ರೈತರ ಠೇವಣಿ ಹಣ ಸಾಲಕ್ಕೆ ವಜಾ ಇಲ್ಲ: ಬಂಡೆಪ್ಪ ಕಾಶೆಂಪುರ
ಬೆಂಗಳೂರು, ಸೆಪ್ಟೆಂಬರ್ 24: ಸಹಕಾರಿ ಬ್ಯಾಂಕುಗಳಲ್ಲಿ ರೈತರು ಹಣ ಠೇವಣಿ ಇಟ್ಟಿದ್ದರೂ ಸಹ ಆ ಠೇವಣಿಯನ್ನು ಸಾಲಕ್ಕೆ ಜಮಾ ಮಾಡಲಾಗುವುದಿಲ್ಲ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಹೇಳಿದ್ದಾರೆ.
ಸಹಕಾರಿ ಬ್ಯಾಂಕುಗಳಲ್ಲಿ ರೈತರ ಸಾಲಮನ್ನಾ ಮಾಡುವ ಕುರಿತು ಈ ಮುಂಚೆ ಹೊರಡಿಸಿದ್ದ ಆದೇಶದಲ್ಲಿ, ರೈತರು ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಟ್ಟ ಹಣವನ್ನು ಅವರ ಸಾಲಕ್ಕೆ ಜಮಾ ಮಾಡಲಾಗುವುದು ಎಂಬ ನಿಯಮಾವಳಿ ಇತ್ತು ಈಗ ಅದನ್ನು ತಿದ್ದುಪಡಿ ಮಾಡಲಾಗಿದೆ.
ಸಹಕಾರಿ ಬ್ಯಾಂಕುಗಳಲ್ಲಿ ಒಂದು ಲಕ್ಷದ ವರೆಗಿನ ರೈತರ ಸಾಲಮನ್ನಾ ಮಾಡಿ ಈಗಾಗಲೇ ಆದೇಶ ಹೊರಡಿಸಿದೆ. ಸಹಕಾರಿ ಬ್ಯಾಂಕುಗಳ ಸಾಲಮನ್ನಾಕ್ಕೆ ಈಗಾಗಲೇ ಎರಡು ಕಂತಿನಲ್ಲಿ ಹಣವನ್ನು ಸಹ ಬಿಡುಗಡೆ ಮಾಡಲಾಗಿದೆ.

ಈ ಹಿಂದಿನ ಸಿದ್ದರಾಮಯ್ಯ ಸರ್ಕಾರವು ಸಹಕಾರಿ ಬ್ಯಾಂಕುಗಳಲ್ಲಿನ 8165 ಕೋಟಿ ರೂಪಾಯಿ ರೈತರ ಸಾಲವನ್ನು ಮನ್ನಾ ಮಾಡಿತ್ತು. ಅದರ ಉಳಿದ ಕಂತನ್ನು ಮೈತ್ರಿ ಸರ್ಕಾರ ಬಿಡುಗಡೆ ಮಾಡಿದೆ.
ದಸರಾ, ದೀಪಾವಳಿ ವೇಳೆಗೆ ರೈತರಿಗೆ ಸಾಲ ಋಣಮುಕ್ತ ಪ್ರಮಾಣ ಪತ್ರ ನೀಡಲಾಗುವುದು. ಸುಮಾರು 22 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆಯಲಿದೆ. ಇನ್ನೊಂದು ವರ್ಷದಲ್ಲಿ ಹೊಸದಾಗಿ 15 ಲಕ್ಷ ರೈತರನ್ನು ಸಹಕಾರಿ ಸಂಸ್ಥೆಗಳ ಬೆಳೆ ಸಾಲದ ವ್ಯಾಪ್ತಿಗೆ ತರಲು ಉದ್ದೇಶಿಸಲಾಗಿದೆ. 30 ಸಾವಿರ ಕೋಟಿ ವರೆಗಿನ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾಕ್ಕೂ ಚಾಲನೆ ದೊರೆತಿದೆ ಎಂದು ಬಂಡೆಪ್ಪ ಕಾಶೇಂಪುರ ಹೇಳಿದರು.
ಲೇವಾದೇವಿದಾರರಿಂದ ರೈತರಿಗೆ ಕಿರುಕುಳ ಆಗುತ್ತಿರುವ ಬಗ್ಗೆ ಮಾತನಾಡಿದ ಸಚಿವರು, ಲೇವಾದೇವಿದಾರರು ರೈತರಿಗೆ ಕಿರುಕುಳ ನೀಡುತ್ತಿದ್ದಾರೆ ಕೂಡಲೇ ಠಾಣೆಗಳಲ್ಲಿ ದೂರು ದಾಖಲಿಸಿ ಅಥವಾ ಎಸ್‌ಪಿಗಳ ಗಮನಕ್ಕೆ ತನ್ನಿ ಎಂದು ಸಚಿವರು ಸಲಹೆ ನೀಡಿದರು.












Click it and Unblock the Notifications