ಕರ್ನಾಟಕ ಕೃಷಿಕರ ಪಾಲಿಗೆ ಜಿಎಸ್ಟಿ ವರದಾನ
ಬೆಂಗಳೂರು, ಜೂನ್ 30: ಜಿಎಸ್ಟಿ ಜಾರಿಯಿಂದ ಕರ್ನಾಟಕದ ರೈತರಿಗೆ ಲಾಭವಾಗಲಿದೆ. ಇಲ್ಲಿಯವರೆಗೆ ಕರ್ನಾಟಕದಲ್ಲಿ ರಸಗೊಬ್ಬರ, ಕ್ರಿಮಿನಾಶಕ, ಟ್ರಾಕ್ಟರ್ ಗಳ ಮೇಲೆ ವ್ಯಾಟ್ ಮತ್ತು ಕೇಂದ್ರ ಅಬಕಾರಿ ತೆರಿಗೆಗಳಿದ್ದವು. ಇದೀಗ ಇದೆಲ್ಲಾ ಹೋಗಿ ಕೇವಲ ಜಿಎಸ್ಟಿ ದರಗಳು ಮಾತ್ರ ಇರಲಿವೆ, ಹೀಗಾಗಿ ರಸಗೊಬ್ಬರ, ಟ್ರಾಕ್ಟರ್ ಗಳ ಬೆಲೆ ಇಳಿಕೆಯಾದರೆ, ಕೀಟನಾಶಕಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ.
ಹಳೆಯ ತೆರಿಗೆ ದರಗಳಿಗೆ ಹೋಲಿಸಿದರೆ ಜಿಎಸ್ಟಿಯಿಂದ ಕರ್ನಾಟಕದ ರೈತರಿಗೆ ಲಾಭವಾಗಲಿದೆ ಎಂದು ಜಿಎಸ್ಟಿ ಸಭೆಯಲ್ಲಿ ಭಾಗವಹಿಸಿದ ಕರ್ನಾಟಕದ ಕೃಷಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಇಲ್ಲಿಯವರೆಗೆ ರಸಗೊಬ್ಬರಗಳಿಗೆ ಶೇಕಡಾ 18 ತೆರಿಗೆ ಇತ್ತು. ಇನ್ನು ಮುಂದೆ ಇದು ಶೇಕಡಾ 12ಕ್ಕೆ ಇಳಿಕೆಯಾಗಲಿದೆ. ಕೀಟನಾಶಕಗಳಿಗೆ ಮುಂದೆಯೂ ಶೇಕಡಾ 18 ತೆರಿಗೆ ಇರಲಿದೆ. ಇನ್ನು ಪಂಪ್ ಮತ್ತು ಟ್ರಾಕ್ಟರ್ ಗಳಿಗೆ ಹಾಲಿ ಶೇಕಡಾ 18ರಷ್ಟು ತೆರಿಗೆ ಇತ್ತು. ಇದು ಕೂಡಾ ಶೇಕಡಾ 12ಕ್ಕೆ ಇಳಿಕೆಯಾಗಲಿದೆ.
ವಿದ್ಯುತ್ ನಿಂದ ಕೆಲಸ ಮಾಡುವ ಯಂತ್ರಗಳಿಗೆ ಮಾತ್ರ ಈಗ ಶೇಕಡಾ 5.5 ತೆರಿಗೆ ಇತ್ತು. ಇನ್ನು ಮುಂದೆ ಇದು ಶೇಕಡಾ 12ಕ್ಕೆ ಏರಿಕೆಯಾಗಲಿದೆ.
ಇನ್ನು ಬಿತ್ತನೆ ಬೀಜ, ಕೈಯಿಂದ ಚಾಲನೆ ಮಾಡುವ ಯಂತ್ರಗಳಿಗೆಲ್ಲಾ ಯಾವುದೇ ತೆರಿಗೆ ಇರುವುದಿಲ್ಲ.
ಆದರೆ ಪಂಜಾಬ್, ಹರ್ಯಾಣದಂಥ ಕೆಲವು ರಾಜ್ಯಗಳಲ್ಲಿ ಸದ್ಯ ರಸಗೊಬ್ಬರ, ಕೀಟನಾಶಕ ಯಾವುದರ ಮೇಲೆಯೂ ತೆರಿಗೆ ಇರಲಿಲ್ಲ. ಹಾಗಾಗಿ ಇಲ್ಲಿನ ರೈತರಿಗೆ ಮಾತ್ರ ಜಿಎಸ್ಟಿ ಹೊರೆಯಾಗಲಿದೆ.












Click it and Unblock the Notifications