Onion Prices: ಗ್ರಾಹಕರಿಗೆ ಸಂತಸ ರೈತರಿಗೆ ಕಣ್ಣೀರು ತಂದ ಈರುಳ್ಳಿ!
ಬೆಂಗಳೂರು ಮಾರ್ಚ್ 13: ರಾಜ್ಯದಲ್ಲಿ ಈರುಳ್ಳಿ ಗ್ರಾಹಕರಿಗೆ ಸಂತಸ ತಂದರೆ ರೈತರ ಕಣ್ಣಲ್ಲಿ ನೀರು ತರಿಸಿದೆ. ಪ್ರತೀ ಭಾರಿ ಬೆಲೆ ಏರಿಕೆ ಮೂಲಕ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಈಗ ರೈತರ ಹೆಗಲಿಗೆ ಹೊರೆಯಾಗಿದೆ. ಏಕಾಏಕಿ ಬೆಲೆ ಕುಸಿತದಿಂದ ಈರುಳ್ಳಿ ಬೆಳೆದ ರೈತರು ಕಂಗಾಲಾಗಿದ್ದಾರೆ.
ಹೌದು.. ಈರುಳ್ಳಿ 10 ರೂಪಾಯಿಯಂತೆ. 10 ಕೆಜಿ (100 ರೂಪಾಯಿ) ಲೆಕ್ಕದಲ್ಲಿ ಮಾರಾಟವಾಗುತ್ತಿದೆ. ಈಗ ಮಾರುಕಟ್ಟೆಗಿಂತಲೂ ಗಲ್ಲಿ, ಗಲ್ಲಿಯಲ್ಲಿ ಈರುಳ್ಳಿಯನ್ನು ಚೀಲಗಟ್ಟಲೆ ಮಾರುತ್ತಿರುವುದು ಸಾಮಾನ್ಯವಾಗಿದೆ. ಇನ್ನು ಸಂಜೆಯಾಗುತ್ತಿದ್ದಂತೆ ಉಳಿದ ಈರುಳ್ಳಿಯನ್ನು ಕೇಳಿದಷ್ಟು ಕೊಟ್ಟು ಹೋಗುತ್ತಿದ್ದಾರೆ ಮಾರಾಟಗಾರರು.

ಈರುಳ್ಳಿಯನ್ನು ಈಗ ಕೆಜಿ ಲೆಕ್ಕಚಾರದಲ್ಲಿ ಮಾರುವುದೇ ಅಪರೂಪವಾಗಿದೆ. ಈಗೇನಿದ್ರು ಐದು ಕೆಜಿಗೆ ಇಷ್ಟು ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. 10 ಕೆಜಿಗೆ ಇಷ್ಟು ಎಂದೇ ಮಾರಾಟಗಾರರು ಮಾರಾಟ ಮಾಡುತ್ತಾರೆ. ಪ್ರತಿ ಚೀಲ ಈರುಳ್ಳಿ (50 ಕೆಜಿ) ದರ ಮಾರುಕಟ್ಟೆಯಲ್ಲಿ ಸೂಪರ್‌ಕ್ವಾಲಿಟಿ ಇದ್ದರೆ 600-700 ರೂಪಾಯಿ. ಅಬ್ಬಾಬ್ಬ ಎಂದರೆ ಸಾವಿರ ರೂಪಾಯಿ. ಇನ್ನು ಗುಣಮಟ್ಟದಲ್ಲಿ ಒಂಚೂರು ಕಡಿಮೆ ಇದ್ದರೂ ಐದು ನೂರು ರೂಪಾಯಿಗೆ ಚೀಲವನ್ನೇ ಕೊಡುತ್ತಿದ್ದಾರೆ.
ಇನ್ನೂ ಕೆಲವರು ತೂಕದ ಬಗ್ಗೆಯೂ ಅಷ್ಟೊಂದು ತಲೆ ಕೆಡಿಸಿಕೊಳ್ಳುವುದಿಲ್ಲ. ನಾಲ್ಕಾರು ಕೆಜಿ ಹೆಚ್ಚಿದ್ದರೂ ಚೀಲದ ಲೆಕ್ಕದಲ್ಲೇ ಮಾರಾಟ ಮಾಡುತ್ತಾರೆ. ಹೀಗಾಗಿ ಈರುಳ್ಳಿ ಬೆಳೆದ ರೈತರು ಪರಿತಪಿಸುವಂತಾಗಿದೆ. ರಾಜ್ಯಾದ್ಯಂತ ಈರುಳ್ಳಿ ಬೆಲೆ ಕುಸಿದಿದೆ. ಇದರಿಂದಾಗಿ ರೈತರು ನಷ್ಟವನ್ನು ಅನುಭವಿಸುತ್ತಿದ್ದಾರೆ. ಹೇಗಾದರೂ ಮಾಡಿ ಈರುಳ್ಳಿ ಬೆಳೆದ ರೈತರನ್ನು ಕಾಪಾಡಲು ಕನಿಷ್ಠ ಬೆಂಬಲ ಬೆಲೆಯನ್ನಾದರೂ ಘೋಷಣೆ ಮಾಡಬೇಕು ಎನ್ನುವ ಕೂಗು ಕೇಳಿ ಬರುತ್ತಿದೆ.

