ತಂದೆ ಬಂದು ಹೋದ 15 ವರ್ಷಗಳ ನಂತರ ರಾಕೇಶ್ ಟಿಕಾಯತ್ ಕರ್ನಾಟಕಕ್ಕೆ ಬರುತ್ತಿದ್ದಾರೆ…
ದಿಲ್ಲಿಯ ರೈತ ಚಳವಳಿಯನ್ನು ಜೀವಂತವಾಗಿಟ್ಟಿರುವ ಪ್ರಮುಖರಲ್ಲೊಬ್ಬರಾದ ರಾಕೇಶ್ ಟಿಕಾಯತ್ ಇದೇ ಮಾರ್ಚ್ ತಿಂಗಳ 20, 21, 22 ಮತ್ತು 31 ರಂದು ಕರ್ನಾಟಕದಲ್ಲಿ ಪ್ರವಾಸ ಮಾಡಲಿದ್ದಾರೆ. ಉತ್ತರ ಪ್ರದೇಶದ ಬಹುದೊಡ್ಡ ರೈತ ಹೋರಾಟಗಾರ ಮಹೇಂದ್ರ ಸಿಂಗ್ ಟಿಕಾಯತ್ ಅವರ ಮಗನೀತ.
ಪ್ರೊ.ಎಂಡಿಎನ್, ಮಹೇಂದ್ರ ಸಿಂಗ್ ಟಿಕಾಯತ್ ಮುಂತಾದ ಪ್ರಮುಖ ರೈತ ನಾಯಕರು 1995ರ ನಂತರದ ವರ್ಷಗಳಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ರೈತ ಸಂಘಟನೆಗಳ ಒಕ್ಕೂಟ ಮಾಡುವಲ್ಲಿ ಸಫಲರಾಗಿದ್ದರು.
ಇಂಡಿಯನ್ ಕೋಆರ್ಡಿನೇಶನ್ ಕಮಿಟಿ ಫಾರ್ ಫಾರ್ಮಸ್ ಎಂಬ ರಾಷ್ಟ್ರೀಯ ಒಕ್ಕೂಟ ಮತ್ತು ಲಾ ವಯಾಕ್ಯಾಂಪೆಸಿನಾ ಹೆಸರಿನ ಅಂತಾರಾಷ್ಟ್ರೀಯ ರೈತ ಹೋರಾಟಗಳ ಒಕ್ಕೂಟದ ಅಡಿಯಲ್ಲಿ ಈ ಎಲ್ಲಾ ನಾಯಕರು ದೇಶ ವಿದೇಶಗಳಲ್ಲಿ ಚಳವಳಿ ಮಾಡಿದವರು. ಅದರ ಭಾಗವಾಗಿ ಮಹೇಂದ್ರ ಸಿಂಗ್ ಟಿಕಾಯತ್ ಕರ್ನಾಟಕಕ್ಕೆ ಹಲವು ಬಾರಿ ಬಂದು ಹೋಗಿದ್ದಾರೆ.

ಪ್ರಾಯಶಃ ಅವರು ಕಡೆಯದಾಗಿ ಬಂದದ್ದು ಫೆಬ್ರವರಿ 13, 2005 ರಂದು. (ಅದಾದ ನಂತರ ಬಂದಿದ್ದಲ್ಲಿ ನನಗೆ ನೆನಪಿಲ್ಲ) ಪ್ರೊ.ಎಂಡಿಎನ್ ಅಸ್ತಂಗತರಾದ ನಂತರ (ಫೆಬ್ರವರಿ 3, 2004) ಅವರ ಮೊದಲನೆಯ ಜನ್ಮದಿನಾಚರಣೆಯನ್ನು ಮೈಸೂರಿನಲ್ಲಿ ಆಯೋಜಿಸಿದ್ದೆವು. ಆ ಸಭೆಗೆ ಮಹೇಂದ್ರ ಸಿಂಗ್ ಟಿಕಾಯತ್ ಬಂದಿದ್ದರು. ಅವರೊಟ್ಟಿಗೆ ಉತ್ತರ ಪ್ರದೇಶದ ಹತ್ತನ್ನೆಡರು ರೈತರೂ ಜೊತೆಯಾಗಿದ್ದರು.
ಫೆಬ್ರವರಿ 13, 2005 ಮೈಸೂರಿನಲ್ಲಿ ಎತ್ತ ನೋಡಿದರೂ ಹಸಿರು ಶಾಲುಗಳ ಕಲರವ. ರೈತರ ಬೃಹತ್ ಸಮಾವೇಶ ವೆಂಬ ತಲೆಬರಹ mammoth rally ಎಂಬ ತಲೆಬರಹಗಳು ಮಾರನೆಯ ದಿವಸ ಎಲ್ಲಾ ಪೇಪರ್ ಗಳಲ್ಲಿ ರಾರಾಜಿಸಿದ್ದು ನೆನಪಿದೆ.
14 ರಂದು ಸಂಜೆ ಮಹೇಂದ್ರ ಸಿಂಗ್ ಟಿಕಾಯತ್ ಮತ್ತವರ ತಂಡವನ್ನು ಯಶವಂತಪುರದ ರೈಲಿಗೆ ಹತ್ತಿಸಬೇಕಿತ್ತು. ಆ ಜವಾಬ್ದಾರಿ ನನ್ನ ಮೇಲೆಯೇ ಇತ್ತು. ಒಂದು ಟೆಂಪೋ ಟ್ರಾವೆಲರ್ ಬಾಡಿಗೆಗೆ ಪಡೆದು ಅವರನ್ನು ಮೈಸೂರು ಅರಮನೆ ಮತ್ತು ಒಂದೆರಡು ಸಿಲ್ಕ್ ಮಳಿಗೆಗೆಳಿಗೆ (ಉತ್ತರ ಪ್ರದೇಶದ ರೈತರ ಕೋರಿಕೆಯಂತೆ) ಭೇಟಿ ಕೊಡಿಸಿ ಬೆಂಗಳೂರಿನತ್ತ ಹೊರಟೆವು.

