Crop Insurance: ಹಿಂಗಾರು ಹಂಗಾಮು, ಬೆಳೆ ವಿಮೆ ಮಾಡಿಸಲು ರೈತರಿಗೆ ಅವಕಾಶ
ಬಳ್ಳಾರಿ, ನವೆಂಬರ್ 07: ಹಿಂಗಾರು ಹಂಗಾಮು ಆರಂಭವಾಗಿದೆ. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ಬೆಳೆ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಹಂಗಾಮಿನಲ್ಲಿ ಫಸಲ್ ಭಿಮಾ ಯೋಜನೆಯಡಿ ವಿವಿಧ ಬೆಳೆಗಳನ್ನು ಗುರುತಿಸಲಾಗಿದೆ. ಬೆಳೆ ವಿಮೆಗೆ ಕೊನೆಯ ದಿನಗಳನ್ನು ಸಹ ನಿಗದಿ ಮಾಡಲಾಗಿದ್ದು, ರೈತರು ವಿಮೆ ಯೋಜನೆ ಉಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯ ಹಿಂಗಾರು ಹಾಗೂ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸಲು ಕರೆ ನೀಡಲಾಗಿದೆ. ಬೆಳೆ ಸಾಲ ಪಡೆದ ಹಾಗೂ ಬೆಳೆ ಸಾಲ ಪಡೆಯದ ರೈತರು ಬ್ಯಾಂಕುಗಳಲ್ಲಿ ವಿಮೆ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಈ ಕುರಿತು ಬಳ್ಳಾರಿಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಹಿಂಗಾರು ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆ ಜೋಳ, ನೀರಾವರಿ ಮತ್ತು ಮಳೆಯಾಶ್ರಿತ ಬೆಳೆ ಕಡಲೆ ಮತ್ತು ಬೇಸಿಗೆ ಹಂಗಾಮಿನ ಗ್ರಾಮ ಪಂಚಾಯಿತಿ ಮಟ್ಟದ ನೀರಾವರಿ ಬೆಳೆಗಳಾದ ನೆಲಗಡಲೆ (ಶೇಂಗಾ), ಭತ್ತ ಹಾಗೂ ಹೋಬಳಿ ಮಟ್ಟದ ಹಿಂಗಾರು ಹಂಗಾಮಿನ ನೀರಾವರಿ ಬೆಳೆ ಮುಸುಕಿನ ಜೋಳ, ನೀರಾವರಿ/ ಮಳೆಯಾಶ್ರಿತ ಬೆಳೆ ಸೂರ್ಯಕಾಂತಿ, ಕುಸುಮೆ, ಈರುಳ್ಳಿ ಮತ್ತು ಬೇಸಿಗೆ ಹಂಗಾಮಿನ ನೀರಾವರಿ ಬೆಳೆಗಳಾದ ಸೂರ್ಯಕಾಂತಿ, ಈರುಳ್ಳಿಯನ್ನು ಗುರುತಿಸಲಾಗಿದೆ.
ಬೆಳೆ ವಿಮೆಗೆ ಕೊನೆಯ ದಿನಾಂಕಗಳು: ಹಿಂಗಾರು ಹಂಗಾಮಿನ ಬೆಳೆಗಳಾದ ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ ಬೆಳೆಗಳಿಗೆ ಡಿಸೆಂಬರ್ 16. ಮಳೆಯಾಶ್ರಿತ ಬೆಳೆಗಳಾದ ಜೋಳ ನವೆಂಬರ್ 15, ಕಡಲೆ ಡಿಸೆಂಬರ್ 31, ಈರುಳ್ಳಿ ನವೆಂಬರ್ 30 ಕೊನೆಯ ದಿನವಾಗಿದೆ.
ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ (ಶೇಂಗಾ), ಸೂರ್ಯಕಾಂತಿ ಮತ್ತು ಈರುಳ್ಳಿ ಬೆಳೆಗಳಿಗೆ 2025ರ ಫೆಬ್ರವರಿ 28ರ ತನಕ ನೋಂದಣಿಗೆ ಅವಕಾಶವಿದೆ. ರೈತರು ಈ ಯೋಜನೆಯ ಲಾಭ ಪಡೆಯಲು ಯಾವುದೇ ಸ್ಥಳೀಯ ಬ್ಯಾಂಕ್/ ಸಾರ್ವಜನಿಕ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದು.
ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿಗೆ ಸಂಪರ್ಕಿಸಬಹುದು.
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ: ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಬೆಂಗಳೂರಿನ ರಾಜ್ಯ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತ ಏಜೆನ್ಸಿ ವತಿಯಿಂದ ಎಫ್‌ಎಕ್ಯೂ ಗುಣಮಟ್ಟದ ಶೇಂಗಾ ಖರೀದಿಸಲಾಗುತ್ತಿದೆ ಎಂದು ಬಳ್ಳಾರಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಯ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಹೇಳಿದ್ದಾರೆ.
ಕೇಂದ್ರ ಸರ್ಕಾರ ನಿಗದಿಪಡಿಸಿದ ಬೆಂಬಲ ಬೆಲೆಯಂತೆ ಪ್ರತಿ ಕ್ವಿಂಟಾಲ್‌ಗೆ ರೂ. 6789 ರಂತೆ ರೈತರಿಂದ ಖರೀದಿ ಮಾಡಲಾಗುತ್ತದೆ. ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ರೈತರಿಗೆ ಮಾಹಿತಿ ನೀಡಿದ್ದಾರೆ.
ರೈತರು ಆಧಾರ್‌ಕಾರ್ಡ್, ಪ್ರಸ್ತಕ ಸಾಲಿನ ಪಹಣಿ ಪತ್ರವನ್ನು ತರಬೇಕು. ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿರಬೇಕು. ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ ತರಬೇಕು ಎಂದು ಮಾಹಿತಿ ನೀಡಲಾಗಿದೆ.
ರೈತರು ಒಣಗಿದ ಹಾಗೂ ಸ್ವಚ್ಛ ಎಫ್‌ಎಕ್ಯೂ ಗುಣಮಟ್ಟದ ಶೇಂಗಾವನ್ನು ಕೇಂದ್ರಕ್ಕೆ ಮಾರಾಟ ಮಾಡಲು ತರಬೇಕು. ಶೇಂಗಾ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಹಾಗೂ ನೋಂದಣಿ ಚೀಟಿಯನ್ನು ಪಡೆಯಬೇಕು.
ನೋಂದಾಯಿಸಿಕೊಂಡ ರೈತರಿಂದ ಪ್ರತಿ ಎಕರೆಗೆ 3 ಕ್ವಿಂಟಾಲ್‌ನಿಂದ ಗರಿಷ್ಠ 15 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತದೆ. ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು, ರೈತರೇ ನೇರವಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಖರೀದಿ ಕೇಂದ್ರಗಳು ಬಳ್ಳಾರಿ ಎಪಿಎಂಸಿ ಆಡಳಿತ ಕಚೇರಿ, ಬಳ್ಳಾರಿ ತಾಲ್ಲೂಕಿನ ಕಪ್ಪಗಲ್ಲು ಗ್ರಾಮದ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ನಿಯಮಿತ, ಸಿರುಗುಪ್ಪದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಸಂಡೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಚೋರನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಕುರುಗೋಡಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಬಳ್ಳಾರಿ ಟಿಎಪಿಸಿಎಂಎಸ್‌ನಲ್ಲಿವೆ.











Click it and Unblock the Notifications