ಭೂ ತಾಯಿ ಒಡಲಿಗೆ ವಿಷ ತುಂಬಲ್ಲ ಎಂದು ಆಣೆ ಮಾಡಿದಂತೆ ಬದುಕುತ್ತಿರುವ ಯುವಕರಿವರು
ಅನೇಕ ಗ್ರಾಮೀಣ ಯುವಕರಲ್ಲಿ ಹರಿಯುವ ಕೃಷಿಕ ರಕ್ತ ಮತ್ತೆ ಅವರನ್ನು ಹೊಲ-ಗದ್ದೆ, ತೋಟಗಳಿಗೆ ಕರೆತರುತ್ತಿದೆ ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಸಾಕ್ಷಿಯಾಗುತ್ತಿವೆ. ಇಂತಹವರಿಗೆ ಪ್ರೇರಣೆಯಾಗಿ ಹಳ್ಳಿಗಳಲ್ಲೇ ಉಳಿದ ಯುವಕರು ಇರುವುದು ಅತಿ ಮುಖ್ಯ ಸಂಗತಿ. ಇಂತಹ ಯುವಕರಲ್ಲಿ ಶ್ರೀನಿವಾಸಪುರ-ಮುಳಬಾಗಲು ರಸ್ತೆಯಲ್ಲಿ ಬರುವ ಎಚ್.ಜಿ.ಹೊಸೂರು ಜಗದೀಶ್ ಒಬ್ಬರು.
ಅನಕ್ಷರಸ್ಥ, ತೆಲುಗು ಮಾತೃಭಾಷೆಯ ರೈತ ಕುಟುಂಬದಲ್ಲಿ ಹುಟ್ಟಿದ ಇವರು ಓದಿದ್ದು ಪ್ರಾಥಮಿಕ ಏಳನೇ ತರಗತಿವರೆಗೆ ಮಾತ್ರ. ಆದರೆ ಸೊಗಸಾದ ಕನ್ನಡ ಇವರ ಮಾತಿನಲ್ಲಿದೆ. ಶಾಲೆ ಬಿಟ್ಟು ಬೇಸಾಯಕ್ಕೆ ಇಳಿದ ಜಗದೀಶ್, ಎಲ್ಲರಂತೆ ಕೈಗೆ ಎತ್ತಿಕೊಂಡಿದ್ದು ರಾಸಾಯನಿಕ ಗೊಬ್ಬರ, ಕ್ರಿಮಿನಾಶಕವನ್ನು. ಸುಮಾರು 10 ವರ್ಷಗಳ ಕಾಲ ಈ ವಿಷವನ್ನು ಭೂಮಿಗೆ ಉಣಿಸಿ ಅದರ ಪರಿಣಾಮವನ್ನು ಅನುಭವಿಸಿದ ಮೇಲೆ ಇವರ ಮನಸ್ಸಿನಲ್ಲಿದ್ದ ಪಾರಂಪರಿಕ ಸಾವಯವ ಬೇಸಾಯ ಕಣ್ಣು ತೆರೆಯಿತು.
ಈಗ ಎರಡು ವರ್ಷಗಳಿಂದ ವಿಷಮುಕ್ತ ಕೃಷಿಗೆ ತೊಡಗಿದ್ದಾರೆ. ಅಕ್ಕಲು (ಮಿಶ್ರ) ಬೇಸಾಯದಲ್ಲಿ ವಿಶ್ವಾಸ ಹೊಂದಿರುವ ಜಗದೀಶ್ ತಮ್ಮ ತೋಟದಲ್ಲಿ ಟೊಮೆಟೋದೊಂದಿಗೆ ತಿಂಗಳ ಹುರಳಿ, ಅವರೆ, ಹೀರೆಕಾಯಿ ಬೆಳೆಗಳನ್ನು ಬೆಳೆಯುತ್ತಾರೆ. ಅದಕ್ಕೆ ಬೇಕಾದ ಓರಿಯಂಟಲ್ ಹರ್ಬಲ್ ನ್ಯೂಟ್ರಿಯಟ್ (ಓಎಚ್ ಎನ್) 1, 2, 3ರನ್ನು ತಯಾರಿಸಿಕೊಳ್ಳುತ್ತಾರೆ.

