ದೆಹಲಿ ಗಲಭೆಗೆ ರೈತರು ಹೊಣೆಯಲ್ಲ; ಎಚ್.ಡಿ. ದೇವೇಗೌಡ
ನವದೆಹಲಿ, ಫೆಬ್ರುವರಿ 04: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೆಲವು ದುಷ್ಕರ್ಮಿಗಳು ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಖಂಡಿಸಿರುವ ದೇವೇಗೌಡರು, ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಜಾಥಾ ವೇಳೆ ನಡೆದ ಗಲಭೆ ಹಿಂದೆ ದುಷ್ಕರ್ಮಿಗಳು ಇದ್ದಾರೆ. ಅಂಥವರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸಭೆ ಅಧಿವೇಶನದಲ್ಲಿ ಗುರುವಾರ ರೈತರ ಪ್ರತಿಭಟನೆ ಕುರಿತು ಪ್ರಸ್ತಾಪ ಮಾಡಿದ ಅವರು, "ರೈತರ ಈ ಪ್ರತಿಭಟನೆ ದುಷ್ಕರ್ಮಿಗಳು ಕೆಟ್ಟ ಹೆಸರು ತರುತ್ತಿದ್ದಾರೆ. ಈ ಗಲಭೆಗೆ ರೈತರು ಹೊಣೆಯಲ್ಲ" ಎಂದು ಹೇಳಿದ್ದಾರೆ. ಜೊತೆಗೆ ರೈತರು ದೆಹಲಿ ಗಡಿಗಳಿಗೆ ನುಗ್ಗದಂತೆ ತಡೆಯಲು ಸಿಮೆಂಟ್ ಗೋಡೆ, ಬ್ಯಾರಿಕೇಡ್ ಗಳನ್ನು ಹಾಕಿರುವ ಸರ್ಕಾರದ ಕ್ರಮವನ್ನು ಖಂಡಿಸಿರುವ ದೇವೇಗೌಡರು, "ರೈತರನ್ನು ತಡೆಯಲು ಸಿಮೆಂಟ್ ಗೋಡೆಗಳನ್ನು ಕಟ್ಟುವುದರಿಂದ ಸರ್ಕಾರಕ್ಕೆ ಯಾವುದೇ ಪ್ರಯೋಜನವಿಲ್ಲ. ಈ ಒಂದು ವಿವಾದ, ಬಿಕ್ಕಟ್ಟನ್ನು ಶಾಂತಿಯುತವಾಗಿ ಅಂತಿಮಗೊಳಿಸುವತ್ತ ಸರ್ಕಾರ ಯೋಚಿಸಬೇಕಿದೆ" ಎಂದು ಸಲಹೆ ನೀಡಿದ್ದಾರೆ.

"ಈ ಘಟನೆಗೆ ರೈತರು ಸಂಪೂರ್ಣ ಜವಾಬ್ದಾರರಲ್ಲ. ರೈತರ ಪ್ರತಿಭಟನೆ ರಾಜ್ಯಗಳಿಗೂ ಸಂಬಂಧಿಸಿರುವುದರಿಂದ ಕೇಂದ್ರ ಸರ್ಕಾರವು ಎಲ್ಲಾ ರಾಜ್ಯ ಸರ್ಕಾರದ ಅಭಿಪ್ರಾಯ ಪಡೆದುಕೊಳ್ಳುವುದು ಒಳಿತು" ಎಂದು ಹೇಳಿದ್ದಾರೆ.












Click it and Unblock the Notifications