ನರೇಗಾ; ಅಡಿಕೆ ತೋಟ ನಿರ್ಮಾಣ, ರೈತನ ಜೀವನ ಹಸನು
ಶಿವಮೊಗ್ಗ, ಮಾರ್ಚ್ 01; ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೂಲಕ ಶಿವಮೊಗ್ಗ ಜಿಲ್ಲೆಯಲ್ಲಿ ಸಣ್ಣ ರೈತರೊಬ್ಬರು ತಮ್ಮ ಕನಸಿನಂತೆ ವಾಣಿಜ್ಯ ಬೆಳೆಯಾದ ಅಡಿಕೆ ತೋಟ ನಿರ್ಮಾಣ ಮಾಡಿಕೊಂಡು ಸಂತಸಗೊಂಡಿದ್ದಾರೆ.
ಸರ್ಕಾರದ ಹಲವಾರು ಯೋಜನೆಗಳಿದ್ದರೂ ಇಂದಿಗೂ ರೈತರು ಬಡತನದಿಂದ ಮುಕ್ತರಾಗಿಲ್ಲ. ಬೆಳೆಗೆ ಸಮರ್ಪಕ ಬೆಲೆ ಸಿಗುತ್ತಿಲ್ಲ, ಕೂಲಿಯಾಳುಗಳ ಕೊರತೆ ಸೇರಿದಂತೆ ವಿವಿಧ ಸಮಸ್ಯೆಗೆ ರೈತ ಸಿಲುಕಿದ್ದಾನೆ. ಇಂತಹ ಸ್ಥಿತಿಯಲ್ಲಿ ರೈತರು ವಾಣಿಜ್ಯ ಬೆಳೆ ಬೆಳೆಯುವ ಬಗ್ಗೆ ಚಿಂತಿಸಿದ್ದರೂ ಸ್ವಂತ ಖರ್ಚಿನಿಂದ ಅಡಿಕೆ ತೋಟ ನಿರ್ಮಾಣ ಕಷ್ಟವಾಗಿದೆ.
ಹೀಗೆ ಸಂಕಷ್ಟದಲ್ಲಿರುವ ಸಣ್ಣ ರೈತರ ನೆರವಿಗೆ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವರದಾನವಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಸಣ್ಣ ರೈತರು ಈ ಯೋಜನೆಯ ಮೂಲಕ ತಮ್ಮ ಜಮೀನಿನಲ್ಲಿ ಅಡಿಕೆ ತೋಟ ನಿರ್ಮಿಸಿಕೊಂಡಿದ್ದಾರೆ.

ಸೊರಬ ತಾಲ್ಲೂಕಿನ ಎಣ್ಣೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆವರತೆಪ್ಪ ಗ್ರಾಮದ ಹನುಮಂತಪ್ಪ ಬಿನ್ ಹನುಮಣ್ಣ ತಮ್ಮ ಸರ್ವೆ ನಂ 13 ರಲ್ಲಿ 1.30 ಗುಂಟೆ ಜಮೀನಿನಲ್ಲಿ ನರೇಗಾ ಯೋಜನೆಯ ಮುಖಾಂತರ ಅಡಿಕೆ ತೋಟ ನಿರ್ಮಿಸಿಕೊಂಡಿದ್ದು, ಉತ್ತಮ ಆದಾಯ ಪಡೆಯುತ್ತಿದ್ದಾರೆ.
ರೈತ ಹನುಮಂತಪ್ಪ ಈ ಕುರಿತು ಮಾತನಾಡಿದ್ದು, "ಅಡಿಕೆ ಬೆಳೆ ಬರಲು ಕನಿಷ್ಟ 5 ರಿಂದ 6 ವರ್ಷ ಬೇಕಾಗಿದ್ದು, 6 ವರ್ಷಗಳವರೆಗೆ ಅಡಿಕೆ ತೋಟದಲ್ಲಿ ಅಂತರ ಬೆಳೆಯಾಗಿ 2 ವರ್ಷ ಬಾಳೆ, 1 ವರ್ಷ ಶುಂಠಿ ಹಾಗೂ ತರಕಾರಿಗಳನ್ನು ಬೆಳೆದು ಆದಾಯ ಪಡೆದಿದ್ದೇನೆ" ಎಂದರು.
"ಅಡಿಕೆ ಬೆಳೆ ಬರಲು ಪ್ರಾರಂಭವಾದ 6 ನೇ ವರ್ಷದಲ್ಲಿ 1 ಲಕ್ಷ ರೂ. ಆದಾಯ ಪಡೆದಿದ್ದೇನೆ. ಪ್ರಸ್ತುತ 7 ನೇ ವರ್ಷದಲ್ಲಿ 2 ರಿಂದ 3 ಲಕ್ಷಗಳವರೆಗೆ ಆದಾಯ ಪಡೆಯುವ ನಿರೀಕ್ಷೆ ಹೊಂದಿದ್ದೇನೆ. ಅಡಿಕೆ ಬೆಳೆಯ ಆದಾಯವು ಜೀವನ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸ ಮತ್ತು ಇತರೆ ಖರ್ಚುಗಳ ನಿರ್ವಹಣೆಗೆ ಆಸರೆಯಾಗಿದೆ" ಎಂದು ಸಂತಸ ಹಂಚಿಕೊಂಡರು.

