ದಾವಣಗೆರೆ ಜಿಲ್ಲೆಯಲ್ಲಿ ಮಳೆರಾಯನ ಅಟ್ಟಹಾಸ ಆರ್ಭಟ; 8 ಸಾವಿರ ಕೋಳಿಗಳು ಸಾವು
ದಾವಣಗೆರೆ, ಅಕ್ಟೋಬರ್, 13: ದಾವಣಗೆರೆ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಜನರ ಬದುಕು ಹೇಳತೀರದಾಗಿದೆ. ಅಲ್ಲದೆ ಕಳೆದ ಮೂರು ದಿನಗಳಲ್ಲಿ ಸುರಿದ ಭಾರಿ ಮಳೆಯಿಂದ 20 ಕೋಟಿ ರೂಪಾಯಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಕೆರೆ, ಕಟ್ಟೆಗಳು, ಹಳ್ಳಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ದೊಡ್ಡ ಪ್ರಮಾಣ ಕೆರೆಗಳ ಕೋಡಿ ಬಿದ್ದ ಪರಿಣಾಮ ಜಮೀನುಗಳಿಗೆ ನುಗ್ಗಿದ್ದು, ಬೆಳೆಗಳು ಸಂಪೂರ್ಣಾವಾಗಿ ಜಲಾವೃತವಾಗಿವೆ. ಇನ್ನು ಬೆಳೆಗಳನ್ನು ಕಳೆದುಕೊಂಡ ರೈತರು ಅಕ್ಷರಶಃ ತತ್ತರಿಸಿ ಹೋಗಿದ್ದಾರೆ. ತಾಲೂಕಿನ ಕೆರೆಯಾಗಳಹಳ್ಳಿಯಲ್ಲಿ ಜಮೀನಿನಲ್ಲಿದ್ದ ಕೋಳಿ ಫಾರಂಗೆ ಮಳೆ ನೀರು ನುಗ್ಗಿದೆ. ಪರಿಣಾಮ 8,000ಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ.
8 ಸಾವಿರ ಕೋಳಿಗಳಿಗೆ ಬಂಡವಾಳ ಹಾಕಿದ್ದ ಫಾರಂ ಮಾಲೀಕ ರಂಗಪ್ಪ ಕಂಗಾಲಾಗಿದ್ದಾರೆ. ಕಳೆದ ಹದಿನೈದು ದಿನಗಳ ಹಿಂದೆ ಸುಮಾರು ಹದಿನೈದು ಲಕ್ಷ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿ ರಂಗಪ್ಪ ಕೋಳಿ ಫಾರಂ ತೆರೆದಿದ್ದರು. ಇದಕ್ಕಾಗಿ ಬ್ಯಾಂಕ್ ಹಾಗೂ ಇತರೆಡೆ ಸಾಲ ಮಾಡಿಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸುರಿದ ಮಳೆಗೆ ಬೆಳೆ ಹಾನಿ ಮಾತ್ರವಲ್ಲ, ಎಂಟು ಸಾವಿರ ಕೋಳಿಗಳು ಮಾರಣಹೋಮ ಹೊಂದಿವೆ.

8 ಸಾವಿರ ಕೋಳಿಗಳು ನೀರುಪಾಲು
ಅಣಜಿ, ಹೆಬ್ಬಾಳು, ಭರಮಸಾಗರ ಕೆರೆಗಳು ತುಂಬಿ ಹರಿಯುತ್ತಿದ್ದು, ಕೋಡಿ ಬಿದ್ದಿವೆ. ಇದರಿಂದಾಗಿ ಹಳ್ಳ- ಕೊಳ್ಳಗಳಿಗೆ ದಾಖಲೆ ಪ್ರಮಾಣದ ನೀರು ಹರಿದು ಬರುತ್ತಲೇ ಇದೆ. ಭರಮಸಾಗರದಿಂದ ಯಥೇಚ್ಛವಾಗಿ ನೀರು ಹರಿದು ಬಂದ ಕಾರಣ ರಂಗಪ್ಪನವರ ಜಮೀನು ಪಕ್ಕದಲ್ಲಿದ್ದ ಹಳ್ಳ ಉಕ್ಕಿ ಹರಿದಿದೆ. ಈ ನೀರು ಫಾರಂಗೆ ನುಗ್ಗಿದ ಪರಿಣಾಮ ಅಲ್ಲಿದ್ದ ಕೋಳಿಗಳು ಕೊಚ್ಚಿಹೋಗಿವೆ. "ಕಳೆದ 5 ದಶಕಗಳಲ್ಲಿ ಇಂತಹ ಮಳೆಯನ್ನೇ ನೋಡಿರಲಿಲ್ಲ. ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದು ಬಂದಿದ್ದೇ ಇಲ್ಲ. ನೀರು ಬರುತ್ತಿರುವುದನ್ನು ನೋಡಿದ ಎಲ್ಲರೂ ಆತಂಕಕ್ಕೆ ಒಳಗಾಗಿದ್ದೇವೆ. ಜಲಪ್ರವಾಹ ಬಂದಾಗ ಏನು ಮಾಡಲು ಆಗಲಿಲ್ಲ. ಕೊಳಿ ರಕ್ಷಣೆ ಮಾಡುವುದಿರಲಿ, ಫಾರಂನೊಳಗೆ ಹೋಗಲು ಆಗಲೇ ಇಲ್ಲ. ಅಪಾರ ಪ್ರಮಾಣದ ನಷ್ಟ ಆಗಿದೆ. ಅಂದಾಜು 18 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ. ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ," ಎಂದು ಕೋಳಿ ಫಾರಂ ಮಾಲೀಕ ರಂಗಪ್ಪ ಅಳಲು ತೋಡಿಕೊಂಡಿದ್ದಾರೆ.

