ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ, ಸಂಕಷ್ಟಕ್ಕೆ ಸಿಲುಕಿದ ರೈತರು
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದೆ.
ಬೆಂಗಳೂರು, ಮಾರ್ಚ್ 07; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ. ಒಂದು ಕಡೆ ಲಾಭವಿದಲ್ಲದೇ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದು ಕಡೆ ಮಾರುಕಟ್ಟೆಗೆ ಈರುಳ್ಳಿ ತಂದ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿ ಬಂದು ನಷ್ಟ ಅನುಭವಿಸುತ್ತಿದ್ದಾರೆ.
ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈರುಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈರುಳ್ಳಿ ಇಳುವರಿ ಅಧಿಕವಾಗಿದ್ದು, ಇದೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಅಂದಾಜಿಸಲಾಗುತ್ತಿದೆ.

ಕಳೆದ 20 ದಿನಗಳಿಂದ ಈರುಳ್ಳಿ ಬೆಲೆ ಕುಸಿಯುತ್ತಲೇ ಸಾಗಿದೆ. ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 8 ರೂ. ಮತ್ತು ದೊಡ್ಡ ಈರುಳ್ಳಿ 25 ರೂ. ತನಕ ಮಾರಾಟವಾಗುತ್ತಿದೆ. ಇದರಿಂದಾಗಿ ರೈತರಿಗೆ ಪ್ರತಿ ಕೆಜಿಗೆ 5 ರಿಂದ 15 ರೂ. ತನಕ ದೊರೆಯುತ್ತಿದೆ. ಕಡಿಮೆ ಬೆಲೆಗೆ ಈರುಳ್ಳಿ ದೊರೆಕುತ್ತಿದೆ. ಆದರೆ ರೈತರಿಗೆ ನಷ್ಟ ಉಂಟಾಗುತ್ತಿದೆ.
ವರ್ತಕರು ನೀಡಿರುವ ಮಾಹಿತಿಯಂತೆ ಸೋಮವಾರ ಬೆಂಗಳೂರು ನಗರದ ವಿವಿಧ ಎಪಿಎಂಸಿಗಳಿಗೆ ಸುಮಾರು 3 ಸಾವಿರಕ್ಕೂ ಅಧಿಕ ಟನ್ ಈರುಳ್ಳಿ ಪೂರೈಕೆಯಾಗಿದೆ. ದರಗಳ ಮಾಹಿತಿಯಂತೆ ಬೆಂಗಳೂರು ಸಣ್ಣ ಈರುಳ್ಳಿ ಕ್ವಿಂಟಾಲ್‌ಗೆ 300 ರೂ. ಮತ್ತು ಸ್ಥಳೀಯ ಈರುಳ್ಳಿ ಕ್ವಿಂಟಾಲ್‌ಗೆ 700 ರೂ.ಗೆ ಮಾರಾಟ ವಾಗುತ್ತಿದೆ. ಪೂನಾದಿಂದ ಬಂದ ಈರುಳ್ಳಿ ಕ್ವಿಂಟಾಲ್‌ಗೆ 1 ಸಾವಿರ ರೂ.ಗಳಂತೆ ಮಾರಾಟವಾಗುತ್ತಿದೆ ಎಂಬ ಮಾಹಿತಿ ಇದೆ.

