ಸಾಲ ಮನ್ನಾ : ಅರ್ಹ ರೈತರೇ ವಾಣಿಜ್ಯ ಬ್ಯಾಂಕ್ ಗಳಲ್ಲಿ ನೋಂದಾಯಿಸಿಕೊಳ್ಳಿ
ಬೆಂಗಳೂರು, ಡಿಸೆಂಬರ್ 22 : ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ರೈತರು ಬೆಳೆ ಸಾಲ ಮನ್ನಾ ಯೋಜನೆಯ ಲಾಭ ಪಡೆಯಲು ಸಂಬಂಧಿತ ಬ್ಯಾಂಕ್ ಶಾಖೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಜನವರಿ 10ರೊಳಗೆ ತಮ್ಮ ಹೆಸರು ಹಾಗೂ ವಿವರಗಳನ್ನು ನೋಂದಾಯಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ ಎಂ ವಿಜಯಶಂಕರ್ ಅವರು ಅರ್ಹ ರೈತರಲ್ಲಿ ಮನವಿ ಮಾಡಿದ್ದಾರೆ.
ಸುಸ್ತಿ ಸಾಲ, ಪುನರಾವರ್ತಿ ಸಾಲ, ಅನುತ್ಪಾದಕ ಆಸ್ತಿ ಸಾಲಗಳನ್ನು ಒಳಗೊಂಡಂತೆ 2009ರ ಏಪ್ರಿಲ್ 1ರಿಂದ 2017ರ ಡಿಸೆಂಬರ್ 31ರವರೆಗೆ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬಾಕಿ ಇರುವ ರೈತರ ಬೆಳೆ ಸಾಲಗಳ ನೋಂದಣಿ ಪ್ರಕ್ರಿಯೆಗೆ ಇದೀಗ ಚಾಲನೆ ನೀಡಲಾಗಿದೆ.
ಆದಕಾರಣ, 2017ರ ಡಿಸೆಂಬರ್ 31ರೊಳಗಾಗಿ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಪಡೆದ ರೈತರು ಸ್ವಯಂ ದೃಢೀಕರಣ ಪತ್ರದೊಂದಿಗೆ ತಮ್ಮ ಆಧಾರ್ ಕಾರ್ಡ್ ಮತ್ತು ಪ್ರಸಕ್ತ ಸಾಲಿನ ಜುಲೈ 5ರೊಳಗೆ ಪಡೆದ ತಮ್ಮ ಪಡಿತರ ಚೀಟಿಯ ನಕಲು ಪ್ರತಿ ಹಾಗೂ ಸಾಲ ಪಡೆದ ಜಮೀನಿನ ಸರ್ವೇಕ್ಷಣಾ ಸಂಖ್ಯೆಯ ಮಾಹಿತಿಯನ್ನು ಬ್ಯಾಂಕ್‌ನ ಕಾರ್ಯವೇಳೆಯಲ್ಲಿ ಸಲ್ಲಿಸಿ ಈ ಬೆಳೆ ಸಾಲ ಮನ್ನಾ ಯೋಜನೆಯಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದಾಗಿದೆ.

ಪಹಣಿಯ ಪ್ರತಿಯನ್ನು ಸಲ್ಲಿಸುವ ಅವಶ್ಯಕತೆ ಇಲ್ಲ
ಈ ನೋಂದಣಿ ಸಂದರ್ಭದಲ್ಲಿ ಜಮೀನಿಗೆ ಸಂಬಂಧಿಸಿದ ಪಹಣಿಯ ಪ್ರತಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ. ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಗರಿಷ್ಠ 40 ರೈತರ ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ತದನಂತರ, ಆಗಮಿಸುವ ರೈತರಿಗೆ ಕ್ರಮ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್‌ಗಳನ್ನು ನೀಡಿ ನೋಂದಣಿಗೆ ಅನುವುಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಯೋಜನೆಯ ಲಾಭ ಪಡೆಯಲು ಇರುವ ಅರ್ಹತೆ
ಕೇವಲ ವೈಯಕ್ತಿಕ ಬೆಳೆ ಸಾಲ ಪಡೆದ ರೈತರು ಮಾತ್ರ ಈ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದಾರೆ. ಗಂಡ, ಹೆಂಡತಿ, ಅವಲಂಬಿತ ಮಕ್ಕಳೂ ಒಳಗೊಂಡಂತೆ ಒಂದು ಕುಟುಂಬಕ್ಕೆ ಗರಿಷ್ಠ ಎರಡು ಲಕ್ಷ ರೂವರೆಗೆ ಮಾತ್ರ ಬೆಳೆ ಸಾಲ ಮನ್ನಾ ಪಡೆಯಲು ಅವಕಾಶವಿದೆ.

ಯಾರಿಗೆ ಈ ಯೋಜನೆಯ ಲಾಭ ಸಿಗುವುದಿಲ್ಲ
ವಾರ್ಷಿಕ ಆದಾಯ ತೆರಿಗೆ ಪಾವತಿಸುವ, ಕೇಂದ್ರ ಸರ್ಕಾರದ, ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಸೇವೆಯಲ್ಲಿರುವ, ಸರ್ಕಾರದ ಅನುದಾನಕ್ಕೆ ಒಳಪಡುವ ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಮಾಹೆಯಾನ 15,000 ರು.ಗಳಿಗಿಂತಲೂ ಹೆಚ್ಚು ಪಿಂಚಣಿ ಪಡೆಯುವವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.

ಮಾಜಿ ಸೈನಿಕರಿಗೆ ಅವಕಾಶವಿದೆ
ಆದರೆ, ಈ ಯೋಜನೆಯ ಲಾಭ ಪಡೆಯಲು ಮಾಜಿ ಸೈನಿಕರಿಗೆ ಅವಕಾಶವಿದೆ. ಸಹಕಾರಿ ಬ್ಯಾಂಕ್‌ಗಳಲ್ಲಿನ ಬೆಳೆ ಸಾಲ ಮನ್ನಾ ಫಲಾನುಭವಿಗಳು, ವಾಣಿಜ್ಯ ಬ್ಯಾಂಕ್ ಬೆಳೆ ಸಾಲ ಮನ್ನಾಕ್ಕೆ ಅರ್ಹರಲ್ಲ.

ಹೆಚ್ಚಿನ ವಿವರಗಳಿಗೆ ಸಹಾಯವಾಣಿ
ಪ್ರತಿ ಬ್ಯಾಂಕ್ ಶಾಖೆಯಲ್ಲಿ ರೈತರ ನೆರವಿಗಾಗಿ ಗ್ರಾಮ ಲೆಕ್ಕಾಧಿಕಾರಿಯನ್ನು ನಿಯೋಜಿಸಲಾಗಿದೆ. ಅರ್ಹ ಮತ್ತು ಆಸಕ್ತ ರೈತರು ಹೆಚ್ಚಿನ ವಿವರಗಳಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ 080 - 2221, 1106 ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.












Click it and Unblock the Notifications