ಹುಣಸೂರಲ್ಲಿ ಸಾಲ ತೀರಿಸಲಾಗದೆ ರೈತ ನೇಣಿಗೆ ಶರಣು
ಹುಣಸೂರು, ಜನವರಿ 29: ಸರ್ಕಾರ ಹಲವು ರೀತಿಯ ಭಾಗ್ಯಗಳನ್ನು ನೀಡುತ್ತಿದ್ದರೂ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಮುಂದುವರೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿಯೇ ರೈತನೊಬ್ಬ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿದ್ದಾನೆ.
ಹುಣಸೂರು ತಾಲೂಕಿನ ಮಾರಗೌಡನ ಹಳ್ಳಿ ಗ್ರಾಮದ ನಿವಾಸಿ ಮಾಲೆಗೌಡ(48) ಆತ್ಮಹತ್ಯೆಗೆ ಶರಣಾದ ದುರ್ದೈವಿ. ಆತ್ಮಹತ್ಯೆ ಮಾಡಿಕೊಳ್ಳಲು ಮಳೆ ಕೈಕೊಟ್ಟ ಪರಿಣಾಮ ನಿರೀಕ್ಷೆ ಮಾಡಿದ ಇಳುವರಿ ಬಾರದೆ ನಷ್ಟವುಂಟಾಗಿದ್ದೇ ಕಾರಣ ಎನ್ನಲಾಗಿದೆ.
ಮೃತ ರೈತ ಮಾಲೆಗೌಡ ಮೈಸೂರು ತಾಲೂಕು ಇಲವಾಲ ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಿಂದ ತಮ್ಮ ಕೃಷಿ ಚಟುವಟಿಕೆಗಾಗಿ ರೂ.2.50 ಲಕ್ಷ ರೂ, ಧರ್ಮಸ್ಥಳ ಮೈಕ್ರೋ ಫೈನಾನ್ಸ್ ನಿಂದ 30 ಸಾವಿರ, ಮೈಕ್ರೋಫೈನಾನ್ಸ್ ನಿಂದ 50 ಸಾವಿರ ಹಾಗೂ ಕೈಸಾಲವಾಗಿ 1 ಲಕ್ಷ ಹೀಗೆ ವಿವಿಧ ಮೂಲಗಳಿಂದ ಸುಮಾರು 4 ಲಕ್ಷಕ್ಕೂ ಹೆಚ್ಚು ಸಾಲ ಮಾಡಿ ಕೃಷಿ ಮಾಡಿದ್ದರು. ಆದರೆ ಈ ಬಾರಿ ಮಳೆ ಕೈಕೊಟ್ಟ ಕಾರಣ ಬೆಳೆದ ಬೆಳೆ ಕೈಗೆ ಸಿಗದೆ ನಷ್ಟವಾದ್ದರಿಂದ ಅಸಲು ತೀರಿಸುವುದಿರಲಿ, ಬಡ್ಡಿ ಕಟ್ಟಲು ಕೂಡ ಸಾಧ್ಯವಾಗಿರಲಿಲ್ಲ. ಹೀಗಾಗಿ ಸಾಲಗಾರರ ಕಾಟ ಜಾಸ್ತಿಯಾಗಿದ್ದರಿಂದ ಮನನೊಂದು ಶನಿವಾರ ರಾತ್ರಿ ಮನೆಯ ತೊಲೆಯೊಂದಕ್ಕೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಸಂಬಂಧ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಿ ಮೃತ್ತದೇಹವನ್ನು ವಾರಸುದಾರರಿಗೆ ನೀಡಲಾಯಿತು.












Click it and Unblock the Notifications