ಕರ್ನಾಟಕ ಮಾತ್ರವಲ್ಲ ಈ ಬಾರಿ ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ, ಗುಜರಾತ್‌ನಲ್ಲಿಯೂ ಈರುಳ್ಳಿ ಇಳುವರಿ ಹೆಚ್ಚಾಗಿದೆ. ಇದರಿಂದಾಗಿ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗಿದ್ದು, ಬೆಲೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ. ಬೆಂಗಳೂರಿನಲ್ಲಿ 100 ರೂ.ಗೆ 5 ಕೆಜಿ ಈರುಳ್ಳಿಯನ್ನು ತಳ್ಳುಗಾಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ವಿಜಯಪುರ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಸಿದ್ದರಾಮ ಬರಗಿಮಠ, "ವಿದೇಶಗಳಿಗೆ ಈರುಳ್ಳಿ ರಫ್ತಿಗೆ ನಿರ್ಬಂಧ ಹೇರಲಾಗಿದೆ. ಇದು ದರ ಕುಸಿತಕ್ಕೆ ಕಾರಣವಾಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಂಪರ್ ಬೆಳೆ ಬಂದಿದ್ದು, ಸಹ ದರ ಇಳಿಕೆಗೆ ಕಾರಣವಾಗಿದೆ" ಎಂದು ಹೇಳಿದ್ದಾರೆ.
ರಾಯಚೂರಿನ ಎಪಿಎಂಸಿಯಲ್ಲಿ ಈರುಳ್ಳಿ ಖರೀದಿ ಮಾಡಿಲ್ಲ ಎಂದು ರೈತರು ಆಕ್ರೋಶ ಹೊರಹಾಕಿದರು. ಎರಡು ದಿನಗಳಿಂದ ಈರುಳ್ಳಿ ಖರೀದಿಯನ್ನೇ ಮಾಡಿಲ್ಲ. ಪ್ರತಿ ಕ್ವಿಂಟಾಲ್‌ಗೆ ಈರುಳ್ಳಿ ದರ 1 ಸಾವಿರ ರೂ. ಇದ್ದರೂ ಖರೀದಿದಾರರು ಬಂದಿಲ್ಲ ಎಂದು ರೈತರು ದಿಢೀರ್ ಪ್ರತಿಭಟನೆ ನಡೆಸಿದರು.
ಎಲ್ಲಿ, ಎಷ್ಟು ದರವಿದೆ?; ಬಾಗಲಕೋಟೆಯಲ್ಲಿ ಸಣ್ಣ ಈರುಳ್ಳಿ ಪ್ರತಿ ಕೆಜಿಗೆ 10, ದೊಡ್ಡ ಈರುಳ್ಳಿ 25 ರೂ.ಗೆ ಮಾರಾಟವಾಗುತ್ತಿದೆ. ವಿಜಯಪುರ ಜಿಲ್ಲರೆ ಮಾರುಕಟ್ಟೆಯಲ್ಲಿ 15 ರಿಂದ 20 ರೂ. ದರವಿದೆ. ಹುಬ್ಬಳ್ಳಿಯ ಎಪಿಎಂಸಿಯಲ್ಲಿ ರೂ. 1,400 ರಿಂದ ದರ 800 ರೂ. ದರವಿದೆ. ಕಲಬುರಗಿಯಲ್ಲಿ ಪ್ರತಿ ಕೆಜಿಗೆ 20, ಬೀದರ್‌ನಲ್ಲಿ ಪ್ರತೊ ಕೆಜಿಗೆ 10 ರೂ. ಇದೆ. ಯಾದಗಿರಿಯಲ್ಲಿ ಕ್ವಿಂಟಾಲ್ ಬೆಲೆ 800 ರೂ. ಇದಿದ್ದು 600 ರೂ.ಗೆ ಇಳಿಕೆಯಾಗಿದೆ.
ರಾಜ್ಯದ ಚಿತ್ರದುರ್ಗ, ಹಿರಿಯೂರು, ಚಳ್ಳಕೆರೆಯಲ್ಲಿ ತಾಲೂಕುಗಳಲ್ಲಿ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ, ಉತ್ತಮ ಬೆಲೆ ಸಿಗುವ ನಿರೀಕ್ಷೆ ಹೊಂದಿದ್ದ ರೈತರಿಗೆ ನಿರಾಸೆಯಾಗಿದೆ. 2022ರಲ್ಲಿ ಅಧಿಕ ಮಳೆಯ ಕಾರಣ ಈರುಳ್ಳಿ ಕೊಳೆತು ಹೋಗಿತ್ತು. ಬೆಳೆ ಕೈಗೆ ಬಾರದೇ ರೈತರು ಕಷ್ಟ ಅನುಭವಿಸಿದ್ದರು. ಈಗ ಬೆಳೆ ಕೈಗೆ ಬಂದರೂ ಸರಿಯಾದ ದರವಿಲ್ಲದೇ ರೈತರು ತೊಂದರೆಗೆ ಸಿಲುಕಿದ್ದಾರೆ.












Click it and Unblock the Notifications