ತುಂಗಭದ್ರಾ ಯೋಜನೆ; ನವೆಂಬರ್ 30ರ ತನಕ ಬೆಳೆಗಳಿಗೆ ನೀರು
ಬೆಂಗಳೂರು, ಅಕ್ಟೋಬರ್ 06; ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿಯ ತುರ್ತು ಸಭೆ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆಯಿತು. ನವೆಂಬರ್ 30ರ ತನಕ ನೀರಿನ ಲಭ್ಯತೆ ಆಧಾರದ ಮೇಲೆ ಕಾಲುವೆಗೆ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್. ತಂಗಡಗಿ ಅಧ್ಯಕ್ಷತೆಯಲ್ಲಿ ತುರ್ತು ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸಲಾಯಿತು.

ಸಭೆಯಲ್ಲಿ ತುಂಗಭದ್ರಾ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನ ಬೆಳೆಗಳು, ತುಂಗಾಭದ್ರಾ ಜಲಾಶಯದ ಪ್ರಸ್ತುತ ಒಳಹರಿವು, ಬೆಳೆಗಳನ್ನು ಸಂರಕ್ಷಣೆ ಕುರಿತು ಚರ್ಚೆ ನಡೆಯಿತು.
4,100 ಕ್ಯುಸೆಕ್ ನೀರು; ಸಭೆಯ ಬಳಿಕ ಮಾತನಾಡಿದ ಶಿವರಾಜ ಎಸ್. ತಂಗಡಗಿ, "ತುಂಗಭದ್ರಾ ಜಲಾಶಯದಲ್ಲಿ ಪ್ರಸ್ತುತ 53 ಟಿಎಂಸಿ ಅಡಿ ನೀರಿನ ಲಭ್ಯತೆ ಇದೆ. ಎಡದಂಡೆ ಮುಖ್ಯ ಕಾಲುವೆಗೆ 4,100 ಕ್ಯುಸೆಕ್‌ನಂತೆ ನವೆಂಬರ್ 30ರ ತನಕ ನೀರಿನ ಲಭ್ಯತೆ ಆಧಾರದ ಮೇಲೆ ನೀರು ಹರಿಸಲು ನಿರ್ಧಾರ ಕೈಗೊಳ್ಳಲಾಗಿದೆ" ಎಂದರು.
"ತುಂಗಭದ್ರಾ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 10ರ ವರೆಗೆ 100 ಕ್ಯುಸೆಕ್‌ನಂತೆ, ಜಲಾಯಶದ ನೀರಿನ ಮಟ್ಟ 1600 ಅಡಿ ತಲುಪುವ ಲಭ್ಯತೆ ಅನುಸಾರ ಮುಂಬರುವ ಒಳಹರಿವನ್ನು ಪರಿಗಣಿಸಿ ನೀರು ಹರಿಸುವುದು ಮುಂದುವರೆಸಲಾಗುತ್ತದೆ" ಎಂದು ಹೇಳಿದರು.
"ಬಲದಂಡೆ ಕೆಳಮಟ್ಟದ ಕಾಲುವೆಗೆ ನವೆಂಬರ್ 30ರ ತನಕ 850 ಕ್ಯುಸೆಕ್ ಬದಲಾಗಿ 750 ಕ್ಯುಸೆಕ್. ಎಡದಂತೆ ಮೇಲ್ಮಟ್ಟದ ಕಾಲುವೆಗೆ ನವೆಂಬರ್ 30ರತ ತನಕ 23 ಕ್ಯುಸೆಕ್‌ನಂತೆ ನೀರು ಹರಿಸಲಾಗುತ್ತದೆ" ಎಂದು ಸಚಿವರು ಮಾಹಿತಿ ನೀಡಿದರು.
ರಾಯ ಬಸವಣ್ಣ ಕಾಲುವೆಗೆ ನವೆಂಬರ್ 30ರ ವೆರೆಗೆ ಒಟ್ಟು ಕೊರತೆ ಬೀಳುವ ನೀರು 0.109 ಟಿಎಂಸಿ ಅಡಿ ಆಗಲಿದೆ. ಪ್ರಸ್ತುತ ಕಾಲುವೆ ಕಾಮಗಾರಿ ಕೈಗೊಳ್ಳುವುದರಿಂದ ಡಿಸೆಂಬರ್ 10 ರಿಂದ ಫೆಬ್ರವರಿ 10ರ ತನಕ ನೀರು ಸ್ಥಗಿತಗೊಳಿಸಲಾಗುತ್ತದೆ.
ತುಂಗಭದ್ರಾ ಡ್ಯಾಂ ಒಳಹರಿವು ಕಡಿಮೆಯಾಗಿದೆ. ರೈತರು ಆತಂಕ ಪಡುವ ಅಗತ್ಯವಿಲ್ಲ. ಪ್ರಸ್ತುತ ಡ್ಯಾಂನಲ್ಲಿ 5 ಟಿಎಂಸಿ ಅಡಿ ನೀರಿನ ಕೊರತೆ ಇದೆ. ಆಂಧ್ರ ಪ್ರದೇಶ ಕೋಟಾದಡಿ ನೀಡಲಾಗುವ ನೀರನ್ನು ನಮಗೆ ಬಿಡುವಂತೆ ಅಲ್ಲಿನ ಸರ್ಕಾರಕ್ಕೆ ಮನವಿ ಮಾಡಲು ಸಭೆಯಲ್ಲಿ ಚರ್ಚಿಸಲಾಯಿತು.
2018ರಲ್ಲಿ ನೀರಿನ ಕೊರತೆ ಉಂಟಾದಾಗ ತೆಲಂಗಾಣ ಸರ್ಕಾರಕ್ಕೆ ಮನವಿ ಮಾಡಿದಾಗ ಅವರ ಪಾಲಿನ 1 ಟಿಎಂಸಿ ಅಡಿ ನೀರು ನೀಡಲಾಗಿತ್ತು. ಪ್ರಸ್ತುತ ಅಲ್ಲಿನ ಸರ್ಕಾರಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಡಲು ಸಹ ಸಭೆಯಲ್ಲಿ ತೀರ್ಮಾನಿಸಲಾಯಿತು.
ಆಗಸ್ಟ್‌ನಲ್ಲಿ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ಡ್ಯಾಂ ನೀರಿನ ಕೊರತೆ ಬಗ್ಗೆ ಚರ್ಚೆಯಾಗಿತ್ತು. ಮಲೆನಾಡು ಭಾಗದಲ್ಲಿ ಮಳೆಯಾಗಿ ಒಳಹರಿವು ಹೆಚ್ಚಾಗುವ ನಿರೀಕ್ಷೆ ಇತ್ತು. ಆದರೆ ಅಲ್ಲಿಯೂ ಮುಂಗಾರು ಕೈ ಕೊಟ್ಟು ಮಳೆಯ ಕೊರತೆ ಉಂಟಾಗಿದೆ.
ತುಂಗಭದ್ರಾ ಎಡದಂಡೆಯ ರೈತರು ಪ್ರಸ್ತುತ ಹೆಚ್ಚು ಭತ್ತ ಬೆಳೆದಿದ್ದಾರೆ. ಆ ಬೆಳೆಯನ್ನು ಉಳಿಸುವ ಕೆಲಸ ಮಾಡಬೇಕಿದೆ. ರೈತರ ಹಿತ ಕಾಪಾಡಲಾಗುತ್ತದೆ ಎಂದು ಸಮಿತಿಯು ರೈತರಿಗೆ ಭರವಸೆ ನೀಡಿದೆ.












Click it and Unblock the Notifications