"ಅಡಿಕೆ ತೋಟ ನಿರ್ಮಾಣಕ್ಕೂ ಮುನ್ನ ಭತ್ತವನ್ನು ಬೆಳೆಯಲಾಗುತ್ತಿತ್ತು. ಅದರಲ್ಲಿ ಬಂದ ಆದಾಯದಲ್ಲಿ ಶೇ 70 ರಷ್ಟು ನಿರ್ವಹಣೆಗಾಗಿ ವ್ಯಯ ಮಾಡಬೇಕಿತ್ತು. ಆದರೆ ಅಡಿಕೆ ತೋಟ ನಿರ್ಮಾಣದಿಂದ ನಿರ್ವಹಣೆ ವೆಚ್ಚವೂ ಕಡಿಮೆಯಾಗಿದೆ. ನರೇಗಾ ಯೋಜನೆ ಮೂಲಕ ನನಗೆ ಅಡಿಕೆ ತೋಟ ನಿರ್ಮಾಣ ಮಾಡಿಕೊಡಲಾಗಿದೆ. ಈಗ ಉತ್ತಮ ಆದಾಯ ಬರುತ್ತಿದ್ದು ನಮ್ಮ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ" ಎಂದು ಹೇಳಿದ್ದಾರೆ.
ನರೇಗಾ ಯೋಜನೆ ಆಶಾ ಕಿರಣ; ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣರು ಮತ್ತು ರೈತರ ಪಾಲಿನ ಆಶಾಕಿರಣವಾಗಿದೆ. ಆರ್ಥಿಕವಾಗಿ ಹಿಂದುಳಿದ ಸಣ್ಣ ರೈತರಿಗೆ ಸ್ವಂತ ಖರ್ಚಿನಲ್ಲಿ ಅಡಿಕೆ ತೋಟ ನಿರ್ಮಾಣ ಕಷ್ಟ. ಇಂತಹ ಸಮಯದಲ್ಲಿ ನರೇಗಾ ಯೋಜನೆಯಡಿ ಅಡಿಕೆ ತೋಟ ನಿರ್ಮಾಣ ಮಾಡಿಕೊಳ್ಳಲು ಸಹಾಯಧನ ನೀಡುವುದು ಈ ಯೋಜನೆಯ ಉದ್ದೇಶ.
ಪ್ರಸ್ತುತ ಅಡಿಕೆ ಬೆಳೆಗೆ ಹೆಚ್ಚಿನ ಬೆಲೆ ಇದ್ದು ಇದರಿಂದ ಹೆಚ್ಚಿನ ಆದಾಯ ಗಳಿಸಬಹುದು. ಕಡಿಮೆ ಖರ್ಚಿನಲ್ಲಿ ಅಡಿಕೆ ತೋಟವನ್ನು ನಿರ್ವಹಣೆ ಮಾಡಬಹುದು ಹಾಗೂ ಹನಿ ನೀರಾವರಿಯನ್ನು ಅಳವಡಿಸಿಕೊಂಡರೆ ಇನ್ನೂ ಕಡಿಮೆ ಖರ್ಚಿನಲ್ಲಿ ತೋಟ ನಿರ್ವಹಣೆ ಸಾಧ್ಯ. ತೋಟದಲ್ಲಿ ಅಂತರ ಬೆಳೆಯಾಗಿ ಬಾಳೆ, ಕಾಳುಮೆಣಸು ಹಾಗೂ ಇತರೆ ತರಕಾರಿ ಬೆಳೆಗಳನ್ನು ಬೆಳೆಯಬಹುದಾಗಿದ್ದು ಇದರಿಂದ ಇನ್ನೂ ಹೆಚ್ಚಿನ ಆದಾಯವನ್ನು ಗಳಿಸಬಹುದು.
"ಹನುಮಂತಪ್ಪ ನರೇಗಾ ಯೋಜನೆಯಡಿ ಅಡಿಕೆ ತೋಟ ನಿರ್ಮಾಣ ಮಾಡಿಕೊಳ್ಳಲು ಅವಕಾಶ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ಅರ್ಜಿಯನ್ನು ಸಲ್ಲಿಸಿದ್ದರು. ಗ್ರಾಮ ಸಭೆಯಲ್ಲಿ ಇವರ ಅರ್ಜಿಯನ್ನು ಅನುಮೋದಿಸಿ, ತೋಟಗಾರಿಕೆ ಇಲಾಖಾಧಿಕಾರಿಗಳ ತಾಂತ್ರಿಕ ಸಲಹೆಯೊಂದಿಗೆ ಯೋಜನೆಯ ಮಾರ್ಗಸೂಚಿಗಳನ್ವಯ 2015-16 ನೇ ಸಾಲಿನಲ್ಲಿ ಅಂದಾಜು 50 ಸಾವಿರ ರೂ. ವೆಚ್ಚದಲ್ಲಿ ಅಡಿಕೆ ತೋಟ ಕಾಮಗಾರಿ ಅನುಷ್ಟಾನ ಮಾಡಲಾಯಿತು" ಎಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಓ ಎಂ. ಎಲ್. ವೈಶಾಲಿ ಹೇಳಿದ್ದಾರೆ.
ವರದಿ: ಭಾಗ್ಯ ಎಂ. ಟಿ, ವಾರ್ತಾ ಸಹಾಯಕರು, ವಾರ್ತಾ ಇಲಾಖೆ












Click it and Unblock the Notifications