ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ರೈತ ಮುಖಂಡರ ಬಂಧನ
ಬೆಂಗಳೂರು, ಜೂನ್ 26: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಇಂದು (ಜೂ.26) ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು.
ಎಲ್ಲ ರಾಜ್ಯಗಳ ರಾಜಭವನ ಚಲೋ ಆರಂಭಿಸಿ, ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಕೃಷಿ ಕಾಯ್ದೆಗಳ ರದ್ದುಗೊಳಿಸುವಂತೆ ಮನವಿ ನೀಡಲು ರೈತ ಮುಖಂಡರು ಮುಂದಾಗಿದ್ದರು.
ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ ಎನ್ನುವ ಘೋಷಣೆಯೊಂದಿಗೆ ದೇಶದ ಎಲ್ಲ ಕಡೆ ಪ್ರತಿಭಟನಾ ಮೆರವಣಿಗೆಗಳು ನಡೆದವು. ಆದರೆ, ರೈತರು ಪ್ರತಿಭಟನೆ ಆರಂಭಿಸಿದ ಕೆಲ ಹೊತ್ತಲ್ಲೇ ಪೊಲೀಸರು ರೈತ ಮುಖಂಡರನ್ನು ಬಂಧಿಸಿದ್ದಾರೆ.

ಬಿಕೆಯು ನಾಯಕ ರಾಕೇಶ್ ಟಿಕಾಯತ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ ಯುದ್ಧವೀರ್ ಸಿಂಗ್‌ರನ್ನು ದೆಹಲಿಯ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ.
ಅದೇ ರೀತಿ ಕರ್ನಾಟಕದಲ್ಲಿ ರೈತ ಪ್ರತಿಭಟನೆ ನಡೆಯಿತು. ಈ ವೇಳೆ ರೈತ ಮುಖಂಡರನ್ನು ಮೌರ್ಯ ವೃತ್ತದಿಂದ ವಾಹನದಲ್ಲಿ ಎತ್ತಿಕೊಂಡು ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಬಂಧಿಸಲಾಗಿದೆ. ರೈತರ ರಾಜಭವನ ಚಲೋಗೆ ರಾಜ್ಯ ಸರ್ಕಾರ ಅವಕಾಶ ನೀಡಲಿಲ್ಲ.

ರೈತರು ದೆಹಲಿಯಲ್ಲಿ ಕಳೆದ 214 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯಲ್ಲಿ ಇಲ್ಲಿಯವರೆಗೆ 520 ಜನ ರೈತರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಬಗೆಹರಿಸುತ್ತಿಲ್ಲ. ಹೀಗಾಗಿ, ರೈತರ ಒಗ್ಗಟ್ಟನ್ನು ಸಾಬೀತುಪಡಿಸಲು ಇಂದು ದೇಶಾದ್ಯಂತ ರಾಜಭವನ ಚಲೋ ಹಮ್ಮಿಕೊಳ್ಳಲಾಗಿತ್ತು.

ಜೂ.28ಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿ
ಕೇಂದ್ರ ಸರ್ಕಾರವು ಜಾರಿಗೆ ತರುತ್ತಿರುವ ಬೆಳೆ ವಿಮೆ ನೀತಿಯು ಕೃಷಿ ವಲಯಕ್ಕೆ ಅಪಾಯಕಾರಿ ಎಂಬುದನ್ನು ತಿಳಿಸಲು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಜೂ. 28, ಸೋಮವಾರ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ರೈತ ಮುಖಂಡರ ಬಂಧನಕ್ಕೆ ರಾಮಲಿಂಗಾರೆಡ್ಡಿ ಆಕ್ರೋಶ
ಶನಿವಾರ ಬೆಂಗಳುರಿನಲ್ಲಿ ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರನ್ನು ಬಂಧಿಸಿದ್ದಕ್ಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶದಲ್ಲಿ ನವೆಂಬರ್‌ನಿಂದ ರೈತರ ಪ್ರತಿಭಟನೆ ನಡೆಯುತ್ತಿದ್ದು, ಇಷ್ಟು ದೊಡ್ಡ ಹೋರಾಟ ಎಂದೂ ನಡೆದಿರಲಿಲ್ಲ. ರೈತರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಚಿಂತನೆಯಿಲ್ಲ. ರೈತ ವಿರೋಧಿ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ,'' ಎಂದು ಆರೋಪಿಸಿದರು.
"ಎಪಿಎಂಸಿಗಳನ್ನು ರೈತರಿಗೆ ಅನುಕೂಲಕ್ಕೆ ತರಲಾಗಿತ್ತು, ಅದನ್ನೂ ಇಂದು ವ್ಯಾಪಾರಿಗಳ ಕೈಗೆ ಕೊಟ್ಟಿದ್ದಾರೆ. ರೈತ ವಿರೋಧಿ ಪಕ್ಷ ಅಂದರೆ ಅದು ಬಿಜೆಪಿ. ಹಿಂದೆ ನಮ್ಮ ಅವಧಿಯಲ್ಲಿ ರೈತ ಪರ ಕಾನೂನು ತಂದಿದ್ದೆವು, ರಾಜ್ಯದಲ್ಲಿ ಗೇಣಿದಾರದ ಪರ ಅರಸು ಕಾನೂನು ತಂದಿದ್ದರು. ಈಗ ಪ್ರತಿಭಟನೆ ನಿರತ ರೈತರನ್ನು ಬಂಧಿಸಿದ್ದಾರೆ. ಬಿಜೆಪಿಯವರಿಂದ ಇನ್ನೇನು ಮಾಡಲು ಸಾಧ್ಯ,'' ಎಂದು ಕೆಪಿಸಿಸಿ ಕಚೇರಿಯಲ್ಲಿ ರಾಮಲಿಂಗಾರೆಡ್ಡಿ ಟೀಕಿಸಿದರು.












Click it and Unblock the Notifications