ರಾಯಚೂರಿನಲ್ಲಿ ಮೇವಿನ ಕೊರತೆ: ಲಕ್ಷ.. ಲಕ್ಷ ಸುರಿದು ತಂದಿದ್ದ ಗಜ ಗಾತ್ರದ ಜಾನುವಾರುಗಳು ಕಡಿಮೆ ಬೆಲೆಗೆ ಮಾರಾಟ, ರೈತ ಕಣ್ಣೀರು
ರಾಯಚೂರು, ಅಕ್ಟೋಬರ್, 18: ಈ ಬಾರಿ ಮಳೆಯ ಕೊರತೆಯಿಂದ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿದೆ. ಕುಡಿಯುವ ನೀರಿನ ಸಮಸ್ಯೆ, ಕೃಷಿಗೆ ನೀರಿನ ಅಭಾವ, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಇದರಿಂದ ಜನಸಾಮಾನ್ಯರು, ರೈತರಿಗೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದರಿಂದ ಬಿತ್ತಿದ ಬೆಳೆಗಳು ಒಣಗಿ ಹೊಗಿದ್ದು, ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿದೆ. ಆದ್ದರಿಂದ ರೈತರು ಎತ್ತುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ರಾಯಚೂರು ನಗರದ ಎಪಿಎಂಸಿ ಅವರಣದಲ್ಲಿ ನಡೆಯುತ್ತಿರುವ ಜಾನುವಾರು ಸಂತೆಯಲ್ಲಿ ಕಂಡು ಬಂದ ದೃಶ್ಯವಿದು.

ಕಣ್ಣಿಗೆ ಕುಕ್ಕುವಂತಹ ಗಜ ಗಾತ್ರದ ಎತ್ತುಗಳನ್ನು ಒಲ್ಲದ ಮನಸ್ಸಿನಿಂದಲೇ ಎತ್ತುಗಳನ್ನು ರೈತರು ಮಾರಾಟ ಮಾಡಲು ಮುಂದಾಗಿದ್ದಾರೆ. ಮುಂಗಾರು ಮಳೆಯಾಗುತ್ತದೆ ಬಿತ್ತನೆ ಮಾಡಲಿಕ್ಕೆ ಎತ್ತುಗಳು ಬೇಕು ಎಂದು ಸಾಲ ಸೋಲ ಮಾಡಿ ಒಂದು ಲಕ್ಷ ಮೂವತ್ತು ಸಾವಿರ ರೂಪಾಯಿ ಕೊಟ್ಟು ತಂದ ಎತ್ತುಗಳನ್ನು ಈಗ ಬರೀ 82 ಸಾವಿರ ರೂಪಾಯಿಗೆ ಕೇಳುತ್ತಿದ್ದಾರೆ ಎಂದು ರೈತರು ತಮ್ಮ ಅಳಲನ್ನು ತೊಂಡಿಕೊಡಿದ್ದಾರೆ.
ಕಳೆದ ಎರಡು ವಾರಗಳ ಹಿಂದೆ ಹಸು ಕರುವಿಗೆ ಜನ್ಮ ನೀಡಿದ್ದು, ಹಸುವಿಗೆ ತಿನ್ನಲು ಮೇವು ಇಲ್ಲದೇ ಇರುವುದರಿಂದ ಮಹಿಳೆಯೊಬ್ಬಳು ಹಸು ಕರುವಿನೊಂದಿಗೆ ಮಾರುಕಟ್ಟೆಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಜಾನುವಾರುಗಳಿಗೆ ಕುಡಿಯುವ ನೀರು, ತಿನ್ನಲು ಮೇವಿನ ಕೊರತೆ ಉಂಟಾಗಿದೆ. ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತುಕೊಂಡಿದೆ. ರಾಯಚೂರು ಜಿಲ್ಲೆಯನ್ನು ಸರ್ಕಾರ ಬರಗಾಲ ಪ್ರದೇಶ ಎಂದು ಘೋಷಣೆ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೆ ಯಾವೊಬ್ಬ ಅಧಿಕಾರಿಗಳು ಸರ್ವೆ ಮಾಡಲು ಜಿಲ್ಲೆಗೆ ಬಂದಿಲ್ಲ ಎಂದು ಆರೋಪಿಸಿದ್ದಾರೆ.
