ಕುಸಿದ ಈರುಳ್ಳಿ, ಟೊಮೆಟೊ ಬೆಲೆ : ಕಂಗಾಲಾದ ರೈತ
ದಿನದಿಂದ ದಿನಕ್ಕೆ ಟೊಮೆಟೊ ಮತ್ತು ಈರುಳ್ಳಿ ಬೆಲೆಯಲ್ಲಿ ತೀವ್ರ ಕುಸಿತವಾಗುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ. ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಕುಸಿತ ದೊಡ್ಡ ಹೊಡೆತ ನೀಡಿದ್ದು, ಲಾಭದ ಮಾತಿರಲಿ ಬಂಡವಾಳ ಕೂಡ ಕೈಗೆ ಬರುವುದಿಲ್ಲ ಎಂದು ರೈತರು ತಮ್ಮ ಗೋಳು ತೋಡಿಕೊಳ್ಳುತ್ತಿದ್ದಾರೆ.
ಇನ್ನು ಟೊಮೆಟೊ ಕೊಯ್ಲು ಮಾಡಿ, ಮಾರುಕಟ್ಟೆಗೆ ಸಾಗಿಸುವ ಖರ್ಚು ಕೂಡ ರೈತರಿಗೆ ಸಿಗದ ಕಾರಣ ನೂರಾರು ರೈತರು ಟೊಮೆಟೊವನ್ನು ಕಟಾವು ಮಾಡದೆ ಹೊಲದಲ್ಲೇ ಒಣಗಲು ಬಿಟ್ಟಿದ್ದಾರೆ. ಮುಳಬಾಗಿಲು ತಾಲೂಕು ಒಂದರಲ್ಲೇ ಎಂಟು ಸಾವಿರ ಹೆಕ್ಟೆರ್ ಗೂ ಅಧಿಕ ಜಾಗದಲ್ಲಿ ಟೊಮೆಟೊ ಬೆಳೆಯಲಾಗುತ್ತದೆ. ಸದ್ಯ 15 ಕೆಜಿಯ ಒಂದು ಬಾಕ್ಸ್ ಕೇವಲ 60-70 ರುಪಾಯಿಗೆ ಮಾರಾಟವಾಗುತ್ತಿದೆ.

ಕೋಲಾರ, ಮುಳಬಾಗಿಲು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚಾಗಿ ಟೊಮೆಟೊ ಬೆಳಯಲಾಗುತ್ತದೆ. ನೀರಿನ ಅಭಾವದ ನಡುವೆಯೂ ರೈತರು ಹನಿ ನೀರಾವರಿ ಮೂಲಕ ಟೊಮೆಟೊ ಬೆಳೆಯುತ್ತಿದ್ದಾರೆ. ಅಧಿಕ ಬಂಡವಾಳ ಬೇಡುವ ಟೊಮೆಟೊ, ಒಮ್ಮೆ ಬೆಲೆ ಕುಸಿದರೆ ರೈತರಿಗೆ ಸಾವಿರಾರು ರುಪಾಯಿ ನಷ್ಟ ತಂದೊಡ್ಡುತ್ತದೆ.
ಇನ್ನು ಆಲಿಕಲ್ಲು ಮಳೆಯಿಂದಾಗಿ ಕೂಡ ಹಲವು ಕಡೆ ಬೆಳೆ ನಷ್ಟವಾಗಿದೆ. ಬಿರು ಬಿಸಿಲಿನಲ್ಲಿ ಬೆಳೆಯನ್ನು ಕಾಪಾಡಿಕೊಂಡು ಲಾಭದ ಕನಸು ಕಾಣುತ್ತಿದ್ದ ಅನ್ನದಾತರಿಗೆ ಬೆಲೆ ಕುಸಿತ ದೊಡ್ಡ ಆಘಾತ ನೀಡಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಲಿ, ಸೂಕ್ತ ಪರಿಹಾರ ಕೊಡಲಿ ಎಂದು ಹಲವು ರೈತರು ಮನವಿ ಮಾಡಿಕೊಂಡಿದ್ದಾರೆ.
ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ
ಈರುಳ್ಳಿ ಬೆಲೆ ಕೂಡ ದಿಢೀರ್ ಕುಸಿತ ಕಂಡಿದ್ದು ರೈತರನ್ನು ಆತಂಕ್ಕೆ ದೂಡಿದೆ. ಮಾರ್ಚ್ ತಿಂಗಳಿನಲ್ಲಿ 2-3 ಸಾವಿರ ರುಪಾಯಿ ಇದ್ದ ಈರುಳ್ಳಿ ಬೆಲೆ ಈಗ 500 ರಪಾಯಿಯಿಂದ 600 ರುಪಾಯಿಗೆ ಕುಸಿತ ಕಂಡಿದೆ. ಬೇಸಿಗೆ ಸಂದರ್ಭದಲ್ಲಿ ಕಷ್ಟಪಟ್ಟು ಬೆಳೆಗಳಿಗೆ ನೀರುಣಿಸಿ ಈರುಳ್ಳಿ ಬೆಳೆದಿದ್ದ ರೈತ ಬೆಲೆ ಕುಸಿತದಿಂದ ನಷ್ಟದ ಭಯದಲ್ಲಿದ್ದಾನೆ.
ಈರುಳ್ಳಿ ಖರೀದಿ ಮಾಡುವವರೆ ಇಲ್ಲದಂತಾಗಿದ್ದು, ಈರುಳ್ಳಿ ಕಟಾವು ಮಾಡಿ ಹೊಲದಲ್ಲೇ ಇಟ್ಟುಕೊಂಡು ಕಾಯುವಂತಾಗಿದೆ. ಈಗ ಮಳೆ ಕೂಡ ಆರಂಭವಾಗಿದ್ದು, ಈರುಳ್ಳಿ ಕೊಳೆಯದಂತೆ ರಕ್ಷಣೆ ಮಾಡುವುದು ಕೂಡ ರೈತರಿಗೆ ದೊಡ್ಡ ಸವಾಲಾಗಿದೆ. ದಲ್ಲಾಳಿಗಳು ಕಡಿಮೆ ಬೆಲೆಗೆ ತೆಗೆದುಕೊಂಡು ಅಧಿಕ ಬೆಲೆಗೆ ಮಾರುತ್ತಾರೆ ಎಂದು ರೈತರು ದೂರಿದ್ದಾರೆ.
ರೈತರು ಬೆಳೆಯುವ ಬೆಳೆಗಳಿಗೆ ಸಮರ್ಪಕ ಬೆಲೆ ಸಿಗದೆ ರೈತರು ನಷ್ಟ ಅನುಭವಿಸುವಂತಾಗಿದೆ. ಸರ್ಕಾರ ತೊಗರಿ ಮತ್ತು ಕಡಲೆಗೆ ಬೆಂಬಲ ಬೆಲೆ ನೀಡುವಂತೆ ಈರುಳ್ಳಿಗೂ ಬೆಂಬಲ ಬೆಲೆ ಕೊಡಲಿ ಎಂದು ಹಲವು ರೈತರು ಒತ್ತಾಯ ಮಾಡಿದ್ದಾರೆ.












Click it and Unblock the Notifications