ಕೊಡಗು: ಮೈಸೂರಿಂದ ಕೇರಳಕ್ಕೆ ವಿದ್ಯುತ್, ರೈತರ ಪ್ರತಿಭಟನೆ
ಬೆಂಗಳೂರು, ಫೆ.4: ಮೈಸೂರಿನಿಂದ ಕೊಡಗಿನ ಅರಣ್ಯ ಪ್ರದೇಶದಿಂದ ಕೇರಳಕ್ಕೆ 440 ಕೆ.ವಿ ವಿದ್ಯುತ್ ಮಾರ್ಗ ನಿರ್ಮಿಸಲು ಉದ್ದೇಶಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಫೆ.11ರಂದು ಪ್ರತಿಭಟನೆ ನಡೆಸುವುದಾಗಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವರಿಷ್ಠ ಹಾಗೂ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದ್ದಾರೆ.
ಫೆ.11ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಚಳವಳಿ ನಡೆಸಲಾಗುವುದು. ವಿದ್ಯುತ್ ಗ್ರಿಡ್ ನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡಲು ಈ ಮಾರ್ಗವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಇದರಿಂದ ಅರಣ್ಯ ಮತ್ತು ವನ್ಯಜೀವಿಗಳ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ. ಉದ್ದೇಶಿತ ಮಾರ್ಗ ನಿರ್ಮಾಣ ಮಾಡುವುದನ್ನು ಕೈ ಬಿಡಬೇಕೆಂದು ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ನಾಯಕರು ಹಾಗೂ ಕಾವೇರಿ ಕೊಳ್ಳದ ಶಾಸಕರನ್ನೂ ಕೂಡ ಆಹ್ವಾನಿಸಲಾಗುವುದು. ರಾಜ್ಯ ಸರ್ಕಾರ ಮಧ್ಯ ಪ್ರವೇಶಿಸಿ ಕೇಂದ್ರ ಸರ್ಕಾರದ ಮನವೊಲಿಸಿ ಮಾರ್ಗ ನಿರ್ಮಾಣವನ್ನು ಕೈಬಿಡುವಂತೆ ಮಾಡಬೇಕು. ಹಾಲಿ ಇರುವ 39 ಮೆ.ವ್ಯಾ ಮಾರ್ಗದಲ್ಲೇ ವಿದ್ಯುತ್ ಕೊಂಡೊಯ್ಯಬೇಕು. ಅರಣ್ಯ ಸಚಿವರು ಕೂಡ ಉದ್ದೇಶಿತ ಮಾರ್ಗ ನಿರ್ಮಾಣದಿಂದ ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ಎಂದು ಪುಟ್ಟಣ್ಣಯ್ಯ ಹೇಳಿದರು.

ಡಿಕೆಶಿ ಸಮರ್ಥನೆ: ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, ಈ ಹಿಂದಿನ ಸರ್ಕಾರ ಮಾರ್ಗ ನಿರ್ಮಾಣಕ್ಕೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ವಿದ್ಯುತ್ ಗ್ರಿಡ್ ನಿಂದ ಕೇರಳಕ್ಕೆ ವಿದ್ಯುತ್ ಸರಬರಾಜು ಮಾಡಲು ಈ ಮಾರ್ಗವನ್ನು ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ರಾಜ್ಯದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದಿದ್ದಾರೆ.
* ಫೆ.11ರಂದು 8 ಸಾವಿರಕ್ಕೂ ಅಧಿಕ ರೈತರು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ.
* ಫೆ.28ರಂದು 10 ಸಾವಿರಕ್ಕೂ ಅಧಿಕ ರೈತರು ಜೈಲ್ ಭರೋ ಚಳವಳಿ ನಡೆಸಲಿದ್ದಾರೆ.

ಅರಣ್ಯ ನಾಶ: ಸುಮಾರು 50 ಸಾವಿರ ಮರಗಳನ್ನು ಈ ಮಾರ್ಗಕ್ಕಾಗಿ ಕಡಿಯಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪ್ರಕೃತಿ ನಾಶವಾದರೆ ಸಮಸ್ಯೆಗಳು ಸೃಷ್ಟಿಯಾಗಲಿವೆ. ಕಾವೇರಿ ನದಿಯನ್ನು ರಾಜ್ಯದ 8 ಜಿಲ್ಲೆಗಳು ಹಾಗೂ ತಮಿಳುನಾಡು, ಪುದುಚೇರಿ ರಾಜ್ಯಗಳು ಅವಲಂಬಿಸಿವೆ. ಇದನ್ನೆಲ್ಲ ಗಮನಿಸಿ ಪರಿಸರಕ್ಕೆ ಹಾನಿಯುಂಟು ಮಾಡುವ ವಿದ್ಯುತ್ ಮಾರ್ಗವನ್ನು ನಿರ್ಮಿಸಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಕೂರ್ಗ್ ವೈಲ್ಡ್ ಲೈಫ್ ಸೊಸೈಟಿ ಅಧ್ಯಕ್ಷ ಕರ್ನಲ್ ಸಿಪಿ ಮುತ್ತಣ್ಣ ಆತಂಕ ವ್ಯಕ್ತಪಡಿಸಿದ್ದಾರೆ.
ಕೂಡ್ಲಿಗಿ ವಿದ್ಯುತ್ ಸ್ಥಾವರಕ್ಕೆ ವಿರೋಧ : ವಿಜಯಪುರ ಜಿಲ್ಲೆಯ ಕೂಡ್ಲಿಗಿಯಲ್ಲಿ ನಿರ್ಮಿಸುತ್ತಿರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ಕಲ್ಲಿದ್ದಲ ನಿಕ್ಷೇಪವೇ ಇಲ್ಲ. 4 ಸಾವಿರ ಮೆ.ವ್ಯಾ ವಿದ್ಯುತ್ ಉತ್ಪಾದಿಸುವ ಈ ಯೋಜನೆಗೆ ಎರಡೂವರೆ ಸಾವಿರ ಕಿ.ಮೀಗಳಿಂದ ಕಲ್ಲಿದ್ದಲು ತರಬೇಕಿದೆ. ಅಧಿಕಾರಕ್ಕೆ ಬಂದ ಮೇಲೆ ಈ ಯೋಜನೆಯನ್ನು ಕಾಂಗ್ರೆಸ್ ಕೂಡ ವಿರೋಧಿಸುತ್ತಿಲ್ಲ. ರೈತರ ಭೂಮಿ ಪಡೆದು ಒಕ್ಕಲೆಬ್ಬಿಸಲಾಗುತ್ತಿದೆ. ಇದನ್ನು ವಿರೋಧಿಸಿ 146 ದಿನಗಳಿಂದ ಚಳವಳಿ ನಡೆಸುತ್ತಿದ್ದರೂ ಸರ್ಕಾರ ಅವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಹೇಳಿದರು.












Click it and Unblock the Notifications