ಕೆಲ ರೈತರಿಗೆ ತಲುಪದ ತುಂಗಭದ್ರಾ ಕಾಲುವೆ ನೀರು
ತುಂಗಭದ್ರಾ ಜಲಾಶಯದ ಎಡದಂಡೆ ಮುಖ್ಯಕಾಲುವೆಗೆ ಕಳೆದ ಮೂರು ತಿಂಗಳಿಂದ 4,100 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟರೂ ಕೆಳಭಾಗದ ವಿತರಣಾ ಕಾಲುವೆ 104ಕ್ಕೆ ಬರದೆ ಇರುವುದರಿಂದ ರೈತರಿಗೆ ತೀವ್ರ ಸಮಸ್ಯೆಯಾಗಿದೆ.
ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ) ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿಯಾಗಿದ್ದು, ಮುನಿರಾಬಾದ್‌ನಿಂದ ಆರಂಭಗೊಂಡ ಕಾಲುವೆ ರಾಯಚೂರು ತಾಲೂಕಿನ ಕೊನೆ ಭಾಗದವರಿಗೆ ವ್ಯಾಪ್ತಿ ಹೊಂದಿದೆ. ನೀರಾವರಿ ಇಲಾಖೆ ಮಾಹಿತಿಯಂತೆ 6 ಲಕ್ಷ ಎಕರೆ ನೀರಾವರಿ ಜಮೀನಿದ್ದು, ಇದರಲ್ಲಿ 2 ಲಕ್ಷಕ್ಕೂ ಹೆಚ್ಚು ಎಕರೆ ಅಕ್ರಮವಾಗಿ ನೀರಾವರಿ ಇದೆ. ಆದರೆ, ಜಿಲ್ಲೆಯ ಜನಪ್ರತಿನಿಧಿಗಳು ನೀರು ತರಲು ಮುಂದಾಗದೆ ನಿರಾಸಕ್ತಿ ವಹಿಸಿದ್ದಾರೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ಬರಗಾಲ ಅವರಿಸಿದೆ. ಇತ್ತ ಮಳೆ ಅಭಾವ ಕಾಡಿದೆ. ಮುಖ್ಯಕಾಲುವೆ 47ನೇ ಮೈಲ್‌ನಲ್ಲಿ 11ಅಡಿ 61ರಲ್ಲಿ 9,625, 69ರಲ್ಲಿ 7.8, 90ನೇ ಮೈಲ್‌ನಲ್ಲಿ 3.1 ಗೇಜ್ ಇದೆ. 104ನೇ ಮೈಲ್ ಬಳಿಯ ಮುಖ್ಯ ಕಾಲುವೆಗೆ ನೀರು ತಲುಪದ ಕಾರಣ ರೈತರು ಭತ್ತ ಬೆಳೆಯುವ ಆಸೆ ಬಿಟ್ಟಿದ್ದಾರೆ. ಎಡದಂಡೆ ಕಾಲುವೆ ಮುಖ್ಯ ಮೈಲ್‌ಗಳ ಬಳಿ ನಿಗದಿತ ಗೇಜ್ ಕಾಯ್ದುಕೊಳ್ಳಲು ನೀರಾವರಿ ನಿಗಮದ ಎಂಜಿನಿಯರ್‌ಗಳು ವಿಫಲರಾಗಿದ್ದಾರೆ.
ಸಮೀಪದ 69ನೇ ಮೈಲ್ ಬಳಿಯ ಮುಖ್ಯ ಕಾಲುವೆಯಲ್ಲಿ 9.1 ಅಡಿ ನೀರು ಹರಿಯಬೇಕು. ಅದರೆ, ಕಳೆದ ಮೂರು ತಿಂಗಳಿಂದ ನೀರು ಹರಿಯುತ್ತಿರುವ ಕಾರಣ ಕೊನೆ ಭಾಗದ ರೈತರ ಗದ್ದೆಗಳಿಗೆ ನೀರು ತಲುಪಿಲ್ಲ. ಎಡದಂಡೆ ಮುಖ್ಯ ಕಾಲುವೆಯಲ್ಲಿ ಹಗಲು ಹೊತ್ತಿನಲ್ಲಿ ಗೇಜ್ ಸ್ವಲ್ಪ ಹೆಚ್ಚು ಕಮ್ಮಿ ಇರಲಿದೆ. ರಾತ್ರಿ ಹೊತ್ತು ಕಾಲುವೆಯಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತಿರುವ ಒಳ ಮರ್ಮ ಗೊತ್ತಾಗುತ್ತಿಲ್ಲ ಎನ್ನಲಾಗಿದೆ.