ಕಣ್ಣೀರಿಡುತ್ತಾ ಭಾವುಕರಾದ ರಂಗಪ್ಪ
"ಫಾರಂನಲ್ಲಿದ್ದ ಎಲ್ಲಾ ವಸ್ತುಗಳು ಚೆಲ್ಲಾಪಿಲ್ಲಿ ಆಗಿವೆ. ಅಳವಡಿಸಲಾಗಿದ್ದ ತಂತಿಗಳು ಕಿತ್ತು ಹೋಗಿವೆ. ಕೋಳಿಗಳು ಸಿಗದಂತೆ ನೀರಿನಲ್ಲಿಕೊಚ್ಚಿ ಹೋಗಿರುವುದನ್ನು ನೋಡಿದರೆ ಕಣ್ಣೀರು ಬರುತ್ತಿದೆ. ಕೋಳಿ ಮರಿಗಳ ಮಾರಣಹೋಮ ಆಗಿವೆ. ಕೋಳಿಗಳು ಮೃತಪಟ್ಟಿರುವುದನ್ನು ನೋಡಲು ಆಗುತ್ತಿಲ್ಲ," ಎಂದು ಕಣ್ಣೀರಿಡುತ್ತಾ ರಂಗಪ್ಪ ಭಾವುಕರಾಗಿದ್ದಾರೆ.

ಕಂಗಾಲಾದ ಜಿಲ್ಲೆಯ ಅನ್ನದಾತ
ಹೆಬ್ಬಾಳು, ಅಣಜಿ ಸೇರಿದಂತೆ ಇತರೆ ಕೆರೆಗಳು ಕೋಡಿ ಬಿದ್ದ ಕಾರಣ ಜಮೀನುಗಳಿಗಳು ಕೆರೆಯಾಗಿ ಮಾರ್ಪಟ್ಟಿವೆ. ಮೆಕ್ಕೆಜೋಳ, ರಾಗಿ, ಭತ್ತ ಬೆಳೆಗಳು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿದೆ. ಇನ್ನು ಅಡಿಕೆ ತೋಟಗಳಿಗೂ ನೀರು ನುಗ್ಗಿದ್ದು, ಅಡಿಕೆ ಬೆಳೆಗಾರರು ಈ ಬಾರಿ ಫಸಲು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಸೇತುವೆ ಕುಸಿತ, ಬೆಳೆ ಹಾನಿ, ಕೆರೆ ಕಟ್ಟೆ ಹೊಡೆದಿರುವುದು ಸೇರಿದಂತೆ ಬರೋಬ್ಬರಿ 20ಕೋಟಿ ರೂಪಾಯಿಗೂ ಅಧಿಕ ನಷ್ಟ ಆಗಿದೆ ಎಂದು ಅಂದಾಜಿಸಲಾಗಿದೆ. ಜಗಳೂರು, ನ್ಯಾಮತಿ, ಚನ್ನಗಿರಿಯಲ್ಲೂ ಮಳೆ ಆರ್ಭಟ ಜೋರಾಗಿದ್ದು, ಇಲ್ಲೂ ಕೂಡ ಅಪಾರ ಪ್ರಮಾಣದಲ್ಲಿ ಬೆಳೆಗಳು ನಾಶವಾಗಿವೆ.

ರಸ್ತೆ ದುರಸ್ಥಿ ಮಾಡಿಸಲು ಜನರ ಒತ್ತಾಯ
ದಾವಣಗೆರೆಯಿಂದ ಜಗಳೂರಿಗೆ ಹೋಗುವ ಮಾರ್ಗದಲ್ಲಿನ ರಸ್ತೆಗಳೆಲ್ಲ ಗುಂಡಿಗಳಾಗಿ ಮಾರ್ಪಟ್ಟಿವೆ. ಈ ಗುಂಡಿಬಿದ್ದ ರಸ್ತೆಗಳನ್ನು ದಾಟುವುದೇ ದೊಡ್ಡ ಸಾಧನೆ ಆಗಿದ್ದು, ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಬೇತೂರು ಹಳ್ಳಕ್ಕೆ ಸೇತುವೆ ನಿರ್ಮಿಸಿ ನೂರು ವರ್ಷಗಳಾಗಿದೆ. ಈ ಸೇತುವೆ ಮೇಲಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ. ಇಲ್ಲಿ ಜನರು ಜೀವವನ್ನು ಕೈಯಲ್ಲಿ ಹಿಡಿದು ಸಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಇತ್ತ ಗಮನಹರಿಸಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.












Click it and Unblock the Notifications