ಮಾರ್ಗ ಮಧ್ಯೆ ಮಂಡ್ಯ ದಾಟಿ ಕೊಂಚ ಮುಂದಕ್ಕೆ ಟಯರ್ ಬರ್ಸ್ಟ್ ಆಯಿತು. ಮಹೇಂದ್ರ ಸಿಂಗ್ ಟಿಕಾಯತ್ ತಮ್ಮ ಗುಡುಗುಡಿಯೊಟ್ಟಿಗೆ ಇಳಿದವರು ರಸ್ತೆಗೆ ಕೊಂಚ ದೂರದಲ್ಲಿ ಗುಡುಗುಡಿ ಸೇದುತ್ತಾ ನಿರುಮ್ಮಳವಾಗಿ ಕುಳಿತೇ ಬಿಟ್ಟರು. ಅಷ್ಟರಲ್ಲಿ ಡ್ರೈವರ್ ಟಯರ್ ಬದಲಿಸಿ, ರೆಡಿ ಹೊರಡೋಣವೆಂದ.
ಆ ವಿಷಯವನ್ನು ರಸ್ತೆಗೆ ಅನತಿ ದೂರದಲ್ಲಿ ಕುಳಿತಿದ್ದ ಟಿಕಾಯತ್ ರಿಗೆ ಮುಟ್ಟಿಸಿದೆ. ಅವರು ತಾಳು ಸ್ವಲ್ಪ ಎಂಬಂತೆ ಸನ್ನೆ ಮಾಡಿ ಗುಡುಗುಡಿ ಸೇದುತ್ತಲೇ ಇದ್ದರು. ಟ್ರೈನ್'ಗೆ ಟೈಂ ಆಗುತ್ತದೆ. ತಡ ಆದ್ರೆ ಕಷ್ಟ ಮತ್ತೆ ಎಂದು ವಿವರಿಸಿದೆ. ಟಿಕಾಯತ್‌ರಿಂದ ಬುಲೆಟ್ ಹೊಡೆದಂತಾ ಮಾತು ಹೊರಬಿತ್ತು " ರೋಕ್ನೇಕೋ ಬೋಲ್" (ನಾವೆಲ್ಲಾ ಹೋಗೋವರೆಗೆ ರೈಲು ನಿಂತಿರಲು ಸೂಚಿಸು) ಎಂಬ ಸಂದೇಶ ಅದಾಗಿತ್ತು.
ನನಗೆ ಕಕರು ಮಕರು. ನನಗೆ ರೈಲು ತಡೆ ಚಳುವಳಿ ಗೊತ್ತಿತ್ತು. ಶೆಡ್ಯೂಲ್ಡ್ ಟೈಂನಲ್ಲಿರುವ ರೈಲು ನಿಲ್ಲಿಸುವುದು ಹೇಗೆ ಸಾಧ್ಯವೆಂದು ಯೋಚಿಸತೊಡಗಿದೆ. ಅಷ್ಟರಲ್ಲಿ ನಾನು ಉಳಾ ಪಾರ್ಟಿ, ನನ್ನಿಂದ ಆ ಕೆಲಸ ಮಾಡೋಕಾಗಲ್ಲ ಎಂದು ಅವರಿಗೆ ಅರ್ಥವಾಗಿರಬೇಕು. ಎಲ್ಲರೂ ಜೋರು ನಗುತ್ತಾ ಟೆಂಪೋ ಹತ್ತಿಕೊಂಡರು.
ಬದುಕಿತು ಬಡಜೀವ ಅಂದಕೊಂಡು ಹೊರಟೆ. ರೈಲು ಹೊರಡುವ ಹತ್ತೇ ನಿಮಿಷ ಮೊದಲು ಯಶವಂತಪುರ ಸ್ಟೇಷನ್ ಪ್ಲಾಟ್ ಫಾರಂ ಸೇರಿಸಿ ನಿರುಮ್ಮಳನಾದೆ. ಅಂದಹಾಗೆ ಉತ್ತರ ಪ್ರದೇಶದಲ್ಲಿ ರೈತ ಚಳುವಳಿಯ ಮಂದಿ ಅವರಿಗೆ ಅಗತ್ಯವೆಂದಾಗ ರೈಲು ತಡವಾಗಿ ಹೊರಡುವಂತೆ ತಾಕೀತು ಮಾಡಿ (ಧಮಕಿ ಹಾಕಿ) ಜಯಿಸುತ್ತಿದ್ದರೆಂದು ನಂತರ ನನಗೆ ತಿಳಿಯಿತು.












Click it and Unblock the Notifications