ತುಂಗಭದ್ರಾ ಜಲಾಶಯದಲ್ಲಿ 89 ಟಿಎಂಸಿ ನೀರು ಸಂಗ್ರಹಗೊಂಡಿದ್ದರೂ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ನಿಗದಿತ ಗೇಜ್ ಕಾಯ್ದುಕೊಳ್ಳಲು ನೀರಾವರಿ ನಿಗಮದ ಎಂಜಿನಿಯರ್‌ಗಳು ವಿಫಲರಾಗಿದ್ದು, ಮೇಲಧಿಕಾರಿಗಳು ಕ್ರಮ ಕೈಗೊಳ್ಳಲು ಚಿಂತನೆ ನಡೆಸಬೇಕಿದೆ. ಜಿಲ್ಲೆಯ 7 ತಾಲೂಕುಗಳ ಪೈಕಿ ಸರಕಾರ 6 ತಾಲೂಕುಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಿದೆ. ಮಳೆ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿದ ರೈತರು ಉಳಿದ ಅಲ್ಪ ಸ್ವಲ್ಪ ಬೆಳೆ ರಕ್ಷಣೆಗೆ ರೈತರು ಕೊಳವೆ ಬಾವಿ ಮೊರೆ ಹೋಗಿದ್ದಾರೆ.
ನಿರಂತರ ಲೋಡ್ ಶೆಡ್ಡಿಂಗ್‌ನಿಂದ ರೈತರು ಇತ್ತೀಚೆಗೆ ಜೆಸ್ಕಾಂ ಇಲಾಖೆಗೆ ಮುತ್ತಿಗೆ ಹಾಕಿ 24 ಗಂಟೆ ವಿದ್ಯುತ್ ಪೂರೈಕೆಗೆ ಒತ್ತಾಯಿಸಿದರೂ ಕ್ರಮವಾಗಿಲ್ಲ. ರೈತರ ಬೆನ್ನಿಗೆ ನಿಲ್ಲಬೇಕಿದ್ದ ಜಿಲ್ಲಾಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು ಮಾತ್ರ ಯಾವುದೇ ಸಭೆ ನಡೆಸದೇ ಮೌನವಹಿಸಿದ್ದಾರೆ ಎಂಬುದು ರೈತರ ಆರೋಪವಾಗಿದೆ. ಎಡದಂಡೆ ನಾಲೆಯಿಂದ ಕೆಳಭಾಗದ ರೈತರಿಗೆ ನೀರು ಹರಿಸಲು ಒತ್ತಾಯಿಸಿ ನಿರಂತರ ಪಕ್ಷಾತೀತವಾಗಿ ಹೋರಾಟ, ಪ್ರತಿಭಟನೆಗಳು ನಡೆಯುತ್ತಿವೆ.
ಕೆಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಅಸ್ತ್ರವನ್ನಾಗಿ ಮಾಡಿಕೊಂಡಿದ್ದು ತಿಕ್ಕಾಟ ಹೆಚ್ಚಾಗಿದೆ. ಬಿಜೆಪಿ ನಾಯಕರು ಒಂದು ದಿನ ಹೋರಾಟ ಮಾಡಿದರೆ, ಕಾಂಗ್ರೆಸ್ ನಾಯಕರು ಮತ್ತೊಂದು ದಿನ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟ ತೀವ್ರಗೊಳಿಸಲು ಶೀಘ್ರವೇ ವಿವಿಧ ಪಕ್ಷಗಳ ಮುಖಂಡರು ರಾಯಚೂರು ಹೊರ ವಲಯದ ಸಾತ್ ಮೈಲ್ ಹತ್ತಿರ ರಾಜ್ಯ ಹೆದ್ದಾರಿ ತಡೆದು ಹೋರಾಟ ನಡೆಸಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.












Click it and Unblock the Notifications