ಮೆಣಸಿನಕಾಯಿ ಬೆಳೆಗಾರರು ಲಾಭಗಳಿಸುವುದು ಹೇಗೆ?, ಸಲಹೆಗಳು
ಬಳ್ಳಾರಿ, ಜೂನ್ 20: ಮೆಣಸಿನಕಾಯಿ ಬೆಳೆಗಾರರು ಹಾಗೂ ನರ್ಸರಿ ಮಾಲೀಕರು ಉತ್ತಮ ಬೆಳೆಗಳನ್ನು ಪಡೆಯಲು ಸೂಕ್ತ ಕ್ರಮಗಳನ್ನು ಅನುಸರಿಸಬೇಕು ಎಂದು ತೋಟಗಾರಿಕೆ ಇಲಾಖೆ ಸಲಹೆಗಳನ್ನು ನೀಡಿದೆ. ಬೀಜ ಖರೀದಿಯಿಂದ ಬೇಸಾಯ ಕ್ರಮದ ತನಕ ಮಾಹಿತಿ ನೀಡಲಾಗಿದೆ.
ಬಳ್ಳಾರಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಸಂತೋಷ್ ಸಪ್ಪಂಡಿ ರೈತರಿಗೆ ಹಲವು ಸಲಹೆಗಳನ್ನು ನೀಡಿದ್ದಾರೆ. ರೈತರು ಪ್ರಸಕ್ತ ಸಾಲಿಗೆ ಮೆಣಸಿನಕಾಯಿ ಸಸಿಯನ್ನು ಜಿ.ಎಸ್.ಟಿ ನೋಂದಣಿಯನ್ನು ಹೊಂದಿರುವ ನರ್ಸರಿಗಳಿಂದಲೇ ಖರೀದಿಸಿ ನಾಟಿ ಮಾಡಿ, ಬಿಲ್ ಅನ್ನು ಪಹಣಿಯಲ್ಲಿರುವ ರೈತರ ಹೆಸರಿಗೆ ಪಡೆಯುವುದು ಕಡ್ಡಾಯವಾಗಿದೆ.

ರೈತ ಬಾಂಧವರು ಒಂದೇ ಕಂಪನಿಯ ಬೀಜಗಳ ಮೇಲೆ ಅವಲಂಭಿತವಾಗದೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಧಿಕ ಇಳುವರಿಯ ಇತರೆ ಕಂಪನಿಯ ಬೀಜಗಳನ್ನು ಸಹ ಖರೀದಿಸಿ ನಾಟಿ ಮಾಡಬಹುದು. ರೈತರು ಸ್ವೀಕರಿಸಿದ ರಸೀದಿಯನ್ನು ಬೆಳೆ ಮಾರಾಟ ಆಗುವವರೆಗೂ ಜೋಪಾನವಾಗಿ ಇಟ್ಟುಕೊಳ್ಳುವುದು. ಬೀಜಗಳನ್ನು ನೇರವಾಗಿ ನಾಟಿ ಮಾಡುವ ಮುನ್ನ ಬೀಜೋಪಚಾರಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ರೈತರಿಗೆ ನೀಡುವ ಸಲಹೆಗಳು: ರೈತ ಬಾಂಧವರಿಗೆ ಮೆಣಸಿನಕಾಯಿ ಸಸಿಯನ್ನು ಮಾರಾಟ ಮಾಡುವ ನರ್ಸರಿ ಮಾಲೀಕರುಗಳು ತಮ್ಮ ನರ್ಸರಿಯ ಜಿ.ಎಸ್.ಟಿ ನೋಂದಣಿಯನ್ನು ಮಾಡಿಕೊಂಡ ನಂತರವೇ ತರಕಾರಿ ಸಸಿ ತಯಾರಿಸಲು ಮುಂದಾಗಬೇಕು. ನರ್ಸರಿಗಳಲ್ಲಿ ತಾವು ಉಪಯೋಗಿಸುವ ಬೀಜ, ಗೊಬ್ಬರ, ರೋಗ ಮತ್ತು ಕೀಟನಾಶಕಗಳ ವಿವರಗಳನ್ನು ವಹಿಯಲ್ಲಿ ನಮೂದಿಸಿ ಕಟ್ಟು ನಿಟ್ಟಾಗಿ ನಿರ್ವಹಿಬೇಕು ಎಂದು ಹೇಳಿದ್ದಾರೆ.
ನರ್ಸರಿಗಳಲ್ಲಿ ರೈತರಿಂದ ಬೀಜ ಪಡೆದಿರುವ ಮತ್ತು ಸಸಿಗಳನ್ನು ವಿತರಿಸಿದ ದಿನಾಂಕಗಳ ವಹಿಯನ್ನು ಸಹ ನಿರ್ವಹಿಸಬೇಕು ಹಾಗೂ ನರ್ಸರಿಗಳಲ್ಲಿ ಸಸಿಗಳನ್ನು ಉತ್ಪಾದಿಸಲು ಕೋಕೋ ಪಿಟ್ ಅನ್ನು ಖರೀದಿಸಿ, ಉಪಯೋಗಿಸಿ ಸದರಿ ಬಿಲ್ಲುಗಳ ವಿವರವನ್ನು ವಹಿಗಳಲ್ಲಿ ನಿರ್ವಹಣೆ ಮಾಡಬೇಕು.
