ಚಿತ್ರ ನಟರಂತೆ ರೈತ ಮುಖಂಡರಿಗೂ ಸ್ಮಾರಕ ನಿರ್ಮಿಸಿ: ರೈತ ಸಂಘ ಆಗ್ರಹ
ಮೈಸೂರು, ಡಿಸೆಂಬರ್ 8: ಚಿತ್ರ ನಟರಿಗೆ ನಿರ್ಮಾಣ ಮಾಡುವ ಸ್ಮಾರಕ ವಿಚಾರದಲ್ಲಿ ಹೊಸ ವರಸೆಯೊಂದು ಕೇಳಿ ಬಂದಿದೆ. ಸಿನಿಮಾ ನಟರಿಗೆ ಸ್ಮಾರಕ ನಿರ್ಮಾಣಕ್ಕೆ ಮುಂದಾಗಿರುವ ರಾಜ್ಯ ಸರ್ಕಾರಕ್ಕೆ ಇದೀಗ ಮತ್ತೊಂದು ಸ್ಮಾರಕ ನಿರ್ಮಾಣದ ಕೂಗು ಕೇಳಿ ಬಂದಿದೆ.
ನಮ್ಮ ತೆರಿಗೆ ಹಣದಲ್ಲಿ ಸಿನಿಮಾ ನಟರಿಗೆ ಸ್ಮಾರಕ ನಿರ್ಮಾಣ ಮಾಡುತ್ತಾರೆ. ಅದರಂತೆಯೇ ದೇಶದ ಮುನ್ನಡೆಗೆ ಹೆಚ್ಚು ಬೆನ್ನೆಲುಬು ಆಗಿರುವ ರೈತರಿಗೇಕೆ ಈ ಸೌಲಭ್ಯವಿಲ್ಲ. ಸಿನಿಮಾ ನಟರಂತೆ ರೈತ ಮುಖಂಡರಿಗೂ ಸ್ಮಾರಕ ನಿರ್ಮಾಣ ಮಾಡಬೇಕು. ರೈತರ ಮುಖಂಡರ ಸ್ಮಾರಕ ಯಾಕೆ ಮಾಡುತ್ತಿಲ್ಲ.
ಸಿನಿಮಾ ನಟರಿಗೊಂದು ನ್ಯಾಯ..? ರೈತ ಮುಖಂಡರಿಗೊಂದು ನ್ಯಾಯನಾ..? ಎಂದು ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ರೈತ ಮುಖಂಡರು ಗರಂ ಆಗಿದ್ದಾರೆ.

ಈ ಕುರಿತು ಸಿಎಂ ಹೆಚ್.ಡಿ ಕುಮಾರಸ್ವಾಮಿಗೆ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಪತ್ರ ಬರೆದಿದ್ದಾರೆ. ರೈತ ಮುಖಂಡರುಗಳಾದ ಪ್ರೊ.ಎಂ.ಡಿ ನಂಜುಂಡಸ್ವಾಮಿ, ಸುಂದರೇಶ್, ಕೆ.ಎಸ್ ಪುಟ್ಟಣ್ಣಯ್ಯ ಅವರ ಸ್ಮಾರಕವನ್ನು ಬೆಂಗಳೂರು ನಗರದಲ್ಲಿ ಸರ್ಕಾರದ ವತಿಯಿಂದ ನಿರ್ಮಾಣ ಮಾಡಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

ಚಿತ್ರ ನಟರಷ್ಟೆ ನಾಯಕರಾ..? ರೈತ ಮುಖಂಡರು ನಾಯಕರಲ್ಲವೆ..? ರೈತ ಮುಖಂಡರ ಸ್ಮಾರಕ ಮಾಡದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ. ಕಾನೂನು ಹೋರಾಟದ ಜೊತೆಗೆ ಬೇರೆ ರೀತಿಯ ಹೋರಾಟ ಮಾಡುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಸರ್ಕಾರಕ್ಕೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.












Click it and Unblock the Notifications