ಕಾಲುವೆಗೆ ಹಾರಿ ಕೆ. ಆರ್ ಪೇಟೆ ರೈತ ಆತ್ಮಹತ್ಯೆ
ಮೈಸೂರು, ಅಕ್ಟೋಬರ್, 26 : ಸಾಲ ಬಾಧೆ ತಾಳಲಾರದೆ ರೈತನೊಬ್ಬ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಸಿಂಗನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 26ರ ಸೋಮವಾರದಂದು ನಡೆದಿದೆ.
ಸಿಂಗನಹಳ್ಳಿ ಗ್ರಾಮದ ನಿವಾಸಿ ಸಣ್ಣಯ್ಯ(58) ಮೃತ ಪಟ್ಟ ರೈತ. ಕಾಲುವೆಗೆ ಹಾರಿ ಪ್ರಾಣ ಕಳೆದುಕೊಂಡ ಸಣ್ಣಯ್ಯನ ಶವಕ್ಕಾಗಿ ಹುಡುಕಾಟ ಮುಂದುವರೆದಿದ್ದು, ಮೃತ ರೈತನ ಪತ್ನಿ ಜಯಮ್ಮ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.[ಕೊಡಗಿನ ಕಿತ್ತಳೆ ಬೆಳೆದ ಸುರೇಶ್ ಸುಬ್ಬಯ್ಯ ಸಾಧನೆ ಕಥೆ]

ಸಣ್ಣಯ್ಯ ಅವರು ಅಕ್ಕಿಹೆಬ್ಬಾಳು ವಿಜಯಾ ಬ್ಯಾಂಕಿನಲ್ಲಿ 1ಲಕ್ಷ ಹಾಗೂ ಕೃಷಿ ಪತ್ತಿನ ಸಹಕಾರ ಬ್ಯಾಂಕಿನಿಂದ 50ಸಾವಿರ ರೂ ಸಾಲ ಪಡೆದುಕೊಂಡಿದ್ದರು. ಇದಲ್ಲದೆ 2ಲಕ್ಷ ರೂ ಕೈಸಾಲ ಪಡೆದಿದ್ದರು. ಸಾಲ ಪಡೆದ ಹಣದಿಂದ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಒಂದು ಕೊಳವೆ ಬಾವಿ ಕೊರೆಯಿಸಿದ್ದರು.
ಕೊಳವೆ ಬಾವಿಯಲ್ಲಿನ ನೀರು ಕೃಷಿ ಚಟುವಟಿಕೆಗೆ ಸಾಕಾಗುತ್ತಿರಲಿಲ್ಲ. ಇದರ ಹಿನ್ನೆಲೆಯಲ್ಲಿ ತೆಂಗು, ಬಾಳೆ, ರಾಗಿ ಬೆಳೆಗಳು ಸಮರ್ಪಕವಾಗಿ ಬೆಳೆದಿರಲಿಲ್ಲ. ಈ ನಡುವೆ ಕೈಸಾಲಗಾರರ ಕಾಟ ಜಾಸ್ತಿಯಾದ ಕಾರಣ ತಮ್ಮ ಜಮೀನಿನ ಬಳಿ ಹರಿಯುವ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.[ಸಾಲಕ್ಕೆ ಸಾವು ಪರಿಹಾರವಲ್ಲ, ಯಾದಗಿರಿಯಲ್ಲೊಂದು ಅಭಿಯಾನ]
ಕಾಲುವೆ ಬಳಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಸಣ್ಣಯ್ಯ ಅವರು ಕಾಲುವೆಗೆ ಹಾರಿದ್ದನ್ನು ಕಂಡು ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಗ್ರಾಮಸ್ಥರು ಮತ್ತು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಮೃತ ರೈತನ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.












Click it and Unblock the Notifications