ರೈತರ ಹಿಂದಿನ ವರ್ಷದಲ್ಲಿ ಇಳುವರಿ ತೀರ ಕುಂಠಿತವಾಗಿದ್ದು, ಆರ್ಥಿಕವಾಗಿ ನಷ್ಟ ಅನುಭವಿಸಿರುವುದರಿಂದ ಪ್ರಸಕ್ತ ಸಾಲಿಗೆ ನರ್ಸರಿ ಮಾಲಿಕರು ಈ ಹಿಂದಿನ ಸಾಲಿನಂತಯೇ ರೈತರಿಗೆ ರೂ. 40 ಪೈಸೆ ದರದಲ್ಲಿಯೇ ಉತ್ತಮ ಗುಣಮಟ್ಟದ ಸಸಿಗಳನ್ನು ತಯಾರಿಸಿ ಪೂರೈಸಬೇಕು.
ನರ್ಸರಿ ಮಾಲೀಕರು ಸಸಿಗಳನ್ನು ಉತ್ಪಾದಿಸುವ ಸಮಯದಲ್ಲಿ ರೈತರಿಂದ ಯಾವ ಕಂಪನಿಯ ಬೀಜ ಖರೀದಿಸಿರುತ್ತಾರೆ ಎಂಬುವುದರ ಬಗ್ಗೆ ಖತರಿಪಡಿಸಿಕೊಳ್ಳಲು ಬೀಜ ಖರೀದಿಸಿರುವ ಜಿ.ಎಸ್.ಟಿ ಸಂಖ್ಯೆ ಹೊಂದಿರುವ ಬಿಲ್ಲುಗಳ ಜೆರಾಕ್ಸ್ ಪ್ರತಿಯನ್ನು ಪಡೆದ ನಂತರವೇ ತಮ್ಮ ನರ್ಸರಿಯಲ್ಲಿ ಬೀಜವನ್ನು ಸಸಿ ತಯಾರಿಸಲು ನಾಟಿ ಮಾಡಬೇಕು ಎಂದು ತಿಳಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಗುಣಮಟ್ಟದ ಮೆಣಸಿನಕಾಯಿ ದೇಶ-ವಿದೇಶದಲ್ಲಿ ಪ್ರಸಿದ್ಧಿ ಪಡೆದಿದೆ. ಆದರೆ ಮಾರುಕಟ್ಟೆಗೆ ಬ್ಯಾಡಗಿ ಸೇರಿದಂತೆ ದೂರದ ಊರುಗಳಿಗೆ ಹೋಗಬೇಕಿದೆ. ಅದನ್ನು ತಪ್ಪಿಸುವ ದೃಷ್ಟಿಯಿಂದ ಹೊಸಪೇಟೆ ರಸ್ತೆಯ ಬೈಪಾಸ್‍ನಲ್ಲಿ ಸುಸಜ್ಜಿತ ಮೆಣಸಿನಕಾಯಿ ಮಾರುಕಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿತ್ತು. ಜೊತೆಗೆ ಸಂಸ್ಕರಣ ಮತ್ತು ಮೌಲ್ಯವರ್ಧನೆ ಸಲುವಾಗಿ ಆಲದಹಳ್ಳಿಯಲ್ಲಿ 10 ಎಕರೆ ಜಾಗವನ್ನು ಸಹ ಗುರುತಿಸಲಾಗಿತ್ತು.
ಮೆಣಸಿನಕಾಯಿ ಬೆಳೆ ಸಂಬಂಧಿತ ಚಟುಕಟಿಕೆಗಳಿಗೆ ಉದ್ಯಮದ ರೂಪ ನೀಡುವುದು, ಸಂಸ್ಕರಣೆ, ಪ್ಯಾಕಿಂಗ್, ಬ್ರ್ಯಾಂಡಿಂಗ್ ಮತ್ತು ಮಾರುಕಟ್ಟೆ ಹಂತಗಳಲ್ಲಿ ಸರ್ಕಾರ ರೈತರಿಗೆ ಬಲ ತುಂಬುವ ಮೂಲಕ, ಬೆಳೆಗೆ ತಕ್ಕ ಬೆಲೆ ಹಾಗೂ ಲಾಭ ಕಲ್ಪಿಸುವ ಉದ್ದೇಶದ ಬಗ್ಗೆ ಹಲವು ಬಾರಿ ಚರ್ಚೆಗಳು ನಡೆದಿವೆ.
2021-22 ಸಾಲಿನಲ್ಲಿ ಜಿಲ್ಲೆಯಲ್ಲಿ 66 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿತ್ತು. ಆದರೆ ಅಕಾಲಿಕ ಮಳೆಯಿಂದಾಗಿ, ಕೀಟದ ಹಾವಳಿಯಿಂದ ಮೆಣಸಿನಕಾಯಿ ಬೆಳೆ ಹಾನಿಯಾಗಿ ರೈತರಿಗೆ ತುಂಬಲಾರದ ನಷ್ಟವೂ ಆಗಿತ್ತು. 2023ನೇ ಸಾಲಿನಲ್ಲಿ ಬರದ ಕಾರಣ ಮೆಣಸಿನಕಾಯಿ ಬೆಳೆ ಬೆಳೆಯದಂತೆ ರೈತರಿಗೆ ಮನವಿ ಮಾಡಲಾಗಿತ್ತು.












Click it and Unblock the Notifications