ಫಲ ನೀಡದ ನಾಯಕರ ಸಾಂತ್ವನ, ಮುಂದುವರಿದ ಆತ್ಮಹತ್ಯೆ ಸರಣಿ
ಬೆಂಗಳೂರು, ಜು. 18 : ಇಡೀ ಕರ್ನಾಟಕ ರಾಜ್ಯಕ್ಕೆ ರೈತರ ಆತ್ಮಹತ್ಯೆ ಚಿದಂಬರ ರಹಸ್ಯವಾಗಿದೆ. ಕೃಷಿ ಸಚಿವರು ಎಲ್ಲಿದ್ದಾರೋ ಗೊತ್ತಿಲ್ಲ. ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ರೇಡಿಯೋ ಮೂಲಕ 'ಆತ್ಮಹತ್ಯೆ ಮಾಡಿಕೊಳ್ಳಬೇಡಿ' ಎಂದು ಕರೆ ನೀಡುತ್ತಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆಯ ಸರಣಿ ಮುಂದುವರಿದಿದೆ.
ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ರೈತರ ಮನೆಗೆ ಹೋಗಿ ಭೇಟಿಯಾಗಿ ಸಾಂತ್ವನ ಹೇಳುತ್ತಿದ್ದಾರೆ. ದಯಮಾಡಿ ಆತ್ಮಹತ್ಯೆಗೆ ಶರಣಾಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ತುಮಕೂರು ಜಿಲ್ಲೆಯಲ್ಲಿ ಮೂವರು ರೈತರು ಪ್ರಾಣ ನೀಗಿಕೊಂಡಿದ್ದರೆ, ಕಲಬುರ್ಗಿಯಲ್ಲಿ ರೈತನೋರ್ವ ಕುಣಿಕೆಗೆ ಕೊರಳೊಡ್ಡಿದ್ದಾನೆ. ಮೈಸೂರು ಜಿಲ್ಲೆಯಲ್ಲಿ ಕಬ್ಬು ಬೆಳೆಯುವ ರೈತನೊಬ್ಬ ಧಗಧಗಿಸುವ ಕಬ್ಬಿನ ಜಲ್ಲೆಗಳ ಮೇಲೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದೇ, ರಾಜ್ಯದೆಲ್ಲೆಡೆ ಸಮೂಹಸನ್ನಿಯಂತೆ ಸಾವಿಗೆ ಶರಣಾಗುತ್ತಿದ್ದಾರೆ. [ರೈತನಿಗೆ ಗುಣಮಟ್ಟದ ಬೀಜ ಒದಗಿಸುವ 'ಬಿಗ್ ಹ್ಯಾಟ್']

ತುಮಕೂರು ಜಿಲ್ಲೆಯ ಕೋರಾ ಹೋಬಳಿಯ ನಂದಿಹಳ್ಳಿ ಗ್ರಾಮದ ಹಾಲಪ್ಪ (55) ಜಮೀನಿನಲ್ಲಿಯೇ ಶುಕ್ರವಾರ ರಾತ್ರಿ ಮರಕ್ಕೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಆತ 4.5 ಲಕ್ಷ ರು. ಸಾಲ ಮಾಡಿಕೊಂಡಿದ್ದ. ಬೆಳಿಗ್ಗೆ ಪತಿ ಮನೆಗೆ ಮರಳದಿದ್ದಾಗ ಹೆದರಿದ ಇಂದಿರಮ್ಮ ಹೊಲಕ್ಕೆ ಹೋಗಿ ನೋಡಿದಾಗ ಹಾಲಪ್ಪ ಸಾವಿಗೆ ಶರಣಾಗಿರುವುದು ತಿಳಿದುಬಂದಿದೆ.
ಶಿರಾ ತಾಲೂಕಿನ ಕುಮಾರಸ್ವಾಮಿ (53) ಕೆನರಾ ಬ್ಯಾಂಕಿನಲ್ಲಿ 5 ಲಕ್ಷ ರು. ಸಾಲ ಮಾಡಿಕೊಂಡಿದ್ದ. ಮೂರು ಎಕರೆ ಜಮೀನಿನಲ್ಲಿ ತೆಂಗು ಮತ್ತು ಅಡಿಕೆ ಬೆಳೆಯುತ್ತಿದ್ದ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅಸಲು ಕೊಡಿ ಎಂದು ಬ್ಯಾಂಕ್ ಒತ್ತಾಯ ಮಾಡಿದ್ದ ಹಿನ್ನೆಲೆ ಹೆದರಿದ ಕುಮಾರಸ್ವಾಮಿ ವಿಷ ಸೇವಿಸಿ ತನ್ನ ಹೊಲದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದೇ ಜಿಲ್ಲೆಯ ಗುಬ್ಬಿ ತಾಲೂಕಿನ ಕೋಣೆಮಾದೇನಹಳ್ಳಿಯ ವೇದಮೂರ್ತಿ ಹಲವಾರು ಬ್ಯಾಂಕುಗಳಲ್ಲಿ ಸಾಲ ಪಡೆದಿದ್ದ. ಇಡೀ ಕುಟುಂಬದ ಜವಾಬ್ದಾರಿ ಈತನ ಮೇಲೆಯೇ ಇತ್ತು. ಬ್ಯಾಂಕ್ ಅಧಿಕಾರಿಗಳು ಸಾಲ ಹಿಂತಿರುಗಿಸುವಂತೆ ನೋಟೀಸ್ ಕಳುಹಿಸುತ್ತಿದ್ದರು. ಇದರಿಂದ ಮನನೊಂದ ವೇದಮೂರ್ತಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.
ಮತ್ತೊಂದು ಪ್ರಕರಣದಲ್ಲಿ, ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಣಿಕ್ ರೆಡ್ಡಿ ಎಂಬಾತ ಹೊಲದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ನಡುವೆ, ಮುಖ್ಯಮಂತ್ರಿಗಳು, ರೈತರ ಸಾವಿಗೆ ಸಾಲ ಕೊಟ್ಟವರೇ ಹೊಣೆಗಾರರಾಗುತ್ತಾರೆ ಎಂಬ ಸಂದೇಶವನ್ನು ಬ್ಯಾಂಕಿಗೂ ಮತ್ತು ರೈತರಿಗೂ ಸಾರಿದ್ದಾರೆ.












Click it and Unblock the Notifications