ಹಾಗೆಯೇ ಜೀವವಾಂಶ ಗೊಬ್ಬರವನ್ನು ದ್ರವರೂಪದಲ್ಲಿ ಭೂಮಿಗೆ ಸಿಂಪಡಿಸಿ, ಉಪಯುಕ್ತ ಬ್ಯಾಕ್ಟೀರಿಯಾಗಳು ಬೆಳೆಯುವಂತೆ ನೋಡಿಕೊಳ್ಳುತ್ತಾರೆ. ಈ ಕ್ರಮಗಳಿಂದಾಗಿ ಭೂಮಿ ತನ್ನ ಸಹಜ ಫಲವತ್ತತೆಗೆ ಮರಳುವಂತಾಗಿದೆ. ಆತುರ ಪಡದೆ ಇನ್ನೈದು ವರ್ಷಗಳ ಕಾಲ ಇದೇ ಪದ್ದತಿಯನ್ನು ಅನುಸರಿಸಿದರೆ ಭೂಮಿ ತನ್ನ ತಾತಂದಿರ ಕಾಲದ ಫಲವತ್ತತೆಯನ್ನು ಪಡೆಯುತ್ತದೆ ಎಂಬ ಅಭಿಪ್ರಾಯ ಜಗದೀಶರದು. ಬೆಳೆಯ ಮಾರಾಟದ ವ್ಯವಸ್ಥೆಯ ಬಗ್ಗೆ ಮಾತನಾಡುವ ಜಗದೀಶ್, ದಲ್ಲಾಳಿಗಳ ಮತ್ತು ಕಮಿಷನ್ ಮಂಡಿಗಳವರಿಂದ ರೈತನಿಗಾಗುವ ಅನ್ಯಾಯವನ್ನು ಅನುಭವಿಸಿದಾಗ ಇದಕ್ಕೆ ಪರ್ಯಾಯ ಮಾರ್ಗವನ್ನು ಕಂಡುಕೊಳ್ಳಲು ಮಾಡಿದ ಪ್ರಯತ್ನದಿಂದಾಗಿ ಬಳಕೆದಾರರಿಗೆ ನೇರ ಮಾರಾಟ ಎಂಬ ವಿಚಾರ ಹೊಳೆಯಿತು.
ಬೆಳೆದ ತರಕಾರಿಗಳನ್ನು ಮಾವ ಸಿಐಟಿ ಮಂಜು ಅವರ ಸಲಹೆಯಂತೆ ಸಂತೆಗೆ ತೆಗೆದುಕೊಂಡು ಹೋಗಿ, ಅಲ್ಲಿಯ ಅಂದಿನ ಬೆಲೆಗೆ ಮಾರಾಟ ಮಾಡಿ ಮನೆಗೆ ಬಂದಾಗ, ಎಲ್ಲಿಯೋ ವಂಚಿಸಿರುವೆ ಎಂದು ಅನಿಸತೊಡಗಿತು. ಈ ಆತ್ಮಸಾಕ್ಷಿಯಿಂದಾಗಿ ಮಂಡಿ ಕಮಿಷನ್ನು ಬೆಳೆಗಾರನ ಲಾಭವಾಗಿ ಪರಿಗಣಿಸಿ, ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಗೆ ಮಾರಲು ನಿರ್ಧರಿಸಿದೆ. ಇದು ಗ್ರಾಹಕರ ಮೆಚ್ಚುಗೆ ಪ್ರೋತ್ಸಾಹ ಪಡೆಯಿತು. ಈಗ ವಾಹನ- ಜನ ಸಂಚಾರದ ಮುಖ್ಯ ರಸ್ತೆಗಳ ಬದಿಯಲ್ಲಿ ಮರದಡಿ ತರಕಾರಿ ಇಟ್ಟು ಮಾರಲಾಗುತ್ತಿದೆ. ಇದರಿಂದಾಗಿ ನಿಧಾನವಾಗಿ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದೆ. ಇಲ್ಲಿ ತಾಳ್ಮೆ ಕಳೆದುಕೊಂಡರೆ ರೈತನ ಅಭಿವೃದ್ಧಿಗೆ ಕುಠಿತವಾಗುವ ಸಾಲಕ್ಕೆ ಗುಲಾಮನಾಗಬೇಕಾಗುತ್ತದೆ ಎನ್ನುತ್ತಾರೆ.