ದಾಸ್ತಾನನಿಂದ ಮಾರಾಟ:
ಈರುಳ್ಳಿ ಬೆಲೆಯನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ರಫ್ತು ನಿಷೇಧ ಮಾಡಿರುವುದು ಹಾಗೂ ದಾಸ್ತಾನು ಮಾಡಿಟ್ಟುಕೊಂಡಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ಬಿಟ್ಟಿರುವುದೇ ದರ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಹೊಸ ಈರುಳ್ಳಿಯನ್ನು ಸಂಗ್ರಹಿಸಿಟ್ಟುಕೊಳ್ಳಲು ಹಳೆ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರಿಂದ ಬೆಲೆ ಕುಸಿದಿದೆ ಎಂಬುದು ರೈತರ ವಿಶ್ಲೆಷಣೆಯಾಗಿದೆ.
ಈರುಳ್ಳಿ ದರ ಕುಸಿದಿದ್ದರೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದರೆ, ರಫ್ತಿಗೆ ಅವಕಾಶ ಯಾಕೆ ನೀಡುತ್ತಿಲ್ಲ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ. ಬೇಸಿಗೆಯಲ್ಲಿಯೂ ರೈತರು ಕಷ್ಟಪಟ್ಟು ಈರುಳ್ಳಿ ಬೆಳೆದಿದ್ದಾರೆ. ಬರದ ನಡುವೆ, ನೀರಿನ ಅಭಾವದ ನಡುವೆಯೂ ಈರುಳ್ಳಿ ಬೆಳೆದಿದ್ದಾರೆ. ಈ ವರ್ಷ ಈರುಳ್ಳಿ ದರ ಬಂದೇ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡು ಸಾಲಸೋಲ ಮಾಡಿ ಬೆಳೆದಿದ್ದಾರೆ. ಆದರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕುಸಿತವಾಗಿರುವುದು ರೈತರನ್ನು ಕಂಗೆಡುವಂತೆ ಮಾಡಿದೆ.

ಆದರೆ ಗ್ರಾಹಕರು ಮಾತ್ರ ಈರುಳ್ಳಿ ಬೆಲೆ ಕುಸಿತದಿಂದಾಗಿ ಸಂತೋಷದಿಂದ ಕನಿಷ್ಠ ಅಂದ್ರು ಐದಾರು ಕೆಜಿ ಖರೀದಿಸುತ್ತಿದ್ದಾರೆ. ಪ್ರತೀ ಭಾರಿ ಬೆಲೆ ಏರಿಕೆಯಿಂದ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದ್ದ ಈರುಳ್ಳಿ ಈಗ ಬೆಲೆ ಕಡಿಮೆಯಿಂದಾಗಿ ಗ್ರಾಹಕ ಮೊಗದಲ್ಲಿ ಮಂದಹಾಸ ಮೂಡಿಸಿದೆ.












Click it and Unblock the Notifications