ಗೊಬ್ಬರ ಬೆಳೆಗಳಾದ ಸೆಣಬು, ಹುರಳಿ, ಇತ್ಯಾದಿಗಳನ್ನು ಪ್ರಸಕ್ತ ಹಂಗಾಮಿನಲ್ಲಿ ಬಿತ್ತನೆ ಮಾಡಿ ಅವು ಹೂ ಬಿಡುವ ಹಂತ ತಲುಪುವ ಮೊದಲು ಅವುಗಳನ್ನು ಮಣ್ಣಿನಲ್ಲಿ ಉಳುಮೆ ಮಾಡಿ ಸೇರಿಸಬೇಕು. ಇದರಿಂದ ಮುಖ್ಯವಾಗಿ ಸಾರಜನಕ ಮತ್ತು ಸೇಂದ್ರೀಯ ಪದಾರ್ಥಗಳನ್ನು ಒದಗಿಸಲು ಸಹಾಯಕವಾಗುತ್ತದೆ ಹಾಗೂ ಕಳೆ ನಿಯಂತ್ರಣಕ್ಕೂ ಸಹಕಾರಿ.
ಮಾವಿಗೆ ನೀಡುವ ಸೇಂದ್ರೀಯ ಗೊಬ್ಬರಗಳಲ್ಲಿ ಬೇವಿನ ಹಿಂಡಿ, ತಿಪ್ಪೆಗೊಬ್ಬರ ಕಾಂಪೋಸ್ಟ್‌ಗಳು ಪ್ರಮುಖವಾದವು. ಬೇವಿನ ಹಿಂಡಿಯನ್ನು ಪ್ರತಿ ವಯಸ್ಕ ಮರಕ್ಕೆ ಒಂದು ಕೆ.ಜಿ. ಪ್ರಮಾಣದಲ್ಲಿ ನೀಡುವುದರಿಂದ ಪೋಷಕಾಂಶಗಳ ಜೊತೆಗೆ ಹಣ್ಣಿನ ನೊಣಗಳ ಕೋಶ, ಗೆದ್ದಲು, ಗೊಣ್ಣೆಹುಳು ಮುಂತಾದವುಗಳು ಸಹ ನಿವಾರಣೆಯಾಗುವಲ್ಲಿ ಸಹಕಾರಿಯಾಗಲಿದೆ. ತಿಪ್ಪೆಗೊಬ್ಬರ/ ಕಾಂಪೋಸ್ಟ್ ಅನ್ನು ಲಭ್ಯತೆಗೆ ಅನುಗುಣವಾಗಿ 20-50 ಕೆ.ಜಿ. ಪ್ರಮಾಣದಲ್ಲಿ ಪ್ರಸಕ್ತ ಹಂಗಾಮಿನಲ್ಲಿ ನೀಡುವುದು.
ರಾಸಾಯನಿಕ ಗೊಬ್ಬರಗಳು: ಅಧಿಕ ಫಸಲು ನೀಡಿ ಬಸವಳಿದ ಮರಗಳಿಗೆ ಸಾರಜನಕ, ರಂಜಕ, ಪೊಟ್ಯಾಷ್ ಮತ್ತು ಲಘು ಪೋಷಕಾಂಶಗಳನ್ನು ನೀಡುವುದರ ಅವಶ್ಯಕತೆ ಇದೆ. ಇದಕ್ಕಾಗಿ ಪ್ರತಿ ವಯಸ್ಕ ಗಿಡಕ್ಕೆ 15:15:15/ 19:19:19 ಸಂಯುಕ್ತ ಗೊಬ್ಬಗಳನ್ನು 2 ರಿಂದ 3 ಕೆ.ಜಿ. ಪ್ರಮಾಣದಲ್ಲಿ ಜುಲೈ-ಆಗಸ್ಟ್ ತಿಂಗಳಿನಲ್ಲಿ ನೀಡುವುದು.
ಬಯಲುಸೀಮೆ/ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಪೊಟ್ಯಾಷಿಯಂ ನೈಟ್ರೇಟ್ (30:0:45) 20 ಗ್ರಾಂ ಅನ್ನು 30 ಗ್ರಾಂ ಯೂರಿಯಾವನ್ನು (46%) ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಎಲೆಗಳಿಗೆ ಸಿಂಪಡಿಸುವುದು. ಇದೇ ಮಿಶ್ರಣವನ್ನು ಹೂ ಬಿಡುವ ಮುನ್ನ (ನವೆಂಬರ್-ಡಿಸೆಂಬರ್) ಸಹ ಮತ್ತೊಮ್ಮೆ ನೀಡುವುದರಿಂದ ಹೂಗಳು ಚೆನ್ನಾಗಿ ಕಾಣಿಸಿಕೊಳ್ಳುತ್ತವೆ ಹಾಗೂ ಕಾಯಿ ಕಚ್ಚುವ ಪ್ರಮಾಣ ಅಧಿಕಗೊಳ್ಳುತ್ತದೆ.
ಜುಲೈ, ಆಗಸ್ಟ್‌ನಲ್ಲಿ ಮಾವಿನ ರೆಂಬೆಗಳನ್ನು ತೆರವುಗೊಳಿಸಿ ಮರದ ಎಲ್ಲಾ ಭಾಗಗಳಲ್ಲಿ ಸೂರ್ಯನ ಬೆಳಕು ಹಾಗೂ ಗಾಳಿಯಾಡುವಿಕೆ ಉತ್ತಮಗೊಳಿಸುವುದರ ಮೂಲಕ ಹೂ ಬಿಡುವಿಕೆ, ಫಸಲಿನ ಪ್ರಮಾಣ ಮತ್ತು ಹಣ್ಣಿನ ಗುಣಮಟ್ಟವನ್ನು ಅಧಿಕಗೊಳಿಸಲು ಸಾಧ್ಯ. ಅಲ್ಲದೇ ಈ ಕ್ರಮದಿಂದ ಹಿಟ್ಟಿನ ತಿಗಣೆ, ಚಿಪ್ಪು ತಿಗಣೆ ಹಾಗೂ ಜಿಗಿಹುಳುವಿನ ಬಾಧೆಯನ್ನು ಕಡಿಮೆಗೊಳಿಸಬಹುದಾಗಿರುತ್ತದೆ.












Click it and Unblock the Notifications