ಐದೆಂಟು ಸಾವಿರಗಳಿಗೆ ಹೋಗಿ ನಗರಗಳಲ್ಲಿ ದುಡಿದು, ಗಾಣದ ಕಬ್ಬಿನಂತೆ ಸಿಪ್ಪೆಯಾಗುತ್ತಿರುವ ಗ್ರಾಮೀಣ ಯುವಕರಿಗೆ ತಮ್ಮ ಭೂಮಿಗೆ ಮರಳಲು ಅಗತ್ಯವಾದ ಶುದ್ಧ ನೀರು, ಬೆಳೆ ಮತ್ತು ಬದುಕನ್ನು ಕೆಡಿಸದ ಬೀಜ ಒದಗಿಸಿ, ಸಾವಯವ ಕೃಷಿಯ ಪರಿಸರ ಕಲ್ಪಿಸಿದರೆ ಬಹುತೇಕ ನಾಶದ ಅಂಚಿನಲ್ಲಿರುವ ದೇಸಿ ಕೃಷಿ ಪುನರುಜ್ಜೀವನಗೊಳ್ಳುತ್ತದೆ ಎಂಬ ದೃಢಸಂಕಲ್ಪವಿರುವ ಜಗದೀಶ್, ಆತ್ಮವಿಶ್ವಾಸದಿಂದ 10 ಜನ ಯುವ ರೈತರೊಂದಿಗೆ ಕೂಡಿ ಎರಡು ತಿಂಗಳ ಹಿಂದೆ ಶ್ರೀರಾಮ ಆತ್ಮ ಸಾವಯವ ಸಂಘವನ್ನು ಕಟ್ಟಿದ್ದಾರೆ. ಈ ಯುವಕರು ತಮ್ಮ ಕೃಷಿಗೆ ಅಗತ್ಯವಾದ ಪಾರಂಪರಿಕ ಸಾವಯವ ಕೃಷಿ ಪೂರಕ ಗೊಬ್ಬರ, ಔಷಧಗಳನ್ನು ತಯಾರಿಸಿಕೊಳ್ಳುತ್ತಿದ್ದಾರೆ.

ಬೇಸಾಯ, ಗ್ರಾಮೀಣ ಯುವಜನ ಕಲ್ಯಾಣ, ರಾಷ್ಟ್ರ ಪ್ರಗತಿ ಬದ್ಧತೆಯ ಹಂಬಲ ಹೊಂದಿ, ಮನಸ್ಸಿನಲ್ಲಿ ಅನೇಕ ಯೋಜನೆಗಳನ್ನು ಹಾಕಿಕೊಂಡಿರುವ ಜಗದೀಶ್ ಅವರಿಗೆ ಕೊರತೆಯಾಗಿರುವುದು ಆರ್ಥಿಕ ಬಲ. ಅದನ್ನು ನೀಗಿಕೊಳ್ಳಲು ತೊಡಗಿರುವುದು ನೆಲದಮ್ಮನ ಮಡಿಲ ಆಶ್ರಯದಲ್ಲಿ. ಬೇಸಾಯದಲ್ಲಿ ತೊಡಗಿದ್ದಾರೆ. ಇವರನ್ನೂ ಒಳಗೊಂಡಂತೆ ಇಲ್ಲಿಯ ರೈತರು ತಮ್ಮ ಜಮೀನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಕಾರಣ ಐದಾರು ವರ್ಷಗಳ ಹಿಂದೆ ರೈಲ್ವೆ ಕೋಚ್ ಫ್ಯಾಕ್ಟರಿ ನಿರ್ಮಾಣಕ್ಕಾಗಿ ಈ ಜಮೀನುಗಳನ್ನು ಗುರುತಿಸಿ ಹೋಗಿರುವುದು. ಗಳಿಕೆಯನ್ನು ಸುರಿದು ಭೂಮಿಯನ್ನು ಫಲವತ್ತು ಮಾಡಲು, ನೆಮ್ಮದಿಯಿಂದ ಬೆಳೆ ಬೆಳೆಯಲು ಸಾಧ್ಯವಿಲ್ಲವಾಗಿದೆ.

ಇತ್ತ ಉದ್ದೇಶಿತ ಫ್ಯಾಕ್ಟರಿಯು ಆಗುವಂತಿಲ್ಲ. ಅತ್ತ ಭೂಮಿಯನ್ನೂ ಅಭಿವೃದ್ಧಿಪಡಿಸುವಂತಿಲ್ಲ. ಈ ಗೊಂದಲದ ನಡುವೆ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಕಾಡಿನಲ್ಲಿ ನೆಲೆ ಕಳೆದುಕೊಳ್ಳುತ್ತಿರುವ ಜಿಂಕೆ, ಮೊಲ, ಹಂದಿ, ಹೆಗ್ಗಣಗಳು ಬೆಳೆಗಳ ಮೇಲೆ ದಾಳಿಯಿಡುತ್ತಿವೆ. ಈ ಎಲ್ಲಾ ಸಮಸ್ಯೆಗಳು ನಿವಾರಣೆಯಾದರೆ ರೈತನ ಬದುಕು ಸುಸ್ಥಿರಗೊಳ್ಳುವುದು. ಆ ದಿನಗಳನ್ನು ಕಾಣುವ ಭಾಗ್ಯ ರೈತನಿಗಿರುವುದೇ ಎಂಬುದು ಶೇಷ ಪ್ರಶ್ನೆ.
-
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು












Click it and Unblock the Notifications